ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡವಿ | ಪಕ್ಷಿಗಳ ಪ್ರಸೂತಿಗೃಹ

Published 15 ಅಕ್ಟೋಬರ್ 2023, 0:30 IST
Last Updated 15 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಕೆರೆ-ಸರೋವರಗಳು ಜೀವಜಲದ ಆಕರಗಳು. ಹಚ್ಚ ಹಸುರಿನ ಮಲೆನಾಡ ಕಾಡು. ಸುತ್ತಲೂ ಕೃಷಿ ಭೂಮಿ. ಇದೆಲ್ಲವನ್ನೂ ಒಳಗೊಂಡಿರುವುದೇ ಗುಡವಿ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಗುಡವಿ ಒಂದು ಸಣ್ಣ ಗ್ರಾಮ. ಕೃಷಿಯೇ ಇಲ್ಲಿನ ಜನರ ಬದುಕಿನಾಸರೆ. ಈ ಗ್ರಾಮದಲ್ಲಿರುವ ವಿಶಿಷ್ಟ ಕೆರೆಯೊಂದು ಸಹಸ್ರಾರು ಖಗ ಸಂತತಿಗಳ ತವರೂರು. ಅಂದಾಜು 180 ಎಕರೆ ಪ್ರದೇಶದಲ್ಲಿರುವ ಈ ಕೆರೆಗೆ ಮಲೆನಾಡಿನ ಮಳೆಯ ನೀರು ಆಧಾರ. ಒಳ್ಳೆಯ ಮಳೆಯಾದ ವರ್ಷದಲ್ಲಿ ಕೆರೆಯು ತುಂಬುತ್ತದೆ. 1986ರಲ್ಲಿ ಪಕ್ಷಿಧಾಮವೆಂದು ಗುರುತಿಸಿಕೊಂಡಿರುವ ಈ ಕೆರೆಯನ್ನು ಅರಣ್ಯ ಇಲಾಖೆ ಬಹಳ ಮುತುವರ್ಜಿಯಿಂದ ಅಚ್ಚುಕಟ್ಟಾಗಿ ನಿರ್ವಹಿಸಿದೆ. ಮಳೆಗಾಲದಲ್ಲಿ ಇಲ್ಲಿಗೆ ಬರುವ ಪಕ್ಷಿ ಸಂಕುಲ ಅಸದಳ. ಕರ್ನಾಟಕದಲ್ಲಿ ಅತಿ ಹೆಚ್ಚು ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಆಯ್ಕೆ ಮಾಡಿಕೊಂಡಿರುವ ಈ ಸ್ಥಳ ಪಕ್ಷಿ ಪ್ರಸೂತಿಗೃಹವಾಗಿದೆ.

ಪಕ್ಷಿಗಳು ಒಂದು ಪರಿಸರದ ಆರೋಗ್ಯ ನಿರ್ಧರಿಸುವ ಜೈವಿಕ ಸೂಚಕಗಳು. ಕೆರೆಯ ಮಧ್ಯ ಅರಣ್ಯ ಇಲಾಖೆ ಮಾಡಿರುವ ನಡುಗಡ್ಡೆಗಳು ಮತ್ತು ಅಲ್ಲಿರುವ ಮರಗಳು ಕೆಲವು ಪ್ರಭೇದದ ಹಕ್ಕಿಗಳಿಗೆ ಗೂಡು ಮಾಡಿ ಮರಿಗಳನ್ನು ಬೆಳೆಸಲು ಪ್ರಶಸ್ತ ಪರಿಸರವಾಗಿದೆ. ಈ ದಿಸೆಯಲ್ಲಿ ಅರಣ್ಯ ಇಲಾಖೆಯ ಕಾರ್ಯ ಶ್ಲಾಘನೀಯ. ಹಸಿರು ಆವರಣದ ಪ್ರಶಾಂತ ಸ್ಥಳವಿದು. ಗುಡವಿ ಪಕ್ಷಿಧಾಮ ಪಕ್ಷಿತಜ್ಞರಿಗೆ, ವೀಕ್ಷಕರಿಗೆ ಮತ್ತು ಅಧ್ಯಯನಶೀಲರಿಗೆ ಸ್ವರ್ಗದಂತೆ. ಜನಸಾಮಾನ್ಯರಿಗೂ ಮನೋಲ್ಲಾಸದ ತಾಣ.

ಅಕ್ಕ-ಪಕ್ಕದ ಗೂಡಿನಲ್ಲಿರುವ ಹಾವಕ್ಕಿ ಮರಿಗಳು
ಅಕ್ಕ-ಪಕ್ಕದ ಗೂಡಿನಲ್ಲಿರುವ ಹಾವಕ್ಕಿ ಮರಿಗಳು

ಚಿತ್ರ: ಡಾ. ಎಸ್. ಶಿಶುಪಾಲ

ಮಲೆನಾಡ ಕಾಡಿನ ನಡುವೆ ಪ್ರಶಾಂತವಾಗಿ ಕುಳಿತಿದೆ ಈ ಕೆರೆ. ಸುತ್ತಲ ಕೃಷಿಭೂಮಿಯಲ್ಲಿ ಹುಳು, ಕಪ್ಪೆ, ಏಡಿ ಮುಂತಾದವುಗಳು ಹೇರಳವಾಗಿ ಲಭ್ಯ. ಕಾಡಿನ ಮರಗಳಲ್ಲಿರುವ ಹಣ್ಣು ಮತ್ತು ಕೀಟಗಳು, ಕೆರೆಯಲ್ಲಿನ ಮೀನುಗಳು ಮತ್ತು ಜಲಸಸ್ಯಗಳು ಈ ಪಕ್ಷಿಗಳಿಗೆ ಆಹಾರ. ನಗರದ ಗಡಿಬಿಡಿ-ಕಲ್ಮಶ ವಾತಾವರಣದಿಂದ ದೂರದಲ್ಲಿದ್ದು ಸುರಕ್ಷತೆ ದೃಷ್ಟಿಯಿಂದ ಹಕ್ಕಿಗಳಿಗೆ ಅನುಕೂಲ ಪ್ರದೇಶವಾಗಿದೆ. ಪಕ್ಷಿಧಾಮದ ಸೂಕ್ತ ಸ್ಥಳಗಳಲ್ಲಿ ಅರಣ್ಯ ಇಲಾಖೆಯವರು ಹಲವು ಸ್ತರಗಳ ವೀಕ್ಷಣಾ ಗೋಪುರಗಳನ್ನು ಮಾಡಿದ್ದಾರೆ.

ಪಕ್ಷಿವೈವಿಧ್ಯ: ಇಲ್ಲಿ 2009ರಲ್ಲಿ ನಡೆದ ಪಕ್ಷಿಗಣತಿಯ ಪ್ರಕಾರ 271ಕ್ಕೂ ಹೆಚ್ಚು ಹಕ್ಕಿ ಪ್ರಭೇದಗಳನ್ನು ಗುರುತಿಸಿದ್ದಾರೆ. ಆಗಾಗ್ಗೆ ಇಲ್ಲಿಗೆ ಬರುವ ಪಕ್ಷಿತಜ್ಞರು ಹಲವಾರು ಹಕ್ಕಿಗಳನ್ನು ಗುರುತಿಸಿದ್ದಾರೆ. ಆದರೆ ಇಷ್ಟೊಂದು ಪ್ರಭೇದದ ಹಕ್ಕಿಗಳು ಇಲ್ಲಿ ಈಗ ಕಾಣಿಸದಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಗೂಡು ಕಟ್ಟಿ ಮರಿಮಾಡುವ ಕೆಲವು ಪ್ರಭೇದಗಳನ್ನು ಕಾಣಬಹುದು. ಕೆರೆಯ ಪ್ರವೇಶದ್ವಾರದಲ್ಲಿ ಇಲ್ಲಿ ಕಾಣಸಿಗುವ ಹಕ್ಕಿಗಳ ಚಿತ್ರ-ಮಾಹಿತಿಯ ಫಲಕಗಳನ್ನು ಹಾಕಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಸಂತಾನೋತ್ಪತ್ತಿ ಮಾಡುವ ಹಕ್ಕಿಗಳ ಇಂತಹ ತಾಣ ಕರ್ನಾಟಕದಲ್ಲಿ ಮತ್ತೆಲ್ಲೂ ಕಾಣಸಿಗದು.  ಪ್ರಮುಖವಾಗಿ ಕಾಣಸಿಗುವ ಹಕ್ಕಿಗಳೆಂದರೆ ನೀರುಕಾಗೆಗಳು, ಹಾವಕ್ಕಿ, ಬೆಳ್ಳಕ್ಕಿಗಳು, ಕೊಳದ ಬಕ, ಇರುಳು ಬಕ, ಕೆಂಬರಲುಗಳು, ಬಾಯ್ಕಳಕ ಕೊಕ್ಕರೆ, ಚಮಚದ ಕೊಕ್ಕು, ಬಣ್ಣದ ಕೊಕ್ಕರೆ, ಗುಳುಮುಳುಕ, ನಾಮದ ಕೋಳಿ, ಸಿಳ್ಳೆಬಾತು, ವರಟೆ, ನವಿಲು, ಹುಂಡು ಕೋಳಿ, ಜಂಬು ಕೋಳಿ, ಬೆಳವ, ಕಳ್ಳಿಪೀರ, ಮಿಂಚುಳ್ಳಿ ಮುಂತಾದವುಗಳು.

ಆಹಾರದ ನೀರಿಕ್ಷೆಯಲ್ಲಿರುವ ಬಿಳಿ ಕೆಂಬರಲು ಮರಿಗಳು
ಆಹಾರದ ನೀರಿಕ್ಷೆಯಲ್ಲಿರುವ ಬಿಳಿ ಕೆಂಬರಲು ಮರಿಗಳು

ಚಿತ್ರ: ಡಾ. ಎಸ್. ಶಿಶುಪಾಲ

ಪಕ್ಷಿ ಗೂಡುಗಳು: ಬಿಳಿ ಕೆಂಬರಲು, ನೀರುಕಾಗೆಗಳು, ಬೆಳ್ಳಕ್ಕಿಗಳು ಮತ್ತು ಇರುಳು ಬಕಗಳು ಮರಗಳ ಕೊಂಬೆಗಳ ಮೇಲೆ ಕಡ್ಡಿಗಳನ್ನಿಟ್ಟು ಅಟ್ಟಣಿಗೆಯಂತಹ ಗೂಡು ಕಟ್ಟುತ್ತವೆ. ಈ ರೀತಿ ವಿವಿಧ ಹಕ್ಕಿಗಳ ಗೂಡುಗಳ ತಾಣವನ್ನು ಹೆರೊನರಿ ಎನ್ನುವರು. ಗೂಡು ಕಟ್ಟುವ ಜಾಗಕ್ಕೆ ಪೈಪೋಟಿಯಂತು ಹೇಳತೀರದು. ಆಶ್ಚರ್ಯಕರವಾದ ವಿಷಯವೆಂದರೆ ಪ್ರತಿಯೊಂದು ಪ್ರಭೇದವು ಪ್ರತಿವರ್ಷ ತಾನು ಹಿಂದಿನ ವರ್ಷ ಗೂಡು ಕಟ್ಟಿದ್ದ ಮರಗಳನ್ನೇ ಆಯ್ದುಕೊಳ್ಳುತ್ತದೆ. ಗೂಡು ಮಾಡಲು ಜಾಗದ ಕೊರತೆಯಿಂದ ಹಕ್ಕಿಗಳು ಕೆಳಸ್ತರದ ಗಿಡಗಳಲ್ಲಿ ಗೂಡು ಮಾಡಿದರೆ ಭಾರಿ ಮಳೆಯಾದರೆ ನೀರು ಹೆಚ್ಚಾಗಿ ಗೂಡುಗಳು ನಾಶವಾಗುವುವು. ಅಕ್ಕ-ಪಕ್ಕದ ಕೃಷಿ ಭೂಮಿಯಿಂದ ಕೆರೆಗೆ ಹರಿಯುವ ಕೀಟನಾಶಕಯುಕ್ತ ನೀರು ಹಕ್ಕಿಗಳಿಗೆ ಹಾನಿಕಾರಕ.

ಪಕ್ಷಿ ಮರಿಗಳು: ಮೊದಲಿಗೆ ತಲೆ ಸರಿ ನಿಲ್ಲದ ಮರಿಗಳು ಅಜ್ಜ-ಅಜ್ಜಿಯರಂತೆ ಗಡಗಡ ತಲೆ ಅಲುಗಾಡಿಸುತ್ತಿರುತ್ತವೆ. ನಿಲ್ಲಲೂ ಆಗದೇ ಕೊಂಬೆಗಳ ಮೇಲೆ ನೃತ್ಯ ಮಾಡುವಂತಿರುತ್ತದೆ. ಮರಿಗಳಿಗೋ ವಿಪರೀತ ಹಸಿವು. ಆಹಾರಕ್ಕಾಗಿ ಮರಿಗಳು ಹೆತ್ತವರನ್ನು ಪೀಡಿಸುವುದು ಸಾಮಾನ್ಯ ದೃಶ್ಯ. ತಂದೆ-ತಾಯಿ ಆಹಾರವನ್ನು ಗಂಟಲಿನವರೆಗೆ ತುಂಬಿಕೊಂಡು ಬಂದು ಮರಿಗಳಿಗೆ ನೀಡುತ್ತವೆ. ಪೋಷಕರು ತಂದ ಆಹಾರಕ್ಕೋಸ್ಕರ ಮರಿಗಳಲ್ಲಿ ಸ್ಪರ್ಧೆಯನ್ನು ಕಾಣಬಹುದು. ಮರಿಗಳು ತಮ್ಮ ಕೊಕ್ಕನ್ನು ತಂದೆ/ತಾಯಿಯರ ಗಂಟಲಿನವರೆಗೆ ತೂರಿಸಿ ಆಹಾರ ಸೆಳೆಯುವುದನ್ನು ನೋಡುವುದೇ ಚೆಂದ. ಹಲವಾರು ಬಾರಿ ತನ್ನ ಸಹೋದರ-ಸಹೋದರಿಯರ ಬಾಯಿಂದ ಆಹಾರ ಕಸಿದುಕೊಳ್ಳಲೂ ಪ್ರಯತ್ನಪಡುತ್ತವೆ. ಇಲ್ಲಿ ಹುಟ್ಟಿ ಬೆಳೆದ ಮರಿಗಳು ಮುಂದೆ ಬೆಳೆದು ಇಲ್ಲಿಯೇ ತಮ್ಮ ಸಂತಾನಭಿವೃದ್ಧಿಗೆ ವಲಸೆ ಬರುತ್ತವೆ.

ತಾಯಿಯ ಗಂಟಲಿನಿಂದ ಆಹಾರವನ್ನು ಸೆಳೆಯುತ್ತಿರುವ ಕೆಂಬರಲು ಮರಿ
ತಾಯಿಯ ಗಂಟಲಿನಿಂದ ಆಹಾರವನ್ನು ಸೆಳೆಯುತ್ತಿರುವ ಕೆಂಬರಲು ಮರಿ

ಚಿತ್ರ: ಡಾ. ಎಸ್. ಶಿಶುಪಾಲ

ಕಳೆದ ಐದು ವರ್ಷಗಳಿಂದ ಸತತವಾಗಿ ಭೇಟಿ ನೀಡುತ್ತಿದ್ದ ನನಗೆ ಇದೊಂದು ತೀರ್ಥಯಾತ್ರೆಯಂತಹ ಸ್ಥಳ. ಹಲವಾರು ಹಕ್ಕಿಗಳ ಜೀವನಕ್ರಮ ಅರಿಯಲು ಮತ್ತು ಪ್ರಕೃತಿಯ ಮಡಿಲಲ್ಲಿ ಲೀನವಾಗಲು ಸೂಕ್ತ ಸ್ಥಳ. ಕಳೆದ ವಾರ ಭೇಟಿ ನೀಡಿದಾಗ ದಿಗ್ಭ್ರಮೆಗೊಳ್ಳುವ ಸರದಿ ನನ್ನದು. ಕಳೆದ ನಾಲ್ಕು ವರ್ಷಗಳಲ್ಲಿ ಈ ತಿಂಗಳು ಸಿಗುತ್ತಿದ್ದ ಹಕ್ಕಿಗಳಲ್ಲಿ ಅಂದಾಜು ಶೇ.50ರಷ್ಟು ಮಾತ್ರ ಕಾಣಸಿಕ್ಕವು. ಕರ್ನಾಟಕದಾದ್ಯಂತ ಮುಂಗಾರು ಮಳೆ ಕೊರತೆ, ಜಲಕ್ಷಾಮದ ಸೂಚನೆಗಳು, ಬರಗಾಲದ ದಟ್ಟ ಛಾಯೆಯ ನಡುವೆ ಜನಸಾಮಾನ್ಯರ ಗತಿಯೇನು? ಎಂಬ ಕೂಗು ಸಹಜ. ಆದರೆ ಈ ವರ್ಷದ ಹವಾಮಾನ ಮುನ್ಸೂಚನೆ ಎಲ್ಲೋ ಇದ್ದ ಈ ಹಕ್ಕಿಗಳಿಗೆ ತಲುಪಿಸಿದವರ‍್ಯಾರು? ನೂರಾರು ಸಂಖ್ಯೆಯ ಗೂಡುಗಳಲ್ಲಿರಬೇಕಿದ್ದ ಚಮಚದ ಕೊಕ್ಕು ಮತ್ತು ಇರುಳು ಬಕ ಹಕ್ಕಿಗಳ ಸಂಸಾರಗಳೇ ಕಣ್ಣಿಗೆ ಬೀಳಲಿಲ್ಲ. ಜಾಗತಿಕ ತಾಪಮಾನದ ಪ್ರಾಯೋಗಿಕ ಪರಿಣಾಮ ಕಣ್ಣಿಗೆ ಬಿತ್ತು. ಜಾಗತಿಕ ತಾಪಮಾನ ಹೆಚ್ಚಳದಿಂದ ಅಕಾಲ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಋತುಗಳ ಏರುಪೇರು ಮುಂತಾದವುಗಳು ಎಲ್ಲಾ ಜೀವಿಗಳಿಗೂ ಕಂಟಕ. ಹಕ್ಕಿಗಳೂ ಇದಕ್ಕೆ ಹೊರತಲ್ಲ. ಅವುಗಳ ಸಂತಾನೋತ್ಪತ್ತಿ ಕ್ಷಮತೆ ಮತ್ತು ಸಮಯದಲ್ಲಿ ವ್ಯತ್ಯಾಸವಾಗುತ್ತಿದೆ. ವಲಸೆ ಕ್ರಮ ಬದಲಾಗುತ್ತಿದೆ. ಇದೆಲ್ಲದರ ಫಲಿತಾಂಶ ಈ ವರ್ಷ ಗುಡವಿ ಪಕ್ಷಿಧಾಮದಲ್ಲಿ ಕಂಡುಬಂತು.

ಕೆರೆಯ ನಡುಗಡ್ಡೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಪೋಷಕ ಹಕ್ಕಿಗಳು
ಕೆರೆಯ ನಡುಗಡ್ಡೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಪೋಷಕ ಹಕ್ಕಿಗಳು

ಚಿತ್ರ: ಡಾ. ಎಸ್. ಶಿಶುಪಾಲ

ವರ್ಷ-ವರ್ಷವೂ ವ್ಯವಸ್ಥಿತವಾಗಿ ಇಲ್ಲಿ ಪಕ್ಷಿಗಣತಿ ನಡೆಯಬೇಕು. ಸುತ್ತಲಿನ ರೈತರ ಮನವೊಲಿಸಿ ಕೃಷಿಭೂಮಿಯನ್ನು ಅರಣ್ಯ ಇಲಾಖೆ ಸುಪರ್ದಿಗೆ ತೆಗೆದುಕೊಂಡು ಪಕ್ಷಿ-ಕೇಂದ್ರಿತ ಚಟುವಟಿಕೆ ನಡೆಯಲು ಅನುವು ಮಾಡಿಕೊಡಬೇಕು. ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು. ಈ ಪ್ರದೇಶ ಶಾಲಾ-ಕಾಲೇಜು ಮಕ್ಕಳ ಪರಿಸರ ಪಾಠಶಾಲೆಯಾಗಬೇಕು. ಪಕ್ಷಿಧಾಮ ತನ್ನ ಗತವೈಭವಕ್ಕೆ ಮರುಕಳಿಸಬೇಕೆಂಬ ಆಶಯದೊಂದಿಗೆ ಗುಡವಿ ಪಕ್ಷಿಗಳ ಅದ್ಭುತ ಲೋಕಕ್ಕೆ ಸ್ವಾಗತ.

ಲೇಖಕರು: ಪಕ್ಷಿವೀಕ್ಷಕರು

ಒಂದೇ ಮರದ ಅನೇಕ ಗೂಡುಗಳ ನಡುವೆ ಬಾಯ್ಕಳಕ ಹಕ್ಕಿ ಮರಿಗಳು
ಒಂದೇ ಮರದ ಅನೇಕ ಗೂಡುಗಳ ನಡುವೆ ಬಾಯ್ಕಳಕ ಹಕ್ಕಿ ಮರಿಗಳು

ಚಿತ್ರ: ಡಾ. ಎಸ್. ಶಿಶುಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT