ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯ ವೈವಿಧ್ಯ: ಕೀಟ ಭಕ್ಷಕ ಸಸ್ಯಗಳು

Published 14 ಆಗಸ್ಟ್ 2023, 0:30 IST
Last Updated 14 ಆಗಸ್ಟ್ 2023, 0:30 IST
ಅಕ್ಷರ ಗಾತ್ರ

ಮೊನ್ನೆ ನಾನು ಕುಟುಂಬದೊಂದಿಗೆ ಸಿಂಗಪುರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ‘ಗಾರ್ಡನ್ಸ್‌ ಬೈ ದಿ ಬೇ‍’ ಬಳಿ ಕ್ಲೌಡ್‌ ಫಾರೆಸ್ಟ್‌ನಲ್ಲಿನ ಲಕ್ಷಗಟ್ಟಲೆ ಇರುವ ಸುಂದರ ಸಸ್ಯಗಳಲ್ಲಿ ಕೀಟಗಳನ್ನೇ ಭಕ್ಷಿಸುವ ಸಸ್ಯಗಳನ್ನು ನೋಡುವ ಸೌಭಾಗ್ಯ ಸಿಕ್ಕಿತು.

ಈ ಕ್ಲೌಡ್‌ ಫಾರೆಸ್ಟ್‌ ಸಾಮಾನ್ಯ ಜನರಿಗೇ ಇಷ್ಟೊಂದು ಸುಂದರವೆನಿಸಿದರೇ.. ಇನ್ನು ಸಸ್ಯಶಾಸ್ತ್ರ ಓದಿದವರಿಗಂತೂ ಅದು ಸ್ವರ್ಗಲೋಕದ ಐಸಿರಿಯೇ ಸರಿ. ನಾನು ಈ ಸಸ್ಯಗಳ ಬಗ್ಗೆ ಮೊಟ್ಟ ಮೊದಲು ಓದಿದ್ದು 11ನೇ ತರಗತಿಯಲ್ಲಿದ್ದಾಗ. ಮುಂದೆ ಬಿ. ಎಸ್ಸಿ ಕೃಷಿ ಓದುತ್ತಿದ್ದಾಗ ನೆಚ್ಚಿನ ಸಿಮಾರೂಬ ವಿಜ್ಞಾನಿ ಡಾ. ಶ್ಯಾಮಸುಂದರ್ ಜೋಷಿ ಸರ್‌ ಅವರ ಅರ್ಥವತ್ತಾದ ಪಾಠದ ಮೂಲಕ. 24 ವರ್ಷಗಳ ಹಿಂದೆ  ಸಸ್ಯಶಾಸ್ತ್ರ ಪ್ರಯೋಗಾಲ ಯದಲ್ಲೂ ಗಾಜಿನ ಬಾಟಲಿಯಲ್ಲಿ ಈ ಸಸ್ಯಗಳನ್ನು ನೋಡಿದ್ದಷ್ಟೇ ನೆನಪು. ಇಂದಿನ ವಿದ್ಯಾರ್ಥಿಗಳೂ ಇದರಿಂದ ಹೊರತಾಗಿಲ್ಲ ಎಂಬುದನ್ನು ನಾನು ಬಲ್ಲೆ. ಈ ಸಸ್ಯಗಳನ್ನು ಆಂಗ್ಲ ಭಾಷೆಯಲ್ಲಿ Insectivorous plants  ಅಥವ Carnivorous plants. ಅಂದರೆ, ಕೀಟಗಳನ್ನು ಭಕ್ಷಿಸುವ ಸಸ್ಯಗಳು ಅಥವ ಮಾಂಸಹಾರಿ ಸಸ್ಯಗಳು ಎಂದರ್ಥ.

ಪಿಚ್ಚರ್ ಪ್ಲ್ಯಾಂಟ್ -ನೆಪೆಂತಸ್ ಖಾಸಿಯಾನ
ಪಿಚ್ಚರ್ ಪ್ಲ್ಯಾಂಟ್ -ನೆಪೆಂತಸ್ ಖಾಸಿಯಾನ

ಇಂತಹ ಸಸ್ಯಗಳಲ್ಲೊಂದು ಪಿಚ್ಚರ್‌ ಪ್ಲ್ಯಾಂಟ್‌ (Pitcher Plant). ನೆಪೆನ್‌ಥೆಸ್‌ ಖಾಸಿಯಾನ(Nepenthes khasiana) ಇದರ ವೈಜ್ಞಾನಿಕ ಹೆಸರು. ಇದು ಗಿಡದ ಕಾಂಡದಿಂದ ಉದ್ಭವವಾದ ಎಲೆಯ ತೊಟ್ಟು, ಅಗಲವಾದ ಮಧ್ಯಭಾಗ ಹೊರತುಪಡಿಸಿ ಉಳಿದ ಎಲೆಯ ತುದಿಭಾಗವೇ ಹೂಜಿಯಾಕಾರ ಮತ್ತು ಅದಕ್ಕೆ ಒಂದು ಮುಚ್ಚಳವಿರುವಂತೆ ಮಾರ್ಪಾಟು ಗೊಂಡಿರುವುದು ಪ್ರಕೃತಿಯ ಸೃಷ್ಟಿ. ಆಂಗ್ಲ ಭಾಷೆಯಲ್ಲಿ ಹೂಜಿಗೆ ಪಿಚ್ಚರ್‌(Pitcher) ಎಂದು ಕರೆಯುವುದುಂಟು. ಹಾಗಾಗಿ ಇದಕ್ಕೆ ಈ ಹೆಸರು ಬರಲು ಕಾರಣ. ಇಲ್ಲಿರುವ ಮುಚ್ಚಳಕ್ಕೆ ಒಪರ್ಕ್ಯಲಮ್(Operculum)  ಮತ್ತು ಹೂಜಿಯ ಸುತ್ತಲ ಪ್ರವೇಶದ್ವಾರಕ್ಕೆ ಪೆರಿಸ್ಟೋಮ್‌(Peristome) ಎಂದು ಹೆಸರಿಸಿದ್ದಾರೆ.

ಅದೆಲ್ಲ ಸರಿ ಈ ಸಸ್ಯಗಳಿಗೆ ಕೀಟಗಳನ್ನು ಭಕ್ಷಿಸುವ ಅಥವ ಮಾಂಸಹಾರಿ ಸಸ್ಯಗಳು ಎಂದು ಏಕೆ ಕರೆಯುತ್ತಾರೆ? ಏಕೆ ಈ ಸಸ್ಯಗಳು ಕೀಟಗಳು ಮತ್ತು ಇತರೆ ಜೀವಿಗಳನ್ನು ತಿನ್ನುತ್ತವೆ. ಈ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯೋಣ ಬನ್ನಿ…

ಕೀಟಗಳು ಮತ್ತ ಇತರೆ ಜೀವಿಗಳನ್ನು ಭಕ್ಷಿಸುವುದರಿಂದ ಇವುಗಳಿಗೆ ಮಾಂಸಾಹಾರಿ ಸಸ್ಯಗಳು ಅಥವಾ ಕೀಟಗಳನ್ನು ಭಕ್ಷಿಸುವ ಸಸ್ಯಗಳು ಎನ್ನುತ್ತಾರೆ. ಈ ಸಸ್ಯಗಳ ಪ್ರವೇಶದ್ವಾರ ಪೆರಿಸ್ಟೋಮ್  ಮೇಣದಂತಹ ಅಂಟಿನ ಸುವಾಸನೆಯುಕ್ತ ಮಕರಂದ ಸ್ರವಿಸುತ್ತದೆ. ಬಗೆಬಗೆಯ ಕೀಟಗಳು ಇದರ ಆಕರ್ಷಣೆ ಗೊಳಗಾಗಿ ಬಂದು ಕೂರುತ್ತವೆ. ಹಾಗೆ ಮೆಲ್ಲನೆ ಚಲಿಸುವಾಗ ಕೀಟಗಳು ಜಾರಿ ಹೂಜಿಯೊಳಕ್ಕೆ ಉರುಳುತ್ತವೆ. ಎಷ್ಟೇ ಬಾರಿ ಮೇಲೆ ಬರಲು ಹರಸಾಹಸ ಮಾಡಿದರೂ ಪ್ರಯತ್ನ ವಿಫಲವಾಗಿ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪುತ್ತವೆ. ಈ ಹೂಜಿಯಲ್ಲಿ ಅರ್ಧದಷ್ಟು ಈ ಸಸ್ಯ ಸ್ರವಿಸುವ ಜೀರ್ಣದ್ರವ್ಯ ತುಂಬಿರುತ್ತದೆ. ಜೀರ್ಣಕ್ರಿಯೆಗೆ ಸಹಕಾರಿಯಾದ ಕಿಣ್ವಗಳು ಮತ್ತು ಬ್ಯಾಕ್ಟೀರಿಯಾ ಇದರಲ್ಲಿರುತ್ತವೆ. ನಾಲ್ಕೈದು ದಿನಗಳಲ್ಲಿ ಕೀಟಗಳು ಜೀರ್ಣಕ್ರಿಯೆಗೊಳಗಾಗಿ ತನ್ನ ದೇಹದಲ್ಲಿರುವ ಪೋಷಕಾಂಶಗಳು ಬಿಡುಡೆಯಾಗಿ ದ್ರವ್ಯದಲ್ಲಿ ವಿಲೀನಗೊಳ್ಳುತ್ತವೆ. ಅದರಲ್ಲೂ ಕೀಟ ದೇಹದ ಸಾರಜನಕ ಮತ್ತು ರಂಜಕವನ್ನು ಈ ಸಸ್ಯಗಳು ಹೀರಿಕೊಂಡು ತಮ್ಮ ಬೆಳವಣಿಗೆಗೆ ಬಳಸಿಕೊಳ್ಳುತ್ತವೆ.

ಸಾರಜನಕ, ರಂಜಕದ ಕೊರತೆಯಿರುವ ಮಣ್ಣಿಲ್ಲಿ ಈ ಸಸ್ಯಗಳು ಬೆಳೆಯುತ್ತವೆ. ಹಾಗಾಗಿ ಈ ಸಸ್ಯಗಳು ಕೀಟಗಳನ್ನು ಆಹ್ವಾನಿಸಿ, ಸಂಹರಿಸಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತವೆಂದರೆ ಎಂತಹ ವಿಸ್ಮಯಕಾರಿ ಪ್ರಕೃತಿಯ ಕೊಡುಗೆ ಅಲ್ಲವೇ ?

ನಮ್ಮ ದೇಶದಲ್ಲಿ ಮೇಘಾಲಯದ ಬಾಗ್‌ಮಾರ್‌ ಬೆಟ್ಟ, ಗಾರೊ ಬೆಟ್ಟ,  ಖಾಸಿ ಬೆಟ್ಟ ಹಾಗೂ ಅಸ್ಸಾಂ, ನಾಗಾಲ್ಯಾಂಡ್‌ಗಳ ಬೆಟ್ಟಗುಡ್ಡಗಳಲ್ಲಿ ಇಂತಹ ಪಿಚ್ಚರ್‌ ಪ್ಲ್ಯಾಂಟ್‌ ಸಸ್ಯಗಳು ಹಚ್ಚಾಗಿ ಕಾಣಸಿಗುತ್ತವೆ.

ವೀನಸ್‌ ಫ್ಲೈಟ್ರ್ಯಾಪ್‌ ಸಸ್ಯ– ಡಯೋನಿಯ ಮುಸಿಪುಲ
ವೀನಸ್‌ ಫ್ಲೈಟ್ರ್ಯಾಪ್‌ ಸಸ್ಯ– ಡಯೋನಿಯ ಮುಸಿಪುಲ

ಈ ಕ್ಲೌಡ್‌ ಫಾರೆಸ್ಟ್‌ನಲ್ಲಿ ಮತ್ತೊಂದು ಅಮೆರಿಕನ್‌ ಪಿಚರ್‌ ಪ್ಲ್ಯಾಂಟ್‌ ಅಥವ ಪರ್ಪಲ್‌ ಪಿಚ್ಚರ್‌ ಪ್ಲ್ಯಾಂಟ್‌(Purple pitcher plant) ಕಂಡವು. ಇವು ತುತ್ತೂರಿಯ ಆಕಾರವಿರುವುದರಿಂದ ಇವಕ್ಕೆ ಟ್ರಂಪೆಟ್‌ ಪಿಚ್ಚರ್‌ಪ್ಲಾಂಟ್ಸ್‌ (Trumpet pitcher plants) ಎಂದು ಸಸ್ಯಶಾಸ್ತ್ರಜ್ಞರು ಹೆಸರು ನೀಡಿದ್ದಾರೆ. ಸರಸೆನಿಯಾ ಪರ್ಪುರಿಯಾ(Sarracenia purpuria)ಇದರ ವೈಜ್ಞಾನಿಕ ಹೆಸರು. ಈ ಸಸ್ಯಗಳು ನೇರವಾಗಿ ಭೂಮಿಯಿಂದಲೇ ಉದ್ಭವವಾಗಿದ್ದವು. ಅವು ಅಂಗಡಿಯಲ್ಲಿ ಬಣ್ಣಬಣ್ಣದ ಗಾಜಿನ ಲೋಟಗಳು ಜೋಡಿಸಿ ಇಟ್ಟಂತೆ ಸುಂದರವಾಗಿ ಕಾಣುತ್ತಿದ್ದವು. ಮಹಿಳೆಯರು ಅಲಂಕೃತಗೊಂಡು ಯಾವುದೋ ಸಮಾರಂಭಕ್ಕೆ ಸಿದ್ದವಾಗಿ ನಿಂತಿರುವಂತೆ ಕಾಣುತ್ತಿದ್ದವು. ಹಾಗಾಗಿಯೇ ಈ ಸಸ್ಯಗಳಿಗೆ ಲೇಡಿಸ್‌ ಇನ್ ವೇಟಿಂಗ್‌(Ladies in waiting) ಎಂದು ಅರ್ಥಪೂರ್ಣ ನಾಮಕರಣ ಮಾಡಿದ್ದಾರೆ. ಈ ಸಸ್ಯಗಳು ಕೂಡ ಮೇಲೆ ತಿಳಿಸಿದ ಚಾಕಚಕ್ಯತೆ ಬಳಸಿ ಕೀಟಗಳನ್ನು ಹಿಡಿದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಮಾಂಸಾಹಾರಿ ಸಸ್ಯಗಳು ಬರೀ ಕೀಟಗಳನ್ನಷ್ಟೇ ಅಲ್ಲದೇ ಚಿಕ್ಕ ಪುಟ್ಟ ಜೀವಿಗಳಾದ ಹಲ್ಲಿಗಳು, ಓತಿಕ್ಯಾತ, ಕಪ್ಪೆ, ಇಲಿ, ಹಾವುಗಳನ್ನು ಸೆರೆ ಹಿಡಿದು ತಿಂದಿರುವದು ಕೆಲವು ವರದಿಗಳು ಉಲ್ಲೇಖಿಸುತ್ತವೆ. ಇನ್ನೊಂದು ವಿಭಿನ್ನವಾದ ವೀನಸ್‌ ಫ್ಲೈಟ್ರ್ಯಾಪ್‌ ಸಸ್ಯ(Venus fly trap-Dionaea muscipula). ಇದಕ್ಕೆ ಸ್ನ್ಯಾಪ್ ಟ್ರಾಪ್‌ (Snap trap) ಎಂದೂ ಕರೆಯುತ್ತಾರೆ. ಈ ಸಸ್ಯದ ಎಲೆಗಳು ತೆರೆದಿಟ್ಟ ಪುಸ್ತಕದಂತೆ ಕಾಣುತ್ತವೆ. ಆ ಎಲೆಗಳ ಮಧ್ಯಭಾಗದಲ್ಲಿ ಕೆಲವು ಸ್ಪರ್ಶಕಗಳಿರುತ್ತವೆ. ಯಾವುದೇ ನೊಣ ಅಥವ ಕೀಟ ಆ ಸ್ಪರ್ಶಕಗಳನ್ನು ಒಂದೆರಡು ಬಾರಿ ಸ್ಪರ್ಶಿಸಿದರೆ ಸಾಕು ಸೆರೆಯಾದ ಕೀಟದ ಜೊತಗೆ ಎಲೆಗಳು ತಕ್ಷಣ ಮುಚ್ಚಿಕೊಳ್ಳುತ್ತವೆ. ತೆರೆದ ಪುಸ್ತಕ ಮುಚ್ಚಿದಂತೆ. ಕೆಲವೇ ದಿನಗಳಲ್ಲಿ ಇಡೀ ಕೀಟವನ್ನೇ ದ್ರವ್ಯವಾಗಿ ಪರಿವರ್ತಿಸುತ್ತದೆ. ಎಲೆಗಳ ಅಂಚಿನಲ್ಲಿ ಮುಳ್ಳುಗಳೂ ಇರುತ್ತವೆ. ಪುನಃ ಕೆಲಕಾಲದ ನಂತರ ಎಲೆಗಳು ಬೇರೆ ಕೀಟಗಳಿಗಾಗಿ ತೆರೆದುಕೊಳ್ಳುತ್ತವೆ. ನಮ್ಮ ಬೆರಳು ಮಧ್ಯೆ ಇಟ್ಟರೂ ಹರಿತವಾದ ಮುಳ್ಳುಗಳ ಸ್ಪರ್ಶಕ್ಕೆ ರಕ್ತ ಸ್ರವಿಸಿವುದಂತೂ ಗ್ಯಾರಂಟಿ. ಈ ರೀತಿಯ ಇನ್ನಿತರೆ ಸಸ್ಯಗಳಾದ ಸನ್‌ಡೀವ್‌(Sundew plants)ಸಸ್ಯಗಳು, ಬ್ಲಾಡ್ಡೆರ್ವರ್ಟ್(Bladderwort plants), ಬಟ್ಟರ್‌ವರ್ಟ್‌ (Butterwort plants), ಲೊಬ್ಸ್‌ಟರ್‌ ಪಾಟ್ ಟ್ರಾಪ್‌(Lobster pot trap), ಆಕ್ಟೀವ್‌ ಗ್ಲೂ ಟ್ರಾಪ್‌ ಪ್ಯಾಸಿವ್‌ ಗ್ಲೂ ಟ್ರ್ಯಾಪ್ಸ್‌(Active glue trap Passive glue traps) ಮತ್ತು ಸಕ್ಷನ್ ಟ್ರ್ಯಾಪ್(Suction trap) ಹೆಸರಿನ ಅನೇಕ ಸಸ್ಯಗಳು ಕೀಟಗಳನ್ನು ಇತರೆ ಚಿಕ್ಕ ಪುಟ್ಟ ಜೀವಿಗಳನ್ನು ವಿವಿಧ ವರ್ಚಸ್ಸುಗಳಿಂದ ಹಿಡಿದು ತಿನ್ನುತ್ತವೆ. ಪೋಷಕಾಂಶಗಳ ಕೊರತೆಯಿರುವ ಮಣ್ಣಿನಲ್ಲಿ ಇಂಥ ಸಸ್ಯಗಳು ಕಂಡು ಬರುತ್ತವೆ. ಆದರೂ ಇವು ನಮಗೆ ಸಿಗುವುದು ಅಪರೂಪ. ಇವುಗಳ ಸಂಖ್ಯೆ ಕ್ಷೀಣಿಸಿರುವುದೇ ಇದಕ್ಕೆ ಕಾರಣ.

ಪಿಚ್ಚರ್ ಪ್ಲ್ಯಾಂಟ್ -ನೆಪೆಂತಸ್ ಖಾಸಿಯಾನ
ಪಿಚ್ಚರ್ ಪ್ಲ್ಯಾಂಟ್ -ನೆಪೆಂತಸ್ ಖಾಸಿಯಾನ

ಇಂತಹ ಹಲವಾರು ಸಸ್ಯಗಳು ಅಳಿವಿಂಚಿನಲ್ಲಿರುವುದೂ ಒಂದೆಡೆ ವಿಪರ್ಯಾಸವೆನಿಸಿದರೇ…. ಕೆಲವರು ಇವುಗಳನ್ನು ಕಿತ್ತು ತಂದು ಮನೆಗಳಲ್ಲಿ, ಹೂದೋಟಗಳಲ್ಲಿ ಬೆಳೆಸಲು ಪ್ರಯತ್ನಿಸಿ ನಾಶ ಪಡಿಸುತ್ತಿರುವುದು ಅಷ್ಟೇ ಸತ್ಯ. ಇಂತಹ ಸುಂದರ ಪ್ರಕೃತಿ ಕೊಡುಗೆಯ ವಿಸ್ಮಯಕಾರಿ ಸಸ್ಯಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ.

(ಲೇಖಕರು: ಕೀಟಶಾಸ್ತ್ರಜ್ಞರು ಹಾಗೂ ಕೃಷಿ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT