ಮಂಗಳವಾರ, ಆಗಸ್ಟ್ 16, 2022
21 °C
ಉತ್ತರ ಕನ್ನಡದಲ್ಲಿ ಕಾಡಾನೆಗಳ ದಾಳಿ ತಡೆಯಲು ಹಲವು ತಂತ್ರ: ಫಲಿತಾಂಶ ಮಾತ್ರ ಅತ್ಯಲ್ಪ

PV Web Exclusive: ‘ಗಜಪಡೆ ಗರ್ವಭಂಗ’ಕ್ಕೆ ಸಿಗದ ಮಾರ್ಗೋಪಾಯ!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಸಾರ್, ಆನೆಗಳಿಗೆ ನಡೆದಿದ್ದೇ ದಾರಿ. ಹೊಲಗಳ ಮೇಲೆ ಈ ಬಾರಿಯೂ ದಾಳಿ ಮಾಡಿವೆ. ಕಟಾವಿಗೆ ಬಂದಿದ್ದ ಭತ್ತ, ಕಬ್ಬು, ಭತ್ತ, ಬೆಳೆದು ನಿಂತಿದ್ದ ಬಾಳೆಗಿಡ, ಅಡಿಕೆ ಗಿಡಗಳನ್ನು ಸರ್ವನಾಶ ಮಾಡಿವೆ.. ಏನೇ ಮಾಡಿದರೂ ಅವುಗಳ ನಿಯಂತ್ರಣ ಆಗ್ತಿಲ್ಲ. ಬೆವರು ಸುರಿಸಿ ಬೇಸಾಯ ಮಾಡೋದು ಆನೆ ಹೊಟ್ಟೆ ತುಂಬಿಸಲು ಎಂಬಂತಾಗಿದೆ...’

ಇದು ಮುಂಡಗೋಡ, ಯಲ್ಲಾಪುರ, ಹಳಿಯಾಳ ಹಾಗೂ ಶಿರಸಿ ತಾಲ್ಲೂಕುಗಳ ವಿವಿಧ ಗ್ರಾಮಗಳ ರೈತರ ಸಾಮಾನ್ಯ ಅಳಲು. ಈಚಿನ ಕೆಲವು ವರ್ಷಗಳಿಂದ ಇಲ್ಲಿ ಗಜಪಡೆಯ ದಾಳಿ, ನಿರಂತರವಾಗಿದೆ. ಹತ್ತಾರು ವರ್ಷಗಳ ಹಿಂದೆ ವರ್ಷಕ್ಕೊಮ್ಮೆ ಬಂದು ಆಹಾರ ಮೇಯ್ದು ಅವು ಬಂದ ‘ಪಥ’ದಲ್ಲೇ ವಾಪಸಾಗುತ್ತಿದ್ದವು. ಆದರೆ, ಈಗ ಹಾಗಿಲ್ಲ. ಬೀಡಾಡಿ ದನಗಳಂತೆ ಹೊಲ, ತೋಟಗಳಿಗೆ ನುಗ್ಗುತ್ತವೆ. ಹಗಲೆಲ್ಲ ತೋಟ, ಹೊಲಗಳ ಅಂಚಿನ ಕಾಡಿನಲ್ಲೇ ಉಳಿದುಕೊಂಡು, ಸಂಜೆಯಾಗುತ್ತಿದ್ದಂತೆ ಸೊಂಪಾಗಿ ಬೆಳೆದಿರುವ ಫಸಲನ್ನು ಕಬಳಿಸುತ್ತವೆ. ಹೊಲದ ತುಂಬ ಓಡಾಡಿ ಬೆಳೆ ನಾಶ ಮಾಡುತ್ತಿವೆ.


ಮುಂಡಗೋಡ ತಾಲ್ಲೂಕಿನ ರೈತರೊಬ್ಬರು ಅರಣ್ಯ ಇಲಾಖೆಯು ನೀಡಿದ ಟ್ರಿಪ್ ಅಲರಾಂ ಅನ್ನು ಹೊಲದ ಅಂಚಿನ ಮರಕ್ಕೆ ಅಳವಡಿಸಿರುವುದು (ಸಂಗ್ರಹ ಚಿತ್ರ)

ಕೃಷಿಕರೂ ಆನೆಗಳನ್ನು ಹಿಮ್ಮೆಟ್ಟಿಸಲು ಪಟಾಕಿ ಸಿಡಿಸಿ, ಜೋರಾಗಿ ಸದ್ದು ಮಾಡಿ, ಹೊಲದ ಸಮೀಪದಲ್ಲಿ ತರಗೆಲೆ, ಕಟ್ಟಿಗೆಯನ್ನಿಟ್ಟು ಬೆಂಕಿ ಉರಿಸಿ ಸೋತು ಹೋಗಿದ್ದಾರೆ. ಮೆಣಸಿನಕಾಯಿ, ಖಾರಪುಡಿಗಳ ಹೊಗೆ ಹಾಕುವ ಉಪಾಯದಿಂದಲೂ ಫಲ ಕಾಣದಾಗಿದ್ದಾರೆ. ಈ ತಂತ್ರಗಳ ಪ್ರಭಾವ ಇರುವ ಕ್ಷಣಗಳಷ್ಟೇ ಸಮಯ ಆನೆಗಳು ದೂರ ಇರುತ್ತವೆ. ಬಳಿಕ ಮತ್ತದೇ ದಾರಿಯಲ್ಲಿ ಬಂದು ಬೆಳೆಗಳ ಮೇಲೆ ದಾಳಿ ಮಾಡುತ್ತವೆ.

ಇದರ ನಂತರ ಬಂದಿದ್ದೇ ಕಾಡಂಚಿನಲ್ಲಿ ಕಂದಕ (ಅಗಳ) ಕೊರೆಯುವ ಪದ್ಧತಿ. ಆರಂಭದಲ್ಲಿ ಆನೆಗಳು ಆಳದಲ್ಲಿ ಇಳಿಯಲು ಅಂಜಿದವು. ಇದರಿಂದ ರೈತರು, ಅರಣ್ಯ ಇಲಾಖೆ ಅಧಿಕಾರಿಗಳು ತುಸು ನಿಟ್ಟುಸಿರು ಬಿಡುವಷ್ಟರಲ್ಲೇ ಅಗಳದ ಒಳಗೆ ಇಳಿದು ಮೇಲೆ ಹತ್ತಿ ಬರುವುದನ್ನೂ ಆನೆಗಳು ಕಲಿತವು. ಹಿಂಡಿನಲ್ಲಿರುವ ಮರಿಯಾನೆಗಳನ್ನೂ ಜೊತೆಗೆ ಸಲೀಸಾಗಿ ಕರೆದುಕೊಂಡು ಬಂದವು. ಅಲ್ಲಿಗೆ ಈ ಉಪಾಯವೂ ಪ್ರಯೋಜವಾಗಲಿಲ್ಲ.

ಈ ನಡುವೆ, 2017ರಲ್ಲಿ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಭಾಗದಲ್ಲಿ, ಅರಣ್ಯ ಇಲಾಖೆಯು ಮಹಾರಾಷ್ಟ್ರದ ವನ್ಯಜೀವಿ ಸಂಶೋಧನೆ ಮತ್ತು ಸಂರಕ್ಷಣಾ ಸೊಸೈಟಿ ಜೊತೆಗೂಡಿ ‘ಜೇನು ಬೇಲಿ’ಯನ್ನು ಅಳವಡಿಸಿತು. ಮರದ ಬೊಡ್ಡೆಯ ಪೊಳ್ಳು ಭಾಗದಲ್ಲಿ, ಬೆಲ್ಲ, ಘಮದ ಚಕ್ಕೆ, ನಿರುಪಯುಕ್ತ ಜೇನುರಟ್ಟನ್ನು ಇಡಲಾಯಿತು. ಅದರೊಳಗೆ ಅಂದಾಜು 10 ದಿನಗಳ ಒಳಗೆ  ಜೇನು ಹುಳಗಳು ಸೇರಿಕೊಂಡವು.

ರೈತರ ಜಮೀನಿನ ಉದ್ದಕ್ಕೂ 100ರಿಂದ 200 ಮೀಟರ್‌ ಅಂತರದಲ್ಲಿ ಇವುಗಳನ್ನು ಇಡಲಾಯಿತು. ಜೇನು ಹುಳಗಳ ಹಾರಾಟ, ಅವುಗಳ ರೆಕ್ಕೆಯ ಸದ್ದಿಗೆ ಅಂಜಿದ ಆನೆಗಳು ಸುತ್ತಮುತ್ತ ಸುಳಿಯುವ ಪ್ರಮಾಣ ಕಡಿಮೆಯಾಯಿತು. ಪ್ರಾಯೋಗಿಕವಾಗಿ ನಡೆಸಿದ ಈ ಪ್ರಯೋಗವು, ಸ್ವಲ್ಪಮಟ್ಟಿನ ಯಶಸ್ಸನ್ನೂ ತಂದುಕೊಟ್ಟಿತು. ಒಂದಷ್ಟು ಬೆಳೆ ಹಾನಿಯನ್ನೂ ತಡೆಯಿತು. ಆದರೆ, ಆನೆಗಳ ದಾಳಿಯಿಂದ ಸಂಪೂರ್ಣವಾಗಿ ಮುಕ್ತಿ ನೀಡಲಿಲ್ಲ.


ಭತ್ತದ ಗದ್ದೆಯಲ್ಲಿ ಗಜಪಡೆ ದಾಂಧಲೆ ನಡೆಸಿದ ಗುರುತು

ದಾಂಡೇಲಿ ಕಾಡಿನಿಂದ ಅಕ್ಟೋಬರ್ ತಿಂಗಳಿನಲ್ಲಿ ಹೊರಟು ಯಲ್ಲಾಪುರ, ಕಿರವತ್ತಿ, ಮುಂಡಗೋಡ, ಕಾತೂರು ಮೂಲಕ ಸಾಗಿ ಬನವಾಸಿ ತನಕ ಕಾಡಾನೆಗಳು ಸಂಚರಿಸುತ್ತವೆ. ಈ ಪಥದಲ್ಲಿ ಸಾಮಾನ್ಯವಾಗಿ ಮೂರು ತಿಂಗಳು ಹೊಟ್ಟೆ ತುಂಬಿಸಿಕೊಂಡು ಡಿಸೆಂಬರ್ ಅಂತ್ಯದ ವೇಳೆಗೆ ತಮ್ಮ ಮೂಲ ನೆಲೆಗೆ ತಲುಪುತ್ತಿದ್ದವು. ಆದರೆ, ಈ ವರ್ಷ ಹಾಗಾಗಲಿಲ್ಲ. ಜನವರಿ ತಿಂಗಳಲ್ಲಿ ಶಿರಸಿ ತಾಲ್ಲೂಕಿನ ದೊಡ್ನಳ್ಳಿ, ಕುಳವೆ, ಸಿದ್ದಾಪುರ ತಾಲ್ಲೂಕಿನ ಕಾನಸೂರು ಭಾಗದಲ್ಲೂ ದಾಂಧಲೆ ಎಬ್ಬಿಸಿದ್ದವು. ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಗಜಪಡೆಯ ಹೆಜ್ಜೆ ಗುರುತುಗಳು ಮೂಡಿಸಿ, ತಮ್ಮ ಸಾಂಪ್ರದಾಯಿಕ ದಾರಿಯಿಂದಲೂ ಸರಿದು ಹೆಜ್ಜೆ ಹಾಕಿದ್ದವು.

ಆನೆಗಳ ದಾಳಿಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ರೈತರಿಂದ ಒತ್ತಾಯಗಳು ಹೆಚ್ಚುತ್ತಲೇ ಇರುವ ಕಾರಣ, ಅರಣ್ಯ ಇಲಾಖೆಯವರೂ ಹಲವು ತಂತ್ರಗಳಿಗೆ ಮೊರೆ ಹೋಗಿದ್ದಾರೆ. 10 ವರ್ಷಗಳಿಂದ ಯಲ್ಲಾಪುರ, ಹಳಿಯಾಳ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶ (ಕೆ.ಟಿ.ಆರ್) ವ್ಯಾಪ್ತಿಯ 13 ವಲಯಗಳಲ್ಲಿ ‘ಟ್ರಿಪ್ ಅಲರಾಂ’ ಅಳವಡಿಸುತ್ತಿದ್ದಾರೆ. ಆನೆಗಳು ಬಂದು ಸ್ಪರ್ಶಿಸುತ್ತಿದ್ದಂತೆ ಸೈರನ್ ಸದ್ದಾಗುತ್ತದೆ. ಸುಮಾರು 200 ಮೀಟರ್‌ ದೂರದವರೆಗೂ ಅದರ ಸದ್ದು ಕೇಳಿಸುತ್ತದೆ. ರೈತರು ಕೂಡಲೇ ತಮ್ಮ ಜಮೀನಿಗೆ ಬಂದು ಆನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯ ಎನ್ನುವುದು ಅರಣ್ಯಾಧಿಕಾರಿಗಳ ವಾದ.

ಇದೇರೀತಿ, ಪ್ರಖರ ಬೆಳಕು ಸೂಸುವ ‘ಫ್ಲ್ಯಾಶ್ ಲೈಟ್’ ಅನ್ನೂ ಅರಣ್ಯದ ಅಂಚಿನ ನಿವಾಸಿಗಳಿಗೆ ಒದಗಿಸಲಾಗುತ್ತಿದೆ. ಅವುಗಳ ಬೆಳಕನ್ನು ಎದುರಿಸಲಾಗದೇ ಆನೆಗಳು ಹಿಂದಡಿ ಇಡುವುದು ತಕ್ಕಮಟ್ಟಿಗಷ್ಟೇ ಫಲಿತಾಂಶ ನೀಡಿದೆ. ಈ ರೀತಿ ನಾನಾ ತಂತ್ರಗಳನ್ನು ಅನುಸರಿಸಿದರೂ ಗಜಪಡೆಯ ಸಂಪೂರ್ಣ ಗರ್ವಭಂಗ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ರೈತರ ಬೇಸರವಾಗಿದೆ.

ತಜ್ಞರು ಹೇಳುವುದೇನು?

ಕಾಡಿನ ಅಂಚಿನಲ್ಲಿ ಬೇಸಾಯ ಚಟುವಟಿಕೆಗಳು ಹೆಚ್ಚಿವೆ. ಭತ್ತ, ಮೆಕ್ಕೆಜೋಳ, ಕಬ್ಬಿನಂತಹ ಬೆಳೆಗಳನ್ನು ಹೇರಳವಾಗಿ ಬೆಳೆಯಲಾಗುತ್ತಿದೆ. ಇವು ಆನೆಗಳಿಗೂ ನೆಚ್ಚಿನ ಆಹಾರವಾಗಿದೆ. ಜೊತೆಗೇ ಕಾಡಿನಲ್ಲಿ ಈಚಲು, ಬೈನೆ, ಬಿದಿರಿನಂತಹ ಸಸ್ಯಗಳ ಕೊರತೆಯೂ ಕಾಡಾನೆಗಳು ನಾಡಿನತ್ತ ಹೆಚ್ಚು ಹೆಜ್ಜೆ ಹಾಕಲು ಕಾರಣವಾಗುತ್ತಿದೆ ಎನ್ನುವುದು ವನ್ಯಜೀವಿ ತಜ್ಞರ ಅಭಿಪ್ರಾಯವಾಗಿದೆ.


‘ಫ್ಲ್ಯಾಶ್ ಲೈಟ್’ ಬೆಳಕನ್ನು ಎದುರಿಸಲಾಗದೇ ಆನೆಯು ಹಿಮ್ಮೆಟ್ಟಿರುವುದು

ಪರಿಹಾರವೇನು?

ಕಾಡಾನೆಗಳು ನಿರ್ದಿಷ್ಟ ‍ಪಥದಲ್ಲಿ ಸಂಚರಿಸುವುದನ್ನು ತಡೆಯಲು ಸಾಧ್ಯವಿಲ್ಲ ಮತ್ತು ತಡೆಯಲೂ ಬಾರದು. ಒಂದುವೇಳೆ ತಡೆದರೆ ಅವುಗಳು ಬೇರೆ ಕಡೆಗಳಲ್ಲಿ ದಾಳಿ ಶುರು ಮಾಡಬಹುದು. ಅಲ್ಲದೇ ಮತ್ತಷ್ಟು ಆಕ್ರಮಣಕಾರಿ ಸ್ವಭಾವ ರೂಢಿಸಿಕೊಂಡ ಹೆಚ್ಚಿನ ಅಪಾಯ ತಂದಿಡಬಹುದು. ಆದ್ದರಿಂದ ಕಾಡಿನಲ್ಲೇ ಅವುಗಳ ನೆಚ್ಚಿನ ಆಹಾರ ಸಿಗುವಂತೆ ಮಾಡಬೇಕು. ಅವುಗಳ ಬದುಕಿನಲ್ಲಿ ಮನುಷ್ಯನ ಮಧ್ಯಪ್ರವೇಶ ಶೂನ್ಯ ಎನ್ನುವಂತಾಗಬೇಕು. ವನ್ಯಜೀವಿ ಮತ್ತು ಮಾನವ ಸಹಬಾಳ್ವೆ ರೂಪಿಸಿಕೊಳ್ಳಬೇಕು ಎನ್ನುವುದು ಪರಿಣತರ ಸಲಹೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು