ಬುಧವಾರ, ಜೂನ್ 3, 2020
27 °C

ಲಾಕ್‌ಡೌನ್ ತಿಂಗಳಲ್ಲಿ ಮರುಕಳಿಸಿದ 90ರ ದಶಕದ ಧಾರಾವಾಹಿಗಳ ಸವಿಸವಿ ನೆನಪು

ಪಿಟಿಐ Updated:

ಅಕ್ಷರ ಗಾತ್ರ : | |

TV

ನವದೆಹಲಿ:1980 ಮತ್ತು 1990ರ ದಶಕಗಳು ಟೆಲಿವಿಷನ್‌ನ ಸುವರ್ಣ ಯುಗವಾಗಿತ್ತು. ದೂರದರ್ಶನ್ ಒಂದೇ ಮನರಂಜನೆಯ ತಾಣವಾಗಿದ್ದ ಕಾಲ. 'ಕಿಚ್ಡಿ', 'ಸಾರಾಭಾಯಿ vs ಸಾರಾಭಾಯ್', 'ಬುನಿಯಾದ್' ಮತ್ತು 'ಆಫೀಸ್ ಆಫೀಸ್' ಮೊದಲಾದ ಧಾರವಾಹಿಗಳು ಹಳೇ ನೆನಪುಗಳನ್ನು ಮರುಕಳಿಸುವುದರ ಜತೆಗೆ ಈ ಹಿಂದಿನ ತಲೆಮಾರಿನ ಬಗ್ಗೆ ಈಗಿನ ಯುವಜನಾಂಗಕ್ಕೆ ತಿಳಿಸುತ್ತದೆ.

ಮಾರ್ಚ್ 25ರಂದು ಶುರುವಾದ ಲಾಕ್‍ಡೌನ್ ಮೇ.3ರವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ ಟಿವಿ ಕಾರ್ಯಕ್ರಮಗಳಿಗಾಗಿ ಶೂಟಿಂಗ್ ಸಾಧ್ಯವಾಗದೆ ಹೊಸ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸಾಧ್ಯವಿಲ್ಲ. ಹಾಗಾಗಿ ಹಳೇ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ.ಈ ಪೈಕಿ ಜನಪ್ರಿಯ ಧಾರವಾಹಿಗಳಾದ ರಾಮಾಯಣ ಮತ್ತು ಮಹಾಭಾರತ ಈಗಲೂ ಮುಂಚೂಣಿಯಲ್ಲಿದೆ.

ಕಿಚ್ಡಿ ಧಾರವಾಹಿಯ ನಿರ್ದೇಶಕ, ಕತೆಗಾರರೂ ಸಾರಾಭಾಯಿ Vs ಸಾರಾಭಾಯಿ ಧಾರವಾಹಿಯ ಸಹ ನಿರ್ಮಾಪಕರೂ ಆಗಿರುವ ಆತಿಶ್ ಕಪಾಡಿಯಾ ಅವರು ಈ ಎರಡು ಧಾರವಾಹಿಗಳು ಪ್ರಗತಿಪರ ಮೌಲ್ಯವನ್ನು ಹೊಂದಿದ್ದು  ಗುಜರಾತಿ ಕುಟುಂಬದ ಕಥೆಯಾಗಿದೆ. ಇದು ಈಗಲೂ ಪ್ರಸ್ತುತ ಎಂದಿದ್ದಾರೆ.

ಅವಿಭಕ್ತ ಕುಟುಂಬವೊಂದು ತಮ್ಮ ಮನೆ ಮಾರಿ ಬೇರೆ ಬೇರೆಯಾಗಲು ತೀರ್ಮಾನಿಸುತ್ತಾರೆ ಆದರೆ ಪಿತ್ರಾರ್ಜಿತ ಆಸ್ತಿಗಾಗಿ ಅಲ್ಲೇ ಇರುವ ಕಥೆಯಾಗಿದೆ ಕಿಚ್ಡಿಯದ್ದು. ದಕ್ಷಿಣ ಬಾಂಬೆಯಲ್ಲಿರುವ ಗುಜರಾತಿ ಕುಟುಂಬವೊಂದರ ಕತೆಯಾಗಿದೆ ಸಾರಾಭಾಯಿvs ಸಾರಾಭಾಯಿ.

ಈ ಕಾರ್ಯಕ್ರಮವು ಹಲವಾರು ತಲೆಮಾರಿನ ಅಂಗವಾಗಿದೆ. ಹಾಗಾಗಿ ಜನರಿಗೆ ಸಂತೋಷ, ನಗು ಎಲ್ಲವೂ ಸಿಗುತ್ತದೆ. ಹಿಂಜರಿಕೆಯ ಮನಸ್ಥಿತಿಯನ್ನು ಅತಿರಂಜನೀಯವಾಗಿ ತೋರಿಸುವ ಈಗಿನ ಕಾರ್ಯಕ್ರಮಗಳ ವೀಕ್ಷಕರಿಗೆ ಇದೊಂದು ಉತ್ತಮ ಅನುಭವ ನೀಡುತ್ತದೆ ಅಂತಾರೆ ಕಪಾಡಿಯಾ.

ಸಾರಾಭಾಯಿ ಅಥವಾ ಕಿಚ್ಡಿಯನ್ನು ಕುಟುಂಬದವರೊಂದಿಗೆ ನೋಡುವಾಗ ತಮ್ಮ ಡ್ರಾಯಿಂಗ್ ರೂಂ ಒಳಗೆ ಬೇರೇನೋ ಬಂತು ಎಂದು ಜನರಿಗೆ ಅನಿಸಲ್ಲ. ಕಾಮಿಡಿ ಮತ್ತು ಜೀವನ ಮೌಲ್ಯಗಳ ಜತೆಗೆ ಅದರಲ್ಲಿ ಮುಗ್ಧತೆ ಮತ್ತು ಹಾಸ್ಯವಿದೆ.ಈ ದುರಿತ ಕಾಲದಲ್ಲಿ ನಾವು ಕಾರ್ಯಕ್ರಮವನ್ನು ಆಸ್ವಾದಿಸುತ್ತಿದ್ದೇವೆ ಎಂದು ಸಾರಾಭಾಯಿ ಧಾರವಾಹಿಯ ತ್ರಿಮೂರ್ತಿಗಳಾದ ಸತೀಶ್ ಶಾ, ರತ್ನಾ ಪಾಠಕ್ ಶಾ ಮತ್ತು ಸುಮೀತ್ ರಾಘವನ್ ಹೇಳಿದ್ದಾರೆ.

ನಗುವೇ ಉತ್ತಮ ಮದ್ದು.   ಕೆಲವೊಂದು ಔಷಧಿಗಳ ಜತೆ ವೈದ್ಯರು ಆ್ಯಸಿಡಿಟಿಗಿರುವ ಔಷಧಿ ನೀಡುತ್ತಾರೆ. ನಗು ಕೂಡಾ ಅದೇ ರೀತಿ ಕಾರ್ಯವೆಸಗುತ್ತದೆ. ಇಷ್ಟೊಂದು ಹಾಸ್ಯವಿರುವ ಕಿಚ್ಡಿ ಮತ್ತು ಸಾರಾಭಾಯಿಗಿಂತ ಇನ್ನೇನು ಬೇಕು ಅಂತಾರೆ ಸತೀಶ್ ಶಾ.

ಆ ಕಾಲದಲ್ಲಿ ಜನರು ಸರಳ, ಸಂತೋಷ ಮತ್ತು ಮುಗ್ದತೆಯಿಂದ ಕೂಡಿದ್ದರು ಎಂಬುದನ್ನು ಈ ಕಾರ್ಯಕ್ರಮ ನೆನಪಿಸುತ್ತದೆ ಎಂದು ಮಾಯಾ ಸಾರಾಭಾಯಿ ಕಥಾಪಾತ್ರದಲ್ಲಿ ಮಿಂಚಿದ್ದ ರತ್ನಾ ಪಾಠಕ್ ಶಾ ಹೇಳಿದ್ದಾರೆ.

ನಾನು ಹಳೇ ನೆನಪುಗಳ ಅಷ್ಟೊಂದು ದೊಡ್ಡ  ಅಭಿಮಾನಿ ಅಲ್ಲದೇ ಇದ್ದರೂ ಈಗಿನ ಯುವ ತಲೆಮಾರು ಈ ಕಾರ್ಯಕ್ರಮದ ಬಗ್ಗೆ ಏನಂತಾರೆ ಎಂಬ ಕುತೂಹಲವಿದೆ. ಯುವಕರು, ಹಿರಿಯರು ಹೀಗೆ ನೋಡಿದವರೆಲ್ಲರೂ ಖುಷಿ ಪಟ್ಟಿದ್ದಾರೆ. ಈಗ ನಾನು ಆ ಕಾರ್ಯಕ್ರಮದ ಬಗ್ಗೆ ಕುತೂಹಲದಿಂದಿದ್ದೇನೆ. ಸಾರಾಭಾಯಿvsಸಾರಾಭಾಯಿ ಕಾರ್ಯಕ್ರಮವನ್ನು ನಾನು ಆಸ್ವಾದಿಸುತ್ತಿದ್ದೇನೆ ಎಂದು ರತ್ನಾ ಪಾಠಕ್ ಹೇಳಿದ್ದಾರೆ.

ಸಾರಾಭಾಯಿಯಲ್ಲಿ ಅಮ್ಮ ಮತ್ತು ಮಗಳ ಜಟಾಪಟಿಯ ನಡುವೆ ಸದಾ ಸಿಲುಕುವ ಸಹೀಲ್ ಕಥಾಪಾತ್ರ ನಿರ್ವಹಿಸಿದ್ದ ರಾಘವನ್, ಹಳೇ ನೆನಪುಗಳು ಮರುಕಳಿಸಿವೆ ಎಂದಿದ್ದಾರೆ. ಡಿಜಿಟಲ್ ಪ್ಲಾಟ್‌ಫಾರಂ ಹೊರತುಪಡಿಸಿದರೆ ಟಿವಿಯಲ್ಲಿ ನೋಡಲು ಹೊಸತೇನೂ ಇಲ್ಲ, ಹಾಗಾಗಿ ಹಳೇ ಕಾರ್ಯಕ್ರಮಗಳನ್ನು ಮತ್ತೆ ಪ್ರಸಾರ ಮಾಡಲಾಗುತ್ತಿದೆ. ಎಲ್ಲ ಕಾರ್ಯಕ್ರಮಗಳು ಯುಟ್ಯೂಬ್ ಅಥವಾ ಇತರ ಡಿಜಿಟಲ್ ಫ್ಲಾಟ್‌ಫಾರಂನಲ್ಲಿ ಲಭ್ಯವಿದೆ. ಆದರೆ ಟಿವಿಗೆ ಅದರದ್ದೇ ಆದ ಗೈರತ್ತು ಇದೆ. ಹಳೇ ಕಾರ್ಯಕ್ರಮಗಳು ನಮ್ಮ ಮುಖದಲ್ಲಿ ನಗು ಮೂಡಿಸುತ್ತವೆ. ಅದು ಈ ಕಾಲದಲ್ಲಿ ಮುಖ್ಯ ಎಂದು ಹೇಳಿದ್ದಾರೆ.

ಸಾಮಾನ್ಯ ವ್ಯಕ್ತಿಯೊಬ್ಬ ಸರ್ಕಾರಿ ಕಚೇರಿಗೆ ಹೋದಾಗ ಆಗುವ ಸನ್ನಿವೇಶಗಳನ್ನು ಬಿಂಬಿಸುವ ಧಾರವಾಹಿ 'ಆಫೀಸ್ ಆಫೀಸ್', ಇದರಲ್ಲಿ ಮುಸ್ಸಾದಿಲಾಲ್ ತ್ರಿಪಾಠಿಯಾಗಿ ಪಂಕಜ್  ಕಪೂರ್ ಅಭಿನಯಿಸಿದ್ದಾರೆ.

ಅದು ಹಾಸ್ಯಭರಿತವಾದುದು. ನಾವು ನಾಲ್ಕೂವರೆ ವರ್ಷ ಅದಕ್ಕಾಗಿ ಕೆಲಸ ಮಾಡಿದೆ. ಹಾಸ್ಯದ ಮೂಲಕ ಅದು ಸಾಮಾಜಿಕ ಜಾಗೃತಿಯನ್ನು ಮೂಡಿಸಿತ್ತು. ಅದು ದೊಡ್ಡ ಸಂಪತ್ತು, ಇದು ಸದಾ ಉಳಿಯುತ್ತದೆ. ಮುಂದಿನ ವರ್ಷಗಳಲ್ಲಿಯೂ ಇದು ಪ್ರಸ್ತುತ ಆಗಿರುತ್ತದೆ ಎಂದು ಪಂಕಜ್ ಕಪೂರ್ ಹೇಳಿದ್ದಾರೆ.

ಈ ಧಾರಾವಾಹಿಯಲ್ಲಿ ಸರ್ಕಾರಿ ನೌಕರ ಪಾಂಡೆಜೀ ಕಥಾಪಾತ್ರ ನಿರ್ವಹಿಸಿದವರು ಹೇಮಂತ್ ಪಾಂಡೆ. ಈ ಕಾರ್ಯಕ್ರಮ ಯಾವತ್ತೂ ಹಳತಾಗಲ್ಲ. ಈ ಹೊತ್ತಲ್ಲಿ ಕುಟುಂಬದವರೆಲ್ಲರೂ ಒಟ್ಟಿಗೆ ಕುಳಿತು ನೋಡುವಾಗ ಈ ಕಾರ್ಯಕ್ರಮ ಖುಷಿ ನೀಡುತ್ತದೆ ಎಂದಿದ್ದಾರೆ.

ಬುನಿಯಾದ್, ದೇಶ ವಿಭಜನೆಯ ದಿನಗಳ ಕತೆ ಹೇಳುವ ಧಾರವಾಹಿಯನ್ನು ನಿರ್ದೇಶಿಸಿದವರು ಸಿನಿಮಾ ನಿರ್ಮಾಪಕ  ರಮೇಶ್ ಸಿಪ್ಪಿ, ಸ್ವಾತಂತ್ರ್ಯ ಹೋರಾಟಗಾರರ ಅದೃಷ್ಟ ಮತ್ತು ದುರಾದೃಷ್ಟಗಳನ್ನು ಈ ಧಾರವಾಹಿಯಲ್ಲಿ ಬಿಂಬಿಸಲಾಗಿದೆ. 30 ವರ್ಷಗಳ ಹಿಂದಿನ ಈ ಕಾರ್ಯಕ್ರಮ ಈಗಲೂ ಪ್ರಸ್ತುತ,  ಜನರು ಈಗಲೂ ನೆನಪಿನಲ್ಲಿಟ್ಟುಕೊಂಡಿದ್ದಾರೆ. ದೇಶವಿಭಜನೆಯ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಿದ್ದಾರೆ. 70 ವರ್ಷಗಳ ಹಿಂದಿನ ಕತೆ, ಈಗಿನ ಯುವ ತಲೆಮಾರು ಎಲ್ಲವನ್ನೂ ಮರೆತಿದೆ, ಆದರೆ ಈಗಲೂ ಕಲವು ಕುಟುಂಬಗಳಲ್ಲಿ ಇದೇ ಕತೆ ಇದೆ. ಹಳೆ ತಲೆಮಾರಿನವರಂತೆ ಈಗಿನ ತಲೆಮಾರು ಹಿಂತಿರುಗಿ ನೋಡುವುದಿಲ್ಲ. ಆದರೆ ಈ ಕಾರ್ಯಕ್ರಮ ಮೂಲಕ ಅವರಿಗೆ ತಿಳಿಯಬಹುದು ಎಂದು ಸಿಪ್ಪಿ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಪಿಡುಗಿನ ಹೊತ್ತಲ್ಲಿ ರಾಮಾಯಣ ಹಳೇ ತಲೆಮಾರು ಮತ್ತು ಹೊಸ ತಲೆಮಾರನ್ನು ಒಂದುಗೂಡಿಸಿದೆ ಎಂದು ರಾಮಾಯಣದ ರಾಮ-ಸೀತೆ ಪಾತ್ರಧಾರಿಗಳಾದ ನಟ ಅರುಣ್ ಗೋವಿಲ್ ಮತ್ತು ದೀಪಿಕಾ ಚಿಖಾಲಿಯಾ ಹೇಳಿದ್ದಾರೆ. ಈ ಕಾರ್ಯಕ್ರಮಗಳು ಮತ್ತೆ ಬಂದಿದ್ದು ಒಳ್ಳೆಯದಾಯ್ತು. ಕುಟುಂಬದವರು ಎಲ್ಲರೂ ಜತೆಯಾಗಿ ನೋಡಬಹುದು ಎಂದು ಗೋವಿಲ್ ಹೇಳಿದ್ದಾರೆ. ಆರ್ಥಿಕತೆ ಕುಸಿದು, ಬೇಸರದ ವಾತಾವರಣವಿರುವ ಈ ಹೊತ್ತಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಚಿಖಾಲಿಯಾ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.