ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲಾಂಡೇಶ್ವರಿಯ ‘ವಿನಯ’ದ ಮಾತು!

ಕಿರುತೆರೆ
Last Updated 13 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

‘ಅರಸನಕೋಟೆ ಅಖಿಲಾಂಡೇಶ್ವರಿ...’ ಎನ್ನುವಾಗ ಅವರ ಕಣ್ಣಿನಲ್ಲಿನ ತೀಕ್ಷ್ಣತೆ ಕುಕ್ಕುವಂತಹದ್ದು. ಮಾತು ಸ್ಪಷ್ಟ ಮತ್ತು ನೇರ. ಮುಖದಲ್ಲಿ, ನಡಿಗೆಯಲ್ಲಿ, ಮಾತಿನಲ್ಲಿ, ಆಡುವ ವಿಷಯದಲ್ಲಿ ಅಳುಕಿಲ್ಲ. ಆಗಿನ ಕಾಲದಲ್ಲೇ ರಾಜರಿಗೆ ಸಾಲ ಕೊಡುತ್ತಿದ್ದ ವಂಶ. ದಾನ–ಧರ್ಮ ನಿತ್ಯ ಎನ್ನುವಂತೆ ನಡೆಯುತ್ತಿದ್ದವು.

ಅಲ್ಲಿ ಎಲ್ಲವೂ ಕಾನೂನು ಪ್ರಕಾರವೇ ಇದೆ. ದೊಡ್ಡ ಸಂಸಾರ. ಆಕೆಗೆ ಒಬ್ಬನೇ ಮಗ. ಒಂದು ಕಡೆ ತುಸು ಹೆಚ್ಚೇ ಅನ್ನಿಸುವ ಶಿಸ್ತು, ಇನ್ನೊಂದು ಕಡೆ ಮಾತೃ ಹೃದಯ. ಇಂತಹ ಪಾತ್ರಕ್ಕೆ ಜೀವ ತುಂಬುತ್ತಿರುವುದು ಕನ್ನಡದ ಹಿರಿಯ ನಟಿ ವಿನಯಾ ಪ್ರಸಾದ್‌.

ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ‘ಪಾರು’ ಧಾರಾವಾಹಿ ಪ್ರಸಾರವಾಗುತ್ತಿದೆ. ಧಾರಾವಾಹಿಯಲ್ಲಿ ಅವರದ್ದು ಅಖಿಲಾಂಡೇಶ್ವರಿಯ ಪಾತ್ರ. ಈ ಪಾತ್ರಕ್ಕಾಗಿ ಅವರ ತಯಾರಿ ಹೇಗಿತ್ತು ಎಂಬುದೂ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ವಿನಯಾ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ:

* ‘ಪಾರು’ ಧಾರಾವಾಹಿಯನ್ನು ಒಪ್ಪಿಕೊಳ್ಳಲು ಕಾರಣ?
ನಾನುದೃಶ್ಯ ಮಾಧ್ಯಮಕ್ಕೆ ಬಂದಿದ್ದೇ ಧಾರಾವಾಹಿಗಳ ಮೂಲಕ. ನನಗೆ ಇದೇ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು. ಮೊದಲ ಸಿನಿಮಾ ಅವಕಾಶ ಬಂದಿದ್ದು ಕೂಡ ಧಾರಾವಾಹಿಯಿಂದಲೇ. ಮನೆಮನೆಗೆ ತಲುಪುವ ಈ ಮಾಧ್ಯಮದ ಬಗ್ಗೆ ನನಗೆ ತುಂಬಾ ಕುತೂಹಲ ಮತ್ತು ಆಸಕ್ತಿ. ತುಂಬಾ ವರ್ಷಗಳ ನಂತರ ಈ ಅವಕಾಶ ಬಂತು. ಕಿರುತೆರೆಯ ನಂಟು ಎಂದಿಗೂ ನನಗೆ ಖುಷಿ ಕೊಡುತ್ತದೆ. ಆ ಕಾರಣಕ್ಕೆ ನಾನು ಈ ಧಾರಾವಾಹಿ ಒಪ್ಪಿಕೊಂಡೆ. ಮತ್ತೊಂದು ಕಾರಣವೂ ಇದೆ. ನನ್ನ ಇಡೀ ಅಭಿನಯ ಪಯಣದಲ್ಲಿ ನಾನು ಈ ರೀತಿಯ ಪಾತ್ರ ನಿರ್ವಹಿಸಿಲ್ಲ. ಇದು ನನ್ನ ಮಟ್ಟಿಗಂತೂ ವಿಭಿನ್ನ. ಜೊತೆಗೆ, ದಿಲೀಪ್‌ ರಾಜ್‌ ಹಾಗೂ ಅವರ ಪತ್ನಿ ನನ್ನನ್ನು ಒಪ್ಪಿಸಿದ ರೀತಿ ನನಗೆ ಬಹಳ ಹಿಡಿಸಿತು. ಚಿತ್ರೀಕರಣದ ಸೆಟ್‌ಗೆ ಹೋದ ಮೇಲೆ ನಟರಿಗೆ ಮುಜುಗರ ಆಗಬಾರದು. ಇಲ್ಲಿಂದ ಹೊರಟು ಬಿಡೋಣ ಅನ್ನಿಸಬಾರದು. ಆದರೆ, ಈ ಧಾರಾವಾಹಿ ಸೆಟ್‌ನಲ್ಲಿ ನನಗೆ ಆ ರೀತಿಯ ಅನುಭವ ಆಗುವುದಿಲ್ಲ ಅಂತ ಅನ್ನಿಸಿತು. ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಾರೆ ಎನ್ನುವ ನಂಬಿಕೆ ಬಂದ ಮೇಲೆಯೇ ನಾನು ಒಪ್ಪಿಕೊಂಡೆ.

* ಅಖಿಲಾಂಡೇಶ್ವರಿ ಅಂದರೆ ಯಾರು?
ಒಂದು ದೇಶದ ರಾಣಿ ಹೇಗೆ ಇರಬಹುದು? ಆ ರಾಣಿಗೆ ಎಲ್ಲವೂ ಗೊತ್ತಿರಬೇಕು. ನಾಯಕತ್ವದ ಗುಣ ಆಕೆಯಲ್ಲಿ ಇರಬೇಕು. ಜನರ ನಡುವೆ ಸೌಹಾರ್ದ ಮೂಡಿಸುವ ರೀತಿಯಲ್ಲಿ ಆಕೆ ಇರಬೇಕು. ಸಾಮ-ದಾನ-ಭೇದ-ದಂಡ ಆಕೆಗೆ ಗೊತ್ತಿರಬೇಕು. ಗಂಭೀರವಾಗಿ ಇರಬೇಕು. ಹಾಗಂತ ಆಕೆಯಲ್ಲಿ ಮನುಷ್ಯತ್ವ ಇಲ್ಲ ಅಂತಲ್ಲ. ಒಟ್ಟಿನಲ್ಲಿ ರಾಜಕುಟುಂಬದವರ ಎಲ್ಲ ಗುಣಗಳೂ ಇರುವವಳೇ ಅಖಿಲಾಂಡೇಶ್ವರಿ.

*ಅಖಿಲಾಂಡೇಶ್ವರಿ ತುಂಬಾ ಸಿಟ್ಟು ಮಾಡುತ್ತಾರೆ... ಆದರೆ, ವಿನಯ ಪ್ರಸಾದ್‌ ತುಂಬಾ ಸೌಮ್ಯ. ಇದು ಪಾತ್ರ ನಿಭಾಯಿಸಲಿಕ್ಕೆ ಅಡ್ಡಿ ಆಯಿತೇ?
ಜೋರಾಗಿ ಮಾತನಾಡುವುದು, ತಪ್ಪು ಮಾಡಿದರೆ ದಂಡಿಸುವುದು... ಇವೆಲ್ಲ ನನ್ನ ಸ್ವಭಾವದಲ್ಲಿ ಇಲ್ಲವೇ ಇಲ್ಲ. ಮೊದಲಿನಿಂದಲೂ ನಾನು ತುಂಬಾ ಸಮಾಧಾನದ ಸ್ವಭಾವದವಳು. ನನ್ನಲ್ಲಿ ಬಹಳ ತಾಳ್ಮೆ ಇದೆ. ಯಾವುದೇ ಸಮಸ್ಯೆ ಅಥವಾ ಗೊಂದಲ ಎದುರಾದರೆ ಅದನ್ನು ಹೇಗೆ ನಿಭಾಯಿಸಬೇಕು ಮತ್ತು ಅದರಿಂದ ಹೊರಬರುವುದು ಹೇಗೆ ಎಂಬುದರ ಕುರಿತೇ ನನ್ನ ಗಮನ ಇರುತ್ತದೆ. ಆದರೆ, ಮಾನಸಿಕವಾಗಿ ಈ ಪಾತ್ರಕ್ಕೆ ಹೊಂದಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯಿತು. ದಿಲೀಪ್‌ ಅವರ ಹತ್ತಿರ ನಾನು ಹೇಳುತ್ತಲೇ ಇದ್ದೆ: ‘ನೀವು ನಿರೀಕ್ಷೆ ಮಾಡುವ ಮಟ್ಟಕ್ಕೆ ನಾನು ಈ ಪಾತ್ರವನ್ನು ನಿಭಾಯಿಸುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರಯತ್ನವನ್ನಂತೂ ಮಾಡುತ್ತೇನೆ. ನನ್ನ ಅಭಿನಯ ಎಲ್ಲಾದರೂ ಸೌಮ್ಯವಾಯಿತು ಅಂತ ಅನಿಸಿದರೆ ನನಗೆ ಹೇಳಿ’ ಅಂತ.

ಶೂಟಿಂಗ್‌ ಶುರುವಾಗಿ ಒಂದೆರಡು ದಿನಗಳಲ್ಲೇ ನನಗೆ ಪಾತ್ರದ ಮೇಲೆ ಹಿಡಿತ ಸಿಕ್ಕಿತು. ಇದು ಅಹಂಕಾರವುಳ್ಳ ಹೆಣ್ಣಿನ ಪಾತ್ರ ಅಲ್ಲ. ಬಹಳ ಶಿಸ್ತಿನ ಮತ್ತು ಗಟ್ಟಿತನದ ಪಾತ್ರ ಅಷ್ಟೆ. ಪಾತ್ರಕ್ಕಾಗಿ ನಾನು ಸಾಕಷ್ಟು ತಯಾರಿ ಮಾಡಿದ್ದೇನೆ. ನನ್ನ ಧ್ವನಿ, ನನ್ನ ದೇಹಭಾಷೆ ಪಾತ್ರಕ್ಕೆ ಬೇಕಾದ ರೀತಿಯಲ್ಲಿ ಇರುವಂತೆ ಮಾಡಲು ಅಭ್ಯಾಸ ಮಾಡುತ್ತಾ ಬಂದೆ. ಪ್ರತಿ ದಿನ ಶೂಟಿಂಗ್‌ಗೆ ಹೋಗುವ ಮೊದಲು, ಬೆಳಗ್ಗೆ ಹತ್ತರಿಂದ ಹದಿನೈದು ನಿಮಿಷ ವಾಯ್ಸ್‌ ಕಲ್ಚರಿಂಗ್‌ ವ್ಯಾಯಾಮ ಮಾಡುತ್ತೇನೆ. ಈ ವಾಯ್ಸ್‌ ಕಲ್ಚರಿಂಗ್‌ಅನ್ನು ರಂಗಭೂಮಿಯಲ್ಲಿ ಹೇಳಿಕೊಡುತ್ತಾರೆ. ನನ್ನ ಕಾಲೇಜು ದಿನಗಳಲ್ಲಿ ರಂಗಭೂಮಿಯ ಒಡನಾಟ ಇತ್ತು. ಆಗ ಕಲಿತ ವಿದ್ಯೆ ಈಗ ನನ್ನ ಸಹಾಯಕ್ಕೆ ಬರುತ್ತಿದೆ.

* ‘ಪಾರು’ ವಿಭಿನ್ನ ಹೇಗೆ?
ಅಖಿಲಾಂಡೇಶ್ವರಿಯದ್ದು ರಾಜಮನೆತನಕ್ಕೆ ಸಾಲ ಕೊಡುತ್ತಿದ್ದ ಕುಟುಂಬ. ಜತೆಗೆ, ಬದುಕಿಗೆ ದುಡ್ಡು ಮಾತ್ರವಲ್ಲ ಮನುಷ್ಯತ್ವ ಕೂಡ ಬೇಕು ಎನ್ನುವವರ ಕುಟುಂಬ. ಬೇರೆ ಬೇರೆ ಭಾವಗಳನ್ನು, ವಾಸ್ತವಗಳನ್ನ ಬಹಳ ಚೆನ್ನಾಗಿ ಈ ಧಾರಾವಾಹಿ ತೋರಿಸುತ್ತದೆ. ಮಾಮೂಲಿ ಧಾರಾವಾಹಿಗಳಲ್ಲಿ ನಾಲ್ಕೈದು ಕಥೆಗಳು ನಡೆಯುತ್ತಿರುತ್ತವೆ. ಅಲ್ಲಿ ಎಲ್ಲ ಕಥೆಗಳನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕಸರತ್ತು ಇರುತ್ತದೆ. ಆದರೆ, ನಮ್ಮ ಧಾರಾವಾಹಿಯಲ್ಲಿ ಹೀಗಿಲ್ಲ. ಅಖಿಲಾಂಡೇಶ್ವರಿಯ ಮನೆಯೇ ಈ ಧಾರಾವಾಹಿಯ ಕೇಂದ್ರ. ಈ ಮನೆಯಲ್ಲೇ ಕಥೆ ನಡೆಯುತ್ತದೆ. ಇದರ ಸುತ್ತವೇ ಕಥೆ ಸಾಗುತ್ತದೆ.

*
ಧಾರಾವಾಹಿ ಅಂದರೆ ಆ ಕ್ಷಣದ ಮನರಂಜನೆ. ಧಾರಾವಾಹಿ ಮೂಲಕ ತತ್ವ ಹೇಳಲು ಹೊರಟರೆ ಜನ ನೋಡುವುದಿಲ್ಲ. ಇದು ತಮ್ಮ ಮನೆಯ ಕತೆ ಎಂದು ಜನರಿಗೆ ಅನ್ನಿಸಿದರೆ ಅವರು ನೋಡುತ್ತಾರೆ. ಮನರಂಜನೆ ಮಾತ್ರವೇ ಮುಖ್ಯ ಎನ್ನಲಾಗದು. ನಮ್ಮ ಕಥೆಯ ಉದ್ದೇಶ ಕೆಟ್ಟದನ್ನು ಸರಿ ಎಂದು ತೋರಿಸುವ ಹಾಗೆ ಇರಬಾರದು.
-ವಿನಯಾ ಪ್ರಸಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT