ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ನಿತಿನ್‌ ‘ಡಾನ್ಸ್‌ ದೀವಾನಾ’

Published 31 ಮೇ 2024, 18:45 IST
Last Updated 31 ಮೇ 2024, 18:45 IST
ಅಕ್ಷರ ಗಾತ್ರ

ಬೆಂಗಳೂರಿನ ಹುಡುಗ ಈಗ ದೇಶದಲ್ಲಿ ಸುದ್ದಿಯಲ್ಲಿದ್ದಾರೆ. ದೇಶದ ಪ್ರಸಿದ್ಧ ‘ಡಾನ್ಸ್‌ ದಿವಾನೆ’ ಎನ್ನುವ ರಿಯಾಲಿಟಿ ಶೋ ಅನ್ನು ಗೆಲ್ಲುವ ಮೂಲಕ ಕರ್ನಾಟಕದ ಹುಡುಗ ಈಗ ದೇಶದ ಮನೆ ಮಾತಾಗಿದ್ದಾರೆ. ಬೆಂಗಳೂರಿನ ಟಿ.ದಾಸರಹಳ್ಳಿಯ 19 ವರ್ಷದ ನಿತಿನ್‌ ಎನ್‌.ಜೆ. ಈ ಸಾಧನೆ ಮಾಡಿದ್ದಾರೆ. ನಿತಿನ್‌ ಅವರೊಂದಿಗೆ ಗೌರವ ಎನ್ನುವವರಿಗೂ ಪ್ರಶಸ್ತಿ ಬಂದಿದೆ. ಶೋನಲ್ಲಿ ಇವರಿಬ್ಬರೂ ಜೋಡಿಯಾಗಿದ್ದರು. ಈ ಜೋಡಿಯು ಎಷ್ಟೊಂದು ಜನ ಮೆಚ್ಚುಗೆ ಪಡೆದಿತ್ತು ಎಂದರೆ, ಈ ಜೋಡಿಯನ್ನು ಶೋನ ಹೀರೊಗಳು ಎಂದು ಕರೆಯಲಾಗುತ್ತಿತ್ತು.

ಬಹುಶಃ ಎಲ್ಲ ಪ್ರತಿಭೆಯನ್ನು ಮೊದಲು ಗುರುತಿಸುವುದು ಕನ್ನಡಿ ಎಂದೆನ್ನಬಹುದು. ನಿತಿನ್‌ ಅವರ ಜೀವನದಲ್ಲಿಯೂ ಹೀಗೆಯೇ ಆಯಿತು. ನಿತಿನ್‌ ಅವರು ಮೂರನೇ ತರಗತಿ ಓದುತ್ತಿದ್ದರು. ಆ ವಯಸ್ಸಿನಿಂದಲೇ ಅವರಿಗೆ ನೃತ್ಯದ ಬಗ್ಗೆ ಒಲವು ಮೂಡಿತು. ಕನ್ನಡಿ ಮುಂದೆ ನಿಂತುಕೊಂಡು ನಿತಿನ್‌ ನೃತ್ಯ ಮಾಡುತ್ತಿದ್ದರಂತೆ. ಇದನ್ನು ಗಮನಿಸಿದ ಅವರ ಪೋಷಕರು, ಮಗನ ಆಸಕ್ತಿಯನ್ನು ಗಮನಿಸಿ ಡಾನ್ಸ್‌ ಕ್ಲಾಸ್‌ಗೆ ಸೇರಿಸಿದರು. ಅಲ್ಲಿಂದ ಈಗ ಸುಮಾರು 10 ವರ್ಷಗಳಿಂದ ನಿತಿನ್‌ ಅಭ್ಯಾಸ ಮಾಡುತ್ತಿದ್ದಾರೆ.

ನಿತಿನ್‌ ಕರ್ನಾಟಕದ ಮಟ್ಟಿಗೆ ಹೊಸ ಪ್ರತಿಭೆ ಏನಲ್ಲ. ಕಳೆದ ವರ್ಷ ‘ಡಾನ್ಸ್‌ ಕರ್ನಾಟಕ ಡಾನ್ಸ್‌’ ರಿಯಾಲಿಟಿ ಶೋನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ‘ನಾನು ಡಿಕೆಡಿನಲ್ಲಿ ಗೆದ್ದಿದ್ದೆ. ಈ ಶೋಗೆ ಹೋಗುವುದೂ ನನ್ನ ಪೋಷಕರ ಕನಸಾಗಿತ್ತು. ಮತ್ತೆ ಈಗ ‘ಡಾನ್ಸ್‌ ದಿವಾನೆ’ ಶೋಗೆ ಹೋಗುವುದು ಅವರದ್ದೇ ಕನಸಾಗಿತ್ತು. ನನ್ನ ನೃತ್ಯವನ್ನು ಇಡೀ ದೇಶವೇ ನೋಡಬೇಕು ಎಂಬ ಬಯಕೆ ಇತ್ತು. ಅವರ ಕನಸನ್ನು ನನಸು ಮಾಡಿದ ಖುಷಿ ಇದೆ ನನಗೆ’ ಎನ್ನುತ್ತಾರೆ ನಿತಿನ್‌. ಡಿಡಿ ಚಂದನವು ನಡೆಸಿದ್ದ ‘ಡಾನ್ಸ್‌ ಸಮರ’ ಕಾರ್ಯಕ್ರಮದಲ್ಲಿ 2019ರಲ್ಲಿ  ರನ್ನರ್‌ ಅಪ್‌ ಆಗಿದ್ದರು.

‘ನೃತ್ಯಗಾರ, ನಟ, ನಿರ್ದೇಶಕ ಪ್ರಭುದೇವಾ ಅವರೇ ನನಗೆ ಸ್ಪೂರ್ತಿ’ ಎನ್ನುತ್ತಾರೆ ನಿತಿನ್‌. ಅವರ ಹಾಗೆಯೇ ತಾನೂ ನಟನಾಗಬೇಕು, ನೃತ್ಯಪಟು ಆಗಬೇಕು ಎಂಬುದು ಅವರ ಕನಸು. ‘ಮಗನಿಗೆ ಪ್ರಭುದೇವಾ ಅವರ ಹಾಗೆಯೇ ನೃತ್ಯಗಾರನಾಗಬೇಕು, ನಟನಾಗಬೇಕು ಎಂಬ ಹಂಬಲ ಇದೆ. ಇದನ್ನು ನನ್ನ ಮತ್ತು ನನ್ನ ಹೆಂಡತಿಯ ಪೂರ್ತಿ ಸಹಕಾರ ಇದೆ. ಅವನು ಎಷ್ಟು ಎತ್ತರಕ್ಕೆ ಏರಲು ಬಯಸುತ್ತಾನೊ ನಾವು ಅವನ ಹಿಂದೆ ಇದ್ದೇವೆ’ ಎನ್ನುವುದು ನಿತಿನ್‌ ತಂದೆ ನಟರಾಜು ಅವರ ಮಾತು. ಇದಕ್ಕೆ ತಾಯಿ ಜಾನಕಿ ಅವರೂ ಧ್ವನಿ ಗೂಡಿಸುತ್ತಾರೆ. ನಟರಾಜು ಅವರು ಬೆಂಗಳೂರಿನಲ್ಲಿಯೇ ಚಿಕನ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾರೆ. ತಾಯಿ ಗೃಹಿಣಿ.

‘ಡಾನ್ಸ್‌ ದಿವಾನೆ’ ಕಾರ್ಯಕ್ರಮವು ನನಗೆ ಹೆಚ್ಚು ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ಬಹಳ ಕಲಿತಿದ್ದೇನೆ ಕೂಡ. ತೀರ್ಪುಗಾರರಾದ ನಟಿ ಮಾಧುರಿ ದೀಕ್ಷಿತ್ ಹಾಗೂ ನಟ ಸುನಿಲ್‌ ಶೆಟ್ಟಿ, ಇಬ್ಬರೂ ನನಗೆ ಬಹಳ ಪ್ರೋತ್ಸಾಹ ನೀಡಿದ್ದಾರೆ. ಸುನಿಲ್‌ ಸರ್‌ ಅವರೊಂದಿಗೆ ನಾನು ಹೆಚ್ಚು ಹತ್ತಿರವಾಗಿದ್ದೆ. ಯಾಕೆಂದರೆ ಅವರೂ ಕರ್ನಾಟಕದವರು. ನನ್ನ ಬಳಿ ಯಾವತ್ತಿಗೂ ಅವರು ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ನನಗೆ ಸ್ಫೂರ್ತಿ ನೀಡುತ್ತಿದ್ದರು’ ಎಂದು ತಮ್ಮ ಇಡೀ ಪಯಣವನ್ನು ನೆನಪಿಸಿಕೊಂಡರು ನಿತಿನ್‌.

‘ಒಮ್ಮೆ ನಟ ಗೋವಿಂದ ಮತ್ತೆ ಅವರ ಪತ್ನಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿದ್ದರು. ಅದು ನನಗೆ ಹೆಚ್ಚು ಖುಷಿಕೊಟ್ಟ ಸಂಚಿಕೆ. ನಮ್ಮ ನೃತ್ಯವನ್ನು ಅವರು ತುಂಬಾ ಇಷ್ಟಪಟ್ಟರು. ಜೊತೆಗೆ, ‘ನೀನು ಭವಿಷ್ಯದಲ್ಲಿ ಉತ್ತಮ ನಟನಾಗುತ್ತೀಯಾ. ನಿನ್ನ ಡಾನ್ಸ್‌ ಸ್ಟೈಲ್‌ ಬಹಳ ಚೆನ್ನಾಗಿದೆ’ ಎಂದು ಹೇಳಿದ್ದರು. ಇದನ್ನಂತು ನಾನು ಎಂದಿಗೂ ಮರೆಯುದಿಲ್ಲ’ ಎಂದು ಸಂತಸ ಹಂಚಿಕೊಂಡರು.

ತಮ್ಮ ನೃತ್ಯಗುರು ಟಗರು ರಾಜು ಅವರನ್ನು ಸ್ಮರಿಸಲು ನಿತಿನ್‌ ಮರೆಯಲಿಲ್ಲ. ‘ರಾಜು ಸರ್‌ ನನಗೆ ಬಹಳ ಪ್ರೋತ್ಸಾಹ ನೀಡಿದ್ದಾರೆ. ವಿದೇಶಗಳಲ್ಲಿ ನಡೆದ ಹಲವು ಕಾರ್ಯಕ್ರಮಗಳಿಗೆ ನನ್ನನ್ನು ಕರೆದುಕೊಂಡು ಹೋಗಿದ್ದಾರೆ. ಸಿಂಗಪುರ ಹಾಗೂ ವಿಯೆಟ್ನಾಂ ದೇಶಗಳಲ್ಲಿ ನಡೆದ ನೃತ್ಯಸ್ಪರ್ಧೆಗೂ ನನ್ನನ್ನು ಕರೆದುಕೊಂಡು ಹೋಗಿದ್ದರು’ ಎಂದು ನೆನಪಿಸಿಕೊಂಡಾಗ ಕಣ್ಣು ಮಿಂಚುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT