ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊತೆ ಜೊತೆಯಲಿ ಧಾರಾವಾಹಿಯ ಗತ್ತುಗಾರ್ತಿ ‘ಮೀರಾ’ ಮನದಮಾತು

Last Updated 31 ಜನವರಿ 2020, 4:49 IST
ಅಕ್ಷರ ಗಾತ್ರ

ಓದಿನಲ್ಲಿ ಮುಂದಿದ್ದ ಮಗಳ ಜಾಣ್ಮೆ ನೋಡಿ ತಂದೆ–ತಾಯಿ ‘ಇವಳು ಡಾಕ್ಟರ್ ಇಲ್ಲವೇ ಎಂಜಿನಿಯರ್ ಆಗಬಹುದು’ ಎಂದುಕೊಂಡಿದ್ದರು. ಆದರೆ ಮಗಳನ್ನು ಸೆಳೆದಿದ್ದು ಮಾತ್ರ ಬಣ್ಣದ ಲೋಕ. ಇದು ‘ಜೊತೆ ಜೊತೆಯಲಿ’ ಧಾರಾವಾಹಿಯ ‘ಮೀರಾ’ ಪಾತ್ರಧಾರಿ ಮಾನಸ ಮನೋಹರ್‌ ಅವರ ಕತೆ.

ಧಾರಾವಾಹಿಯಲ್ಲಿ ಮೀರಾಳ ಗತ್ತು, ಬುದ್ಧಿವಂತಿಕೆ, ಕಂಪನಿ ವ್ಯವಹಾರ ನಿಭಾಯಿಸುವ ಚಾಕಚಕ್ಯತೆಯ ಅಭಿನಯಕ್ಕೆ ಪ್ರೇಕ್ಷಕರು ಮಾರು ಹೋಗಿದ್ದಾರೆ. ತನ್ನ ಪಾತ್ರದ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಮಾನಸ ‘ಅವಕಾಶ ನೀಡಿದರೆ ಹೆಣ್ಣು ಅದ್ಭುತವಾಗಿ ಸಾಧನೆ ಮಾಡುತ್ತಾಳೆ. ವಿಶ್ವವೇ ಬೆರಗಾಗುವಷ್ಟು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಹೆಣ್ಣು ಮುನ್ನಡೆಯುತ್ತಿದ್ದಾಳೆ. ಮೀರಾ ಆಧುನಿಕ ಯುಗದ ಹೆಣ್ಣು. ಎಲ್ಲಾ ವಯಸ್ಸಿನವರಿಗೆ ಆ ಪಾತ್ರ ಇಷ್ಟವಾಗಿದೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ.

‘ಜೊತೆ ಜೊತೆಯಲಿ’ ನಿರ್ದೇಶಕ ಆರೂರು ಜಗದೀಶ್‌ ಅವರ ಹಿಂದಿನ ಜನಪ್ರಿಯ ಧಾರಾವಾಹಿಗಳಾದ ‘ಅಶ್ವಿನಿ ನಕ್ಷತ್ರ’, ‘ಶುಭವಿವಾಹ’, ‘ಅಮೃತವರ್ಷಿಣಿ’ ಧಾರಾವಾಹಿಗಳಲ್ಲೂ ಮಾನಸ ನಟಿಸಿದ್ದರು. ‘ಜೊತೆ ಜೊತೆಯಲಿ’ ಆರಂಭವಾದಾಗ ಮಾನಸ ಅವರ ಬಳಿ ಜಗದೀಶ್‌ ಅವರು ಇಂತಹದೊಂದು ಪಾತ್ರ ಇದೆ, ನಟಿಸುತ್ತೀರಾ ಎಂದು ಕೇಳಿಕೊಂಡಾಗ ಅವರು ಖುಷಿಯಿಂದ ಒಪ್ಪಿಕೊಂಡರಂತೆ. ‘ಮೀರಾ ಪಾತ್ರಕ್ಕೆ ನೆಗಟಿವ್‌, ಪಾಸಿಟಿವ್‌ ಎರಡೂ ಛಾಯೆ ಇದೆ. ಒಬ್ಬ ನಟಿಗೆ ಇದು ಸವಾಲಿನ ಪಾತ್ರ’ ಎಂದು ಹೇಳುತ್ತಾರೆ.

ಮಾನಸ ನಟನಾ ಕ್ಷೇತ್ರಕ್ಕೆ ಬಂದಿದ್ದು ಆಕಸ್ಮಿಕ. ಇವರ ಕುಟುಂಬದಲ್ಲಿ ಬಣ್ಣದ ಜಗತ್ತಿಗೆ ಕಾಲಿಟ್ಟ ಮೊದಲ ಕುಡಿ ಇವರೇ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಮಾನಸಗೆ ಸಣ್ಣವಯಸ್ಸಿನಿಂದಲೂ ನಟನೆ ಬಗ್ಗೆ ಆಸಕ್ತಿಯಿತ್ತು. ಎಂಬಿಎ ಓದುತ್ತಿದ್ದಾಗ ಆಡಿಷನ್‌ನಲ್ಲಿ ಭಾಗವಹಿಸಿ ‘ಅಶ್ವಿನಿ ನಕ್ಷತ್ರ’ ಧಾರಾವಾಹಿಗೆ ಆಯ್ಕೆಯಾದರು. ಆದರೆ ಆಗ ಪರೀಕ್ಷೆ ನಡೆಯುತ್ತಿದ್ದರಿಂದ ಪೂರ್ಣ ಪ್ರಮಾಣದ ಪಾತ್ರ ಒಪ್ಪಿಕೊಳ್ಳಲಾಗಲಿಲ್ಲ. ಅತಿಥಿ ಪಾತ್ರಕ್ಕೆ ಸಮಾಧಾನ ಪಟ್ಟುಕೊಂಡರು. ನಂತರ ಅವರ ನಟನೆಯನ್ನು ಮೆಚ್ಚಿದ ಆರೂರು ತಮ್ಮ ಮುಂದಿನ ಎರಡು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರವನ್ನೇ ನೀಡಿದರು.

‘ಆರೂರು ಜಗದೀಶ್‌ ಧಾರಾವಾಹಿ ತಂಡ ನನ್ನ ಎರಡನೇ ಫ್ಯಾಮಿಲಿ’ ಎನ್ನುವ ಅವರು, ‘ನಟ ಅನಿರುದ್ಧ್‌ ಅವರಿಗೆ ಕೊಂಚವೂ ಜಂಭವಿಲ್ಲ. ಸೆಟ್‌ನಲ್ಲಿ ಎಲ್ಲರ ಜೊತೆ ತಮಾಷೆಯಾಗಿ ಕಾಲ ಕಳೆಯುತ್ತಿರುತ್ತಾರೆ’ ಎಂದು ಸಹಕಲಾವಿದರ ಬಗ್ಗೆ ಖುಷಿ ಹಂಚಿಕೊಂಡರು.

2014ರಲ್ಲಿ ‘ಮಿಸ್‌ ಕರ್ನಾಟಕ’ ಕಿರೀಟ ಮುಡಿಗೇರಿಸಿಕೊಂಡವರು ಮಾನಸ. ಹಾಗೇ ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲೂ ಅವರು ನಟಿಸಿದ್ದಾರೆ. ಗೌರೀಶ್‌ ಅಕ್ಕಿ ಅವರ ‘ಸಿನಿಮಾ ಮೈ ಡಾರ್ಲಿಂಗ್‌’ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗು ಹಾಗೂ ತಮಿಳಿನಲ್ಲಿ ಮೂರ್ನಾಲ್ಕು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದು, ಬಿಡುಗಡೆಗೆ ಸಿದ್ಧವಾಗಿವೆ.

‘ನಟನೆಗೆ ಕಿರುತೆರೆ, ಬೆಳ್ಳಿತೆರೆ ಎಂಬ ವ್ಯತ್ಯಾಸವಿಲ್ಲ. ಪಾತ್ರಕ್ಕೆ ಪ್ರಾಮುಖ್ಯತೆ ಇರಬೇಕು. ಈಗ ವೆಬ್‌ ಸಿರೀಸ್‌ಗಳು ಜನಪ್ರಿಯವಾಗುತ್ತಿವೆ. ಜನ ಗುರುತಿಸುವಂತಹ ಪಾತ್ರಗಳಲ್ಲಿ ನಟಿಸಬೇಕು. ಪಾತ್ರ ತೂಕದ್ದಾಗಿರಬೇಕು. ಎಲ್ಲಾ ತರಹದ ಪಾತ್ರ ಮಾಡಲು ನನಗಿಷ್ಟ. ನಮ್ಮ ಕಂಫರ್ಟ್‌ ಝೋನ್‌ನಲ್ಲಿ ನಟಿಸುತ್ತಾ ಬಂದರೆ ಬೇರೆ ಬೇರೆ ಪಾತ್ರಗಳಿಗೆ ತೆರೆದುಕೊಳ್ಳುವುದು ಹೇಗೆ? ನಟನೆಯೇ ನನ್ನ ಜಗತ್ತು. ಉತ್ತಮ ಪಾತ್ರದ ಜೊತೆಗೆ ಧಾರಾವಾಹಿ ಅಥವಾ ಸಿನಿಮಾ ಕೂಡ ಉತ್ತಮವಾಗಿರಬೇಕು’ ಎಂದು ನಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT