ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ | ‘ಚಾವುಂಡರಾಯ’ನ ಮಾನವೀಯತೆಯ ಅನಾವರಣ

Last Updated 8 ಏಪ್ರಿಲ್ 2023, 22:30 IST
ಅಕ್ಷರ ಗಾತ್ರ

ರಾಜನಾಗುವ ಎಲ್ಲಾ ಅರ್ಹತೆಗಳು ಇದ್ದರೂ ದಂಡನಾಯಕನಾಗಿಯೇ ಉಳಿದ ಚಾವುಂಡರಾಯ. ಜೈನನಾಗಿ ಆತ ಎದುರಿಸಿದ ಹಿಂಸೆ– ಅಹಿಂಸೆಗಳ ನಡುವಿನ ಒಳ ಸಂಘರ್ಷಗಳೇನು, ಅಹಿಂಸೆಯನ್ನು ಪ್ರತಿಪಾದಿಸುತ್ತಲೇ ಒಳಗಿನ ಮತ್ತು ಹೊರಗಿನ ಶತ್ರುಗಳಿಂದ ಪ್ರಭುತ್ವವನ್ನು ರಕ್ಷಿಸಲು ಮಾಡಿದ ಪ್ರಯತ್ನಗಳು ಹೇಗಿದ್ದವು? ಎಂಬುದನ್ನು ಈ ಪ್ರಯೋಗ ಚಿತ್ರಿಸಿತು.

ಇತ್ತೀಚೆಗೆ ಸಮಾಜಮುಖಿ ರಂಗಬಳಗ ಅಭಿನಯಿಸಿದ ’ಚಾವುಂಡರಾಯ’ ನಾಟಕ ಜನಮನ ಗೆದ್ದಿತು.

ಜಯರಾಮ್ ರಾಯಪುರ ರಚಿಸಿರುವ ಈ ನಾಟಕದ ನಿರ್ದೇಶಕರು ಮೈಸೂರು ರಂಗಾಯಣದ ಹಿರಿಯ ಕಲಾವಿದ ಹುಲಗಪ್ಪ ಕಟ್ಟೀಮನಿ. ಬಂದಿಖಾನೆಗಳಲ್ಲಿ ವಿಚಾರಣಾಧೀನ ಕೈದಿಗಳಿಗೆ ರಂಗಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಕಟ್ಟೀಮನಿ, ರಂಗಾಯಣದಿಂದ ನಿವೃತ್ತರಾದ ನಂತರ ಬೆಂಗಳೂರಿನಲ್ಲಿ ತಮ್ಮ ರಂಗ ಕಾಯಕವನ್ನು ಮುಂದುವರಿಸಿದ್ದಾರೆ. ಸಮಾಜಮುಖಿ ರಂಗಬಳಗಕ್ಕೆ ‘ರಸಾಭಿಜ್ಞಾನ’ ಎಂಬ ವಿಶಿಷ್ಟ ರಂಗಕಾರ್ಯಾಗಾರ ನಡೆಸಿಕೊಟ್ಟಿದ್ದರು. ಹುಲಗಪ್ಪ ಕಟ್ಟೀಮನಿ ಇದೀಗ ‘ಚಾವುಂಡರಾಯ’ ಪ್ರಯೋಗದ ಮೂಲಕ ಕನ್ನಡಕ್ಕೆ ಮತ್ತೊಬ್ಬ ಸಶಕ್ತ ನಾಟಕಕಾರರನ್ನು ಪರಿಣಾಮಕಾರಿಯಾಗಿ ಪರಿಚಯಿಸಿದ್ದಾರೆ.

ಸರ್ಕಾರದ ಉನ್ನತ ಹುದ್ದೆಯಲ್ಲಿದ್ದರೂ ಕಲೆ, ಸಂಸ್ಕೃತಿ ರಂಗಭೂಮಿಯ ಬಗ್ಗೆ ಅಪಾರ ಒಲವು ಬೆಳೆಸಿಕೊಂಡಿರುವ ಜಯರಾಮ್ ರಾಯಪುರ, ಈವರೆಗೆ ‘ಸಿರಿಗೆಸೆರೆ’, ‘ವಾರಸುದಾರಾ’, ‘ಚಾವುಂಡರಾಯ’-ಈ ಮೂರು ನಾಟಕಗಳನ್ನು ಬರೆದಿದ್ದಾರೆ. ಇವೆಲ್ಲವೂ ಚಾರಿತ್ರಿಕ ನಾಟಕಗಳು. ಗಂಗರಸರ ಕಡೆಗಾಲದ ಹೃದ್ಯ ಚಿತ್ರಣವಿರುವ ಐತಿಹಾಸಿಕ ನಾಟಕ ‘ಚಾವುಂಡರಾಯ’.

ಕರ್ನಾಟಕದಲ್ಲಿ ಒಂಬತ್ತು, ಹತ್ತನೆಯ ಶತಮಾನದಲ್ಲಿ ಜೈನ ಧರ್ಮವು ಉತ್ಕರ್ಷಾವಸ್ಥೆಯಲ್ಲಿತ್ತು. ಅಂದು ದಕ್ಷಿಣ ಕರ್ನಾಟಕವನ್ನು ಆಳುತ್ತಿದ್ದ ರಾಜವಂಶ ಗಂಗರದ್ದಾಗಿತ್ತು. ಅಂದಿನ ದೊರೆ ಮಾರಸಿಂಹ ಮತ್ತು ಅವನ ದಂಡನಾಯಕ ಚಾವುಂಡರಾಯ ಈ ನಾಟಕದಲ್ಲಿ ಪ್ರಮುಖವಾಗಿ ಕಾಣುತ್ತಾರೆ. ಅರಸನ ನೆರಳಂತೆ ಇದ್ದವನು ಈ ದಂಡನಾಯಕ. ಅಷ್ಟರ ಮಟ್ಟಿಗೆ ಈತನದು ರಾಜನಿಷ್ಠೆ.

ರಾಜನಾಗುವ ಎಲ್ಲಾ ಅರ್ಹತೆಗಳು ಇದ್ದರೂ ದಂಡನಾಯಕನಾಗಿಯೇ ಉಳಿದದ್ದು ಈತನ ವೈಶಿಷ್ಟ್ಯ. ಈತ ಸ್ವತಃ ಗದ್ಯಕವಿ; ‘ಚಾವುಂಡರಾಯ ಪುರಾಣ’ವನ್ನು ಬರೆದಿದ್ದಾನೆ. ಇವನ ಒಡನಾಟದಲ್ಲಿ ಒಂದಷ್ಟು ಕಾಲ ಇದ್ದು, ಪ್ರಭುತ್ವದ ಒಳಸುಳಿಗಳನ್ನು ಅರಿತವನು ಕವಿ ರನ್ನ. ಹಾಗಾಗಿ ರನ್ನನೂ ಇಲ್ಲಿ ಒಂದು ಪಾತ್ರ.

ಚಾವುಂಡರಾಯನೇ ಶೀರ್ಷಿಕೆಯನುಸಾರ ಕೇಂದ್ರ ಪಾತ್ರ. ಈತ ಒಳ ಸಂಘರ್ಷಗಳನ್ನು ಎದುರಿಸಿದ್ದಾನೆ. ಅವೆಂದರೆ, ತಾನು ಜೈನನಾಗಿ ಅಹಿಂಸೆಯನ್ನು ಪ್ರತಿಪಾದಿಸಬೇಕು. ಅದೇ ಸಂದರ್ಭದಲ್ಲಿ ಒಳಗಿನ ಮತ್ತು ಹೊರಗಿನ ಶತ್ರುಗಳಿಂದ ಪ್ರಭುತ್ವವನ್ನು ರಕ್ಷಿಸಲು ಹಿಂಸೆಯನ್ನೂ ಪ್ರಯೋಗಿಸಬೇಕು.

ಕವಿ ರನ್ನ ಜೀವನಾನುಭವ ಪಡೆಯುವ ನಿಟ್ಟಿನಲ್ಲಿ ಚಾವುಂಡರಾಯನ ಸೇನೆಯನ್ನು ಸೇರುವ ಆಶಯದಿಂದ ಆತನನ್ನು ಭೇಟಿ ಮಾಡಲು ಬರುವ ದೃಶ್ಯದಿಂದ ನಾಟಕ ಆರಂಭವಾಗುತ್ತದೆ. ಅದೇ ಸಂದರ್ಭಕ್ಕೆ ಗಂಗರ ಅರಸ ಮಾರಸಿಂಹ ಕೈವಲ್ಯ ಪ್ರಾಪ್ತಿಗಾಗಿ ಸಲ್ಲೇಖನ ವ್ರತ ಸ್ವೀಕರಿಸಿದ್ದಾನೆ. ಈ ಸನ್ನಿವೇಶದಲ್ಲಿ ಗಂಗ ಸಾಮ್ರಾಜ್ಯದ ಮುಂದಿನ ದೊರೆ ಯಾರಾಗಬೇಕು ಎಂಬ ಜಿಜ್ಞಾಸೆಯೊಂದಿಗೆ ನಾಟಕ ಮುಂದುವರೆಯುತ್ತದೆ.

ಅಂದಿನ ರಾಜರು, ಸಾಮಂತರು, ಪಾಳೇಗಾರರು ನಿರಂತರವಾಗಿ ಗಡಿ ಕಾಯುವ, ಅದನ್ನು ವಿಸ್ತರಿಸಿಕೊಳ್ಳುವ ಯುದ್ಧಗಳಲ್ಲಿ ತೊಡಗಿದ್ದರು. ಅಂತಹ ಸಂದರ್ಭದಲ್ಲಿ ವಿಸ್ತಾರವಾದ ಗಂಗವಾಡಿ ಸಾಮ್ರಾಜ್ಯವನ್ನು ಹತ್ತು ವರ್ಷಗಳ ಕಾಲ ಯುದ್ಧಮುಕ್ತ ಮಾಡಿದ್ದು ಈತನ ರಾಜತಾಂತ್ರಿಕ ಮತ್ತು ಪರಾಕ್ರಮದ ಹಿರಿಮೆಯಾಗಿದೆ. ಆದರೆ ರಾಜ ಮಾರಸಿಂಹನ ನಂತರದಲ್ಲಿ ಪಟ್ಟಕ್ಕೆ ಬಂದ ಮೊದಲ ಮಗ ಕಾಯಿಲೆಯಿಂದ ತೀರಿಕೊಂಡ ನಂತರದಲ್ಲಿ ಅದೇ ಪಟ್ಟಕ್ಕೆ ಬಂದ ಇನ್ನೊಬ್ಬ ಮಗ ಇತರೆ ರಾಜರಂತೆ ಕಾಲು ಕೆರೆದು ಯುದ್ಧಕ್ಕೆ ನಿಲ್ಲುವ ಉತ್ಸಾಹವನ್ನು ತೋರುತ್ತಾನೆ. ಅದು ರಾಜನ ಲಕ್ಷಣ ಎಂದು ಆತ ಬಗೆಯುತ್ತಾನೆ. ಆದರೆ ಯುದ್ಧದ ಅನಿವಾರ್ಯವನ್ನು ಕಾಣದ ಚಾವುಂಡರಾಯನಿಗೆ ಇದರ ಪರಿಣಾಮವಾಗಿ ಅಭಿಪ್ರಾಯಭೇದ ಉಂಟಾಗುತ್ತದೆ. ಹಾಗಾಗಿ ರಾಜನ ಇಚ್ಛೆಗೆ ವಿರುದ್ಧವಾಗಿ ಪ್ರಭುತ್ವವನ್ನು ತೊರೆಯುತ್ತಾನೆ. ಆ ಹಂತದಲ್ಲಿ ತಾನು ನಿರ್ಮಿಸಿದ ಬಾಹುಬಲಿ ಪ್ರತಿಮೆಯೊಂದಿಗೆ ಸಂಭಾಷಿಸುತ್ತಾನೆ.

‘ಕಾಳಗ ಹುಡುಕಿ ಹೊರಡಲೇಬೇಕು, ನಾವು ಕಾಳಗಕ್ಕೆ ಕಾಯುವಂತಿಲ್ಲ, ಯುದ್ಧ ಸೂರೆಯಿಂದ ಧನಕನಕ ಬೇಕು, ಯುದ್ಧ ಮರೆತ ಸೈನ್ಯಕ್ಕೆ ಭವಿಷ್ಯವಿಲ್ಲ, ಶಾಂತಿಗೆ ಯುದ್ಧವೇ ರಹದಾರಿ’ ಎಂದು ಗಂಗರ ದೊರೆ ರಕ್ಕಸಗಂಗ ಹೇಳುತ್ತಾನೆ. ಇದಕ್ಕೆ ಚಾವುಂಡರಾಯ ಉತ್ತರಿಸುವುದು ಹೀಗೆ: ‘ಕಾಣದ ಭವಿಷ್ಯಕ್ಕೆ ಇಂದು ಸಾವಿರಾರು ಸೈನಿಕರ ಬಲಿ ಕೇಳುವ ಪುರುಷಾರ್ಥ ನಮಗೆ ತಿಳಿಯುತ್ತಿಲ್ಲ. ಹೆಣದ ರಾಶಿ ದಾಟಿ ಗಡಿ ಬೆಳೆಸುವ ಅಗತ್ಯ ಕಾಣುತ್ತಿಲ್ಲ’.

ಕವಿ ರನ್ನನೊಡನೆ ತನ್ನ ಮಾನಸಿಕ ತುಮುಲವನ್ನು ಹಾಡಿಕೊಳ್ಳುತ್ತಾ, ‘ರನ್ನ, ಅಹಿಂಸೆ ಬಯಸುವ ನನ್ನ ಧರ್ಮದ ಜೊತೆಯಲ್ಲಿ ಹಿಂಸೆ ಬೇಡುವ ರಾಜಧರ್ಮದ ಅಗತ್ಯಗಳನ್ನು ಎನ್ನೆಷ್ಟು ದಿನ ತೂಗಬೇಕು...’ ಎಂದು ಪರಿತಪಿಸುತ್ತಾನೆ. ತನ್ನ ಹೃದಯದಲ್ಲಿ ಕಾವ್ಯಕ್ಕೂ ಜಾಗಕೊಟ್ಟು ‘ಕಾವ್ಯ ಜೀವನವಾಗುವುದಿದ್ದರೆ ಜೀವನವೂ ಕಾವ್ಯದ ಮೊರೆ ಹೋದೀತು’ ಎನ್ನುತ್ತಲೇ ತನ್ನ ಧರ್ಮಕ್ಕೆ ವಿರುದ್ಧವಾದ, ಹಾಗೆಯೇ ರಾಜಧರ್ಮಕ್ಕೂ ಎದುರಾಗಿಯೇ ನಿರ್ಣಯ ಕೈಗೊಂಡ ಅಸಹಜ ಬದುಕು ತನ್ನದೆಂದು ಚಾವುಂಡರಾಯ ಪರಿತಪಿಸುತ್ತಾನೆ.

ಆಗ ಪ್ರತಿಮೆಯೇ ಜೀವ ತಳೆದು ಈತನೊಂದಿಗೆ ಹೃದಯ ಸಂವಾದ ಮಾಡುತ್ತದೆ. ಇದು ಚಾವುಂಡರಾಯನ ಸುಪ್ತ ಮನಸ್ಸಿನಲ್ಲಿ ನಡೆದ ದ್ವಿಮುಖವಾದ ಸಂವಾದಕ್ಕೆ ಒಡ್ಡಿದ ಮನೋವೈಜ್ಞಾನಿಕ ಪ್ರತಿಮೆ ಎಂದು ಭಾವಿಸಬಹುದು. ಹಿಂಸೆ ಮತ್ತು ಅಹಿಂಸೆ, ಯುದ್ಧ ಮತ್ತು ಶಾಂತಿ ಇವುಗಳ ಪರಿಣಾಮಗಳನ್ನು ಚಾವುಂಡರಾಯನ ಹೋರಾಟದ ಬದುಕಿನ ನಡುವೆ ನಿಕಷಕ್ಕೆ ಒಡ್ಡುತ್ತಾರೆ ನಾಟಕಕಾರರು. ಚಾವುಂಡರಾಯನ ಸಾಕ್ಷಿಪ್ರಜ್ಞೆಯಾಗಿ ಕವಿ ರನ್ನ ನಾಟಕದುದ್ದಕ್ಕೂ ಜೊತೆಯಾಗುತ್ತಾನೆ. ನಾಟಕದ ಅಂತ್ಯದಲ್ಲಿ ಚಾವುಂಡರಾಯನ ಆಂತರ್ಯದ ಧ್ವನಿಯಾಗಿ ಪ್ರತಿಮಾ ರೂಪಿ ಬಾಹುಬಲಿ ಮೂಡಿಬರುತ್ತಾನೆ.

ಬಾಹುಬಲಿಯ ‘ಛಾಯಾಪ್ರತಿಮೆ’ಯೊಂದಿಗೆ ಮುಖಾಮುಖಿಯಾದಾಗ, ‘ನೀನು ನನ್ನ ಆದರ್ಶ, ಇದ್ದ ರಾಜ್ಯ ಗೆದ್ದ ರಾಜ್ಯವನ್ನು ತಿರಸ್ಕರಿಸಿ ತ್ಯಾಗ ಮಾಡಿ ಎಲ್ಲವನ್ನೂ ಬಿಟ್ಟು, ನೀನು ನಂಬಿದ ಪುರುಷಾರ್ಥ ಸಾಧನೆಗೆ ಹೊರಟವನು ನೀನು, ಅದಕ್ಕೆಂದೇ ನಿನ್ನ ಪ್ರತಿಮೆ’ ಎನ್ನುತ್ತಾನೆ. ಸಂಭಾಷಣೆ ಸಶಕ್ತವಾಗಿದೆ. ಎಲ್ಲಾ ನಟರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಚಾವುಂಡರಾಯ ಮತ್ತು ಆತನ ಕಾಲದ ರಾಜಪ್ರಭುತ್ವ, ಜೈನಧರ್ಮದ ಒಳಗಿನ–ಹೊರಗಿನ ಸ್ವರೂಪ ಮತ್ತು ಸಂಘರ್ಷಗಳನ್ನು ಅರಿಯಲು ಈ ನಾಟಕ ನೆರವಾಗುತ್ತದೆ. ಕಾವ್ಯಾತ್ಮಕವಾಗಿಯೂ ಪ್ರಕಟವಾಗಿರುವುದರಿಂದ ಕಲೆಯ ನೆಲೆ ಪ್ರಾಪ್ತಿಯಾಗಿದ್ದು, ಸಹೃದಯರ ಅಂತರಂಗವನ್ನು ಮುಟ್ಟುತ್ತದೆ. ಇಂತಹ ನಾಟಕವನ್ನು ಕೊಟ್ಟ ಸಮಾಜಮುಖಿ ರಂಗ ಬಳಗ ತಂಡವು ಅಭಿನಂದನಾರ್ಹ.

ಒಟ್ಟಾರೆ ನಾಟಕದ ಆಶಯವನ್ನು ದೃಶ್ಯರೂಪಕ್ಕೆ ಅಳವಡಿಸುವಲ್ಲಿ ಹುಲಗಪ್ಪ ಕಟ್ಟೀಮನಿ ಯಶಸ್ವಿಯಾಗಿದ್ದಾರೆ. ದಿಗ್ವಿಜಯ ಹೆಗ್ಗೋಡು ಅವರ ಸಂಗೀತ ನಾಟಕದ ಸುಲಲಿತ ಓಟಕ್ಕೆ ಸಹಕಾರಿಯಾಗಿದೆ. ಬೆಳಕಿನ ವಿನ್ಯಾಸವೂ ಗಮನ ಸೆಳೆಯುತ್ತದೆ.

ಎಚ್.ಕೆ.ದ್ವಾರಕಾನಾಥ್ ಅವರ ರಂಗವಿನ್ಯಾಸವನ್ನು ತಮ್ಮ ಕುಶಲತೆಯಿಂದ ಕ್ರಿಯಾಶೀಲಗೊಳಿಸಿರುವ ಮಾಲತೇಶ್, ಸೂಕ್ತವಾದ ವರ್ಣಮಯ ವೇಷಭೂಷಣ ಸಿದ್ಧಪಡಿಸಿರುವ ಎನ್.ಮಂಗಳಾ, ಅರ್ಥಪೂರ್ಣ ಬೆಳಕಿನ ವಿನ್ಯಾಸ ಮಾಡಿರುವ ಅರುಣ್ ಮೂರ್ತಿ ಹಾಗೂ ಪ್ರಸಾಧನದ ಮೂಲಕ ಪಾತ್ರಗಳಿಗೆ ವ್ಯಕ್ತಿತ್ವ ತುಂಬಿರುವ ರಾಮಕೃಷ್ಣ ಬೆಳತೂರು ಇವರೆಲ್ಲರೂ ಒಟ್ಟಾರೆ ಪ್ರಯೋಗವನ್ನು ಗಮನಾರ್ಹಗೊಳಿಸಿದ್ದಾರೆ. ಉಮೇಶ್ ಸಾಲಿಯಾನ್ ನಾರಾಯಣ್ ಅವರು ಸಹ ನಿರ್ದೇಶನ ಮಾಡಿ ಕಟ್ಟೀಮನಿ ಅವರಿಗೆ ಕೈ ಜೋಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT