ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಕಗಳ ಸಂಖ್ಯೆ 150ಕ್ಕಿಂತ ಕಡಿಮೆ

Last Updated 22 ಜನವರಿ 2023, 17:59 IST
ಅಕ್ಷರ ಗಾತ್ರ

ದೇಶದಲ್ಲಿ ಹೆಬ್ಬಕಗಳ (ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌) ಸಂಖ್ಯೆ 150ಕ್ಕಿಂತ ಕಡಿಮೆ ಮತ್ತು ಕರಿ ನವಿಲುಗಳ ಸಂಖ್ಯೆ 700ಕ್ಕಿಂತ ಕಡಿಮೆ ಇದೆ. ಸರ್ಕಾರವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಎರಡೂ ಪ್ರಭೇದದ ಪಕ್ಷಿಗಳು ನಾಮಾವಶೇಷವಾಗಲಿವೆ ಎಂದು ‘ದಿ ಕಾರ್ಬೆಟ್‌ ಫೌಂಡೇಷನ್’ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ. ಈ ಪಕ್ಷಿಗಳ ಅವಸಾನಕ್ಕೆ ಕಾರಣವಾಗುತ್ತಿರುವ ಅಂಶಗಳು ಮತ್ತು ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಪ್ರತಿಷ್ಠಾನವು ತನ್ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ

ಕಾರಣಗಳು

ಗುಜರಾತಿನ ಕಛ್ ಮತ್ತು ರಾಜಸ್ಥಾನದ ಕೆಲವು ಪ್ರದೇಶಗಳನ್ನು ಹೆಬ್ಬಕ ಮತ್ತು ಕರಿ ನವಿಲುಗಳ ಆವಾಸ ಸ್ಥಾನ ಎಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಪವನ ವಿದ್ಯುತ್ ಮತ್ತು ಸೌರವಿದ್ಯುತ್ ಘಟಕಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಇಂತಹ ಘಟಕಗಳಿಂದ ವಿದ್ಯುತ್ ಸಾಗಣೆಗೆ ಬಳಸುವ ಹೈಟೆನ್ಷನ್ ವಿದ್ಯುತ್ ಲೇನ್‌ಗಳು ಈ ಪಕ್ಷಿಗಳಿಗೆ ಮಾರಕವಾಗಿವೆ. ಇಂತಹ ಲೇನ್‌ಗಳನ್ನು ನೆಲದಡಿಯಲ್ಲಿ ಹಾಕಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನವು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ಈ ಪಕ್ಷಿಗಳಿಗೆ ಮಾರಕವಾಗಿರುವ ಇತರ ಕಾರಣಗಳನ್ನೂ ವರದಿಯಲ್ಲಿ ಪಟ್ಟಿ ಮಾಡಲಾಗಿದೆ.

lಆವಾಸ ಸ್ಥಾನದ ಸ್ವರೂಪವನ್ನು ಬದಲಿಸುವಂತಹ ಅಭಿವೃದ್ಧಿ ಚಟುವಟಿಕೆಗಳು ಮತ್ತು ಹುಲ್ಲುಗಾವಲಿನಲ್ಲಿ ಜಾನುವಾರುಗಳನ್ನು ಅತಿಯಾಗಿ ಮೇಯಿಸುವುದು. ಇದರಿಂದ ಈ ಪಕ್ಷಿಗಳು ಗೂಡುಕಟ್ಟಲು, ಮೊಟ್ಟೆ ಇಡಲು ಮತ್ತು ಮರಿಗಳನ್ನು ಮಾಡಲು ಮರೆ ಇಲ್ಲದಂತಾಗುತ್ತಿದೆ

lಈ ಪ್ರದೇಶಗಳಲ್ಲಿ ನಾಯಿಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಪಕ್ಷಿಗಳನ್ನು ಈ ನಾಯಿಗಳು ಬೇಟೆಯಾಡುತ್ತವೆ, ಮೊಟ್ಟೆಗಳನ್ನು ತಿನ್ನುತ್ತವೆ. ಜನರೂ ಈ ಪಕ್ಷಿಗಳನ್ನು ಬೇಟೆಯಾಡಿದ ನಿದರ್ಶನಗಳಿವೆ

lಆವಾಸ ಸ್ಥಾನದಲ್ಲಿ, ಕೃಷಿಯಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆ ತೀವ್ರಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ಹೆಬ್ಬಕ ಮತ್ತು ಕರಿನವಿಲುಗಳ ಆಹಾರಗಳಾದ ಕೀಟಗಳು, ಹುಳಗಳು, ಮಿಡತೆಗಳು, ಹಲ್ಲಿಗಳು, ಇಲಿಗಳ ಸಂಖ್ಯೆ ಕಡಿಮೆಯಾಗಿದೆ. ಆಹಾರದ ಕೊರತೆ ಎದುರಾಗಿರುವ ಕಾರಣ ಈ ಪಕ್ಷಿಗಳು ನಾಶವಾಗುತ್ತಿವೆ

ಪರಿಹಾರೋಪಾಯಗಳು

lಎಲ್ಲಾ ಹೈಟೆನ್ಷನ್ ಲೇನ್‌ಗಳನ್ನು ಕ್ಷಿಪ್ರವಾಗಿ ನೆಲದಡಿಗೆ ಹಾಕುವುದು ಸಾಧ್ಯವಿಲ್ಲ. ಹಾಗಾಗಿ ಈ ಲೇನ್‌ಗಳತ್ತ ಹಕ್ಕಿಗಳು ಬರದಂತೆ ‘ಬರ್ಡ್‌ ಫ್ಲೈಟ್‌ ಡೈವರ್ಟರ್‌’ಗಳನ್ನು ಹಾಕಬೇಕು. ಹೊಳೆಯುವ ಸಾಮರ್ಥ್ಯವಿರುವ ಈ ಸಾಧನಗಳು ಪಕ್ಷಿಗಳು ತಮ್ಮತ್ತ ಹಾರಿಬರುವುದನ್ನು ತಡೆಯುತ್ತವೆ

lಈ ಪಕ್ಷಿಗಳ ಆವಾಸ ಸ್ಥಾನದಲ್ಲಿರುವ ಸ್ಥಳೀಯರಲ್ಲಿ ಪಕ್ಷಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು. ಕೃಷಿ, ಹೈನುಗಾರಿಕೆಯಲ್ಲಿ ಈ ಪಕ್ಷಿಗಳಿಗೆ ಇರುವ ಅಪಾಯವನ್ನು ಹೋಗಲಾಡಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು

l→ಕೃತಕವಾಗಿ ಈ ಪಕ್ಷಿಗಳ ಸಂತಾನೋತ್ಪತಿ ನಡೆಸಲು ಕ್ರಮ ತೆಗೆದುಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT