ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ಫ್ಲಿಕ್ಸ್‌ನಲ್ಲಿ ಬಂದ್ರು ಬೆಂಗಳೂರು ಪೊಲೀಸರು: ಬಗೆ ಬಗೆಯ ಕ್ರೈಂ ಸ್ಟೋರಿಗಳು!

Last Updated 30 ಸೆಪ್ಟೆಂಬರ್ 2021, 20:15 IST
ಅಕ್ಷರ ಗಾತ್ರ

‘ತಾಯಿಯನ್ನು ಕೊಂದ ಮಗಳು’, ‘ಬ್ಯಾಗ್‌ನಲ್ಲಿ ಮೃತದೇಹ’, ‘ಮಗು ಅಪಹರಣ’, ‘ರಕ್ಷಿಸಿಕೊಳ್ಳಲು ಸಾವು!’ ಇಂಥ ಹಲವು ಅಪರಾಧ ಪ್ರಕರಣಗಳೇ ಈ ಸರಣಿಯ ಶೀರ್ಷಿಕೆಗಳು. ಬೆಂಗಳೂರು ಪೊಲೀಸರು ಪ್ರಕರಣ ಭೇದಿಸುವ ಕಥಾನಕ ಈಗ ವೆಬ್‌ ಸರಣಿಯಾಗಿ ಮೂಡಿಬಂದಿದೆ. ನೈಜ ಘಟನೆಗಳು ಮತ್ತು ನೈಜ ಚಿತ್ರೀಕರಣ ಒಳಗೊಂಡಿದೆ. ‘ನೆಟ್‌ಫ್ಲಿಕ್ಸ್‌’ನಲ್ಲಿ ಈ ಸರಣಿ ಪ್ರಸಾರವಾಗುತ್ತಿದೆ.

ಪೊಲೀಸರ ನೈಜ ತನಿಖೆಯನ್ನು ಆಧರಿಸಿ ‘ನೆಟ್‌ಫ್ಲಿಕ್ಸ್‌’ ಒಟಿಟಿ ವೇದಿಕೆಯಲ್ಲಿ ‘ಕ್ರೈಂ ಸ್ಟೋರಿಸ್; ಇಂಡಿಯಾ ಡಿಟೆಕ್ಟಿವ್ಸ್’ ಹೆಸರಿನಲ್ಲಿ ವಿಡಿಯೊ ಸರಣಿ ಆರಂಭವಾಗಿದೆ. ಅಪರಾಧ ನಡೆದ ಸ್ಥಳದ ಸೂಕ್ಷ್ಮ ಪರಿಶೀಲನೆ, ಸುಳಿವು ಬೆನ್ನತ್ತಿ ಆರೋಪಿಗಳ ಹೆಜ್ಜೆ ಗುರುತು ಪತ್ತೆ ಹಚ್ಚುವ ಚಾಕಚಕ್ಯತೆ ಹಾಗೂ ತನಿಖೆ ಪೂರ್ಣಗೊಳಿಸಿ ನೊಂದವರಿಗೆ ನ್ಯಾಯ ಒದಗಿಸಿದ ಪೊಲೀಸರ ಸಾರ್ಥಕತೆಯನ್ನು ವಿಡಿಯೊದಲ್ಲಿ ಸೆರೆ ಹಿಡಿಯಲಾಗಿದೆ.

ಹೆಚ್ಚು ಸುದ್ದಿಯಾಗಿದ್ದ ಅಪರಾಧ ಪ್ರಕರಣಗಳನ್ನು ಆಯ್ದುಕೊಂಡು ವಿಡಿಯೊ ನಿರ್ಮಿಸಲಾಗಿದೆ. ತನಿಖೆಯ ಪ್ರತಿಯೊಂದು ಮಜಲುಗಳನ್ನು ಪೊಲೀಸರ ಜೊತೆಯಲ್ಲೇ ಹಿಂಬಾಲಿಸಿ ವಿಭಿನ್ನವಾಗಿ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದೆ. ಪ್ರತಿಯೊಂದು ಪ್ರಕರಣದ ತನಿಖೆಯೂ ತೆರೆಮೇಲೆ ರೋಚಕವಾಗಿ ಮೂಡಿಬಂದಿದೆ.

ಘಟನೆ ಸಂಭವಿಸಿದ ದಿನದಿಂದ ತನಿಖೆ ಮುಗಿಯುವವರೆಗಿನ ಪ್ರತಿ ಸಂದರ್ಭಗಳನ್ನೂ ವಿಡಿಯೊದಲ್ಲಿ ತೋರಿಸುವಲ್ಲಿ ನೆಟ್‌ಫ್ಲಿಕ್ಸ್‌ ತಂಡ ಯಶಸ್ವಿಯಾಗಿದೆ. ವಿಡಿಯೊ ನೋಡುತ್ತ ಹೋದಂತೆ, ಕುತೂಹಲ ಹೆಚ್ಚುತ್ತದೆ.

ಐಪಿಎಸ್ ಅಧಿಕಾರಿಗಳಾದ ಎಂ.ಎನ್. ಅನುಚೇತ್ (ಸದ್ಯ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ), ಶಶಿಕುಮಾರ್ (ಸದ್ಯ ಮಂಗಳೂರು ಕಮಿಷನರ್), ಎಸಿಪಿ ಮನೋಜ್ ಕುಮಾರ್, ಇನ್‌ಸ್ಪೆಕ್ಟರ್ ಲೋಹಿತ್, ಪಿಎಸ್‌ಐ ಪ್ರತಾಪ್, ಮಹಿಳಾ ಪಿಎಸ್‌ಐ ಲತಾ ಮಹೇಶ್ ಹಾಗೂ ಇತರರು, ತನಿಖೆ ಅನುಭವಗಳನ್ನು ತೆರೆಮೇಲೆ ಬಿಚ್ಚಿಟ್ಟಿದ್ದಾರೆ.

ಎನ್‌. ಅಮಿತ್‌ ಮತ್ತು ಜಾಕ್‌ ರ‍್ಯಾಪ್ಲಿಂಗ್‌ ಈ ಸರಣಿಯ ನಿರ್ದೇಶಕರು.

ಕೆಲ ಪ್ರಕರಣಗಳ ತನಿಖೆ ನಡೆಸುವಾಗ ಪೊಲೀಸರು ಅನುಭವಿಸುವ ನೋವು, ಸಂಕಟ, ಭಾವೋದ್ವೇಗ ವಿಡಿಯೊದಲ್ಲಿ ಕಾಣಿಸಿದೆ. ಇನ್‌ಸ್ಪೆಕ್ಟರ್ ಲೋಹಿತ್ ಅವರು ಅಪರಾಧ ಘಟನೆಯನ್ನು ನೆನೆದು ಕಣ್ಣೀರು ಹಾಕಿರುವುದು ಪೊಲೀಸರ ಒಳಮನಸ್ಸಿನ ಮಾನವೀಯ ಮುಖವನ್ನು ನೋಡುಗರಿಗೆ ಪರಿಚಯಿಸಿದೆ.

ಅಪರಾಧ ನಡೆದ ಕೂಡಲೇ ಪೊಲೀಸರ ತನಿಖೆ ಹೇಗೆ ? ಪೊಲೀಸರ ಮೇಲೆ ಒತ್ತಡ ಎಷ್ಟಿರುತ್ತದೆ ? ದೋಷಾರೋಪ ಪಟ್ಟಿ ಸಲ್ಲಿಸುವವರೆಗೆ ನಡೆಯುವ ಪ್ರಕ್ರಿಯೆ ಏನು ? ಎಂಬ ಸಂಗತಿಯನ್ನೂ ವಿಡಿಯೊದಲ್ಲಿ ಎಳೆ ಎಳೆಯಾಗಿ ತೋರಿಸಲಾಗಿದೆ.

ಕನ್ನಡ, ಹಿಂದಿ, ತಮಿಳು, ತೆಲುಗು, ಇಂಗ್ಲಿಷ್‌ ಭಾಷೆಯಲ್ಲಿ ಈ ವಿಡಿಯೊ ನೋಡಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT