‘ನೃತ್ಯವೆಂದರೆ ಅದು ನನಗೆ ದೇವರು ಕೊಟ್ಟಿರುವ ವರ. ಅದನ್ನು ನನ್ನ ದೇಹದಲ್ಲಿ, ಮನಸ್ಸಿನಲ್ಲಿ ಉಳಿಸಿಕೊಳ್ಳುವ ಸಲುವಾಗಿ ನಾನು ಏನನ್ನಾದರೂ ಮಾಡಲು ಸಿದ್ಧಳಿರಬೇಕು, ಅಷ್ಟು ಸಮರ್ಪಣಾ ಮನೋಭಾವ ಇದ್ದರೆ ಮಾತ್ರ ಕಲೆಯ ಸಿದ್ಧಿಯು ಸಾಧ್ಯವಾಗುತ್ತದೆ. ಹಾಗಾಗಿ ಭರತನಾಟ್ಯಕ್ಕೆ ಪೂರಕವಾಗಿ ನಾನು ಯೋಗಾಸನವನ್ನು ಅಭ್ಯಾಸ ಮಾಡಿಕೊಂಡೆ. ಸಮರ ಕಲೆಗಳನ್ನು ಕಲಿತೆ. ನನ್ನೊಳಗಿನ ನೃತ್ಯವನ್ನು ನಿತ್ಯವೂ ಚಂದಗಾಣಿಸಲು ಬೇಕಾದ ಎಲ್ಲ ಪ್ರಯತ್ನ ಮಾಡಲು ನಾನು ಸದಾ ಹಾತೊರೆಯುತ್ತಿರುತ್ತೇನೆ’ ಎಂದು ಹೇಳಿದವರು ಪ್ರಸಿದ್ಧ ನೃತ್ಯಕಲಾವಿದೆ ವಸುಂಧರಾ ದೊರೆಸ್ವಾಮಿ. ಅವರ ಈ ಮಾತಿಗೆ ಪುಷ್ಟಿ ನೀಡುವಂತಿತ್ತು ಅವರು ಪ್ರಸ್ತುತಪಡಿಸಿದ ವೀರರಸ ಪ್ರಧಾನವಾದ, ‘ಕಿತ್ತೂರು ರಾಣಿ ಚೆನ್ನಮ್ಮ’ ಎಂಬ ಏಕವ್ಯಕ್ತಿ ನೃತ್ಯ ನಾಟಕ. ಅವರ ಆರು ದಶಕಗಳ ನೃತ್ಯ, ನಾಟಕ, ಸಮರ ಕಲೆಗಳ ಕಲಿಕೆಯು ರಸಪಾಕವಾಗಿ ಈ ಪ್ರದರ್ಶನವು ಮೂಡಿಬಂತು.
ಕನ್ನಡನಾಡಿನ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮಳ ಜೀವನ ವೃತ್ತಾಂತವನ್ನು, ಬ್ರಿಟಿಷರ ವಿರುದ್ಧ ಅಕೆ ಸಾರಿದ ಕೆಚ್ಚೆದೆಯ ಹೋರಾಟವನ್ನು ಕಲಾವಿದೆಯು ಯಶಸ್ವಿಯಾಗಿ ರಂಗದ ಮೇಲೆ ಪ್ರಸ್ತುತಪಡಿಸಿದರು. ಭರತನಾಟ್ಯದ ತಾಳಲಯದ ತಳಹದಿ, ರಂಗಭೂಮಿಯ ವಾಚಿಕದ ತೋರಣ, ಯೋಗಾಸನದ ಕಿಂಚಿತ್ ಅಲಂಕಾರ, ಸಮರ ಕಲೆಯ ಸಮ್ಮಿಲನದೊಂದಿಗೆ ಇಡೀ ರಂಗಪ್ರಸ್ತುತಿಯು ಪ್ರೇಕ್ಷಕರ ಮನ ಸೆಳೆಯಿತು. ಪ್ರದರ್ಶನದುದ್ದಕ್ಕೂ ಶ್ಲಾಘನೆಯ ಕರತಾಡನ, ಅಂತಿಮವಾಗಿ ಸಭಿಕರೆಲ್ಲರೂ ಗೌರವಪೂರ್ವಕವಾಗಿ ನೀಡಿದ ಚಪ್ಪಾಳೆಯ ಅಭಿನಂದನೆಯನ್ನು ವಿನಯದಿಂದ ಸ್ವೀಕರಿಸಿದರು ವಸುಂಧರಾ ದೊರೆಸ್ವಾಮಿ.
ಬಾಲಕಿ ಚೆನ್ನಮ್ಮಳ ಆಟಪಾಠ ಆಸಕ್ತಿಯನ್ನು ಚಿಗರೆಗಂಗಳ ಚಲನೆಯೊಂದಿಗೆ ಚುರುಕು ಹೆಜ್ಜೆಗಾರಿಕೆಯಲ್ಲಿ ಅಭಿವ್ಯಕ್ತಿಗೊಳಿಸಿದ ಕಲಾವಿದೆ, ಯೌವ್ವನದಲ್ಲಿ ಆಕೆಗೆ ಯುದ್ಧ ಕೌಶಲ ಕಲಿಯಲು ಇದ್ದ ಆಸಕ್ತಿಯನ್ನು ಅಷ್ಟೇ ಗಂಭೀರವಾಗಿ ಪ್ರಸ್ತುತಪಡಿಸಿದರು. ನೃತ್ತ, ನಡಿಗೆ, ನಿಲುವು ಮತ್ತು ಮುಖಭಾವದಲ್ಲಿ, ಚೆನ್ನಮ್ಮಾಜಿ ನಿಧಾನವಾಗಿ ಪ್ರಬುದ್ಧತೆಯತ್ತ ಸಾಗುವ ಚಲನೆಯನ್ನು ಅಭಿವ್ಯಕ್ತಿಗೊಳಿಸಿದರು. ರಾಜಾ ಮಲ್ಲಸರ್ಜನೊಂದಿಗೆ ನಡೆದ ವಿವಾಹ ಪ್ರಸಂಗದಲ್ಲಿ ಔಚಿತ್ಯಪೂರ್ಣ ಶೃಂಗಾರದ ಝಲಕ್ ಗೋಚರಿಸಿದರೆ, ಮಗನನ್ನು ಕಳೆದುಕೊಂಡ ತಾಯಿಯ ದುಃಖಿತ ಭಾವವು ಕರುಣಾರಸವನ್ನು ಅನಾವರಣಗೊಳಿಸಿತು. ವೀರರಸದಲ್ಲಿ ಅಭಿನಯ ವೈಭವದ ಉತ್ತುಂಗಕ್ಕೆ ಏರಿದರು.
ಹಾಗೆ ನೋಡಿದರೆ ಅವರು ಒಟ್ಟು ಈ ಪ್ರಸ್ತುತಿಯನ್ನು ಹೆಣೆದಿರುವ ವಿನ್ಯಾಸವೇ ಬಹುವೈವಿಧ್ಯತೆಯಿಂದ ಕೂಡಿತ್ತು. ಚೆನ್ನಮ್ಮಾಜಿಯ ವಿವಾಹ ಪ್ರಸಂಗದವರೆಗೆ ಸಂತೋಷ ಪ್ರಧಾನವಾದ ಭಾವಗಳಿಗೆ ಆದ್ಯತೆ ನೀಡಿ ಭರಪೂರ ನೃತ್ತವನ್ನು ಉಣಬಡಿಸಿದರು. ಮಗುವನ್ನು ಕಳೆದುಕೊಂಡ ಬಳಿಕ ಈಶ್ವರನನ್ನು ಮೊರೆ ಹೋಗುವ ಸಂದರ್ಭದಲ್ಲಿ ಶಂಕರಾಭರಣ ರಾಗದಲ್ಲಿ ‘ಚಂದ್ರಚೂಡ ಶಿವ ಶಂಕರ...’ ಹಾಡು ಸಭಿಕರು ಭಕ್ತಿರಸದಲ್ಲಿ ತಲ್ಲೀನರಾಗುವಂತೆ ಮಾಡಿತು. ಅವರ ಈ ನೃತ್ಯವಿಲಾಸಕ್ಕೆ ಸೊಗಸಾಗಿ ಜೊತೆಯಾದುದು ಯೋಗಾಸನದ ಭಾವಭಂಗಿಗಳು. ಸಾಂಸಾರಿಕ ಜಂಜಾಟದ ಹೊಸ್ತಿಲನ್ನು ದಾಟಿ, ಪ್ರಜೆಗಳನ್ನು ರಕ್ಷಿಸುವ ಉದ್ದೇಶದಿಂದ ರಾಜಕೀಯಕ್ಕೆ ಮುಖಮಾಡಲು ನಿರ್ಧರಿಸುವ ಚೆನ್ನಮ್ಮಾಜಿಯ ನಿರ್ಧಾರ, ಅಲೋಚನೆಯ ಪರಿವರ್ತನೆಯನ್ನು ನೃತ್ತದಲ್ಲಿಯೇ ಕಲಾವಿದೆ ಪ್ರೇಕ್ಷಕರಿಗೆ ತಿಳಿಸಿಕೊಟ್ಟರು.
ನೃತ್ಯಪ್ರಸ್ತುತಿಯೊಂದರಲ್ಲಿ ರಂಗಗತಿಗಳ ಬಳಕೆಯು ಸಾಂದರ್ಭಿಕವಾಗಿ ಹಾದುಹೋಗುವುದು ವಾಡಿಕೆ. ಆದರೆ ವಸುಂಧರಾ ದೊರೆಸ್ವಾಮಿ ಅವರು ಕಿತ್ತೂರು ರಾಣಿಯ ಧೈರ್ಯಸ್ಥೈರ್ಯ ಮತ್ತು ಮಹಾರಾಣಿಯ ಆಳ್ವಿಕೆಯ ಗಾಂಭೀರ್ಯವನ್ನು ಅಭಿವ್ಯಕ್ತಿಗೊಳಿಸಲು ‘ತುರಗಗತಿ’ಯನ್ನು ರಾಣಿಯ ಮನೋಸ್ಥಿತಿಗೆ ಪೂರಕವಾಗಿ ವಿವಿಧ ವೇಗಗಳಲ್ಲಿ ಬಳಸಿಕೊಂಡರು. ಚೆನ್ನಮ್ಮಾಜಿಯು ಯುದ್ಧಕೌಶಲ ಕಲಿಯುವ ಸಂದರ್ಭದಲ್ಲಿ, ಆಕೆ ಕಾರ್ಯೋನ್ಮುಖಳಾಗಬೇಕಾದ ತುರ್ತು, ರಾಣಿಯ ವೈಭವ, ಯುದ್ಧದ ಸಿದ್ಧತೆ...ಹೀಗೆ ವಿವಿಧ ಲಯಗಳಲ್ಲಿ ಕಲಾವಿದೆಯ ಹೆಜ್ಜೆಗಾರಿಕೆಯು, ರಾಣಿ ಪಾತ್ರದ ವರ್ಚಸ್ಸನ್ನು ಉನ್ನತಿಗೇರಿಸುವಲ್ಲಿ ಯಶಸ್ವಿಯಾಯಿತು. ವಿದ್ವಾನ್ ಡಿ.ಎಸ್. ಶ್ರೀವತ್ಸ ಅವರ ಹಿನ್ನೆಲೆ ಸಂಗೀತವೂ ಪರಿಣಾಮಕಾರಿಯಾಗಿ ಸಾಥ್ ಕೊಟ್ಟಿರುವುದನ್ನು ಮರೆಯುವಂತಿಲ್ಲ.
ರಾಜಾ ಮಲ್ಲಸರ್ಜನ ರಾಣಿಯಾಗಿ, ಶಿವಭಕ್ತೆಯಾಗಿ, ಯುದ್ಧ ಸನ್ನದ್ಧಳಾದ ಹೋರಾಟಗಾರ್ತಿಯಾಗಿ ಚೆನ್ನಮ್ಮಾಜಿಯ ಪಾತ್ರವನ್ನು ಆಹಾರ್ಯದಲ್ಲಿಯೂ ವಿಭಿನ್ನವಾಗಿ ತೋರಿಸಿದ್ದು ಮತ್ತೊಂದು ವಿಶೇಷ. ಯುದ್ಧದ ದಿರಿಸು, ಕತ್ತಿ ಗುರಾಣಿಗಳು ಮತ್ತು ಕಿರೀಟದ ಬಳಕೆಯು ಭಾವಾಭಿವ್ಯಕ್ತಿಗೆ ವೇಗವರ್ಧಕದಂತಿತ್ತು. ವಸುಂಧರಾ ಅವರು ಕೇರಳದ ಕಳರಿಪಯಟ್ಟು ಕಲೆ ಹಾಗೂ ಮಣಿಪುರದ ತಾಂಗ್ತಾ ಕಲೆಯನ್ನೂ ಕಲಿತವರಾದ್ದರಿಂದ ಯುದ್ಧದ ಸನ್ನಿವೇಶಗಳು ನೃತ್ಯದೊಳಗೆ ಮಿಳಿತವಾಗಿ ಮೂಡಿಬಂತು. ಒಂದು ಗಂಟೆ ಅವಧಿಯ ಪ್ರಸ್ತುತಿಯಲ್ಲಿ ಕಲಾವಿದೆಯ ಸುದೀರ್ಘವಾದ ಕಲಾ ಸಾಧನೆಯು ರತ್ನಪ್ರಕಾಶದಂತೆ ಹೊಳೆಯಿತೆನ್ನಬೇಕು. ಡಾ.ಜ್ಯೋತಿಶಂಕರ್ ಅವರ ರಂಗಕೃತಿಗೆ ನೃತ್ಯಸಾಧ್ಯತೆಗಳನ್ನು ಅನಾವರಣಗೊಳಿಸುತ್ತ, ಕಲಾವಿದೆಯು ಆಂಗಿಕ ಅಭಿನಯದಲ್ಲಿ ಭಾವಪೋಷಣೆ ಮಾಡುತ್ತ ಪ್ರೇಕ್ಷಕರೊಡನೆ ಕಥಾನುಸಂಧಾನ ಸಾಧಿಸಿಕೊಂಡರು. ಮಣಿಪಾಲ ವಿಶ್ವವಿದ್ಯಾಲಯದ ಸಾಂಸ್ಕೃತಿಕ ವಿಭಾಗವು ಟಿ.ಎಂ.ಎ ಪೈ ಸಭಾಂಗಣದಲ್ಲಿ ಗುರುವಾರ ಈ ಕಾರ್ಯಕ್ರಮ ಆಯೋಜಿಸಿತ್ತು.
ಈ ಕಾರ್ಯಕ್ರಮದ ನಂತರ ಸಂವಾದದಲ್ಲಿಯೂ ವಸುಂಧರಾ ಭಾಗವಹಿಸಿದರು. ಪಂದನಲ್ಲೂರು ಶೈಲಿಯಲ್ಲಿ ನೃತ್ಯಾಭ್ಯಾಸವನ್ನು ಮಾಡಿದ್ದರೂ ನಂತರದ ದಿನಗಳಲ್ಲಿ ತಾವು ತಮ್ಮದೇ ಆದ ‘ವಸುಂಧರಾ ಬಾಣಿ’ ಶೈಲಿಯನ್ನು ಅಭಿವೃದ್ಧಿಪಡಿಸಿಕೊಂಡ ಬಗೆಯನ್ನು ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು. ಮೂಲಶೈಲಿಗೆ ಧಕ್ಕೆ ಬಾರದಂತೆ ತಮ್ಮ ನಿಲುವಿಗೆ ಪೂರಕವಾಗಿ ಲಾಲಿತ್ಯಪೂರ್ಣ ಶೈಲಿಯೊಂದನ್ನು ತಾವು ಕಂಡುಕೊಂಡ ಬಗೆಯನ್ನು ವಿವರಿಸಿದರು. ಮೈಸೂರಿನಲ್ಲಿ ವಸುಂಧರಾ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್‌ನಲ್ಲಿ ಇಂತಹ ಹತ್ತಾರು ಪರಿಕಲ್ಪನೆಗಳನ್ನು ಹೆಣೆಯುತ್ತ, ತಾವೂ ನೃತ್ಯಕಾರ್ಯಕ್ರಮಗಳನ್ನು ಕೊಡುವುದಕ್ಕೆ ಹೇಗೆ ಸಾಧ್ಯ ಎಂದು ವಿದ್ಯಾರ್ಥಿನಿಯೊಬ್ಬರು ಪ್ರಶ್ನಿಸಿದರು. ‘ಪ್ರತಿಯೊಂದು ಪರಿಕಲ್ಪನೆಯ ಹಿಂದೆಯೂ ನನ್ನ ನಿರಂತರವಾದ ಓದು ಇದೆ. ಪುಸ್ತಕಗಳು ನನ್ನ ಸಂಗಾತಿ’ ಎಂದು ವಸುಂಧರಾ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.