ಭಾನುವಾರ, ಮಾರ್ಚ್ 29, 2020
19 °C

ವೆಬ್‌ಗೆ ಮರಳಿದ ‘ರಾಗಿಣಿ’ ರಿಯಾ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

Prajavani

‘ರಾಗಿಣಿ ಎಂಎಂಎಸ್‌: ರಿಟರ್ನ್ಸ್‌‘ ವೆಬ್‌ ಸರಣಿಯ ಮಾದಕ ಸುಂದರಿ ರಿಯಾ ಸೇನ್‌ ನೆನಪಿದೆಯೇ? ಬಾಲಿವುಡ್‌ ಸಿನಿಮಾ ಮತ್ತು ‘ರಾಗಿಣಿ‘ ಸರಣಿಗಳ ಮೂಲಕ ಸಖತ್‌ ಹಾಟ್‌ ನಟಿ ಎಂದೇ ಗುರುತಿಸಿಕೊಂಡಿದ್ದ ರಿಯಾ ನಾಪತ್ತೆಯಾಗಿದ್ದರು.

2017ರಲ್ಲಿ ಏಕ್ತಾ ಕಪೂರ್‌ ನಿರ್ಮಾಣ, ನಿರ್ದೇಶನದ ‘ರಾಗಿಣಿ ಎಂಎಂಎಸ್‌: ರಿಟರ್ನ್ಸ್‌‘ ಸರಣಿಯಲ್ಲಿ ರಿಯಾ ಮೈಮನ ಬಿಚ್ಚಿ ನಟಿಸಿದ್ದು ಭಾರಿ ಸುದ್ದಿಯಾಗಿತ್ತು. ಅದೇ ಕಾರಣಕ್ಕೆ ಸರಣಿ ಹಿಟ್‌ ಆಗಿತ್ತು. ಒಂದಷ್ಟು ವಿವಾದಗಳೂ ಅವರ ಬೆನ್ನುಹತ್ತಿದ್ದವು. ಅಲ್ಲಿಂದಾಚೆ ಅವರು ಡಿಜಿಟಲ್‌ ಮತ್ತು ಹಿರಿ ತೆರೆಯಿಂದ ದೂರವಾಗಿದ್ದರು.

ಆದರೆ ಇದಕ್ಕೆ ಅವರು ಕೊಡುವ ಕಾರಣ ಏನು ಗೊತ್ತೇ? ನಟಿಯಾಗಿ ಗುರುತಿಸಿಕೊಳ್ಳುವ ಮತ್ತು ಬೆಳಗುವಂತಹ ಪಾತ್ರಗಳು ತನಗೆ ಬಾಲಿವುಡ್‌ನಲ್ಲಿ ಸಿಗದೇ ಇದ್ದ ಕಾರಣ ನಟನೆಯಿಂದ ದೂರವುಳಿಯಬೇಕಾಯಿತು. ಬರುತ್ತಿದ್ದ ಆಫರ್‌ಗಳೆಲ್ಲವೂ ‘ರಾಗಿಣಿ...’ಯ ಮತ್ತೊಂದು, ಮಗದೊಂದು ರೂಪದವುಗಳೇ ಆಗಿರುತ್ತಿದ್ದವು. ಹಾಗಾಗಿ ಎಲ್ಲಾ ಅವಕಾಶಗಳನ್ನು ಕೈಬಿಟ್ಟು ಎಲ್ಲರಿಂದಲೂ ದೂರವುಳಿದೆ’ ಎನ್ನುತ್ತಾರೆ ರಿಯಾ!

ರಿಯಾ ಯಾವುದೇ ಚಿತ್ರದಲ್ಲಾಗಲಿ ಸರಣಿಯಲ್ಲಾಗಲಿ ನಟಿಸದೇ ಇದ್ದರೂ ಅವರ ಅಭಿಮಾನಿಗಳು ಮರೆತಿರಲಿಲ್ಲ ಎಂಬುದು ಅವರಿಗೆ ತುಂಬಾ ಸಮಾಧಾನದ ಸಂಗತಿಯಾಗಿತ್ತು. ಅಂತಹ ಅಭಿಮಾನಿಗಳಿಗೆ ಈಗ ಒಂದು ಸಿಹಿಸುದ್ದಿ ಬಂದಿದೆ.

‘ಪಾಯ್ಸನ್‌’ನಲ್ಲಿ...

ರಿಯಾ ಮತ್ತೆ ನಟನೆಗೆ ಮರಳಿದ್ದಾರೆ. ಅದೂ ವೆಬ್‌ ಸರಣಿಯ ಮೂಲಕವೇ. ಹೌದು, ಹೊಸ ವೆಬ್‌ ಸರಣಿಯೊಂದರ ಚಿತ್ರೀಕರಣದಲ್ಲಿ ರಿಯಾ ಪಾಲ್ಗೊಂಡಿದ್ದಾರೆ. ಇದು ತಮ್ಮ ಅದೃಷ್ಟ ಪರೀಕ್ಷೆಯ ಎರಡನೇ ಇನ್ನಿಂಗ್ಸ್‌ ಎಂದು ಅವರು ಹೇಳಿಕೊಂಡಿದ್ದಾರೆ.

ಅರ್ಬಾಜ್‌ ಖಾನ್‌, ಫರ್ರೆಡ್ಡಿ ಸಾರುವಾಲಾ ತಮ್ತು ತನೂಜ್‌ ವೀರ್ವಾನಿ ಅವರೊಂದಿಗೆ ರಿಯಾ ತೆರೆ ಹಂಚಿಕೊಳ್ಳಲಿದ್ದಾರೆ.

ವೆಬ್‌ ಸರಣಿಯ ಶೀರ್ಷಿಕೆ ‘‍ಪಾಯ್ಸನ್‌’. ಇದರಲ್ಲಿ ಗ್ಲಾಮರ್‌ ಇಲ್ಲದ ಪಾತ್ರವೊಂದಕ್ಕಾಗಿ ರಿಯಾ ಬಣ್ಣ ಹಚ್ಚಲಿದ್ದಾರೆ. ಇದು ತಮಗೆ ಅಂಟಿಕೊಂಡಿರುವ ಸೆಕ್ಸಿ ಇಮೇಜ್‌ಅನ್ನು ಅಳಿಸಿ ಒಬ್ಬ ಗಂಭೀರ ನಟಿಯಾಗಿ ಗುರುತಿಸಿಕೊಳ್ಳಲು ಸಿಕ್ಕ ವೇದಿಕೆ ಎಂಬುದು ರಿಯಾ ಸಮರ್ಥನೆ. ಹಾಗಂತ ಪ್ರೇಕ್ಷಕರು ತಮ್ಮ ಹೊಸ ಅವತಾರವನ್ನು ಒಪ್ಪಿಕೊಳ್ಳುತ್ತಾರಾ ಎಂಬ ಪ್ರಶ್ನೆ ಸ್ವತಃ ಅವರಿಗೂ ಕಾಡುತ್ತಿದೆಯಂತೆ. ಆದರೂ ನಟಿಯಾಗಿ ಎಲ್ಲಾ ಬಗೆಯ ಪಾತ್ರಗಳನ್ನು ಮಾಡಲು ತಾನು ಸಿದ್ಧ ಎಂಬ ಸಂದೇಶವನ್ನಂತೂ ರವಾನಿಸುವುದಾಗಿ ಅವರು ಹೇಳುತ್ತಾರೆ.

ವೆಬ್ ಸರಣಿಯೇ ಇಷ್ಟ

ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಗಲೇ ಬಣ್ಣ ಹಚ್ಚಿದವರು ರಿಯಾ. ಆದರೆ ಪ್ರಸ್ತುತ, ಡಿಜಿಟಲ್‌ ಯುಗವಾದ್ದರಿಂದ ಡಿಜಿಟಲ್‌ ಮನರಂಜನಾ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವ ಯೋಚನೆ ಅವರದು. ಹಾಗಂತ ಬಾಲಿವುಡ್‌ ಅವರಿಗೆ ಸಿನಿಮಾ ಆಫರ್‌ ಮಾಡಿದರೆ ಇಲ್ಲವೆನ್ನುವುದಿಲ್ಲ ಎಂದೂ ಹೇಳುತ್ತಾರೆ ಈ ಮಾದಕ ಸುಂದರಿ.

ಅಂದ ಹಾಗೆ, ರಿಯಾ ನಟನೆಗೆ ಮರಳುತ್ತಿದ್ದಂತೆ ಒಂದಷ್ಟು ಅವಕಾಶಗಳು ಹುಡುಕಿ ಬಂದಿವೆ. ಇದರಿಂದ ಅವರು ಖುಷಿಯಾಗಿದ್ದಾರೆ.

ಹಿಂದಿಯಲ್ಲಿ ಮತ್ತೊಂದು ವೆಬ್‌ ಸರಣಿಯಲ್ಲಿ ಅವರು ನಟಿಸಲಿದ್ದಾರೆ. ‘ಪತಿ ಪತ್ನಿ ಔರ್‌ ವೋ’ ಎಂಬ ವೆಬ್ ಸರಣಿಯದು. ಅಲ್ಲದೆ, ಬಂಗಾಲಿಯಲ್ಲಿ ‘ಮಿಸ್‌ಮ್ಯಾಚ್‌ 2’ ಎಂಬ ವೆಬ್‌ ಸರಣಿಯಲ್ಲಿಯೂ ರಿಯಾ ನಟಿಸಲಿದ್ದಾರೆ.

ನಟಿಯಾಗಿ ನೆಲೆ ನಿಂತು, ‘ರಾಗಿಣಿ ಎಂಎಂಎಸ್‌: ರಿಟರ್ನ್ಸ್‌’ನಿಂದ ತಮಗೆ ಅಂಟಿಕೊಂಡ ಇಮೇಜ್‌ನ್ನು ಬದಲಿಸಿಕೊಳ್ಳುವುದು
ರಿಯಾ ಮುಂದಿರುವ ಸದ್ಯದ ಸವಾಲು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)