ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಾರುವ ಇಲಿ’ ಮೈನಾ..!

Last Updated 19 ಜೂನ್ 2018, 17:14 IST
ಅಕ್ಷರ ಗಾತ್ರ

ಹೆಸರು ಮೈನಾ ಅಲಿಯಾಸ್ ಗೊರವಂಕ. ಸ್ವಚ್ಛಂದವಾಗಿ ಹಾರಾಡುತ್ತಿರುವ ಇದರ ಮೇಲೆ ಗುರುತರ ಆರೋಪಗಳಿವೆ. ಪ್ರಮುಖವಾಗಿ ಅಡವಿ ಉಲಿಯಕ್ಕಿಯ ಮೊಟ್ಟೆ ಒಡೆದು, ಗೂಡು ನಾಶಗೊಳಿಸಿದ್ದು, ಪಟ್ಟಣದ ಮನೆಗಳಿಗೆ ಹಾಕಿದ ಪೈಪ್‌ಗಳನ್ನು ತನ್ನ ನೆಲೆಯಾಗಿ ಮಾಡಿಕೊಂಡದ್ದು ಮತ್ತು ತನ್ನ ಸುತ್ತಲಿನ ಸಣ್ಣ ಜೀವಿಗಳ ಮೇಲೂ ಆಕ್ರಮಣ ಮಾಡಿದ್ದು. ಈ ರೀತಿಯ ಉಪಟಳದಿಂದ ಇದನ್ನು ಕೆಲ ದೇಶಗಳು ‘ಹಾರುವ ಇಲಿ’ ಎಂದು ಘೋಷಿಸಿವೆ.

ಇಷ್ಟೇ ಅಲ್ಲ 2000 ಇಸವಿಯಲ್ಲಿ ಅಂತರರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟ ಘೋಷಿಸಿದ ಜಗತ್ತಿನ 100 ಅತೀ ಆಕ್ರಮಣಕಾರಿ ಜೀವಿಗಳಲ್ಲಿ ಇದೂ ಒಂದಾಗಿತ್ತು. ಆಸ್ಟ್ರೇಲಿಯಾ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಈ ಪಕ್ಷಿಯನ್ನು ಅತ್ಯಂತ ಉಪದ್ರವಿ ಜೀವಿ ಎಂದೇ ಘೋಷಿಸಿದೆ.

ಹಳ್ಳಿಗಿಂತ ನಗರಕ್ಕೆ ಮನುಷ್ಯನಂತೆ ಮಾರುಹೋದ ಪಕ್ಷಿಯಿದು. ನಮ್ಮ ನೆರೆಮನೆಯ ರಂಧ್ರವೊಂದರಲ್ಲಿ ಈ ಪಕ್ಷಿಗಳು ಗೂಡು ಮಾಡಿಕೊಂಡಿದ್ದು ಮತ್ತಷ್ಟು ಪುಷ್ಟಿ ನೀಡಿತು. ಆದರೆ ಇದರ ಉಪಟಳ ಕಣ್ಣಿಗೆ ಬಿದ್ದಿಲ್ಲ. ಒಂದು ಬಾರಿ ಜಾಗ ಪರಿಚಯವಾದರೆ ಸಾಕು ಶೀಘ್ರವಾಗಿ ಸಂತತಿ ಬೆಳೆಸಿಕೊಳ್ಳುವ ಚಾಲಾಕಿ ದಾಳಿಕೋರ ಪಕ್ಷಿ ಎಂದೇ ಜೀವ ವಿಜ್ಞಾನಿಗಳು ಗುರುತಿಸಿದ್ದಾರೆ. ಈಗ ಈ ಪಕ್ಷಿ ಭಾರತದಲ್ಲಿ ಕಾಗೆ ಸ್ಥಾನವನ್ನು ಹಿಂದಿಕ್ಕಲು ಸಜ್ಜಾಗಿದೆ ಅಂತೆ. ಕಾರಣ ಇದಕ್ಕೆ ಊಟ, ಜಾಗ, ವಾತಾವರಣ ವಿಷಯದಲ್ಲಿ ಇಂಥದೆ ಇರಬೇಕು ಎಂಬ ನಿಯಮ ಇಲ್ಲ.

ಗೊರವಂಕ (Common Myna) ಏಷ್ಯಾ ಖಂಡದ ಹಕ್ಕಿಯಾದರೂ ಈಗ ಜಗತ್ತಿನ ಬಹುತೇಕ ಕಡೆ ಕಂಡುಬರುತ್ತಿದೆ. ಉಭಯವಾಸಿ, ಸಸ್ತನಿ, ಕಾಳು, ಧಾನ್ಯ, ಕೀಟ, ಮನುಷ್ಯರು ತಿಂದು ಬಿಸಾಕಿದ ಆಹಾರ ಹೀಗೆ ಏನಾದರೂ ತಿಂದು ಅರಗಿಸಿಕೊಳ್ಳುವ ಸಾಮರ್ಥ್ಯ ಇವುಗಳ ಸಂತತಿ ಹೆಚ್ಚಲು ಕಾರಣ ಎನ್ನಲಾಗಿದೆ. ಗಿಳಿಗಳಂತೆ ಇವುಗಳಿಗೂ ಧ್ವನಿಗಳನ್ನು ಅನುಕರಿಸುವ ಸಾಮರ್ಥ್ಯವಿದೆ.

ಬದಲಾದ ಪರಿಸರದಲ್ಲಿ ತನ್ನ ಜೀವನಶೈಲಿಯನ್ನೇ ಮಾರ್ಪಾಟು ಮಾಡಿಕೊಂಡಿದೆ. ಕಲಿಕೆಯಲ್ಲಿ ಭಾರಿ ಚುರುಕು ಎನ್ನಲಾಗಿರುವ ಇವುಗಳು ಗೂಡಿಗಾಗಿ ಹಾಳೆ, ಪ್ಲಾಸ್ಟಿಕ್‌, ತಂತಿಯಂತಹ ವಸ್ತುಗಳನ್ನು ಬಳಸುತ್ತವೆ. ಗೂಡು ಕಟ್ಟಲು ಆಗದಿದ್ದರೆ ಇತರ ಹಕ್ಕಿಗಳ ಗೂಡನ್ನು ತನ್ನ ನೆಲೆಯಾಗಿ ಮಾಡಿಕೊಳ್ಳುತ್ತದೆ. ಮೊದಲಿಗೆ ಇತರ ಹಕ್ಕಿಗಳ ಮರಿಯನ್ನು ಗೂಡಿನಿಂದ ಆಚೆ ಎಸೆದು ತನ್ನ ಆಕ್ರಮಣ ನಡೆ ಪ್ರದರ್ಶಿಸುತ್ತದೆ ಎನ್ನುತ್ತಾರೆ ಜೀವ ವಿಜ್ಞಾನಿಗಳು.

18ನೇ ಶತಮಾನದಲ್ಲಿ ಆಸ್ಟ್ರೇಲಿಯಾದಲ್ಲಿ ಕೀಟಗಳ ಹಾವಳಿ ಹೆಚ್ಚಾಗಿತ್ತು. ಅದರ ನಿಯಂತ್ರಣಕ್ಕೆ ಈ ಪಕ್ಷಿಗಳನ್ನು ತರಿಸಿಕೊಳ್ಳಲಾಯಿತು. ಆದರೆ ಪರಿಣಾಮ ಬೇರೆಯಾಗಿತ್ತು. ಕೆಲ ವರ್ಷಗಳಲ್ಲಿ ಈ ಪಕ್ಷಿ ಸರ್ಕಾರಕ್ಕೆ ತಲೆನೋವಾಯಿತು. ಇಡೀ ದೇಶವೇ ಪಕ್ಷಿಯನ್ನು ಉಪದ್ರವಿ ಎಂದು ಒಂದೇ ಸ್ವರದಲ್ಲಿ ಕೂಗಿ ಹೇಳಿತು. ಇಂದಿಗೂ ಹಲವು ದೇಶಗಳಲ್ಲಿ ಜನರಿಂದ ಹಾಗೂ ಸರ್ಕಾರಗಳಿಂದ ಶಾಪ ಹಾಕಿಸಿಕೊಳ್ಳುತ್ತಿರುವ ಪಕ್ಷಿಯಿದು. ಆದರೆ ಪಕ್ಷಿ ಪ್ರೇಮಿಗಳು ಮಾತ್ರ ‘ನಮ್ಮ ದೇಶದಲ್ಲಿ ಈ ಪಕ್ಷಿಗಳ ಉಪಟಳ ಕಡಿಮೆ. ಎಲ್ಲ ಪಕ್ಷಿ, ಮನುಷ್ಯರಂತೆ ಜೀವಿಸುವ ಹಕ್ಕು ಇದಕ್ಕೂ ಇದೆ. ಇದರ ನಡವಳಿಕೆ ಬಗ್ಗೆ ಅಧ್ಯಯನವಾಗಬೇಕು. ಹಸಿರು ಹೆಚ್ಚೆಚ್ಚು ಬೆಳೆಯಬೇಕು. ಆಗ ಜೀವ ವೈವಿಧ್ಯ ಹೆಚ್ಚಿದಷ್ಟು ನಡವಳಿಕೆಯಲ್ಲಿ ಬದಲಾವಣೆ ಆಗಬಹುದು’ ಎನ್ನುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT