ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಗ್ಗೋಡು ಹುಟ್ಟಿದ ಬಗೆ.. ಚಂದ್ರಶೇಖರ್ ಕಾಕಾಲ್ ಅವರ ಲೇಖನ

ಈ ಹೆಗ್ಗೋಡು ಎಂಬ ಊರು ಮೊದಲಿಗೆ ದಟ್ಟಕಾಡು ಆಗಿದ್ದು, ಮೇಲಣಗುಡ್ಡದ ತುದಿಯಲ್ಲಿ ಕುರುಚಲು ಗಿಡ, ಬಿದಿರುಮಟ್ಟಿಗಳಿದ್ದ ಸ್ಮಶಾನವಾಗಿತ್ತಂತೆ.
Published 12 ಮೇ 2024, 0:12 IST
Last Updated 12 ಮೇ 2024, 0:12 IST
ಅಕ್ಷರ ಗಾತ್ರ

ಅಬ್ಬಬ್ಬ ಎಂಥಾ ಮಳೆ. ಇದು ಪುಷ್ಯ ಮಳೆಯ ಮೂರನೇ ಪಾದ. ತಮ್ಮನ ಮಳೆ ಇನ್ನೂ ಎರಡು ದಿನ ಹೊಯ್ಯುತ್ತೆ ಅಂತ ಹೇಳುತ್ತಾ ಕೈಲಿದ್ದ ಕೊಡೆ ಮಡಿಚಿಡುತ್ತಾ ಮನೆ ಒಳಗೆ ಬಂದರು ನಮ್ಮೂರಿನ ಶೇಷಗಿರಿಯಣ್ಣ. ಬೆಳಿಗ್ಗೆ 7.30ರ ಸುಮಾರಿಗೆ ದಿನಪತ್ರಿಕೆ ಹಿಡಿದುಕೊಂಡು ನಮ್ಮ ಮನೆಗೆ ಬಂದು ಅದನ್ನು ಕೊಟ್ಟು ಲೋಕಾಭಿರಾಮದ ಒಂದೆರಡು ಮಾತುಗಳನ್ನು ಆಡಿ ಹೋಗುವುದು ಅವರ ರೂಢಿ. ಮಳೆ ವಿಪರೀತವಾಗಿದ್ದರಿಂದ ಒಳಗೆ ಬಂದು ಸೋಫಾದ ಮೇಲೆ ಕುಳಿತು ಅಪ್ಪಯ್ಯ ಈ ಊರಿನಲ್ಲಿ ಮನೆ ಕಟ್ಟಿದ ವರ್ಷವೂ ಇಂಥದ್ದೆ ಮಳೆ ಹೋಯ್ದಿತ್ತಂತೆ ಎಂದು ಮಾತು ಆರಂಭಿಸಿದರು. ಅವರ ಅಪ್ಪಯ್ಯ ಸಂಪೇಕೈ ತಿಮ್ಮಯ್ಯನವರು ಈ ಊರಿನಲ್ಲಿ ಮನೆ ಕಟ್ಟಿದ ಮೊದಲಿಗರು ಎಂದು ಗೊತ್ತಿದ್ದರಿಂದ ಆ ವಿಚಾರವಾಗಿ ಇನ್ನಷ್ಟು ಹೇಳಲು ನಾನು ಹುರಿದುಂಬಿಸಿ ಮಾತಿಗಿಳಿದೆ.

ಈ ಹೆಗ್ಗೋಡು ಎಂಬ ಊರು ಮೊದಲಿಗೆ ದಟ್ಟಕಾಡು ಆಗಿದ್ದು, ಮೇಲಣಗುಡ್ಡದ ತುದಿಯಲ್ಲಿ ಕುರುಚಲು ಗಿಡ, ಬಿದಿರುಮಟ್ಟಿಗಳಿದ್ದ ಸ್ಮಶಾನವಾಗಿತ್ತಂತೆ. ಕೆಳಭಾಗದಲ್ಲಿ ಎಂಟು ಹತ್ತು ಮನೆಗಳು ಮಾತ್ರ ಇದ್ದವು ಅಂತ ಅಪ್ಪಯ್ಯ ಹೇಳುತ್ತಿದ್ದರು ಎನ್ನುತ್ತಾ ಕಥೆ ಹೇಳುವ ತಯಾರಿ ನಡೆಸಿದರು ಶೇಷಗಿರಿಯಣ್ಣ. ಇದಕ್ಕೆ ಹೊಂದಿಕೊಂಡಂತೆ ನಾಲ್ಕಾರು ಕೋವುಗಳಾಗಿ ಒಡೆದಿದ್ದು ಹೊನ್ನೇಮರಗಳ ಸಾಲು ಹೊನ್ನೇಸರ; ಮುಂಡಿಗೇಮಟ್ಟಿಗಳ ಸಾಲು ಮುಂಡಿಗೇಸರ; ಕೇದಿಗೆಮಟ್ಟಿಗಳ ಜೌಗು ಪ್ರದೇಶ ಕೇಡಲಸರ; ಮಾವಿನಮರಗಳ ಸಾಲು ಮಾವಿನಸರ ಎಂಬಂತೆ ಐದಾರು ಮನೆಗಳ ಹತ್ತೆಂಟು ಊರುಗಳು. ಈ ಸರಗಳ ಸಾಲಾಗಿರುವ ಹೆಗ್ಗೋಡಿನ ಒಂದು ಭಾಗದಲ್ಲಿ ಶರಾವತಿ ನದಿಯ ಹಿನ್ನೀರು, ಮತ್ತೊಂದು ಕಡೆ ವರದಾ ನದಿಯ ವಿಸ್ತಾರದ ನಡುವೆ ಹಬ್ಬಿಕೊಂಡಿರುವ ಸ್ವಲ್ಪ ಎತ್ತರದ ಪ್ರದೇಶ. ನಂತರದ ದಿನಗಳಲ್ಲಿ ನನಗೆ ತಿಳಿದಂತೆ ಹೆಗ್ಗೋಡಿನಿಂದ ಹೊಸನಗರಕ್ಕೆ ಹೋಗುವ ಮುಖ್ಯರಸ್ತೆಯ ಬಲಭಾಗಕ್ಕೆ ಹರಿಯುವ ಮಳೆ ನೀರು ಶರಾವತಿಯನ್ನು ಸೇರಿ ಹೊನ್ನಾವರದ ಬಳಿ ಪಡುವಣದ ಅರಬ್ಬೀ ಸಮುದ್ರವನ್ನು, ಎಡಭಾಗಕ್ಕೆ ಬಿದ್ದ ಮಳೆನೀರು ವರದಾನದಿಯ ಮೂಲಕ ಕೃಷ್ಣಾ ನದಿಯೊಡನೆ ಬೆರೆತು ಪೂರ್ವದ ಬಂಗಾಳಕೊಲ್ಲಿಯನ್ನೂ ಸೇರುತ್ತದೆ ಎಂಬ ವಿಚಾರ ನನ್ನನ್ನು ವಿಸ್ಮಯಗೊಳಿಸಿದ್ದಲ್ಲದೇ ಹೆಗ್ಗೋಡಿನ ಸ್ಥಳ ಮಹಿಮೆಯ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದ್ದಂತು ನಿಜ.

ಒಂದು ಸಾಂಸ್ಕೃತಿಕ ಕೇಂದ್ರವಾಗಿದ್ದು, ನೀನಾಸಂನಂತಹ ಸಂಸ್ಥೆಯನ್ನು ಒಳಗೊಂಡು ವಿಶ್ವಕ್ಕೆ ಪರಿಚಿತವಾಗಿರುವ ಈಗಿನ ಹೆಗ್ಗೋಡು ಗ್ರಾಮ ನೂರು ವರ್ಷಗಳ ಮೊದಲು ಅಸ್ತಿತ್ವದಲ್ಲಿ ಇರಲಿಲ್ಲ ಎಂಬುದು ಒಂದು ವಿಸ್ಮಯವಾಗಿ ಕಾಣಿಸಿತು. ಅದು ಹುಟ್ಟಿ ಬೆಳೆದು ಬಂದ ರೀತಿ, ಸದಾ ಚಟುವಟಿಕೆಯಲ್ಲಿರುವ ಪ್ರವೃತ್ತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಕುತೂಹಲ ಹುಟ್ಟಿತು. ಒಂದು ಲೋಟ ಬಿಸಿ ಬಿಸಿ ಕಾಫಿ ಕುಡಿಯೋಣ ಎಂದು ಶೇಷಗಿರಿಯಣ್ಣನಿಗೆ ಹೇಳಿ ಅವರನ್ನು ಮಾತಿನಲ್ಲಿ ಕಟ್ಟಿಹಾಕಿ ಕಥೆ ಕೇಳುವುದು ನಮ್ಮ ತಂತ್ರ. ಅವರು ಹೂಂ ಎನ್ನುತ್ತಿದ್ದಂತೆಯೇ ನನ್ನ ಹಿರಿಮಗಳು, ತಮ್ಮನ ಮಕ್ಕಳು, ತಮ್ಮ, ತಂಗಿ ಮನೆಯವರೆಲ್ಲ ಬಂದು ಅವರ ಸುತ್ತಮುತ್ತ ಸೋಫಾ, ಕುರ್ಚಿಗಳ ಮೇಲೆ ಮೈಹರವಿ ಕುಳಿತುಕೊಂಡು ಭೋರ್ಗರೆಯುತ್ತಿದ್ದ ಮಳೆಯ ಮಧ್ಯೆ ಬಿಸಿ ಬಿಸಿ ಕಾಫಿ ಸವಿಯುತ್ತಾ ಮೈಯೆಲ್ಲಾ ಕಿವಿಯಾಗಿ ಕುಳಿತುಕೊಂಡಾಗ ಶೇಷಗಿರಿಯಣ್ಣ ಕಥೆ ಮುಂದುವರಿಸಿದರು.

ನಮ್ಮ ಅಪ್ಪಯ್ಯ ಇದೇ ಹೆಗ್ಗೋಡಿನಿಂದ ಅನತಿ ದೂರದಲ್ಲಿರುವ ಸಂಪೇಕೈ ಊರಿನವರು. ಮನೆಯಲ್ಲಿ ಸುಮಾರು ಜನ. ಸಾಕಷ್ಟು ಸ್ಥಿತಿವಂತರೇ ಆದರೂ ಮನೆಯಲ್ಲಿ ಎಲ್ಲ ಜನರಿಗೂ ಅವಕಾಶವಿಲ್ಲ ಅಂತ ಬೇರೆಯದೇ ಒಂದು ಮನೆ ಮಾಡುವ ಆಲೋಚನೆ ಅಪ್ಪಯ್ಯನಿಗೆ ಬಂತಂತೆ. ಒಂದು ದಿನ ಈಗಿನ ಹೆಗ್ಗೋಡಿನ ಮಗ್ಗುಲಲ್ಲಿ ಗುಡ್ಡದ ಪಕ್ಕ ಇರುವ ನಮ್ಮ ಮೂಲ ಊರು ಸಂಪೇಕೈನಿಂದ ಹೊರಟು ಆ ದಿಂಬದಿಂದ ಗುಡ್ಡ ಹತ್ತಿ ಮೇಲೆ ನಿಂತು ನೋಡಿದರಂತೆ ಅಪ್ಪಯ್ಯ. ಗುಡ್ಡದ ತುದಿಯಿಂದ ನೋಡಿದರೆ ಈಗ ನಾವು ಹಳೆ ಹೆಗ್ಗೋಡು ಎಂದು ಕರೆಯುವ ಕೋವು, ಹೊನ್ನೇಸರ, ಕೇಡಲಸರ, ಭೀಮನಕೋಣೆಗಳ ನಡುವಿನಲ್ಲಿ ಒಂದಷ್ಟು ಗಿಡ ಮರ ಪೊದೆಗಳಿರುವ ಅತ್ತ ಕಾಡೂ ಅಲ್ಲದ, ಇತ್ತ ಬಯಲೂ ಅಲ್ಲದ ಪ್ರದೇಶ. ಎರಡು ಕೆರೆಗಳ ನಡುವೆ ಒಂದಷ್ಟು ಬೆಟ್ಟ, ಬ್ಯಾಣಗಳ ಜಾಗ. ಅಲ್ಲಲ್ಲಿ ಹಸುಗಳು ಮೇಯುತ್ತಾ ಇದ್ದವಂತೆ. ಎತ್ತರದಿಂದ ಪಕ್ಷಿ ನೋಟದಲ್ಲಿ ನೋಡಿದ ನಮ್ಮ ಅಪ್ಪಯ್ಯ ಮನೆ ಕಟ್ಟಲು ಇದು ಪ್ರಶಸ್ತವಾದ ಸ್ಥಳ, ಎರಡು ಕೆರೆಗಳ ನಡುವೆ ಹಸುಗಳು ಮೇಯುತ್ತಿರುವುದು ಶುಭಸೂಚಕ ಎಂದು ಅಲ್ಲೇ ನಿಶ್ಚಯಿಸಿ ಹೊರಟರಂತೆ.

ಗಿಡ ಮರ ಪೊದೆಗಳನ್ನು ಕಡಿದು ಮನೆ ಕಟ್ಟಿಸಲು ಶುರು ಮಾಡಿದ ಅಪ್ಪಯ್ಯ ತಿಮ್ಮಯ್ಯನವರನ್ನು ನೋಡಿ ಸ್ಮಶಾನದಲ್ಲಿ ಮನೆ ಕಟ್ಟಲು ಹೊರಟಿದ್ದಾನಲ್ಲ ಇವನಿಗೇನು ಹುಚ್ಚು ಎಂದು ಊರವರೆಲ್ಲ ಮಾತನಾಡಿಕೊಂಡರಂತೆ. ಯಾವುದಕ್ಕೂ ಜಗ್ಗದ, ಒಂದು ರೀತಿಯಲ್ಲಿ ಬಂಡಾಯದ ನಡವಳಿಕೆಗಳಿಂದಲೇ ಪ್ರಸಿದ್ಧನಾಗಿದ್ದ ಅಪ್ಪಯ್ಯ, ಜಪ್ಪಯ್ಯ ಅನ್ನಲಿಲ್ಲ. ಗೇಲಿ ಮಾಡಿದ ಊರ ಮಂದಿಗೆ ‘ಇಲ್ಲೊಂದು ಊರು ಕಟ್ಟುತ್ತೇನೆ ನೋಡುತ್ತಾ ಇರಿ’ ಎಂದು ಸವಾಲು ಹಾಕಿದರಂತೆ. ಕಾಫಿ ತಂದ ನನ್ನಮ್ಮ ಅಲ್ಲೇ ಕುಳಿತು ಕಥೆ ಕೇಳಲು ಸೇರಿಕೊಂಡಾಗ ನಮ್ಮ ತಂಡಕ್ಕೆ ಇನ್ನಷ್ಟು ಮೆರಗು ಬಂತು.

ಮನೆ ಕಟ್ಟಿ ಒಕ್ಕಲಾದ ತಿಮ್ಮಯ್ಯ ಹಾಗೆಯೇ ಮುಂದುವರೆದು ಕೇಡಲಸರದ ಹೇರಂಬರಾಯರ ಹತ್ತಿರ ಈ ಸುತ್ತಮುತ್ತ ಒಂದು ಅಂಗಡಿಯಿಲ್ಲ, ಇಲ್ಲಿ ಒಂದು ಮನೆ ಮಾಡಿ ಒಂದು ಅಂಗಡಿ ಹಾಕಿ ಕೊಟ್ಟು ನಿನ್ನ ಎರಡನೇ ಮಗನನ್ನು ಬಿಡು, ಅವನಿಗೊಂದು ಜೀವನೋಪಾಯಕ್ಕೆ ಆಗುತ್ತದೆ ಎಂದು ಹುರಿದುಂಬಿಸಿದಾಗ ಅಲ್ಲಿಗೆ ಒಂದು ದಿನಸಿ ಅಂಗಡಿಯಾಯಿತು. ನಂತರ ಇವರ ಹಿತೈಷಿಗಳು, ಬಂಧುಗಳು ಆದ ಒಬ್ಬರು ಅಲ್ಲೊಂದು ಜವಳಿ ಅಂಗಡಿ ತೆರೆದರಂತೆ. ಮತ್ತೊಬ್ಬರು ಒಂದು ಹೋಟೆಲ್ ಆರಂಭಿಸಿದರಂತೆ. ಆಗ ಅದೊಂದು ಅಂಗಡಿ ಬಯಲು ಆಯಿತು. ಊರು ಎನ್ನಿಸಿಕೊಳ್ಳಲು ಇನ್ನೇನು ಬೇಕು? ಪಕ್ಕದ ಊರುಗಳಿಂದ ಜನ ಬರಲು ಆರಂಭಿಸಿದಾಗ ಇದೊಂದು ಪುಟ್ಟ ಕೇಂದ್ರವೇ ಆಯಿತಂತೆ. ಛಲ ಬಿಡದ ತಿಮ್ಮಯ್ಯ, ಸಾಗರದಿಂದ ಅಮಲ್ದಾರರನ್ನು ಕರೆಸಿ ಊರು ಉದ್ಘಾಟನೆ ಮಾಡಿಸುವ ಪ್ರಸ್ತಾಪ ಮುಂದಿಟ್ಟರಂತೆ. ಆ ಕಾಲದಲ್ಲಿ ಕುದುರೆಯ ಮೇಲೆ ಬಂದ ಅಮಲ್ದಾರರು ಅರಳಿಕಟ್ಟೆಯ ಮೇಲ್ಭಾಗದ ಅಂಗಡಿ ಬಯಲನ್ನು, ಪ್ರಾಯಶಃ 1915ರಲ್ಲಿ, ‘ಹೆಗ್ಗೋಡು’ ಎಂದು ಉದ್ಘಾಟಿಸಿದಾಗ, ಮೊದಲಿನ ಹೆಗ್ಗೋಡು ಹಳೆಹೆಗ್ಗೋಡು ಎಂದು ಮರುನಾಮಕರಣಗೊಂಡಿತಂತೆ. ಅಲ್ಲಿಗೇ ಸುಮ್ಮನಾಗದ ತಿಮ್ಮಯ್ಯ 1916ರಲ್ಲಿ, ಆಗ ಪ್ರಚಲಿತವಿದ್ದ ಕಾನೂನಿನನ್ವಯ ಒಂದು ಸೊಸೈಟಿ ಸ್ಥಾಪಿಸಿ, ‘ಮಹಾಗಣಪತಿ ಕೋ-ಆಪರೇಟಿವ್ ಸೊಸೈಟಿ’ ಎಂದು ನೋಂದಾಯಿಸಿದರಂತೆ.

ಕ್ರಮೇಣ ಹೆಗ್ಗೋಡಿನಲ್ಲಿ ಒಂದು ಸಂತೆ ಮೈದಾನ, ಸೊಸೈಟಿ ಬಿಲ್ಡಿಂಗುಗಳು, ಪೋಸ್ಟ್ ಆಫೀಸ್, ಆಸ್ಪತ್ರೆ, ಜಾನುವಾರು ಆಸ್ಪತ್ರೆ, ಹೆಗ್ಗೋಡಿಗೆ ಹೊಂದಿಕೊಂಡಂತೆ ಅದರ ಪಕ್ಕದ ಕೇಡಲಸರ ವ್ಯಾಪ್ತಿಯಲ್ಲಿರುವ ಗುಡ್ಡದ ಮೇಲೆ ಹೈಸ್ಕೂಲು, ಇತ್ಯಾದಿಗಳೆಲ್ಲ ಒಂದಾದ ಮೇಲೊಂದರಂತೆ ಸೇರಿಕೊಂಡು ಸುಮಾರು 50 ವರ್ಷದ ಬೆಳವಣಿಗೆಯಲ್ಲಿ ಒಂದು ಊರಾಗಿ ಬೆಳೆಯಿತು. ನಂತರ ಸುತ್ತಮುತ್ತ ಬಂದ ನೀನಾಸಂ, ಬ್ಯಾಂಕ್, ಚರಕ, ಉಪ್ಪಿನಕಾಯಿ ಫ್ಯಾಕ್ಟರಿ, ಶ್ರಮಜೀವಿ ಆಶ್ರಮ, ಕಾಲೇಜು, ಪೆಟ್ರೋಲ್ ಬಂಕ್, ಸೂಪರ್ ಮಾರ್ಕೆಟ್‌, ಇತ್ಯಾದಿಗಳು ನಮ್ಮ ಹೆಗ್ಗೋಡಿನಲ್ಲಿ ‘ಏನುಂಟು ಏನಿಲ್ಲ’ ಎಂಬ ಮಟ್ಟಿಗೆ ಪ್ರಗತಿ ಸಾಧಿಸಿರುವುದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT