ಗುರುವಾರ , ಅಕ್ಟೋಬರ್ 29, 2020
28 °C

PV Web Exclusive | ರಣಹದ್ದು ಸಂತತಿಯ ಉಳಿವಿಗಾಗಿ ಕೈಜೋಡಿಸಿ...!

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ವನ್ಯಜೀವಿ ಸಂಪತ್ತು ಅಂದರೆ ಆನೆ, ಹುಲಿ, ಚಿರತೆ, ಸಿಂಹ ಮಾತ್ರ ಅಲ್ಲ. ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿ ಕೂಡ ತನ್ನದೇ ಆದ ಮಹತ್ವ ಹೊಂದಿರುತ್ತದೆ. ಅಂತೆಯೇ, ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಲು ಈ ಭೂಮಿ ಮೇಲಿರುವ ಪ್ರತಿಯೊಂದು ಜೀವಿ ಕೂಡ ಒಂದೊಂದು ಪಾತ್ರ ನಿರ್ವಹಿಸುತ್ತದೆ. ಈ ಕಾರಣಕ್ಕಾಗಿಯೇ ಅರಣ್ಯ ಇಲಾಖೆ ಈ ವರ್ಷ ‘ವನ್ಯಜೀವಿ ಸಪ್ತಾಹ’ ಆಚರಿಸುವ ವೇಳೆ ಅಳಿವಿನ ಅಂಚಿನಲ್ಲಿರುವ ರಣಹದ್ದುಗಳ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸುವಂತೆ ಜಾಗೃತಿ ಮೂಡಿಸಿದೆ. ‘ಭವಿಷ್ಯಕ್ಕಾಗಿ ರಣಹದ್ದುಗಳು’ (Vulture for Future) ಎಂಬುದು ಘೋಷವಾಕ್ಯವಾಗಿದೆ.

***

ಜೀವ ವೈವಿಧ್ಯ ಸರಪಳಿಯ ಪ್ರಮುಖ ಕೊಂಡಿಯಾಗಿ ತನ್ನ ವಿಶಿಷ್ಟ ಕಾರ್ಯದ ಮೂಲಕ ಗುರುತಿಸಿಕೊಂಡಿರುವ ರಣಹದ್ದುಗಳ ಸಂತತಿ ಕ್ಷೀಣಿಸುತ್ತಿರುವ ಬಗ್ಗೆ ಪಕ್ಷಿಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಕನಿಷ್ಠ ಒಂಬತ್ತು ಜಾತಿಯ ರಣಹದ್ದುಗಳಿದ್ದು, ಅವು ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ವಾಸ ಮಾಡುವಂತಹ ಗುಣ ಮೈಗೂಡಿಸಿಕೊಂಡಿವೆ. ಆದರೂ, ಅವುಗಳ ಸಂತತಿ ದಿನೇ ದಿನೇ ಕಡಿಮೆಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. 

ರಣಹದ್ದುಗಳ ಸಂತತಿಯ ಏರಿಳಿತದ ಗ್ರಾಫ್‌ ನೋಡಿದರೆ ಕಳೆದ ಒಂದು– ಒಂದೂವರೆ ದಶಕದಲ್ಲಿ ರಣಹದ್ದುಗಳ ಸಂಖ್ಯೆಯಲ್ಲಿ ಶೇ 90ರಷ್ಟು ಕಡಿಮೆಯಾಗಿದೆ. ಇದು ಆತಂಕಕಾರಿ ಬೆಳವಣಿಗೆ ಎಂಬುದು ತಜ್ಞರ ಅಭಿಮತ.


ಬಿಳಿಬೆನ್ನಿನ ರಣಹದ್ದು

ಹುಲಿ, ಸಿಂಹ, ಚಿರತೆ, ಆನೆ, ಜಿಂಕೆ, ಕರಡಿ ಅಥವಾ ಮತ್ತಿತರ ಪ್ರಾಣಿಗಳನ್ನು ಮನುಷ್ಯ ಚರ್ಮ, ಮಾಂಸ, ಉಗುರು ಮತ್ತಿತರ ಕಾರಣಗಳಿಗಾಗಿ ಬೇಟೆ ಆಡುತ್ತಾನೆ. ಆದರೆ, ರಣಹದ್ದುಗಳನ್ನು ಯಾರೂ ಬೇಟೆ ಆಡುತ್ತಿಲ್ಲ. ಆದರೂ, ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕುಸಿಯುತ್ತಿದೆ. ಮನುಷ್ಯನ ದಿನನಿತ್ಯದ ಕಾರ್ಯಚಟುವಟಿಕೆಗಳು ಅಮೂಲ್ಯವಾದ ವನ್ಯಜೀವಿ ಸಂಪತ್ತಿನ ಮೇಲೆ ಯಾವ ರೀತಿ ಪರೋಕ್ಷವಾಗಿ ದುಷ್ಪರಿಣಾಮ ಬೀರಬಲ್ಲದು ಎಂಬುದಕ್ಕೆ ರಣಹದ್ದುಗಳೇ ಜೀವಂತ ಉದಾಹರಣೆಯಾಗಿದೆ.

‘ಜಾನುವಾರುಗಳ ನೋವು ನಿವಾರಕ ಔಷಧಿ ತಯಾರಿಕೆಗೆ ಡಿಕ್ಲೋಫೆನಾಕ್ ಎಂಬ ಡ್ರಗ್‌ ಬಳಕೆಯಾಗುತ್ತದೆ. ಒಂದು ವೇಳೆ, ಈ ಔಷಧ ನೀಡಲಾಗಿರುವ ಜಾನುವಾರು ಸತ್ತು ಅದರ ಮಾಂಸವನ್ನು ರಣಹದ್ದುಗಳು ತಿಂದರೆ; ಆ ಮೂಲಕ ಅವುಗಳ ದೇಹಕ್ಕೆ ಅಪಾಯಕಾರಿ ವಿಷ ಸೇರುತ್ತದೆ. ಆಗ ರಣಹದ್ದುಗಳ ರಕ್ತವ್ಯವಸ್ಥೆ ಹದಗೆಡುತ್ತದೆ. ಇದು ರಣಹದ್ದುಗಳ ಸಂತತಿಯ ನಾಶಕ್ಕೆ ಕಾರಣವಾಗುತ್ತದೆ’ ಎನ್ನುತ್ತಾರೆ ಧಾರವಾಡ ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ್‌.

‘ರಣಹದ್ದುಗಳು ಗಾತ್ರದಲ್ಲಿ ದೊಡ್ಡವು. ಅವುಗಳ ಸಂತಾನೋತ್ಪತ್ತಿ ಕ್ರಿಯೆ ತುಂಬ ನಿಧಾನ. ದೀರ್ಘಕಾಲ ಬದುಕುವ ರಣಹದ್ದು ವರ್ಷಕ್ಕೆ ಸರಾಸರಿ ಒಂದು ಮೊಟ್ಟೆಯನ್ನು ಮಾತ್ರ ಇಡುತ್ತದೆ. ಆದರೆ, ಮೊಟ್ಟೆಯೊಳಗಿನಿಂದ ಮರಿ ಹೊರಕ್ಕೆ ಬರಲು ತೊಡಕಾಗುವುದೇ ಈ ಡಿಕ್ಲೋಫೆನಾಕ್. ಮೊಟ್ಟೆಯೊಳಗೆ ಮರಿ ಭದ್ರವಾಗಿ ಬೆಳೆಯಲು ಕವಚ ಗಟ್ಟಿಯಾಗಿರಬೇಕು. ಆದರೆ, ಡಿಕ್ಲೋಫೆನಾಕ್ ರಣಹದ್ದುಗಳ ಮೊಟ್ಟೆಯ ಕೋಶವನ್ನು ಮೃದುಗೊಳಿಸುತ್ತದೆ. ಹೀಗೆ ಡಿಕ್ಲೋಫೆನಾಕ್ ರಣಹದ್ದುಗಳ ಸಂತತಿಯ ನಾಶಕ್ಕೆ ಕಾರಣವಾಗುತ್ತಿದೆ. ರಣಹದ್ದುಗಳ ಸಾವಿಗೆ ಮನುಷ್ಯ ನೇರ ಕಾರಣವಾಗದಿದ್ದರೂ, ತನಗೆ ಅರಿವಿಲ್ಲದಂತೆಯೇ ಅಮೂಲ್ಯ ಪಕ್ಷಿಗಳ ಸಂತತಿಯನ್ನು ಮುಗಿಸುತ್ತಿದ್ದಾನೆ’ ಎನ್ನುತ್ತಾರೆ ಮಂಜುನಾಥ ಚವ್ಹಾಣ್‌ .


ರಾಮದೇವರ ಬೆಟ್ಟದಲ್ಲಿನ ಉದ್ದಕೊಕ್ಕಿನ ರಣಹದ್ದು

ಅರಣ್ಯ ಹಾಗೂ ವನ್ಯಜೀವಿ ಸಂಪತ್ತಿನ ನಾಶಕ್ಕೆ ಮನುಷ್ಯ ನೇರವಾಗಿ ಅಲ್ಲದಿದ್ದರೂ ಅನೇಕ ರೀತಿಯಲ್ಲಿ ಪರೋಕ್ಷವಾಗಿ ಕಾರಣನಾಗುತ್ತಿದ್ದಾನೆ. ವನ್ಯಜೀವಿ ಸಂಪತ್ತಿನ ಸಮತೋಲನ ಕಾಯ್ದುಕೊಳ್ಳುವಲ್ಲಿ ರಣಹದ್ದುಗಳು ಪರಿಣಾಮಕಾರಿ ಪಾತ್ರ ವಹಿಸುತ್ತವೆ. ಹಾಗಾಗಿ, ಅರಣ್ಯ ಸಂರಕ್ಷಣೆಯಲ್ಲಿ ರಣಹದ್ದುಗಳ ಪಾತ್ರವನ್ನು ಜನತೆಗೆ ಮನವರಿಕೆ ಮಾಡಿಕೊಡುವುದು ಇಲಾಖೆಯ ಉದ್ದೇಶವಾಗಿದೆ.

ಅಳಿವಿನಂಚಿನಲ್ಲಿರುವ ರಣಹದ್ದುಗಳನ್ನು ಪೋಷಿಸಿ ಸಂರಕ್ಷಣೆ ಮಾಡುವ ಉದ್ದೇಶದಿಂದ ರಾಮನಗರ ಜಿಲ್ಲೆಯಲ್ಲಿರುವ ರಾಮದೇವರ ಬೆಟ್ಟದ 856 ಎಕರೆ ಪ್ರದೇಶವನ್ನು ರಣಹದ್ದುಗಳ ವನ್ಯಜೀವಿಧಾಮ ಎಂದು ಘೋಷಿಸಲಾಗಿದೆ. ಇದು ದೇಶದ ಮೊದಲ ರಣಹದ್ದುಗಳ ವನ್ಯಜೀವಿಧಾಮ. ಹರಿಯಾಣದಲ್ಲಿ ರಣಹದ್ದುಗಳ ಬ್ರೀಡಿಂಗ್‌ ಸೆಂಟರ್‌ ತೆರೆಯಲಾಗಿದೆ. ಈಗ ದಕ್ಷಿಣ ಭಾರತದಲ್ಲೂ ರಣಹದ್ದುಗಳ ತಳಿ ಸಂವರ್ಧನಾ ಕೇಂದ್ರ ಆರಂಭಿಸಲಾಗಿದೆ ಎನ್ನುತ್ತಾರೆ ಅವರು.


ಕಿಂಗ್‌ ರಣಹದ್ದು

ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿಗಳ ಸಂರಕ್ಷಣೆಗೆ ಮಹತ್ವ ನೀಡಬೇಕು. ರಾಜ್ಯ ಮತ್ತು ದೇಶದ ವಿವಿಧೆಡೆ ಇರುವ ಅಮೂಲ್ಯ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ರಕ್ಷಿಸುವ ಸಲುವಾಗಿ ಕೆಲವನ್ನು ವನ್ಯಜೀವಿಧಾಮವಾಗಿ ಘೋಷಣೆ ಮಾಡಲಾಗಿದೆ. ಅರಣ್ಯ ಮತ್ತು ವನ್ಯಜೀವಿ ರಕ್ಷಣೆ ಅರಣ್ಯ ಇಲಾಖೆಯವರಿಂದ ಮಾತ್ರ ಸಾಧ್ಯವಿಲ್ಲ. ಇದರಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪಾತ್ರವೂ ಬಹುಮುಖ್ಯ. ಮನುಷ್ಯ ಪ್ರಕೃತಿಯಿಂದ ಸಾಕಷ್ಟು ಪಡೆದುಕೊಳ್ಳುತ್ತಾನೆ. ಪ್ರಕೃತಿಗೆ ಎಲ್ಲವನ್ನೂ ಮರಳಿ ಕೊಡುವುದು ಸಾಧ್ಯವಿಲ್ಲ. ಆದರೂ, ಅಳಿವಿನಂಚಿನಲ್ಲಿರುವ ಇಂತಹ ಪಕ್ಷಿಗಳ ರಕ್ಷಣೆಗೆ ಕೈಜೋಡಿಸಬೇಕು. ಆಗ ಮಾತ್ರ ನಮ್ಮ ಮುಂದಿನ ಪೀಳಿಗೆ ರಣಹದ್ದುಗಳನ್ನು ನೇರವಾಗಿ ಕಣ್ತುಂಬಿಕೊಳ್ಳಲು ಸಾಧ್ಯ.‌

ರಣಹದ್ದುಗಳಿಂದ ಪರಿಸರ ಮತ್ತು ಮನುಷ್ಯನಿಗೆ ಆಗುತ್ತಿರುವ ಉಪಯೋಗ, ರಣಹದ್ದುಗಳ ಸಂತತಿಯ ವಿನಾಶಕ್ಕೆ ಕಾರಣವಾಗಿರುವ ಔಷಧಿಗಳು ಹಾಗೂ ಅವುಗಳನ್ನು ಬಳಸದಿರುವಂತೆ ಜಾಗೃತಿ ಮೂಡಿಸುವ 5 ನಿಮಿಷ 41 ಸೆಕೆಂಡ್‌ಗಳ ‘ಜಟಾಯು ಒಂದು ರಣಹದ್ದು’ ಎಂಬ ವಿಡಿಯೊ ಒಂದನ್ನು ಅರಣ್ಯ ಇಲಾಖೆ ಹೊರತಂದಿದೆ. ಇದು ರಣಹದ್ದುಗಳ ಬಗ್ಗೆ ಸಮಗ್ರ ನೋಟವನ್ನು ಕಟ್ಟಿಕೊಡುತ್ತದೆ.

ವಿಡಿಯೊ ನೋಡಿ...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು