ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ: ಪಯಣ ನಟನಿಗೆ ಜಗವೇ ನಾಟಕರಂಗ

Published 25 ಜೂನ್ 2023, 0:30 IST
Last Updated 25 ಜೂನ್ 2023, 0:30 IST
ಅಕ್ಷರ ಗಾತ್ರ

ಎಂ. ರಾಘವೇಂದ್ರ, ಸಾಗರ

‘ಟ್ರಾವೆಲಿಂಗ್ ಆ್ಯಕ್ಟರ್’ ಎಂದೇ ತಮ್ಮನ್ನು ತಾವು ಕರೆದುಕೊಳ್ಳುವ ಜಮ್ಮುವಿನ ರಂಗ ಕಲಾವಿದ ಲಕ್ಕಿ ಗುಪ್ತ ಒಂಬತ್ತು ತಿಂಗಳುಗಳಿಂದ ಕರ್ನಾಟಕದಲ್ಲೆ ನೆಲೆಸಿದ್ದಾರೆ. ಪಂಜಾಬಿ ಲೇಖಕ ಮೋಹನ್ ಭಂಡಾರಿ ಅವರ ಕತೆ ಆಧರಿಸಿದ ಏಕವ್ಯಕ್ತಿ ಹಿಂದಿ ರಂಗಪ್ರಯೋಗ ‘ಮಾ ಮುಝೆ ಟ್ಯಾಗೋರ್ ಬನಾದೇ’ ಮೂಲಕ ಅವರು ಕನ್ನಡದ ನೆಲದಲ್ಲಿ ಸದ್ದು ಮಾಡುತ್ತಿದ್ದಾರೆ.

ಇಪ್ಪತ್ತೈದು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಲಕ್ಕಿ ಗುಪ್ತ 2010ರಿಂದ ತಮ್ಮನ್ನು ಕೇವಲ ಏಕವ್ಯಕ್ತಿ ರಂಗ ಪ್ರಯೋಗಕ್ಕೆ ಸೀಮಿತಗೊಳಿಸಿಕೊಂಡಿದ್ದಾರೆ. ಈವರೆಗೆ ಐದು ಏಕವ್ಯಕ್ತಿ ರಂಗಪ್ರಯೋಗಗಳನ್ನು ಮಾಡಿದ್ದು, ಒಂದರಲ್ಲಿ ಸಂಭಾಷಣೆಯೇ ಇಲ್ಲ.

ಲಕ್ಕಿ ಗುಪ್ತ ಅಭಿನಯದ ‘ಮಾ ಮುಝೆ ಟ್ಯಾಗೋರ್ ಬನಾದೇ’ ರಂಗಪ್ರಯೋಗ ಭಾರತದ ವಿವಿಧ ಭಾಗಗಳಲ್ಲಿ ಈವರೆಗೆ 1172 ಪ್ರದರ್ಶನಗಳನ್ನು ಕಂಡಿದೆ. ಕವಿತೆ ಬರೆಯುವ ಗೀಳು ಹೊಂದಿರುವ ಬಾಲಕ. ರವೀಂದ್ರನಾಥ ಟ್ಯಾಗೋರ್ ಮಟ್ಟಕ್ಕೆ ಏರುವ ಹಂಬಲ ಅವನಿಗೆ. ಬಡತನದಿಂದಾಗಿ ಅರ್ಧದಲ್ಲೇ ಶಿಕ್ಷಣ ತೊರೆಯಬೇಕಾದ ಅವನ ಕತೆಯನ್ನು ಈ ಪ್ರಯೋಗ ಆಧರಿಸಿದೆ.

ಬಾಲಕ ತನ್ನ ಕತೆಯನ್ನು ತಾನೇ ನಿರೂಪಿಸಿಕೊಳ್ಳುತ್ತಾನೆ. ಆತನ ತಂದೆ, ತಾಯಿ, ಅಜ್ಜ, ಸಹಪಾಠಿಗಳು, ಗ್ರಾಮದ ಸರಪಂಚ್, ಜಮೀನುದಾರ ಹೀಗೆ ಹತ್ತು ಹಲವು ಪಾತ್ರಗಳು ಪ್ರಯೋಗದಲ್ಲಿ ಹಾದುಹೋಗುತ್ತವೆ. ಪ್ರೇಕ್ಷಕರನ್ನೂ ಪಾತ್ರಧಾರಿಗಳಾಗಿ ಒಳಗೊಳ್ಳುವುದು ಈ ಪ್ರಯೋಗದ ವಿಶೇಷತೆ.

ಇವೆಲ್ಲಾ ಪೂರ್ವನಿಯೋಜಿತವೇ ಎಂದು ಅನಿಸುವಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಪಾತ್ರಧಾರಿಗಳನ್ನಾಗಿ ಆಯ್ಕೆ ಮಾಡುವಲ್ಲಿ ಲಕ್ಕಿಗುಪ್ತ ಅವರ ಪರಿಣತಿ ಇದೆ. ‘ಪ್ರತಿ ಪ್ರದರ್ಶನಕ್ಕೆ ಮುನ್ನ ಪ್ರೇಕ್ಷಕರನ್ನು ಪಾತ್ರಧಾರಿಗಳನ್ನಾಗಿ ಆಯ್ಕೆ ಮಾಡಿಕೊಳ್ಳಲು ಉತ್ತಮ ಅವಕಾಶ ದೊರಕಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತೇನೆ’ ಎನ್ನುತ್ತಾರೆ ಲಕ್ಕಿ ಗುಪ್ತ.

ಲಕ್ಕಿ ಗುಪ್ತ ಅಭಿನಯ ವೈಖರಿ
ಲಕ್ಕಿ ಗುಪ್ತ ಅಭಿನಯ ವೈಖರಿ

ಶಿಕ್ಷಣದಿಂದ ವಂಚಿತನಾಗುವ ಪ್ರತಿಭಾಶಾಲಿ ಬಾಲಕ ತನ್ನ ವೃತ್ತಾಂತವನ್ನು ಬಿಚ್ಚಿಡುತ್ತ ಹೋಗುತ್ತಿದ್ದಂತೆ ಪ್ರೇಕ್ಷಕರ ಕಣ್ಣಿನಲ್ಲಿ ತಂತಾನೇ ನೀರಿನ ಹನಿಗಳು ತೊಟ್ಟಿಕ್ಕುವ ಮಟ್ಟಿಗೆ ಲಕ್ಕಿಗುಪ್ತ ಅವರ ಅಭಿನಯ ಪ್ರಭಾವಶಾಲಿಯಾಗಿದೆ. ಇದು ನಮ್ಮದೇ ಅಥವಾ ನಾವೆಲ್ಲೋ ಕೇಳಿದ, ನೋಡಿದ ಕತೆ ಎಂಬ ಭಾವನೆಯಿಂದ ಪ್ರೇಕ್ಷಕರು ವಸ್ತು, ಪಾತ್ರವನ್ನು ಒಳಗೊಳ್ಳುವುದು ಪ್ರದರ್ಶನದ ಯಶಸ್ಸಿಗೆ ಹಿಡಿದ ಕೈಗನ್ನಡಿ.

ಈ ಪ್ರಯೋಗದಿಂದ ಹಲವು ವಿಶಿಷ್ಟ ಅನುಭವಗಳು ಲಕ್ಕಿ ಗುಪ್ತ ಅವರಿಗೆ ದಕ್ಕಿವೆ. ಒಮ್ಮೆ ಕಾಲೇಜೊಂದರ ಪ್ರದರ್ಶನದಲ್ಲಿ ವಿದ್ಯಾರ್ಥಿಯೊಬ್ಬನನ್ನು ಮೊಮ್ಮಗನ ಪಾತ್ರಧಾರಿಯಾಗಿ ಆಯ್ಕೆ ಮಾಡಿಕೊಂಡರು. ಆಗ ಆತ ತನ್ನ ಅಭಿನಯದ ಮುಂದುವರಿಕೆಯಾಗಿ, ‘ನನ್ನ ಅಜ್ಜ ತುಂಬಾ ಕೀಟಲೆಯ ಮನುಷ್ಯ’ ಎಂಬ ಡೈಲಾಗ್‌ ಹೊಡೆದು, ಲಕ್ಕಿ ಗುಪ್ತ ಧರಿಸಿದ್ದ ಧೋತಿಯನ್ನು ಕಿತ್ತುಕೊಂಡು ಕಾಲೇಜು ಕ್ಯಾಂಪಸ್ ತುಂಬಾ ಓಡಾಡಿದನಂತೆ.

ಲಘು ಹಾಸ್ಯ, ನವಿರಾದ ನಿರೂಪಣೆಯ ಜೊತೆಗೆ ಸಾಗುವ ‘...ಟ್ಯಾಗೋರ್ ಬನಾದೇ’ ರಂಗ ಪ್ರಯೋಗ ಕ್ಲೈಮಾಕ್ಸ್‌ನಲ್ಲಿ ಭಾವುಕ ತಿರುವು ಪಡೆಯುತ್ತದೆ. ಪ್ರೇಕ್ಷಕರಲ್ಲೇ ಒಬ್ಬರು ‘ಅಮ್ಮ’ನಾಗಬೇಕು. ಅವರ ಮಡಿಲಲ್ಲಿ ಕೇಂದ್ರ ಪಾತ್ರ ಬಾಲಕ ಮಲಗಬೇಕು. ಈ ಸನ್ನಿವೇಶವನ್ನು ‘ಒಂದು ಹರಿಯುವ ನದಿಯ ತಟದಲ್ಲಿ ಮತ್ತೊಂದು ನದಿ ಮಲಗಿದಂತೆ’ ಎಂದು ಪಾತ್ರಧಾರಿ ಬಣ್ಣಿಸುತ್ತಾನೆ.

‘ವಿದ್ಯಾರ್ಥಿಯಾಗಿ ಪ್ರತಿದಿನ ಹೊಸತನ್ನು ಕಲಿಯಲು ಬಯಸುವವನೇ ನಿಜವಾದ ಶಿಕ್ಷಕ’ ಎಂಬ ಅರ್ಥಪೂರ್ಣ ಮಾತಿಗೆ ಪ್ರೇಕ್ಷಕರಿಂದ ಸಹಜವಾಗಿ ಚಪ್ಪಾಳೆ ಸಿಗುತ್ತದೆ. ಮಗುವೊಂದಕ್ಕೆ ಟ್ಯಾಗೋರ್ ಕವಿತೆ ಕಲಿಸುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳುವ ಬಾಲಕ, ‘ಇಲ್ಲಿ ರವೀಂದ್ರರು ಕವಿತೆ ಕಲಿಸುತ್ತಿದ್ದಾರೋ ಅಥವಾ ಮಗುವೇ ರವೀಂದ್ರರಿಗೆ ಕವಿತೆ ಹೇಳಿಕೊಡುತ್ತಿದೆಯೋ’ ಎಂಬ ಭಾವ ಮೂಡುತ್ತಿರುವುದಾಗಿ ಹೇಳುತ್ತಾನೆ. ಆ ದೃಶ್ಯ ಮನಮುಟ್ಟುತ್ತದೆ.

ವಿಶಾಲವಾದ ರಂಗಮಂದಿರ, ಮೇಕಪ್, ಬೆಳಕು, ಸಂಗೀತ, ರಂಗ ಪರಿಕರಗಳ ನೆರವಿಲ್ಲದೆ ಒಂದು ರಂಗಪ್ರಯೋಗವನ್ನು ಕಟ್ಟಿಕೊಡಲು ಸಾಧ್ಯ ಎಂಬುದಕ್ಕೆ ಲಕ್ಕಿಗುಪ್ತ ಅವರ ‘ಮಾ ಮುಝೆ ಟ್ಯಾಗೋರ್ ಬನಾದೇ’ ಅತ್ಯುತ್ತಮ  ಉದಾಹರಣೆಯಾಗಿದೆ.

ಟ್ಯಾಗೋರ್ ಆಗುವ ಕನಸು ಕಂಡು ಕೊನೆಗೆ ಅರ್ಧಕ್ಕೇ ಶಾಲೆ ಬಿಡುವ ಅನಿವಾರ್ಯ ಎದುರಾದಾಗ ‘ನನ್ನೊಳಗಿನ ಟ್ಯಾಗೋರ್ ಮತ್ತೆ ಮತ್ತೆ ಜಾಗೃತಗೊಳ್ಳುತ್ತಾನೆ’ ಎನ್ನುವ ಬಾಲಕ ‘ಕವಿತೆಯಿಂದ ಹೊಟ್ಟೆ ತುಂಬುತ್ತದೆಯೆ’ ಎಂಬ ಪ್ರಶ್ನೆಯನ್ನೂ ಮುಂದಿಡುತ್ತಾನೆ. ಅಂತಿಮವಾಗಿ ಆತ ಸ್ವತಃ ಟ್ಯಾಗೋರ್ ಆಗುವುದಕ್ಕಿಂತ ಹಲವು ಟ್ಯಾಗೋರ್‌ಗಳನ್ನು ಸೃಷ್ಟಿಸುವುದು ಮುಖ್ಯ ಎಂಬ ತೀರ್ಮಾನಕ್ಕೆ ಬರುವುದರೊಂದಿಗೆ ಪ್ರಯೋಗ ಅಂತ್ಯ ಕಾಣುತ್ತದೆ.

‘ನಾವು ರಂಗಭೂಮಿಯವರು 40-50 ವರ್ಷ ದಾಟಿದ ಪ್ರೇಕ್ಷಕರ ಎದುರೇ ನಾಟಕ ಪ್ರದರ್ಶಿಸುತ್ತಿದ್ದೇವೆ. ಇದೇ ಮುಂದುವರೆದರೆ ಇನ್ನು 20 ವರ್ಷಗಳ ನಂತರ ನಮಗೆ ಪ್ರೇಕ್ಷಕರೇ ದೊರಕುವುದಿಲ್ಲ. ವಿದ್ಯಾರ್ಥಿ, ಯುವಜನರನ್ನು ಹೆಚ್ಚಾಗಿ ತಲುಪುವತ್ತ ರಂಗ ಕಲಾವಿದರು ಮನಸ್ಸು ಮಾಡಬೇಕು. ಇಲ್ಲದಿದ್ದರೆ ರಂಗಭೂಮಿ ಉಳಿಯುವುದಿಲ್ಲ’ ಎಂಬುದು ಲಕ್ಕಿ ಗುಪ್ತ ಅವರ ಆತಂಕ ಬೆರೆಸಿದ ಸಲಹೆ.

ಲಕ್ಕಿ ಗುಪ್ತ ಅವರ ‘ಮಾ ಮುಝೆ ಟ್ಯಾಗೋರ್ ಬನಾದೇ’ ರಂಗಪ್ರಯೋಗದ ಯಶಸ್ಸಿನಿಂದ ಉತ್ತೇಜಿತರಾಗಿ ಹಿರಿಯ ರಂಗಕರ್ಮಿ ಪ್ರಸನ್ನ ಅವರು ‘ಕುಪ್ಪಳ್ಳಿ ಪುಟ್ಟ’ ಎಂಬ ಹೊಸ ರಂಗ ಪಠ್ಯವನ್ನು ಸಿದ್ಧಪಡಿಸಿದ್ದಾರೆ. ಕರ್ನಾಟಕದ ಮೂವರು ಯುವ ಕಲಾವಿದರು ಈ ಪಠ್ಯವನ್ನು ರಂಗದ ಮೇಲೆ ತರಲು ಮುಂದಾಗಿದ್ದು ಟ್ಯಾಗೋರ್ ಸ್ಥಾನವನ್ನು ಕುವೆಂಪು ಅಲಂಕರಿಸಲಿದ್ದಾರೆ. ರಂಗಭೂಮಿ ಭಾಷೆ, ಧರ್ಮ, ಪ್ರದೇಶಗಳ ಗಡಿಯನ್ನು ದಾಟಿದ್ದು ಎಂಬ ಮಾತು ಈ ಮೂಲಕ ಸತ್ಯವಾಗುತ್ತಿದೆ.

ಬದುಕು ಬದಲಿಸಿದ ಒಂದು ನಾಟಕ ‍

ಜಮ್ಮುವಿನಲ್ಲಿ ಹುಟ್ಟಿ ಬೆಳೆದ ಲಕ್ಕಿ ಗುಪ್ತ ಅವರದ್ದು ರಂಗಭೂಮಿ ಹಿನ್ನೆಲೆಯ ಕುಟುಂಬವಲ್ಲ. ಅವರ ಸಹೋದರ-ಸಹೋದರಿಯರಿಗೆ ಗಾಯನದಲ್ಲಿ ಆಸಕ್ತಿ ಇದೆ. ‘ಪಿಯುವರೆಗೂ ಕೀಟಲೆ ಸ್ವಭಾವದ ವಿದ್ಯಾರ್ಥಿಯಾಗಿದ್ದೆ. ಡೋಗ್ರಿ ಭಾಷೆಯ ಒಂದು ನಾಟಕ ನೋಡಿದ ನಂತರ ಬದುಕಿನ ದಿಕ್ಕೇ ಬದಲಾಯಿತು’ ಎನ್ನುತ್ತಾರೆ ಲಕ್ಕಿ. ಅಲ್ಲಿಂದ ಸಂಪೂರ್ಣವಾಗಿ ರಂಗಭೂಮಿಗೆ ತಮ್ಮನ್ನು ಸಮರ್ಪಿಸಿಕೊಂಡ ಅವರು ಜಮ್ಮುವಿನ‌ ‘ಏಕ್ ಸಾಥ್ ರಂಗ್‌ಮಂಡಲ್’ ‘ಅಮೆಚೂರ್ ಥಿಯೇಟರ್ ಗ್ರೂಪ್’ ‘ಸಮೂಹ ಥಿಯೇಟರ್’ ‘ನಟರಂಗ್’ ಪಶ್ಚಿಮ ಬಂಗಾಳದ ‘ಗೋಬರ್ ಡಂಗ್’ ಪಂಜಾಬ್ ಹಿಮಾಚಲ ಪ್ರದೇಶದ ರಂಗತಂಡಗಳ ಜೊತೆ ತೊಡಗಿಸಿಕೊಂಡಿದ್ದರು. 2009ರಲ್ಲಿ ಜಮ್ಮುವಿನಲ್ಲಿ ಅವರು ನಿರ್ದೇಶಿಸಿದ ಒಂದು ಮಹತ್ವಾಕಾಂಕ್ಷೆಯ ಪ್ರಯೋಗ ಸುಸಜ್ಜಿತ ರಂಗಮಂದಿರ ಹಣಕಾಸಿನ ಕೊರತೆಯಿಂದ ವಿಫಲವಾದ ನಂತರ ಅವರು ಏಕವ್ಯಕ್ತಿ ರಂಗಪ್ರಯೋಗದತ್ತ ಹೊರಳಿದರು. ಕಳೆದ ಹದಿಮೂರು ವರ್ಷಗಳಲ್ಲಿ ನಾಲ್ಕೂವರೆ ಲಕ್ಷ ಕಿ.ಮೀ ಪಯಣಿಸಿರುವ ಅವರು ಭಾರತದ 25 ರಾಜ್ಯಗಳ 750 ಊರುಗಳಲ್ಲಿ ರಂಗಪ್ರದರ್ಶನ ನೀಡಿದ್ದಾರೆ. ಐದಾರು ಜನರ ಎದುರು ಕೂಡ ಏಕವ್ಯಕ್ತಿ ರಂಗಪ್ರಯೋಗ ಪ್ರದರ್ಶಿಸಿರುವ ಲಕ್ಕಿ ಒಂದು ನಗರದ ಫ್ಲ್ಯಾಟ್‌ನಲ್ಲಿ ಒಬ್ಬನೇ ಪ್ರೇಕ್ಷಕನ ಎದುರು ಪ್ರದರ್ಶನ ನೀಡುವ ಸವಾಲನ್ನೂ ಸ್ವೀಕರಿಸಿ ಯಶಸ್ವಿಯಾಗಿದ್ದಾರೆ. ಇನ್ನೂ ಸ್ವಲ್ಪ ಕಾಲ ಕರ್ನಾಟಕದಲ್ಲಿಯೇ ಅವರು ಇರಲಿದ್ದಾರೆ. ಯಾರು ಎಲ್ಲಿಗೆ ಕರೆದರೂ ಹೋಗಿ ನಾಟಕ ಆಡುವುದು ಅವರ ಜಾಯಮಾನ.

ಲಕ್ಕಿ ಅವರ ಸಂಪರ್ಕ:  8491891536.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT