ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸುಗಳ ಬೆನ್ನತ್ತಿ ಮಾಯಾನಗರಿಯೊಳಗೆ ಬಂದವನ ಮುಡಿಗೇರಿದ ಬಿಗ್‌ಬಾಸ್ ಕಿರೀಟ

Published 29 ಜನವರಿ 2024, 12:34 IST
Last Updated 29 ಜನವರಿ 2024, 12:34 IST
ಅಕ್ಷರ ಗಾತ್ರ

ಕಾರ್ತಿಕ್‌ ಮಹೇಶ್..... ಮಧ್ಯಮ ಕುಟುಂಬದಲ್ಲಿ ಹುಟ್ಟಿ, ಕನಸುಗಳ ಬೆನ್ನತ್ತಿ ಮಾಯಾನಗರಿಯೊಳಗೆ ಬಂದ ಹುಡುಗ ಇಂದು ಮನೆ ಮಗನಾಗಿ ಗುರುತಿಸಿಕೊಂಡಿದ್ದಾರೆ. ಬಿಗ್‌ ಬಾಸ್ ಸೀಸನ್‌ 10ರ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ ಪ್ರಯತ್ನವಿದ್ದರೆ ಫಲ ಖಂಡಿತ ಎಂಬ ಮಾತನ್ನು ಸಾಬೀತು ಮಾಡಿದ್ದಾರೆ.

ಮೈಸೂರಿನಲ್ಲಿ ಹುಟ್ಟಿ ಬೆಳೆದ ಕಾರ್ತಿಕ್ ಮಹೇಶ್, ತಮ್ಮ ವಿದ್ಯಾಭ್ಯಾಸವನ್ನು(ಬಿಎಸ್‌ಸಿ) ಅಲ್ಲೇ ಮುಗಿಸಿದ್ದಾರೆ. ನಟನೆಯಲ್ಲಿ ಭಾರಿ ಆಸಕ್ತಿ ಹೊಂದಿದ್ದ ಅವರು ಬೆಂಗಳೂರಿಗೆ ಬಂದು ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತಾನು ಏನಾದರೂ ಸಾಧನೆ ಮಾಡಬೇಕೆಂಬ ಹಠ ಹೊಂದಿದ್ದ ಕಾರ್ತಿಕ್‌ ಅವರಿಗೆ ಒಂದು ಸಿನಿಮಾ ಸಿಕ್ಕಿತ್ತು. ಸವಾಲಿನ ಪಾತ್ರವಾದರೂ ಅದನ್ನು ಸಮರ್ಥವಾಗಿ ನಿರ್ವಹಿಸಿದ್ದರು.

ಸಿನಿಮಾದಲ್ಲಿ ನಟಿಸುವ ಮೊದಲು ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಕಾರ್ತಿಕ್‌ ಅವರು, ಅಕ್ಕಾ , ಇಂತಿ ನಿಮ್ಮ ಆಶಾ, ರಾಜಿ ಹೀಗೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಧಾರಾವಾಹಿಯೊಂದರಲ್ಲಿ ನಟಿಸುವ ವೇಳೆ ಸುನೀಲ್‌ ಪುರಾಣಿಕ್‌ ಅವರ ಪರಿಚಯವಾಗಿದ್ದು, ಇದು ಅವರ ಜೀವನಕ್ಕೊಂದು ತಿರುವು ನೀಡಿತ್ತು.

ಸುನಿಲ್ ಪುರಾಣಿಕ್ ಅವರ ಮಗ ಸಾಗರ್ ಪುರಾಣಿಕ್‌ ಅವರು ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದು, ಸೂಕ್ತ ನಟನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಕಾರ್ತಿಕ್ ಕಣ್ಣಿಗೆ ಬಿದ್ದಿದ್ದು, ಅವರನ್ನೇ ಸಿನಿಮಾದ ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಆ ಸಿನಿಮಾವೇ ‘ಡೊಳ್ಳು’. ಜಾನಪದ ಕಲೆಯೊಂದರ ಉಳಿಸುವ ನಾಯಕನಾಗಿ ಕಾರ್ತಿಕ್ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಪಾತ್ರಕ್ಕಾಗಿ ಕಾರ್ತಿಕ್‌ ಡೊಳ್ಳು ಬಾರಿಸುವುದನ್ನು ಕಲಿತಿದ್ದರು.

ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದಲ್ಲದೆ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಆಡಿಯೊಗ್ರಫಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.

ಮೊದಲ ಚಿತ್ರಕ್ಕೆ ಮೆಚ್ಚುಗೆ, ಪ‍್ರಶಸ್ತಿ ಬಂದಿದ್ದರೂ, ಸಿನಿಮಾ ಕ್ಷೇತ್ರದಲ್ಲಿ ಕಾರ್ತಿಕ್‌ ಅವರಿಗೆ ಅವಕಾಶಗಳೇನು ಸಿಕ್ಕಿರಲಿಲ್ಲ. ಆ ನಂತರವೂ ಕಾರ್ತಿಕ್ ಧಾರಾವಾಹಿಗಳಲ್ಲಿಯೇ ವೃತ್ತಿ ಜೀವನ ಮುಂದುವರಿಸಿದ್ದರು.

ಬಿಗ್ ಬಾಸ್ 10ನೇ ಸೀಸನ್‌ಗೆ ಆಯ್ಕೆಯಾದ 17 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಕಾರ್ತಿಕ್, ಇಂದು ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ₹50 ಲಕ್ಷ ನಗದು ಹಾಗೂ ಕಾರೊಂದು ಉಡುಗೊರೆಯಾಗಿ ಸಿಕ್ಕಿದೆ.

₹50 ಲಕ್ಷವನ್ನು ಏನು ಮಾಡುತ್ತೀರಿ ಎಂಬ ಕಿಚ್ಚ ಸುದೀಪ್‌ ಅವರ ಪ್ರಶ್ನೆಗೆ, ‘ಅಮ್ಮನ ಆಸೆ ಪೂರೈಸುತ್ತೇನೆ’ ಎಂದು ಹೇಳಿದ ಕಾರ್ತಿಕ್‌ ಅವರ ಮಾತಿಗೆ ಮನಸೋಲದವರೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT