ಗುರುವಾರ , ನವೆಂಬರ್ 14, 2019
18 °C

ಹೆಗ್ಗಣ ತದ್ರೂಪಿ ಮೋಲ್ ಕ್ರಿಕೆಟ್‌ ಕೀಟ

Published:
Updated:

ಅಪ್ಪ..ಅಪ್ಪಾ.... ನೋಡಿಲ್ಲಿ.. ಚಿಕ್ಕ ಇಲಿ ಮರಿಯ ತರಹದ ಹುಳ! ಬೇಗ ಕ್ಯಾಮೆರಾ ಎತ್ಕೊಂಡ್ ಬಾ’ ಅಂತ ಮಗ ಫರ್ಹಾನ್ ತನ್ನ ಕೊಠಡಿಯಿಂದ ಚೀರಿಕೊಂಡ. ತಕ್ಷಣ ಅಂದುಕೊಂಡೆ ಅದು ಮೋಲ್ ಕ್ರಿಕೆಟ್(Mole cricket) ಇರಬಹುದೆಂದು. ಊಹೆ ಹುಸಿಯಾಗಲಿಲ್ಲ. 3 ಸೆಂಟಿಮೀಟರ್ ಉದ್ದದ ಈ ಕೀಟ ಪೆಟ್ಟು ತಿಂದ ಇಲಿ ಮರಿಯ ರೀತಿ ಮೆಲ್ಲನೆ ಚಲಿಸುತಿತ್ತು. ಇದಕ್ಕೆ ಮೋಲ್ ಕ್ರಿಕೆಟ್ ಎಂದು ಹೆಸರಿಡಲು ಕಾರಣ, ಈ ಕೀಟದ ಮುಂಗಾಲುಗಳಲ್ಲಿ ಗರಗಸದಂಥ ಹಲ್ಲುಗಳಿದ್ದು ನೆಲವನ್ನು ಅಗೆದು ಆಳಕ್ಕೆ ಮನೆ ನಿರ್ಮಿಸಿಕೊಳ್ಳುತ್ತದೆ. ಮೋಲ್ ಎಂದರೆ, ಆಂಗ್ಲಭಾಷೆಯಲ್ಲಿ ಹೆಗ್ಗಣ(Mole rat). ಹೆಗ್ಗಣದ ಕಾಲುಗಳನ್ನೇ ತದ್ವತ್ ಈ ಕೀಟದ ಮುಂಗಾಲುಗಳೂ ಹೋಲುತ್ತವೆ. ಹೆಗ್ಗಣದಂತೆಯೇ ನೆಲ ಬಗೆದು ತೂಬುಗಳನ್ನು ಮಾಡುತ್ತದೆ. ಈ ಕೀಟವನ್ನು ಮುಟ್ಟಿದರೇ ಮುಲಮುಲ ಮಕಮಲ್ಲಿನಂತೆ ಅನುಭವವಾಗುತ್ತದೆ. ನಮ್ಮ ಅಜ್ಜಿ-ಅಜ್ಜಂದಿರು, ಈ ಕೀಟ ನೋಡಿದಾಗಲೆಲ್ಲ ‘ರಾತ್ರಿ ಮಲಗಿಕೊಂಡಾಗ ಇದು ಕಿವಿಯೊಳಗೆ ಹೊಕ್ಕಿಕೊಳ್ಳುತ್ತೆ’ ಎಂದೆಲ್ಲಾ ಎಚ್ಚರಿಕೆ ನೀಡುತ್ತಿದ್ದರು. ಬಲಿಷ್ಠವಾದ ಈ ಮುಂಗಾಲುಗಳ ಮಾರ್ಪಟಿಗೆ ಈ ಕಾಲುಗಳನ್ನು ಕೀಟವಿಜ್ಞಾನದಲ್ಲಿ ಫೊಸೋರಿಯಲ್ (Fossorial type for Digging) ರೀತಿಯ ಕಾಲುಗಳೆಂದು ಕರೆಯುತ್ತಾರೆ.

ಈ ಕೀಟಗಳು ವಿಶಿಷ್ಟ ಬಗೆಯ ತೂಬುಗಳನ್ನು ನಿರ್ಮಾಣ ಮಾಡಿ ಅದರೊಳಗೆ ಕೂತು ತನ್ನ ಮುಂಭಾಗದ ರೆಕ್ಕೆಗಳನ್ನು ಉಜ್ಜುತ್ತಾ ಅವುಗಳ ಕಂಪನದಿಂದ ವಿಶೇಷ ಮಧುರ ಗೀತೆಯನ್ನು ಹೊರಸೂಸುತ್ತದೆ. ಈ ಹಾಡು ಕೆಲವೊಮ್ಮೆ ಹಾಡುಗಾರರ ಕಂಠವನ್ನೇ ಹೋಲುತ್ತದೆಂದು ಕೆಲವು ವರದಿಗಳು ದೃಢಪಡಿಸುತ್ತವೆ. ಹೆಣ್ಣಿನ ಜೊತೆ ಸಮಾಗಮಕ್ಕೆ ಮತ್ತು ಮೊಟ್ಟೆಯಿಡಲು ಸೂಕ್ತ ಸ್ಥಳ ತಿಳಿಸಲು ಗಂಡು ಕತ್ತಲಾಗುತ್ತಿದ್ದಂತೆ ಈ ಸಂಗೀತ ಕಛೇರಿ ತೆರೆಯುತ್ತದೆ. ಶಬ್ದ ಸರಿಯಾಗಿ ಹೊರಹೊಮ್ಮಲು ತುತ್ತೂರಿಯ ಆಕಾರಗಳಲ್ಲಿ ತೂಬುಗಳನ್ನು ರಚಿಸುತ್ತದೆ.

ಸಾಮಾನ್ಯವಾಗಿ ಈ ಕೀಟಗಳು ನಿಶಾಚರಿಗಳು. ಗಂಡು ಕೀಟವು ಹೆಚ್ಚು ಹಾರುವುದಿಲ್ಲ. ಇಲ್ಲಿ ಹೆಣ್ಣಿನದೇ ಹೆಚ್ಚು ಹಾರಾಟ. ಹಾಗಾಗಿ ಗಂಡು ಕರೆದಾಗಲೆಲ್ಲಾ ಈಕೆ ಹೋಗಬೇಕಾಗುತ್ತದೆ. ಇವರ ಪ್ರೇಮ ಸಲ್ಲಾಪದ ನಂತರ ಹೆಣ್ಣು ಕೀಟವು, ಗಂಡು ತೋಡಿದ ಗುಂಡಿಯಲ್ಲಿ 25 ರಿಂದ 60 ಮೊಟ್ಟೆಗಳನ್ನಿಡುತ್ತದೆ. ಹೊರಹೊಮ್ಮಿದ ಮರಿಗಳು ಸಸ್ಯಗಳ ಬೇರನ್ನು ತಿನ್ನುತ್ತವೆ. ಹಾಗಾಗಿ ಉದ್ಯಾನವನಗಳಲ್ಲಿ, ಕ್ರೀಡಾಂಗಣಗಳಲ್ಲಿ ಹಾಸಿರುವ ಮೆತ್ತನೆಯ ಹುಲ್ಲು ಒಣಗಿದಂತಾಗುತ್ತದೆ. ಅಷ್ಟೇ ಏಕೆ ಭತ್ತದ ಬೆಳೆಯನ್ನು ಹಾನಿ ಮಾಡುವುದುಂಟು. ಈ ಕೀಟಗಳ ಸಂಖ್ಯೆ ಕಾಲಕ್ರಮೇಣ ಕ್ಷೀಣಿಸತೊಡಗಿದ್ದು ಅಳಿವಿನಂಚಿನಲ್ಲಿದೆ ಎಂಬುದು ಕೀಟಶಾಸ್ತ್ರಜ್ಞರಲ್ಲಿ ಆತಂಕ ಮೂಡಿಸಿದೆ.

ಹಾಗಾಗಿ ಈ ಕೀಟವನ್ನು ಸಂರಕ್ಷಿಸುವ ಕಾರ್ಯವೂ ಕೆಲವೆಡೆ ನಡೆಯುತ್ತಿದೆ. ಇಷ್ಟಾದರೂ ವಿಯೆಟ್ನಾಂ, ಥಾಯ್ಲೆಂಡ್ ದೇಶಗಳಲ್ಲಿ ಈ ಕೀಟದಿಂದ ತಯಾರಾದ ವಿಶೇಷ ಬಗೆಯ ತಿನಿಸುಗಳನ್ನೂ ಚಪ್ಪರಿಸುತ್ತಾರೆ. ಮಿಡತೆ, ಚಿಮ್ಮುಂಡೆಗಳು ಸೇರಿದ ವರ್ಗ ಆರ್ಥೊಪ್ಟೆರ(Orthoptera) ಗುಂಪಿನಲ್ಲೇ ಈ ಕೀಟಗಳು ಗ್ರಿಲ್ಲೊಟಾಲ್ಪಿಡೆ (Gryllotalpidae) ಎಂಬ ಕುಟುಂಬದಲ್ಲಿ ವರ್ಗೀಕರಿಸಿದ್ದಾರೆ.

ಚಿತ್ರಗಳು:ಲೇಖಕರವು

ಪ್ರತಿಕ್ರಿಯಿಸಿ (+)