ಸೋಮವಾರ, ಸೆಪ್ಟೆಂಬರ್ 23, 2019
22 °C

ಸೆ. 18ರಿಂದ ವಿಷ್ಣುವರ್ಧನ ನಾಟಕೋತ್ಸವ

Published:
Updated:
Prajavani

ಡಾ.ವಿಷ್ಣು ಸೇನಾ ಸಮಿತಿಯಿಂದ ಸೆಪ್ಟೆಂಬರ್‌ 18ರಿಂದ 20ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಡಾ.ವಿಷ್ಣುವರ್ಧನ ನಾಟಕೋತ್ಸವ’ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 4ಗಂಟೆಯಿಂದ ರಾತ್ರಿ 10ಗಂಟೆವರೆಗೆ ಪ್ರದರ್ಶನ ನಡೆಯಲಿದೆ.

ಕನ್ನಡಿಗರ ಅಚ್ಚುಮೆಚ್ಚಿನ ಯಜಮಾನ ವಿಷ್ಣುವರ್ಧನ್ ಅವರ ನೆನಪಿನಲ್ಲಿ ಈ ನಾಟಕೋತ್ಸವ ನಡೆಯುತ್ತಿದೆ. ಇದು ಯಾರೋ ಒಬ್ಬರ ನಾಟಕೋತ್ಸವವಲ್ಲ. ಸಮಸ್ತ ಕರ್ನಾಟಕದ ನಾಟಕೋತ್ಸವ ಎಂದು ಸಮಿತಿ ತಿಳಿಸಿದೆ.

ನಾಟಕೋತ್ಸವದಲ್ಲಿ ಮೈಸೂರಿನ ನಟನ, ಬೆಂಗಳೂರಿನ ರಂಗಪಯಣ, ಧಾರವಾಡದ ಗಂಗಾವತರಣ, ಕರಾವಳಿಯ ಅನಲ, ಅಶ್ವಘೋಷ್‌ ರಂಗ ತಂಡಗಳು ಪಾಲ್ಗೊಳ್ಳಲಿವೆ. ಹಾಗಾಗಿ, ಇದು ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಪ್ರ‍ಪ್ರಥಮ ನಾಟಕೋತ್ಸವವಾಗಿದೆ ಎಂದು ಸಮಿತಿ ಹೇಳಿದೆ.

ಪ್ರತಿದಿನ ವಿಷ್ಣುವರ್ಧನ್‌ ಅವರು ನಟಿಸಿರುವ ಸಿನಿಮಾಗಳ ಸಂಗೀತ ಸಂಜೆ, ವಿಷ್ಣುವರ್ಧನ್  ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ, ಕನ್ನಡ ರತ್ನ ಪ್ರಶಸ್ತಿ ‍ಪ್ರದಾನ ಸಮಾರಂಭ ಹಾಗೂ ಛಾಯಾಚಿತ್ರ ಪ್ರದರ್ಶನವೂ ಇದೆ.

ವಿಷ್ಣುವರ್ಧನ ನಾಟಕೋತ್ಸವಕ್ಕೆ ನಟ ಸುದೀಪ್‌ ಟ್ವಿಟರ್‌ನಲ್ಲಿ ಶುಭ ಕೋರಿದ್ದಾರೆ. ‘ಯಜಮಾನ್ರಿಗೊಂದು ರಂಗನಮನ’. ಡಾ.ವಿಷ್ಣು ಅವರ ಹೆಸರನ್ನು ಕನ್ನಡಿಗರ ಮನದಾಳದಲ್ಲಿ‌ ಹಚ್ಚ ಹಸಿರಾಗಿರಿಸಲು ಅವರ ಅಭಿಮಾನಿಗಳಿಂದ‌ ‘ಡಾ.ವಿಷ್ಣುವರ್ಧನ ನಾಟಕೋತ್ಸವ’ ಎಂಬ ಅರ್ಥಪೂರ್ಣ ಕಾರ್ಯಕ್ರಮ ಸೆಪ್ಟೆಂಬರ್ 18ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಈ ರಂಗೋತ್ಸವ ಯಶಸ್ವಿಯಾಗಲಿ. #ಯಜಮಾನ್ರ ಹೆಸರು ಅಜರಾಮರವಾಗಲಿ’ ಎಂದು ಟ್ವೀಟ್‌ ಮಾಡಿದ್ದಾರೆ. 

Post Comments (+)