ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

BBK9: 8ನೇ ವಾರ ಎಮಿನೇಟ್ ಆಗಿದ್ದ ದೀಪಿಕಾ ದಾಸ್ 9ನೇ ವಾರ ವೈಲ್ಡ್ ಕಾರ್ಡ್ ಎಂಟ್ರಿ!

Last Updated 23 ನವೆಂಬರ್ 2022, 9:46 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್ ಬಾಸ್ 9ನೇ ಆವೃತ್ತಿಯ ಒಂಬತ್ತನೇ ವಾರ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಆದರೆ, ಪ್ರತಿ ಆವೃತ್ತಿಯಲ್ಲಿ ಬೇರೆ ಬೇರೆ ವ್ಯಕ್ತಿಗಳು ಈ ಅವಕಾಶ ಪಡೆದು ಒಳಬರುತ್ತಿದ್ದರು. ಆದರೆ, ಈ ಬಾರಿ 8ನೇ ವಾರ ಎಲಿಮಿನೇಟ್ ಆದ ಸ್ಪರ್ಧಿಯೇ ಒಂಬತ್ತನೆ ವಾರ ಮನೆಗೆ ಮರಳಿದ್ದಾರೆ.

ಹೌದು, 8ನೇ ವಾರ ಅತಿ ಕಡಿಮೆ ಮತ ಪಡೆದು ಮನೆಯಿಂದ ಎಲಿಮಿನೇಟ್ ಆಗಿದ್ದ ದೀಪಿಕಾ ದಾಸ್, 9ನೇ ವಾರದ 2ನೆ ದಿನ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ.

ಮನೆಯ ಸದಸ್ಯರೆಲ್ಲ ಕಾಡಿನ ಟಾಸ್ಕ್‌ನಲ್ಲಿ ತೊಡಗಿದ್ದು, ಮನೆಯ ಎಲ್ಲ ಸೌಲಭ್ಯಗಳನ್ನು ಬಿಗ್ ಬಾಸ್ ಬ್ಲಾಕ್ ಮಾಡಿದ್ದಾರೆ. ಲಿವಿಂಗ್ ಏರಿಯಾದಲ್ಲಿ ಕಾಡಿನ ವಾತಾವರಣ ಸೃಷ್ಟಿಸಿ ಅಲ್ಲಿಯೇ ಈ ವಾರ ಕಳೆಯುವ ಟಾಸ್ಕ್ ನೀಡಿದ್ದಾರೆ. ಅಕ್ಕಿ, ಬೆಳೆ ಮತ್ತು ಉಪ್ಪನ್ನು ಮಾತ್ರ ನೀಡಿ, ಬೇರೆ ಸೌಲಭ್ಯ ಬೇಕೆಂದರೆ ಟಾಸ್ಕ್‌ಗಳಲ್ಲಿ ಗೆದ್ದು ಪಡೆಯಬೇಕೆಂಬ ಷರತ್ತು ವಿಧಿಸಿದ್ದಾರೆ.

ತರಕಾರಿ ಗೆದ್ದು ಒಳಗೆ ಬಂದ ದೀಪಿಕಾ..

ಐದು ಬಗೆಯ ತರಕಾರಿ ಪಡೆಯಲು ಬಿಗ್ ಬಾಸ್ ಮನೆಯ ಸದಸ್ಯರಿಗೆ ಬಿಲ್ಲಿನ ಮೂಲಕ ಗುರಿ ಭೇದಿಸುವ ಟಾಸ್ಕ್ ನೀಡಿದ್ದರು. ದಿವ್ಯಾ ಉರುಡುಗ ಮತ್ತು ರೂಪೇಶ್ ರಾಜಣ್ಣ ಈ ಟಾಸ್ಕ್‌ನಲ್ಲಿ ಪಾಲ್ಗೊಂಡರು. ಆದರೆ, ಸತತ ಪ್ರಯತ್ನದ ಹೊರತಾಗಿಯೂ ಈ ಇಬ್ಬರೂ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಆದರೂ ಸ್ವಲ್ಪ ಸಮಯದ ಬಳಿಕ ಮನೆಗೆ ತರಕಾರಿ ಬಂದಿತ್ತು. ಇದರಿಂದ ಎಲ್ಲರೂ ಅಚ್ಚರಿಗೆ ಒಳಗಾಗಿದ್ದರು. ಈ ಮಧ್ಯೆ, ಮನೆಯ ಸದಸ್ಯರೊಬ್ಬರು ಈ ಸೌಲಭ್ಯವನ್ನು ಗೆದ್ದಿದ್ದಾರೆ ಎಂದು ಬಿಗ್ ಬಾಸ್ ಘೋಷಿಸಿದರು. ದಿವ್ಯಾ ಉರುಡುಗ ಬಿಟ್ಟ ಬಾಣ ಕಂದು ಬಣ್ಣದ ಗುರಿಯ ಸಮೀಪಕ್ಕೆ ತಲುಪಿದ್ದರಿಂದ ಬಿಗ್ ಬಾಸ್ ದೊಡ್ಡ ಮನಸ್ಸು ಮಾಡಿ ತರಕಾರಿ ಕಳುಹಿಸಿದ್ದಾರೆ ಎಂದು ಮನೆಯಲ್ಲಿ ಮಾತುಗಳು ಕೇಳಿಬಂದವು.

ಅಷ್ಟರೊಳಗೆ ಕಾಡಿನ ಹಾಡೊಂದ್ಕೆ ನೃತ್ಯ ಮಾಡುತ್ತಾ ದೀಪಿಕಾ ದಾಸ್ ಗೌನ್ ರೀತಿಯ ಸೆಣಬಿನ ಉಡುಪು ತೊಟ್ಟು ಮನೆಗೆ ಪ್ರವೇಶಿಸಿದರು. ತರಕಾರಿ ಬಂದಿತಾ? ಅದನ್ನು ನಾನೇ ಗೆದ್ದಿದ್ದು ಎಂದು ಹೇಳಿದರು. ನಾನು ಮನೆಗೆ ಹೋಗೇ ಇಲ್ಲ. ಎಲಿಮಿನೇಟ್ ಆದ ಬಳಿಕ ನನಗೆ ವೈಲ್ಡ್ ಕಾರ್ಡ್ ಎಂಟ್ರಿಯ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದಾಗಿ ಹೇಳಿದರು.

ಆದರೆ, ಇದು ಯಾವ ಸೀಮೆ ವೈಲ್ಡ್ ಕಾರ್ಡ್ ಎಂಟ್ರಿ. ಕಳೆದ ವಾರ ಎಲಿಮಿನೇಟ್ ಆದವರನ್ನೇ ಕಳುಹಿಸಿರುವುದು ಏಕೆ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಎದ್ದಿವೆ.

ಈ ವಾರ ಮನೆಯ ಎಲ್ಲ ಸದಸ್ಯರು ಎಲಿಮಿನೇಶನ್‌ಗೆ ನಾಮಿನೇಟ್ ಆಗಿದ್ದು, ದೀಪಿಕಾ ಸಹ ಆ ಪಟ್ಟಿ ಸೇರುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT