ಶುಕ್ರವಾರ, ಮೇ 14, 2021
35 °C
ನೀರಿನ ಅಭಾವದಿಂದ ಪಕ್ಷಿಗಳ ಸಾವು l ಪ್ರಾಣಿ–ಪಕ್ಷಿಗಳಿಗೆ ಮಾರಕವಾಗುತ್ತಿದೆ ಹೆಚ್ಚುತ್ತಿರುವ ಬಿಸಿಲು

ಬೇಸಿಗೆಯ ಬೇಗೆ– ನೀಗಬೇಕಿದೆ ನಗರದ ವನ್ಯಜೀವಿಗಳ ದಾಹ

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೇಸಿಗೆ ಬಂತೆಂದರೆ ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ. ಬಾಯಾರಿದೊಡನೆ ಜನರು ನೀರಿಗಾಗಿ ಹಾತೊರೆಯುತ್ತಾರೆ. ಎಲ್ಲೂ ನೀರು ಸಿಗದಿದ್ದರೆ ದುಡ್ಡುಕೊಟ್ಟು ಖರೀದಿಸಿಯಾದರೂ ದಾಹ ದೂರ ಮಾಡಿಕೊಳ್ಳುತ್ತಾರೆ. ಆದರೆ, ಮೂಕ ವನ್ಯಜೀವಿಗಳೇನು ಮಾಡಬೇಕು. ಜನರಿಗೆ ಸಿಗುವಷ್ಟು ಸುಲಭವಾಗಿ ವನ್ಯಜೀವಿಗಳಿಗೆ ಈ ಕಾಂಕ್ರೀಟ್ ಕಾಡಿನಲ್ಲಿ ನೀರು ಲಭಿಸುವುದಿಲ್ಲ. ನೀರಿನ ಅಭಾವದಿಂದ ಅವು ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ. 

ಉದ್ಯಾನನಗರಿ ವೈವಿಧ್ಯಮಯ ವನ್ಯಜೀವಿಗಳ ಆವಾಸ ಸ್ಥಾನವೂ ಹೌದು. ಈ ನಗರದಲ್ಲಿರುವ ಪರಿಸರ ವ್ಯವಸ್ಥೆ ಈಗಲೂ ಹಲವಾರು ಜೀವಿಗಳಿಗೆ ನೆಲೆ ಕಲ್ಪಿಸಿದೆ. ಚಳಿಗಾಲ ಹಾಗೂ ಮಳೆಗಾಲಕ್ಕೆ ಹೋಲಿಸಿದರೆ, ನಗರದಲ್ಲಿ ಬೇಸಿಗೆಯಲ್ಲೇ ವನ್ಯಜೀವಿಗಳು ಹೆಚ್ಚು ಅಪಾಯಕ್ಕೆ ಸಿಲುಕುತ್ತವೆ. ಈ ರೀತಿ ಸಂಕಷ್ಟ ಎದುರಿಸುವ ಜೀವಿಗಳಲ್ಲಿ ಪಕ್ಷಿಗಳೇ ಹೆಚ್ಚು.

ಬೇಸಿಗೆಯಲ್ಲಿ ಪಕ್ಷಿಗಳು ಬಹುಬೇಗನೆ ದಾಹದಿಂದ ಪರಿತಪಿಸುತ್ತವೆ. ಅವುಗಳ ಬಾಯಾರಿಕೆ ನೀಗುವಂತಹ ಶುದ್ಧ ನೀರು ಈ ನಗರದಲ್ಲಿ ಮರೀಚಿಕೆಯಾಗಿದೆ. ಇರುವ ಜಲಮೂಲಗಳೆಲ್ಲ ನಗರೀಕರಣದ ದವಡೆಗೆ ಸಿಲುಕಿ ಕಲುಷಿತಗೊಂಡು, ವಿಷಕಾರಿಯಾಗಿ ಪರಿಣಮಿಸಿವೆ. ಇಂತಹ ನೀರನ್ನು ಕುಡಿಯುವ ಪಕ್ಷಿಗಳು ವಿವಿಧ ಸಮಸ್ಯೆಯಿಂದ ಪ್ರಾಣ ಬಿಡುತ್ತಿವೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ನಗರದಲ್ಲಿರುವ ವನ್ಯಜೀವಿ ಸಂರಕ್ಷಕರು.

ಬೇಸಿಗೆಯ ತಾಪ ಹಾಗೂ ನೀರಿನ ಕೊರತೆಯಿಂದ ಪಕ್ಷಿಗಳ ಮಾರಣ ಹೋಮವೇ ನಡೆಯುತ್ತದೆ. ಆದರೆ, ಅದು ಬಹುತೇಕ ಜನರ ಕಣ್ಣಿಗೆ ಬೀಳುವುದಿಲ್ಲ. ಜನರೆಲ್ಲ ಕೈಜೋಡಿಸಿ ಮಾಡಲು ಸಾಧ್ಯವಿರುವ ಕೆಲ ಸಣ್ಣ ಪ್ರಯತ್ನಗಳಿಂದ ಪ್ರಾಣಿ ಹಾಗೂ ಪಕ್ಷಿ ಸಂಕುಲವನ್ನು ಸಂರಕ್ಷಿಸಬಹುದು ಎಂಬುದು ವನ್ಯಜೀವಿ ಸಂರಕ್ಷಕರ ವಾದ.

‘ಬೇಸಿಗೆ ಅವಧಿಯಲ್ಲಿ ಹಾನಿಗೆ ಒಳಗಾಗುವ ವನ್ಯಜೀವಿಗಳ ಕುರಿತು ಬಿಬಿಎಂಪಿ ವನ್ಯಜೀವಿ ಸಹಾಯವಾಣಿಗೆ ಪ್ರತಿನಿತ್ಯ ಹಲವು ಕರೆಗಳು ಬರುತ್ತವೆ. ಈ ಪೈಕಿ 30ಕ್ಕೂ ಹೆಚ್ಚಿನ ಕರೆಗಳು ಪಕ್ಷಿಗಳಿಗೆ ಸಂಬಂಧಿಸಿದ ದೂರುಗಳಾಗಿರುತ್ತವೆ. ಇವುಗಳ ಸಂಖ್ಯೆ ಬೇಸಿಗೆಯಲ್ಲಿ ಇನ್ನೂ ಹೆಚ್ಚು. ಇವು ಜನರಿಂದ ಬೆಳಕಿಗೆ ಬರುವ ಪ್ರಕರಣಗಳಷ್ಟೇ. ಇವುಗಳನ್ನು ಹೊರತುಪಡಿಸಿ ಅಸಂಖ್ಯಾತ ಪಕ್ಷಿಗಳು ಪ್ರತಿನಿತ್ಯ ಸಾಯುತ್ತವೆ’ ಎಂದು ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ತಂಡದ ಮುಖ್ಯಸ್ಥ ಎ.ಪ್ರಸನ್ನ ಕುಮಾರ್ ‘ಪ್ರಜಾವಾಣಿ’ಗೆ ವಿವರಿಸಿದರು.

‘ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ಬೆಂಗಳೂರು ವಿಭಿನ್ನ ಪರಿಸರ ವ್ಯವಸ್ಥೆ ಹೊಂದಿರುವ ನಗರ. ಇಲ್ಲಿ ಕಾಡೂ ಇದೆ, ಹುಲ್ಲುಗಾವಲೂ ಇದೆ. ಒಟ್ಟಾರೆ ಈ ನಗರ ಕುರುಚಲು ಅರಣ್ಯ ಪ್ರದೇಶಕ್ಕೆ ಸೇರುತ್ತದೆ. ಆದರೆ, ಈಗಿನ ಅಭಿವೃದ್ಧಿ ಯೋಜನೆಗಳಿಂದ ಈ ಪ್ರಾಕೃತಿಕ ವ್ಯವಸ್ಥೆಯ ಸ್ವರೂಪ ರೂಪಾಂತರಗೊಳ್ಳುತ್ತಿದೆ. ಕಾಂಕ್ರೀಟೀಕರಣದಿಂದ ಜೀವಿಗಳ ಆವಾಸ ಸ್ಥಾನಗಳ ಮೇಲೆ ದಾಳಿ ನಡೆಯುತ್ತಿದೆ’ ಎಂದರು.

‘ಕೆಲವರು ವನ್ಯಜೀವಿಗಳ ಮೇಲೆ ಅತಿಯಾದ ವ್ಯಾಮೋಹದಿಂದ ಅವುಗಳಿಗೆ ಆಹಾರ ನೀಡುತ್ತಾರೆ. ನಗರ ನಿವಾಸಿಗಳು ನೀಡುವ ಆಹಾರವು ವನ್ಯಜೀವಿಗಳ ಮೂಲ ಆಹಾರ ಪದ್ಧತಿಗೆ ವಿರುದ್ಧವಾಗಿರುತ್ತದೆ. ಜೀವಿಗಳಿಗೆ ತಾತ್ಕಾಲಿಕವಾಗುವ ನಗರ ಆಹಾರ ‍ಪದ್ಧತಿಯು ಮತ್ತೆ ನೈಜ ಆಹಾರ‍ ಪದ್ಧತಿಗೆ ಹೊಂದಿಕೊಳ್ಳದಂತೆ ತಡೆಯುತ್ತದೆ. ಈ ಕಾರಣದಿಂದಲೇ ವನ್ಯ ಜೀವಿಗಳು ನಾಡಿನಲ್ಲೇ ಉಳಿಯುತ್ತವೆ.  ಹಾಗಾಗಿ, ಅವುಗಳಿಗೆ ವಿರುದ್ಧವಾದ ಆಹಾರಗಳನ್ನು ಜನ ನೀಡಬಾರದು’ ಎಂದೂ ಸಲಹೆ ನೀಡಿದರು.

‘ಬೇಸಿಗೆಯಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ನೀರು ಅತ್ಯವಶ್ಯಕ. ಪ್ರತಿದಿನ ಎರಡು ಅಥವಾ ಮೂರು ಬಾರಿ ನೀರು ಕುಡಿಯುತ್ತವೆ. ಹಾಗಾಗಿ, ನಗರ ವಾಸಿಗಳು ತಮ್ಮ ಮನೆಗಳ ಮೇಲೆ ಒಂದು ಬಟ್ಟಲು ಅಥವಾ ಇತರ ಪಾತ್ರೆಗಳಲ್ಲಿ ಪ್ರತಿ ದಿನ ನೀರು ಇಡುವುದರಿಂದ ಸಾವಿರಾರು ಪ್ರಾಣಿ ಪಕ್ಷಿಗಳ ಜೀವ ಉಳಿಯಲಿದೆ. ಪ್ರಾಣಿಗಳೂ ನಮ್ಮಂತೆ ಜೀವಿಸಲು ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಕಬ್ಬನ್‌ ಉದ್ಯಾನದಲ್ಲಿ ನೀರಿನ ಬಟ್ಟಲು ಅಳವಡಿಕೆ: ಬೇಸಿಗೆಯಲ್ಲಿ ವನ್ಯಜೀವಿಗಳ ದಾಹ ನೀಗಿಸುವ ಉದ್ದೇಶದಿಂದ ಕಬ್ಬನ್‌ ಪಾರ್ಕ್‌ ನಡಿಗೆದಾರರ ಸಂಘವು ಕಬ್ಬನ್ ಉದ್ಯಾನದ ಹಲವೆಡೆ 50 ನೀರಿನ ಬಟ್ಟಲುಗಳನ್ನು ಅಳವಡಿಸಿ, ನೀರು ತುಂಬಿಸುವ ಕೆಲಸ ಮಾಡಿದೆ.

‘ಬೇಸಿಗೆಯ ತಾಪಕ್ಕೆ ಜನರೇ ತತ್ತರಿಸುತ್ತಾರೆ. ಇನ್ನು ಜೀವಿಗಳ ಗತಿಯೇನು? ಹಾಗಾಗಿ, ಸಂಘದ ವತಿಯಿಂದ ನೀರಿನ ಬಟ್ಟಲುಗಳನ್ನು ಉದ್ಯಾನದಲ್ಲಿ ಇಟ್ಟಿದ್ದೇವೆ. ಇದರಿಂದ ಪಕ್ಷಿಗಳು ಬಾಯಾರಿಕೆಯಾದಾಗ ಬಂದು ನೀರು ಕುಡಿಯುತ್ತಿವೆ. ಈ ಕೆಲಸ ಎಲ್ಲ ಉದ್ಯಾನಗಳಲ್ಲಿ ಹಾಗೂ ಮನೆಗಳಲ್ಲಿ ಮಾಡಿದರೆ ಇನ್ನೂ ಅನುಕೂಲ’ ಎಂದು ಕಬ್ಬನ್‌ ಪಾರ್ಕ್‌ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ತಿಳಿಸಿದರು.

ಗುಬ್ಬಿ ಕ್ಷೀಣಿಸಲು ಪಾರಿವಾಳ ಕಾರಣ:ನಗರದಲ್ಲಿ ಗುಬ್ಬಚ್ಚಿ ಸಂಖ್ಯೆ ಕ್ಷೀಣಿಸಲು ಮೊಬೈಲ್‌ ವಿಕಿರಣಗಳು ಕಾರಣ ಎಂದು ಹೇಳಲಾಗುತ್ತಿದೆ. ಇದು, ವೈಜ್ಞಾನಿಕವಾಗಿ ಇನ್ನೂ ದೃಢವಾಗಿಲ್ಲ. ಪಕ್ಷಿಗಳೂ ಸಂಘರ್ಷಕ್ಕೆ ಒಳಪಡುತ್ತವೆ. ಗುಬ್ಬಿ ಸಂತತಿ ಕಡಿಮೆಯಾಗಲು ಪಾರಿವಾಳಗಳು ಪರೋಕ್ಷ ಕಾರಣ’ ಎನ್ನುತ್ತಾರೆ ಪ್ರಸನ್ನ ಕುಮಾರ್.

‘ಗುಬ್ಬಚ್ಚಿ ಹೆಚ್ಚಾಗಿ ಮನೆಗಳಲ್ಲಿ ಗೂಡು ನಿರ್ಮಿಸಿಕೊಳ್ಳುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಪಾರಿವಾಳಗಳನ್ನು ಸಾಕುವ ಪ್ರವೃತ್ತಿ ಬೆಂಗಳೂರಿನಲ್ಲಿ ಹೆಚ್ಚಾಗಿದೆ. ಪಾರಿವಾಳಗಳು ಬೇರೆ ಪಕ್ಷಿಗಳನ್ನು ತನ್ನೊಂದಿಗೆ ಸೇರಿಸಿಕೊಳ್ಳುವುದಿಲ್ಲ. ಹಾಗಾಗಿ, ಗುಬ್ಬಿಯ ಮೇಲೆ ಪಾರಿವಾಳದ ದಾಳಿ ಹೆಚ್ಚು. ಈ ಕಾರಣದಿಂದಲೂ ಗುಬ್ಬಿ ಸಂತತಿ ಕಡಿಮೆಯಾಗಿದೆ’ ಎಂದು ಮಾಹಿತಿ ನೀಡಿದರು.

ಅಭಿವೃದ್ಧಿಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಬೆಂಗಳೂರಿನಲ್ಲಿ ವನ್ಯಜೀವಿಗಳ ಆವಾಸ ಸ್ಥಳಗಳೆಲ್ಲ ಅತಿಕ್ರಮಣವಾಗುತ್ತಿವೆ. ಇದರಿಂದ ಸಹಜವಾಗಿ ಜೀವಿಗಳು ಹೊಸ ಸ್ಥಳವನ್ನಾಶ್ರಯಿಸಿ ಹೊರ ಬರುತ್ತವೆ. ಅಂತಹ ಜೀವಿಗಳ ಮೇಲೆ ದಾಳಿ ನಡೆಯುತ್ತಿವೆ. ಅವುಗಳ ಜೀವಿಸುವ ಹಕ್ಕನ್ನು ಮಾನವ ದರ್ಪದಿಂದ ಕಸಿಯುತ್ತಿದ್ದಾನೆ’ ಎಂದು ವನ್ಯಜೀವಿ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಾರೆ.

***

ಬೇಸಿಗೆಯಲ್ಲಿ ವನ್ಯಜೀವಿಗಳು ಅಪಾಯಕ್ಕೆ ಸಿಲುಕುತ್ತವೆ. ಈ ಬಗ್ಗೆ ನಾಗರಿಕರು ಸಹಾಯವಾಣಿಗಳಿಗೆ ಕೂಡಲೇ ಮಾಹಿತಿ ನೀಡುವುದರಿಂದ ವನ್ಯಜೀವಿಗಳನ್ನು ಸಂರಕ್ಷಿಸಬಹುದು.
–ಪ್ರಸನ್ನ ಕುಮಾರ್, ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ತಂಡದ ಮುಖ್ಯಸ್ಥ

ದೈನಂದಿನ ಬಳಕೆಗೆ ನೀರನ್ನು ಅತಿಯಾಗಿ ಪೋಲು ಮಾಡುತ್ತೇವೆ. ಅದರ ಒಂದು ಭಾಗವನ್ನು ಪ್ರಾಣಿ–ಪಕ್ಷಿಗಳಿಗೆ ನೀಡುವುದರಿಂದ ಜೀವದಾನ ಮಾಡಬಹುದು.
–ಅನಿಲ್, ಪಕ್ಷಿ ಪ್ರೇಮಿ

***

ನಿರ್ಜಲೀಕರಣದಿಂದ ವನ್ಯಜೀವಿಗಳ ಸಾವು

‘ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆಯಿಂದಲೇ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತವೆ. ದೊಡ್ಡ ಪಕ್ಷಿಗಳಿಗೆ ಹೋಲಿಸಿದರೆ, ಗುಬ್ಬಿಯಂತಹ ಪುಟ್ಟ ಪಕ್ಷಿಗಳು ಬಲು ಬೇಗನೆ ನಿರ್ಜಲೀಕರಣಕ್ಕೆ ಒಳಗಾಗುತ್ತವೆ. ಇವುಗಳ ಗಾತ್ರ ಸಣ್ಣದಿರುವುದಿಂದ ರೆಕ್ಕೆಯ ಬಡಿತ ದೊಡ್ಡ ಪಕ್ಷಿಗಳಿಗಿಂತ ಅಧಿಕವಾಗಿರುತ್ತವೆ. ಸೂಕ್ತ ಸಮಯಕ್ಕೆ ನೀರು ಸಿಗದಿದ್ದಾಗ ಅವು ಉಸಿರಾಟ ಸಮಸ್ಯೆಯಿಂದ ನರಳುತ್ತವೆ’ ಎಂದು ಪ್ರಾಣಿ ಅರಿವು ಸಂಶೋಧಕ ಯೋಗಾನಂದ್ ಚಂದ್ರಯ್ಯ ವಿವರಿಸಿದರು.

‘ಅಳಿಲುಗಳು ಮರದಲ್ಲಿ ವಾಸವಿರುತ್ತವೆ. ಬೇಸಿಗೆಯಲ್ಲಿ ಮರಗಳಲ್ಲಿ ಎಲೆ ಉದುರಿ, ಸೂರ್ಯನ ಶಾಖ ಅವುಗಳ ಮೇಲೆ ನೇರವಾಗಿ ಬೀಳುತ್ತದೆ. ಅಳಿಲುಗಳು ತಾಪಕ್ಕೆ ತಡೆದುಕೊಳ್ಳದ ಸೂಕ್ಷ್ಮಜೀವಿ ಹಾಗೂ ಹೆಚ್ಚು ಕ್ರಿಯಾಶೀಲ ಚಟುವಟಿಕೆಯ ಜೀವಿ. ಇವೂ ಸಹ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುತ್ತವೆ. ಇನ್ನೂ ಬಿಸಿಲಿನ ತಾಪಕ್ಕೆ ಕಾಡ್ಗಿಚ್ಚು ಸಂಭವಿಸಿ, ಅರಣ್ಯ ಪ್ರದೇಶ ಸುಡುತ್ತದೆ. ಈ ವೇಳೆಯೂ ಸಾವಿರಾರು ಜೀವಿಗಳು ಮೃತಪಡುವ ಸಾಧ್ಯತೆ ಹೆಚ್ಚು’ ಎಂದು ಮಾಹಿತಿ ನೀಡಿದರು.

‘ಬೀದಿ ನಾಯಿಗಳು, ದನಕರುಗಳು, ಮಂಗಗಳಿಗೂ ಬೇಸಿಗೆ ದಿನಗಳು ತೀವ್ರ ಸಂಕಷ್ಟದಾಯಕ. ಬೀಡಾಡಿ ದನಗಳು ಬೆಂಗಳೂರಿನಲ್ಲಿ ಹೆಚ್ಚಾಗಿ ರಸ್ತೆಗಳಲ್ಲಿ ತಿರುಗುತ್ತವೆ. ಹುಲ್ಲಿಗಿಂತ ತ್ಯಾಜ್ಯವನ್ನೇ ಹೆಚ್ಚಾಗಿ ತಿನ್ನುತ್ತವೆ. ಆದರೆ, ಕುಡಿಯಲು ನೀರೇ ಸಿಗುವುದಿಲ್ಲ. ಜನರು ಹಾಗೂ ಸಂಸ್ಥೆಗಳು ರಸ್ತೆಗಳಲ್ಲಿ ಬೃಹತ್ ಹೊಂಡಗಳಲ್ಲಿ ನೀರಿನ ವ್ಯವಸ್ಥೆ ಮಾಡಿದರೆ ಬೇಸಿಗೆಯಲ್ಲಿ ವನ್ಯಜೀವಿಗಳು ಪ್ರಾಣ ಉಳಿಸಿಕೊಳ್ಳಲು ನೆರವಾಗುತ್ತದೆ’ ಎಂದೂ ಸಲಹೆ ನೀಡಿದರು.

ವನ್ಯಜೀವಿ–ಮಾನವ ಸಂಘರ್ಷ ಬೇಸಿಗೆಯಲ್ಲಿ ಅಧಿಕ

‘ವನ್ಯಜೀವಿಗಳಿಗೆ ಬೇಸಿಗೆಯಲ್ಲಿ ಆಹಾರ ಹಾಗೂ ನೀರಿನ ಅಭಾವ ಹೆಚ್ಚು. ಹಾಗಾಗಿ, ಆಹಾರ ಹುಡುಕುತ್ತಾ ತಮ್ಮ ಆವಾಸ ಸ್ಥಾನಗಳಿಂದ ಹೊರಬರುತ್ತವೆ. ಈ ವೇಳೆ ಮಾನವ ಸಂಘರ್ಷಕ್ಕೆ ಒಳಗಾಗುತ್ತವೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವನ್ಯಜೀವಿ–ಮಾನವ ಸಂಘರ್ಷ ಕಾಣಬಹುದು.

‘ಬೇಸಿಗೆಯ ಬೇಗೆ ತಾಳಲಾರದೆ ಹಾವುಗಳು ಹೆಚ್ಚಾಗಿ ಹೊರಬರುತ್ತವೆ. ಅಷ್ಟೇ ವೇಗದಲ್ಲಿ ಸಂರಕ್ಷಕರಿಂದ ವನ್ಯಜೀವಿಗಳ ಸಮಸ್ಯೆಗೆ ಸ್ಪಂದನೆಯೂ ಸಿಗುತ್ತದೆ. ನಗರದಲ್ಲಿ ಯಾವುದೇ ವನ್ಯಜೀವಿಗಳ ಬಗ್ಗೆ ದೂರು ಬಂದ ಗರಿಷ್ಠ ಎರಡು ಗಂಟೆಯೊಳಗೆ ಅವುಗಳ ಸಂರಕ್ಷಣೆ ನಡೆಯುತ್ತಿದೆ. ಬೇರೆ ಜಿಲ್ಲೆಗಳಲ್ಲಿ ಇಷ್ಟು ವೇಗವಾದ ಕಾರ್ಯಾಚರಣೆ ಸಾಧ್ಯವಾಗಿಲ್ಲ’ ಎನ್ನುವುದು ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ತಂಡದ ಹೆಮ್ಮೆಯ ಮಾತು.

ವನ್ಯಜೀವಿ ಸಂರಕ್ಷಣೆಗೆ ಯಾರನ್ನು ಸಂಪರ್ಕಿಸಬಹುದು?

ಬಿಬಿಎಂಪಿ ಸಹಾಯವಾಣಿ:080–2221188

ಎ.ಪ್ರಸನ್ನ ಕುಮಾರ್ (ವನ್ಯಜೀವಿ ಸಂರಕ್ಷಕ):9902794711

ಅರಣ್ಯ ಇಲಾಖೆ ಸಹಾಯವಾಣಿ:1926

ಪೀಪಲ್ ಫಾರ್ ಅನಿಮಲ್ (ಪಿಎಫ್ಎ):9900025370

ಪ್ರಾಣಿಗಳ ಪುನರ್ವಸತಿ ಮತ್ತು ರಕ್ಷಣಾ ಕೇಂದ್ರ (ಎಆರ್‌ಆರ್‌ಸಿ):94489642222

ವನ್ಯಜೀವಿ–ಮಾನವ ಸಂಘರ್ಷ ಬೇಸಿಗೆಯಲ್ಲಿ ಅಧಿಕ

‘ವನ್ಯಜೀವಿಗಳಿಗೆ ಬೇಸಿಗೆಯಲ್ಲಿ ಆಹಾರ ಹಾಗೂ ನೀರಿನ ಅಭಾವ ಹೆಚ್ಚು. ಹಾಗಾಗಿ, ಆಹಾರ ಹುಡುಕುತ್ತಾ ತಮ್ಮ ಆವಾಸ ಸ್ಥಾನಗಳಿಂದ ಹೊರಬರುತ್ತವೆ. ಈ ವೇಳೆ ಮಾನವ ಸಂಘರ್ಷಕ್ಕೆ ಒಳಗಾಗುತ್ತವೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವನ್ಯಜೀವಿ–ಮಾನವ ಸಂಘರ್ಷ ಕಾಣಬಹುದು.

‘ಬೇಸಿಗೆಯ ಬೇಗೆ ತಾಳಲಾರದೆ ಹಾವುಗಳು ಹೆಚ್ಚಾಗಿ ಹೊರಬರುತ್ತವೆ. ಅಷ್ಟೇ ವೇಗದಲ್ಲಿ ಸಂರಕ್ಷಕರಿಂದ ವನ್ಯಜೀವಿಗಳ ಸಮಸ್ಯೆಗೆ ಸ್ಪಂದನೆಯೂ ಸಿಗುತ್ತದೆ. ನಗರದಲ್ಲಿ ಯಾವುದೇ ವನ್ಯಜೀವಿಗಳ ಬಗ್ಗೆ ದೂರು ಬಂದ ಗರಿಷ್ಠ ಎರಡು ಗಂಟೆಯೊಳಗೆ ಅವುಗಳ ಸಂರಕ್ಷಣೆ ನಡೆಯುತ್ತಿದೆ. ಬೇರೆ ಜಿಲ್ಲೆಗಳಲ್ಲಿ ಇಷ್ಟು ವೇಗವಾದ ಕಾರ್ಯಾಚರಣೆ ಸಾಧ್ಯವಾಗಿಲ್ಲ’ ಎನ್ನುವುದು ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ತಂಡದ ಹೆಮ್ಮೆಯ ಮಾತು.

ವನ್ಯಜೀವಿ ಸಂರಕ್ಷಣೆಗೆ ಯಾರನ್ನು ಸಂಪರ್ಕಿಸಬಹುದು?

ಬಿಬಿಎಂಪಿ ಸಹಾಯವಾಣಿ-080–2221188

ಎ.ಪ್ರಸನ್ನ ಕುಮಾರ್ (ವನ್ಯಜೀವಿ ಸಂರಕ್ಷಕ)-9902794711

ಅರಣ್ಯ ಇಲಾಖೆ ಸಹಾಯವಾಣಿ-1926

ಪೀಪಲ್ ಫಾರ್ ಅನಿಮಲ್ (ಪಿಎಫ್ಎ)-9900025370

ಪ್ರಾಣಿಗಳ ಪುನರ್ವಸತಿ ಮತ್ತು ರಕ್ಷಣಾ ಕೇಂದ್ರ (ಎಆರ್‌ಆರ್‌ಸಿ)-94489642222

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು