ಶನಿವಾರ, ನವೆಂಬರ್ 28, 2020
18 °C

PV Web Exclusive: ಜೀವ ಸಂಕುಲದ ಅಪರೂಪದ ಅಮ್ಮಂದಿರು

ಕೆ.ಎಚ್‌. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

ಜೀವಜಾಲದಲ್ಲಿ ಪ್ರತಿಯೊಂದು ಜೀವಿಯು ಬದುಕುಳಿಯಲು ಹಲವು ರೀತಿಯ ಹೋರಾಟ ನಡೆಸುತ್ತಿರುತ್ತದೆ. ಒಂದು ನಿರ್ದಿಷ್ಟ ಜಾತಿಯ ಜೀವಿಗಳು ಬದುಕುಳಿದು, ಸಂತಾನಾಭಿವೃದ್ಧಿಗಾಗಿ ಪರಿಸರದ ಇತರೇ ಸಂಕುಲಗಳೊಟ್ಟಿಗೆ ಹೋರಾಟ ನಡೆಸುವುದು ಅನಿವಾರ್ಯ. ಎಲ್ಲಾ ಜೀವ ಪ್ರಭೇದದಲ್ಲೂ ಈ ಪ್ರಕ್ರಿಯೆ ಕಂಡುಬರುವುದು ಸರ್ವೇ ಸಾಮಾನ್ಯ.

ಸೂಕ್ತ ಆವಾಸ ಕಂಡುಕೊಳ್ಳಲು, ಸೀಮಿತ ಆಹಾರ ಸಂಪನ್ಮೂಲವನ್ನು ತನ್ನದಾಗಿಸಿಕೊಳ್ಳಲು, ಹವಾಮಾನ ವೈಪರೀತ್ಯದ ಸನ್ನಿವೇಶ ಎದುರಿಸಲು, ಶತ್ರುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಅವುಗಳಿಗೆ ಹೋರಾಟ ಅನಿವಾರ್ಯವಾಗಿದೆ. ಆಗತಾನೆ ಹುಟ್ಟಿದ ಮರಿಗಳಿಗೆ ಈ ಹೋರಾಟದ ಗುಣ ಸಿದ್ಧಿಸುವುದಿಲ್ಲ. ಜೀವ ಪರಿಸರದಲ್ಲಿ ಬದುಕುಳಿಯಲು ಬೇಕಾದ ಅಗತ್ಯ ಕೌಶಲಗಳನ್ನು ಮರಿಗಳು ಕರಗತ ಮಾಡಿಕೊಳ್ಳುವುದು ಅಮ್ಮನಿಂದಲೇ.

ಶತ್ರುಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದನ್ನು ಬಾಲ್ಯದಲ್ಲಿಯೇ ಅಮ್ಮಂದಿರು ಮರಿಗಳಿಗೆ ಬೋಧನೆ ಮಾಡುತ್ತವೆ. ಗುದ್ದಾಡುವ ತಂತ್ರಗಳನ್ನು ಕರಗತ ಮಾಡಿಸುತ್ತವೆ. ಶೈಶವದಲ್ಲಿಯೇ ಈ ತಂತ್ರಗಾರಿಕೆ ಕಲಿಯದ ಜೀವಿಗಳು ಪರಿಸರದಲ್ಲಿ ಉಳಿಯುವುದು ಕಷ್ಟಕರ.

ಮರಿಗಳ ಲಾಲನೆ, ಪಾಲನೆಯಷ್ಟೇ ಅಮ್ಮಂದಿರ ಕೆಲಸವಲ್ಲ. ದೀರ್ಘಕಾಲ ತನ್ನ ಸಂತಾನ ಬದುಕುಳಿಯಲು ಅಗತ್ಯವಿರುವ ಕೌಶಲ ಕಲಿಸುವುದರಲ್ಲಿ ತಾಯಂದಿರ ಪಾತ್ರ ಹಿರಿದು. ಎಲ್ಲಾ ಜೀವಿಗಳು ಮರಿಗಳಿಗೆ ಬದುಕುವ ಕಲೆ ಹೇಳಿಕೊಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ, ಕೆಲವು ಸಂಕುಲದಲ್ಲಿ ಮರಿಗಳ ಬೆಳವಣಿಗೆಯಲ್ಲಿ ಅಮ್ಮಂದಿರ ಪಾತ್ರ ಮಹತ್ವದ್ದಾಗಿದೆ. ಅಂತಹ ಜೀವಿಗಳ ಬದುಕಿನ ನೋಟ ಇಲ್ಲಿದೆ.

ಮರಿಗಳಿಗೆ ಚೀತಾ ಪಾಠ

ಚೀತಾ ವಿಶ್ವದ ಅತ್ಯಂತ ವೇಗದ ಪ್ರಾಣಿ. ಬೇಟೆಯಾಡುವುದರಲ್ಲೂ ಚಾಣಾಕ್ಷ. ಈ ಸಂಕುಲ ಹೆಚ್ಚಾಗಿ ಕಂಡುಬರುವುದು ಆಫ್ರಿಕದ ಹುಲ್ಲುಗಾವಲು ಪ್ರದೇಶದಲ್ಲಿ. ಆಗತಾನೆ ಜನಿಸಿದ ಚೀತಾ ಮರಿಗಳಿಗೆ ಬೇಟೆಯ ಕಲೆ ಸಿದ್ಧಿಸಿರುವುದಿಲ್ಲ. ಮತ್ತೊಂದೆಡೆ ಬೇಟೆ ಅವುಗಳ ಹುಟ್ಟುಗುಣವಾದರೂ ತಾಯಿ ಚೀತಾದ ಪಾಠವಿಲ್ಲದೆ ಅವು ಬಲಿಪ್ರಾಣಿಗಳ ಬೇಟೆಗಿಳಿಯುವುದಿಲ್ಲ. ಅವುಗಳಿಗೆ ಬೇಟೆಯ ಪಟ್ಟುಗಳನ್ನು ಕಲಿಸುವುದು ಅಮ್ಮನೇ.

ಈ ಕಲೆಯ ಸಿದ್ಧಿಗಾಗಿ ಮರಿಗಳು ಹದಿನೆಂಟು ತಿಂಗಳ ಕಾಲ ಅಮ್ಮನ ತೆಕ್ಕೆಯಲ್ಲಿಯೇ ಕಾಲದೂಡುತ್ತವೆ. ಹಂತ ಹಂತವಾಗಿ ತಾಯಿಯಿಂದ ಬೇಟೆಯ ಕೌಶಲವನ್ನು ಕರಗತ ಮಾಡಿಕೊಳ್ಳುತ್ತವೆ. ಹುಲ್ಲುಗಾವಲಿನಲ್ಲಿ ಅವಿತು ಹೇಗೆ ಬಲಿಪ್ರಾಣಿಗಳನ್ನು ಹೊಂಚು ಹಾಕಿ ಹಿಡಿಯಬೇಕು, ಬಲಿಯಾದ ಪ್ರಾಣಿಯನ್ನು ಹೇಗೆ ಭಕ್ಷಿಸಬೇಕು ಎಂಬುದನ್ನು ಕಲಿಯುತ್ತವೆ. ಮರಿಗಳಿಗೆ ಈ ಕೌಶಲ ಕಲಿಸುವುದರಲ್ಲಿ ತಾಯಿ ಚೀತಾದ ಪಾತ್ರದ ಹಿರಿದು.

ಹುಲಿ ಸಂಕುಲದಲ್ಲೂ ಈ ಪದ್ಧತಿ ಕಾಣಬಹುದು. ಮರಿಗಳ ಲಾಲನೆ, ಪಾಲನೆಯಲ್ಲಿ ತಾಯಿ ಹುಲಿಯ ಪಾತ್ರ ಮಹತ್ವದ್ದಾಗಿದೆ. ಅವುಗಳಿಗೆ ಬೇಟೆಯ ಕೌಶಲ ಕಲಿಸುವುದು ತಾಯಿ ಹುಲಿಯೇ. 18 ತಿಂಗಳುಗಳ ಕಾಲ ಅಮ್ಮನ ಜೊತೆಯಲ್ಲಿಯೇ ಬದುಕುವ ಮರಿಗಳು ಬೇಟೆ ಸೇರಿದಂತೆ ಬದುಕುವ ತಂತ್ರಗಾರಿಕೆಯನ್ನು ಮೈಗೂಡಿಸಿಕೊಳ್ಳುತ್ತವೆ. ಬಳಿಕ ತಾಯಿಯಿಂದ ಬೇರ್ಪಟ್ಟು ಹೊಸ ಆವಾಸ ಹುಡುಕಿಕೊಳ್ಳುತ್ತವೆ.

ಈ ಹದಿನೆಂಟು ತಿಂಗಳ ಅವಧಿಯು ಮರಿ ಹುಲಿಯ ಬದುಕಿನಲ್ಲಿ ಮಹತ್ವದ್ದು. ಆ ಅವಧಿಯಲ್ಲಿ ತಾಯಿ ಹುಲಿಯು ಮೃತಪಟ್ಟರೆ ಮರಿಗಳು ಬೇರ್ಪಡುತ್ತವೆ. ಆಗ ಅವುಗಳಿಗೆ ಬಲಿಪ್ರಾಣಿಗಳನ್ನು ಹಿಡಿಯುವ ಕಲೆ ಸಿದ್ಧಿಸುವುದಿಲ್ಲ. ಅಂತಹ ಹುಲಿಗಳು ಮನುಷ್ಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯ ಜೀವನಕ್ಕೂ ಎರವಾಗುವ ಸಾಧ್ಯತೆಯೇ ಹೆಚ್ಚು.

ಆನೆ ಮಡಿಲು

ಆನೆ ಸಂಘ ಜೀವಿ. ಅವುಗಳದ್ದು ಮಾತೃ ಪ್ರಧಾನ ವ್ಯವಸ್ಥೆ. ಗುಂಪಿನಲ್ಲಿರುವ ಮರಿಯಾನೆಗಳನ್ನು ನೋಡಿಕೊಳ್ಳುವುದು ಚಿಕ್ಕಮ್ಮ ಆನೆಯ ಜವಾಬ್ದಾರಿ. ಆದರೆ, ತಾಯಿ ಆನೆಯೂ ಮರಿಯನ್ನು ದೂರದಿಂದ ಗಮನಿಸುತ್ತಾ ಇರುತ್ತದೆ. ಅಮ್ಮನ ಕಾಲಡಿಯಲ್ಲಿಯೇ ಮರಿಯಾನೆ ಚಲಿಸುತ್ತಿರುತ್ತದೆ. ತಾಯಿಯಾನೆ ಸೊಂಡಲಿನಿಂದ ನೀರನ್ನು ಎತ್ತಿಕೊಂಡು ಮೈಮೇಲೆ ಹಾಕಿಕೊಳ್ಳುವುದು, ಹಸಿರೆಲೆ ತಿನ್ನುವುದನ್ನು ತದೇಕ ಚಿತ್ತದಿಂದ ನೋಡುವ ಅದು ಅಮ್ಮನಂತೆಯೇ ತಾನು ಮಾಡುತ್ತದೆ.

ಆನೆಗಳು ಕಾಡಿನಿಂದ ಕಾಡಿಗೆ ನಿರಂತರವಾಗಿ ಚಲಿಸುತ್ತಿರುತ್ತವೆ. ಹಿಂಡಿನೊಂದಿಗೆ ಮರಿಯೂ ಹೆಜ್ಜೆ ಹಾಕುತ್ತಿರುತ್ತದೆ. ಕಾಡಿನ ಯಾವ ಭಾಗದಲ್ಲಿ ಬಿದಿರು ಮೆಳೆ ಬೆಳೆದು ನಿಂತಿದೆ, ಯಾವ ಮೂಲೆಯಲ್ಲಿ ಉಪ್ಪಿನಾಂಶದ ಮಣ್ಣು ಸಿಗುತ್ತದೆ, ಬೇಸಿಗೆಯಲ್ಲಿ ಕೆರೆ–ಕಟ್ಟೆಗಳಲ್ಲಿ ನೀರು ಹಿಂಗಿ ಹೋದಾಗ ನೀರು ಎಲ್ಲಿ ಸಿಗುತ್ತದೆ, ಬಿದಿರಿನ ಮೆಳೆಗಳನ್ನು ಹೇಗೆ ನೆಲಕ್ಕುರುಳಿಸಬೇಕು, ತನ್ನ ಬದುಕಿಗೆ ಕಂಟಕವಾಗುವ ಮಾನವರ ಹೆಜ್ಜೆಗಳನ್ನು ಹೇಗೆ ಅರಿಯಬೇಕು ಎಂಬುದನ್ನು ತಾಯಿ ಆನೆಯೇ ಮರಿಗೆ ಕಲಿಸಿಕೊಡುತ್ತದೆ. ಕಾಡಿನ ಭಾಷೆ ಅರ್ಥವಾದಾಗಲೇ ಅದು ಆನೆಯಾಗಿ ರೂಪುಗೊಳ್ಳುತ್ತದೆ. ಇದಕ್ಕೆ ತಾಯಿ ಆನೆಯ ಕೊಡುಗೆ ಅಪಾರ.

ತಿಮಿಂಗಿಲದ ಕಥೆ

ತಿಮಿಂಗಿಲಗಳು ಏಕಾಂತ ಜೀವಿಗಳು. ಮರಿಗಳ ನಡುವೆ ಅವುಗಳದ್ದು ಅವಿನಾಭಾವ ಸಂಬಂಧ. ತಿಮಿಂಗಿಲ ಮರಿಯು ಜನಿಸಿದ ಒಂದು ವರ್ಷದವರೆಗೂ ತಾಯಿಯನ್ನು ಬಿಟ್ಟು ಅಪ್ಪಿತಪ್ಪಿಯೂ ಕದಲುವುದಿಲ್ಲ. ತಾಯಿ ತಿಮಿಂಗಿಲವೂ ತನ್ನ ವಂಶದ ಕುಡಿಯನ್ನು ಬಿಟ್ಟು ಅಗಲುವುದಿಲ್ಲ. ತನ್ನ ದೇಹದ ಸುತ್ತವೇ ನೀರಿನಲ್ಲಿ ಮರಿಯು ತನ್ನೊಟ್ಟಿಗೆ ಚಲಿಸುವುದರ ನಿಗಾ ಇಟ್ಟಿರುತ್ತದೆ. ಮರಿಯ ಚಿನ್ನಾಟವನ್ನು ಗಮನಿಸುತ್ತಲೇ ಅದಕ್ಕೆ ಬದುಕುವ ಕಲೆಯನ್ನು ಕಲಿಸುತ್ತದೆ.

ನೈಲ್‌ ಮೊಸಳೆ ಪಾಠ

ಬಹಳಷ್ಟು ಮೊಸಳೆಗಳು ನೆಲದಲ್ಲಿ ಮೊಟ್ಟೆ ಇಟ್ಟು ಕಣ್ಮರೆಯಾಗುತ್ತವೆ. ಆದರೆ, ಇದಕ್ಕೆ ಆಫ್ರಿಕದ ನೈಲ್‌ ಮೊಸಳೆ ಅ‍ಪವಾದ. ಮೊಟ್ಟೆಗಳು ಮರಿಯಾಗುವವರೆಗೂ ಅವುಗಳ ಮೇಲೆ ನಿಗಾ ಇಟ್ಟಿರುತ್ತದೆ. ತನ್ನ ಮೊಟ್ಟೆಗಳು ಬೇರೆ ಜೀವಿಗಳ ಬಾಯಿಗೆ ಆಹಾರವಾಗುವುದನ್ನು ತಪ್ಪಿಸಲು ಅದು ಹೋರಾಟಕ್ಕೂ ಇಳಿಯುತ್ತದೆ.

ಮೊಟ್ಟೆಯಿಂದ ಮರಿಗಳು ಹೊರಬಂದ ತಕ್ಷಣ ಅಲ್ಲಿಗೆ ಧಾವಿಸುವ ತಾಯಿ ಮೊಸಳೆಯು ಮರಿಗಳನ್ನು ಬಾಯಿಯೊಳಗೆ ಇಟ್ಟುಕೊಂಡು ನೀರಿಗೆ ಕರೆದೊಯ್ಯುತ್ತದೆ. ಎರಡು ವರ್ಷಗಳ ಕಾಲ ಮರಿಗಳನ್ನು ತನ್ನೊಟ್ಟಿಗೆ ಇಟ್ಟುಕೊಂಡು ಬದುಕುವುದನ್ನು ಕಲಿಸುತ್ತದೆ.

ಒರಾಂಗುಟನ್‌ಗೆ ಅಮ್ಮನೇ ಶ್ರೀರಕ್ಷೆ

ಒರಾಂಗುಟನ್ ಸಂಕುಲದ ಬದುಕು ಕುತೂಹಕಾರಿ. ತಾಯಿ ಒರಾಂಗುಟನ್ ಮತ್ತು ಮರಿಗಳ ನಡುವಿನ ಬಾಂಧವ್ಯ ಅನನ್ಯವಾದುದು. ಹುಟ್ಟಿದ ಎರಡು ವರ್ಷಗಳ ಕಾಲ ಮರಿಗಳು ತಾಯಿಯನ್ನು ಬಿಟ್ಟು ಕದಲುವುದಿಲ್ಲ. 6ರಿಂದ 7 ವರ್ಷಗಳ ಕಾಲ ಅವುಗಳ ಲಾಲನೆ, ಪಾಲನೆ ಮಾಡುವುದು ತಾಯಿಯೇ.

ಕಾಡಿನ ಯಾವ ಮೂಲೆಯಲ್ಲಿ ಆಹಾರ ಸಿಗುತ್ತದೆ, ಏನನ್ನು ಭಕ್ಷಿಸಬೇಕು, ಏನನ್ನು ತಿನ್ನಬಾರದು ಎನ್ನುವುದನ್ನು ಮರಿಗಳಿಗೆ ಕಲಿಸಿಕೊಡುತ್ತದೆ. ಹೆಣ್ಣು ಒರಾಂಗುಟನ್‌ಗಳು 15ರಿಂದ 16ರ ಪ್ರಾಯಕ್ಕೆ ತಲುಪುವವರೆಗೂ ಅಮ್ಮನೊಟ್ಟಿಗೆ ನಿರಂತರ ಸಂಪರ್ಕ ಹೊಂದಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು