ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕು ಪ್ರಾಣಿಗಳಿಗೆ ಪ್ರಯಾಣ ದರ ನಿಗದಿ

ನಾಯಿಗಳಿಂದ ಸಹ ಪ್ರಯಾಣಿಕರು, ಸಿಬ್ಬಂದಿಗೆ ತೊಂದರೆ ಆಗಬಾರದು: ಕೆಎಸ್‌ಆರ್‌ಟಿಸಿ
Last Updated 2 ಫೆಬ್ರವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಸ್‌ಗಳಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರಯಾಣ ದರ ನಿಗದಿ ಮಾಡಿದೆ.

ಒಬ್ಬ ಪ್ರಯಾಣಿಕ ಒಂದು ಸಾಕು ಪ್ರಾಣಿಯನ್ನು ಮಾತ್ರ ಕರೆದೊಯ್ಯಬಹುದು. ದೊಡ್ಡ ನಾಯಿಗೆ ಒಬ್ಬ ವಯಸ್ಕ ಪ್ರಯಾಣಿಕನಿಗೆ ವಿಧಿಸುವ ದರ, ನಾಯಿಮರಿ, ಬೆಕ್ಕು, ಮೊಲ, ಕೋತಿ ಮತ್ತು ಪಕ್ಷಿ ಹಾಗೂ ಇತರ ಸಣ್ಣ ಪ್ರಾಣಿಗಳಿಗೆ ಮಕ್ಕಳ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.

ನಾಯಿಗಳಿಂದ ಸಹ ಪ್ರಯಾಣಿಕರು ಮತ್ತು ನಿಗಮದ ಸಿಬ್ಬಂದಿಗೆ ತೊಂದರೆ ಆಗದಂತೆ ವಾರಸುದಾರರು ಎಚ್ಚರ ವಹಿಸಬೇಕು. ನಿಗಮದ ಆಸ್ತಿಗೆ ಹಾನಿಯಾಗದಂತೆ ನಾಯಿಗಳನ್ನು ಸರಪಳಿಯಿಂದ ಬಿಗಿದು ಕಟ್ಟಬೇಕು ಎಂದೂ ಆದೇಶದಲ್ಲಿ ತಿಳಿಸಿದೆ.

ಕೋಳಿ ಮರಿಗಳು ಪಂಜರದಲ್ಲಿ ಇದ್ದರೆ ಒಂದು ಯುನಿಟ್‌ (15 ಕೆ.ಜಿ ತೂಕದ ಒಂದು ಯುನಿಟ್ ರೇಷ್ಮೆ ಗೂಡು) ಎಂದು ಪರಿಗಣಿಸಿ ದರ ನಿಗದಿ ಮಾಡಲಾಗುವುದು ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ಲಗೇಜ್ ದರ ಪರಿಷ್ಕರಣೆ: ಲಗೇಜ್ ದರವನ್ನೂ ಪರಿಷ್ಕರಿಸಲಾಗಿದೆ. ಹವಾನಿಯಂತ್ರಿತ ಬಸ್‌ಗಳಲ್ಲಿ ಕನಿಷ್ಠ ₹ 10 ಮತ್ತು ಪ್ರತಿ ಹಂತಕ್ಕೆ ಹೆಚ್ಚುವರಿಯಾಗಿ ₹ 1 ದರ ನಿಗದಿ ಮಾಡಲಾಗಿದೆ. ಇತರ ಬಸ್‌ಗಳಲ್ಲಿ ಕನಿಷ್ಠ ₹ 5 ಮತ್ತು ಪ್ರತಿ ಹಂತಕ್ಕೆ 50 ಪೈಸೆ ನಿಗದಿಯಾಗಿದೆ. ಮದ್ಯಪಾನ ಮಾಡುವುದು, ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ಹಾಗೂ ಸ್ಪೋಟಕ ವಸ್ತುಗಳ ಸಾಗಣೆ ನಿಷೇಧಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಪ್ರತ್ಯೇಕ ನೇಮಕಾತಿ: ಕೆಎಸ್‌ಆರ್‌ಟಿಸಿಯ ಪುತ್ತೂರು, ಚಾಮರಾಜನಗರ ಮತ್ತು ಮಂಗಳೂರು ವಿಭಾಗಕ್ಕೆ ಅಗತ್ಯ ಇರುವ 833 ಚಾಲಕ–ನಿರ್ವಾಹಕ ಹುದ್ದೆಗಳಿಗೆ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದ್ದು, 9,150 ಅಭ್ಯರ್ಥಿಗಳಿಗೆ ಇದೇ ತಿಂಗಳಲ್ಲಿ ಗಣಕೀಕೃತ ವೃತ್ತಿ ಪರೀಕ್ಷೆ ನಡೆಸಲಾಗುವುದು ಎಂದರು.

ಆರು ವೃಂದಗಳಲ್ಲಿ ಒಟ್ಟು 1,116 ಮೇಲ್ವಿಚಾರಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, 1,81,789 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಪರೀಕ್ಷೆ ನಡೆಸಿ ಮೆರಿಟ್ ಆಧಾರದಲ್ಲಿ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ನೌಕರರ ಅಂತರ ನಿಗಮ ವರ್ಗಾವಣೆ ಗೊಂದಲವನ್ನು ಇನ್ನು 15 ದಿನಗಳಲ್ಲಿ ಪರಿಹರಿಸಲಾಗುವುದು ಎಂದರು.
**
ಆರ್ಥಿಕವಾಗಿ ನಷ್ಟದಲ್ಲಿರುವ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ರಾಜ್ಯ ಬಜೆಟ್‌ನಲ್ಲಿ ಮೋಟಾರು ವಾಹನ ತೆರಿಗೆ ವಿನಾಯಿತಿ ಸಿಗುವ ಸಾಧ್ಯತೆ ಇದೆ ಎಂದು ಸಚಿವ ಎಚ್‌.ಎಂ. ರೇವಣ್ಣ ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ಆನ್‌ಲೈನ್ ಪರೀಕ್ಷೆ ಮೂಲಕ ನೇಮಕವಾಗಿರುವ ಮೇಲ್ವಿಚಾರಕ ಸಿಬ್ಬಂದಿಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿರುವುದನ್ನು ಮುಖ್ಯಮಂತ್ರಿಗೆ ವಿವರಿಸಿದ್ದೇವೆ. ತೆರಿಗೆ ವಿನಾಯಿತಿ ನೀಡುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಸರ್ಕಾರ ವಿದ್ಯಾರ್ಥಿಗಳ ರಿಯಾಯಿತಿ ಬಸ್ ಪಾಸ್‌ಗೆ ನೀಡಬೇಕಾದ ಅನುದಾನ ಬಿಡುಗಡೆಗೆ ಬಾಕಿ ಇದ್ದು, ತಕ್ಷಣ ಬಿಡುಗಡೆ ಮಾಡುವಂತೆ ಕೋರಿದ್ದೇವೆ. ಬೆಂಗಳೂರಿನಲ್ಲಿ ವಸತಿ ಇಲಾಖೆಯಿಂದ ನಿರ್ಮಿಸಲಾಗುವ ಒಂದು ಲಕ್ಷ ಮನೆಗಳಲ್ಲಿ ಸಾರಿಗೆ ಸಂಸ್ಥೆ ಕಾರ್ಮಿಕರಿಗೂ ಅವಕಾಶ ಕಲ್ಪಿಸಲು ಮನವಿ ಮಾಡಿದ್ದೇವೆ’ ಎಂದೂ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT