ಊಟೂಟೂಟ... ಊಟೂಟೂಟ... ಅನ್ಕೊಂತ ಎಡಗೈ ಎಡಹುಬ್ಬಿನ ಮೇಲಿನವರೆಗೂ ಎತ್ತುವ, ಸುಮ್ಮನಿದ್ದರೆ ಸದಾ ಗೋಲಿಯಾಟದ ಆಂಗಿಕ ಚಿಹ್ನೆಯಲ್ಲಿ ನಿರತನಾಗುವ, ಹಾಡು ಕೇಳಿದೊಡನೆ ಕುಣಿಯುವ, ಹೆಗಲು ಮುಟ್ಟಿದೊಡನೆ, ’ನಿಮ್ಮಂಥ ದೇವರಂಥ ಮನುಷಾನ ನೋಡಿಲ್ರಿ‘ ಎನ್ನುವ, ತೊಡೆ ಮುಟ್ಟಿದರೆ ’ನಿಮ್ಮಪ್ಪಂದು ತಿಂದೀನೇನಲೆ‘ ಎಂದು ಜರೆಯುವ ಹರಿ ಪಾತ್ರ ವೇದಿಕೆಗೆ ಬಂದರೆ ನಗೆಯುಕ್ಕಿ ಬರುತ್ತಿತ್ತು.
ಗಲಗಲಿ ಒಳಗಬಂದ್ರು, ಶಾಭಾಷ್ ಗಲಗಲಿ, ಬರೋಬ್ಬರಿ ವಿಳಾಸಕ್ಕ ಬಂದೀರಿ, ಒಂದು ಎರಡು ಮೂರು, ಗಲಗಲಿಯವರಿಗೆ ಹೆಣ್ಮಕ್ಕಳು ಕಂಡ್ರು. ಗಲಗಲಿಯವರು ಹೆಣ್ಮಕ್ಕಳ ಮಾತು ಕೇಳ್ತಾರ, ಹೆಣ್ಮಕ್ಕಳು ಗಲಗಲಿಯವರಿಗೆ ಹಚ್ಕೊಂಡಾರ, ಹೆಗಲಿಗೆ ಒರಗ್ಯಾರ ಅಂದ್ರ ಗಲಗಲಿ ಮ್ಯಾಲೆ ಪ್ರೀತಿ ಇದ್ದಂಗ ಐತಿ, ಇದೇ ಬರೋಬ್ಬರಿ ಟೈಮು, ಕೇಳೇಬಿಡ್ತೀನಿ.. ಒಂದು ಪಾಲಸಿ ಮಾಡ್ತೀರೇನು? ಇನ್‌ಸೈಡ್ ಔಟ್‌ನಂತೆ, ಲೌಡ್ ಥಿಂಕಿಂಗ್‌ನಂತೆ ಮನದ ಮಾತುಗಳೆಲ್ಲ ತುಟಿನಡುವೆ ಗೊಣಗುತ್ತಲೇ ಗಲಗಲ ಮಾತನಾಡುವ ಗಲಗಲಿಯ ಪಾತ್ರ ಎರಡನೆಯದ್ದು.
ಕನಸು ಮನಸುಗಳಲ್ಲೆಲ್ಲ ಲಾರಿ ಒಡೆಯನಾಗುವ ರಂಗ. ಬಾಯ್ಬಿಟ್ಟರೆ ಪ್ರಶ್ನೆಗಳ ಸರಮಾಲೆ. ಎಲ್ಲಿ, ಯಾರು, ಯಾಕ, ಹೆಂಗ.. ಏನು... ಬಾಯ್ಬಿಟ್ಟರೆ ಲಾರಿಯ ಕುರಿತೇ ಮಾತು. ಅದೇ ಭಾಷೆಯಲ್ಲಿಯೇ ಸಂಭಾಷಣೆ. ಇದು ಮೂರನೆಯ ಪಾತ್ರ.
ಮದನ್ ಸುಖಾತ್ಮೆ ಅಪಾರ ಆಸ್ತಿಯ ಒಡೆಯ. ಎರಡನೆಯ ಯುವ ಹೆಂಡ್ತಿ ವಂಚಿಸುವಳೆಂಬ ಗುಮಾನಿ ಸತ್ಯವಾದಾಗ ಹೆಂಡ್ತಿಯ ಅನಿರೀಕ್ಷಿತ ದಾಳಿಯಿಂದಾಗಿ ಸಾವನ್ನಪ್ಪಿದವ. ನಾಲ್ಕನೆಯ ಪಾತ್ರ.
‘ಸಹಿ ರೀ ಸಹಿ’ ನಾಟಕದ ಜೀವ ಮತ್ತು ಆತ್ಮಗಳು ಈ ಪಾತ್ರಗಳು. ಇವೆಲ್ಲ ಪಾತ್ರಗಳನ್ನೇ ಯಶ್ವಂತ್ ಸರದೇಶಪಾಂಡೆ ಸಲೀಸಾಗಿ ನಟಿಸಿದರು, ನೀರಿನ ಹರಿವಿನಂತೆ. ಹರಿಯುವ ನೀರನ್ನು ಯಾವ ಪಾತ್ರೆಗೆ ತುಂಬಿಸಿದರೂ ಆ ಪಾತ್ರೆಯ ಪಾತ್ರವನ್ನೇ ತಾಳುವಂತೆ! ಪ್ರತಿ ಪಾತ್ರಕ್ಕೂ ಅದರದ್ದೇ ಆದ ಮ್ಯಾನರಿಸಂ ಇದೆ, ರಿದಂ ಇದೆ. ಒಂದರೆ ಚಣವೂ ಗಮನ ಅತ್ತಿತ್ತ ಆಗದಂತೆ ಧ್ಯಾನಿಗನಂತೆ ಪ್ರಸ್ತುತಪಡಿಸುತ್ತ ಹೋಗುತ್ತಾರೆ. ನಾಲ್ಕೂಪಾತ್ರಗಳೂ ಒಟ್ಟಿಗೆ ವೇದಿಕೆಯ ಮೇಲೆ ತರುವುದು ಹೇಗೆ? ಅದಕ್ಕೂ ಯಶ್ವಂತ್ ಅವರ ವಿಶೇಷ ರಂಗ ತಂತ್ರವಿದೆ. ಅದನ್ನು ನೋಡಿಯೇ ಆನಂದಿಸಬೇಕು.
ಮರಾಠಿ ಮೂಲದ ‘ಸಹಿ ರೀ ಸಹಿ’ ನಾಟಕವನ್ನು ಯಶ್ವಂತ್ ಸರದೇಶಪಾಂಡೆಯವರ ಸಿಗ್ನೆಚರ್ ಧಾಟಿ ಧಾರವಾಡಿಗರ ಕನ್ನಡದಲ್ಲಿ ಅನುವಾದಿಸಿ, ರಂಗರೂಪಕ್ಕೆ ತರಲಾಗಿದೆ. ಕೇದಾರ್ ಶಿಂದೆ ಅವರ ರಚಿತ ಮತ್ತು ನಿರ್ದೇಶಿತ ಈ ನಾಟಕ ಮರಾಠಿ ನೆಲದಲ್ಲಿ 4444 ಪ್ರಯೋಗಗಳನ್ನು ಕಂಡಿವೆ. ಕಾಣುತ್ತಲೇ ಇದೆ. ಅಲ್ಲಿ ಖ್ಯಾತ ರಂಗಭೂಮಿ ಕಲಾವಿದ ಭಾರತ್ ಜಾಧವ್ ಮದನ್ ಸುಖಾತ್ಮೆಯ ಪಾತ್ರ ನಿರ್ವಹಿಸುತ್ತಾರೆ.
ಸಿರಿವಂತ ಉದ್ಯಮಿಯೊಬ್ಬ ಸಂದೇಹಾಸ್ಪದ ರೀತಿಯಲ್ಲಿ ಕಾಣೆಯಾಗುತ್ತಾನೆ. ಮೂರು ತಿಂಗಳ ನಂತರ ವಕೀಲರು ಅವರ ಮೂರು ಉಯಿಲುಗಳೊಂದಿಗೆ ಬರುತ್ತಾರೆ. ಒಂದರಲ್ಲಿ ಎರಡನೆಯ ಹೆಂಡತಿ ವಾರಸುದಾರಳೆಂದು, ಇನ್ನೊಂದರಲ್ಲಿ ಮೊದಲ ಹೆಂಡತಿ ಮತ್ತು ಪುತ್ರಿಯನ್ನೂ, ಮತ್ತೊಂದರಲ್ಲಿ ದೂರದ ಸಂಬಂಧಿ ಪಾಟೀಲ ಅವರನ್ನೂ ವಾರಸುದಾರರಾಗಿ ಬರೆದಿರುತ್ತಾರೆ. ಆದರೆ ಯಾವುದಕ್ಕೂ ಅವರ ಸಹಿ ಇರುವುದಿಲ್ಲ. ಯಾವುದು ಅಂತಿಮವಾಗಿ ಬರೆದಿದ್ದು ಎಂಬ ಸ್ಪಷ್ಟತೆಯೂ ಇರುವುದಿಲ್ಲ. ಮದನ್ ಆತ್ಮಸುಖೆಯನ್ನೇ ಹೋಲುವ ಹರಿ, ಗಲಗಲಿ ಮತ್ತು ರಂಗ ಅವರನ್ನು ಈ ಮೂರು ಪಕ್ಷದವರು ತಮ್ಮ ಪಾಲಿನ ಮದನ್ ಆಗಿ ಕಾಣಿಸಿಕೊಳ್ಳಲು ಒಲಿಸುತ್ತಾರೆ. ಕೊನೆಯ ಅಂಕದಲ್ಲಿ ಈ ಮೂರು ಪಾತ್ರಗಳೊಂದಿಗೆ ನಿಜದ ಮದನ್ ಆತ್ಮಸುಖೆಯೂ ಪ್ರತ್ಯಕ್ಷವಾದಾಗ ಆಗುವ ಅವಾಂತರಗಳೇ ಈ ನಾಟಕದ ಕತೆಯಾಗಿದೆ.
ಕೇವಲ ಮನರಂಜನೆಯಷ್ಟೇ ಈ ನಾಟಕದ ಉದ್ದೇಶವಾಗಿರುವಂತೆ ಕಂಡರೂ ದುರಾಸೆ ಮಾನವನನ್ನು ಯಾವ ದಿಕ್ಕಿಗಾದರೂ ಕೊಂಡೊಯ್ಯಬಹುದು ಎಂಬಂತೆ ನಿರೂಪಿತವಾಗುತ್ತ ಹೋಗುತ್ತದೆ.
ಪಾತ್ರಗಳೆಲ್ಲವೂ ನಿಜದ ವ್ಯಕ್ತಿತ್ವವೇ ಹಂಗೆ ಎನ್ನುವಂತೆ ಮೈಗಿಳಿಸಿಕೊಂಡಿದ್ದಾರೆ ಕಲಾವಿದರು. ಅವರ ಆಂಗಿಕ ಅಭಿನಯ, ಅಭಿವ್ಯಕ್ತಿ, ಉಚ್ಚಾರ ಎಲ್ಲವೂ.. ನಟನೆಯೇ ಅಲ್ಲ ಅನಿಸುವಷ್ಟು ಸಹಜ. ಸಹಜವಾಗಿರುವ ನಟನೆಯೇ ಇದು ಎನ್ನುವಷ್ಟು ತಾದಾತ್ಮ್ಯ. ಇದಕ್ಕೆ ಮೊದಲ ಹೆಂಡತಿಯ ಪಾತ್ರ ನಿರ್ವಹಿಸಿದ ಪ್ರಿಯಾ ಕುಲಕರ್ಣಿ, ವಕೀಲ ಬಾಚಯ್ಯನ ಪಾತ್ರ ನಿರ್ವಹಿಸಿದ ಕೃಷ್ಣಮೂರ್ತಿ ಗಾಂವ್ಕರ್, ಮದನ್ ಪಾತ್ರದ ಅಣ್ಣನಾಗಿರುವ ಅರವಿಂದ ಪಾಟೀಲ, ಕುಡುಕನ ಪಾತ್ರದಲ್ಲಿ ರವಿ ಕುಲಕರ್ಣಿ, ಮಗಳ ಪಾತ್ರದಲ್ಲಿ ಅರ್ಪಿತಾ, ಎರಡನೆಯ ಹೆಂಡ್ತಿ ಪಾತ್ರದಲ್ಲಿ ಶಿಲ್ಪಾ ಪಾಂಡೆ ಜೀವ ತುಂಬಿದರು. ನಾಟಕದಲ್ಲಿ ಸಣ್ಣ ಸಣ್ಣ ಪಾತ್ರಗಳ ನಾಜೂಕುತನ ಮತ್ತು ಬಾರೀಕಿಗೆ ಕೊಂಕು ಬಾರದಂತೆ ಸಹಾಯಕ ಪಾತ್ರದಲ್ಲಿ ಸುಮಂತ್ ಕುಲಕರ್ಣಿ, ಶೇಖರ್ ಪಾಟೀಲ ಮಿಂಚಿದರು. ಇವರೆಲ್ಲರ ಮುಂದೆ ತೀರ ತುಸುವೆನಿಸುವಷ್ಟು, ಪಿಎ ಪಾತ್ರವಹಿಸಿದ ಪ್ರದೀಪ ಮುಧೋಳ ಪೇಲವವೆನಿಸಿದರು.
ಉಳಿದಂತೆ ಇಡೀ ನಾಟಕ ನಕ್ಕು ನಗಿಸುತ್ತಲೇ, ಮನರಂಜನೆಯ ಹೆಸರಿನಲ್ಲಿಯೇ ದುಡ್ಡು, ಆಸ್ತಿ ಸಿಗುವುದು ಎಂದಾದಾಗ ಮನುಷ್ಯ ತೋರುವ ಸಣ್ತನಗಳತ್ತ ಗಮನಸೆಳೆಯುತ್ತದೆ. ಎಲ್ಲಿಯೂ ಅಪಹಾಸ್ಯವಿಲ್ಲದೇ, ಸಮಾಜದ ಸಣ್ತನಗಳನ್ನು ವಿಡಂಬನಾತ್ಮಕವಾಗಿ ನೋಡುವ ಈ ನಾಟಕ ಮತ್ತೆ ಮತ್ತೆ ನೋಡಿಸಿಕೊಳ್ಳುತ್ತದೆ. ಪ್ರತಿಸಲವೂ ಅಷ್ಟೇ ನಕ್ಕು ಬರುವವರು ಇರುವುದರಿಂದಲೇ ಕನ್ನಡದಲ್ಲಿಯೂ 500ಕ್ಕೂ ಹೆಚ್ಚಿನ ಪ್ರದರ್ಶನ ಕಂಡಿದೆ.
ಮೊದಲ ದೃಶ್ಯದಲ್ಲಿ ಕಿರಿಯ ಹೆಂಡತಿ ಮೋಸ ಮಾಡುವುದನ್ನು ಕಂಡಾಗ ಮದನ್ ಆತ್ಮಸುಖೆ ಮುಡಿ ಹಿಡಿದು ಬೈಯ್ಯುವಾಗ ಮಾತ್ರ ತುಸು ಇರುಸುಮುರುಸಾಗುವುದು ನಿಜ. ಅದೊಂದೇ ನಾಟಕಕ್ಕೆ ದೃಷ್ಟಿಬೊಟ್ಟು. v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.