ಗುರುವಾರ , ಮೇ 6, 2021
25 °C
ಕೊಳ್ಳೇಗಾಲ ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಯ ಓಡಾಟ, ಜನರಲ್ಲಿ ಆತಂಕ

ಅಧ್ಯಯನಕ್ಕಾಗಿ ಒಂಟಿ ಸಲಗಕ್ಕೆ ರೇಡಿಯೊ ಕಾಲರ್‌: ಚಲನವಲನದ ಮೇಲೆ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕು ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ರೇಡಿಯೊ ಕಾಲರ್‌ ಅಳವಡಿಸಿದ್ದ ಒಂಟಿ ಸಲಗವೊಂದು ಶುಕ್ರವಾರ ಬೆಳಿಗ್ಗೆ ಓಡಾಟ ನಡೆಸಿ ಜನರಲ್ಲಿ ಆತಂಕ ಸೃಷ್ಟಿಸಿತು. ಈ ಆನೆಗೆ ಅರಣ್ಯ ಇಲಾಖೆಯೇ ರೇಡಿಯೊ ಕಾಲರ್‌ ಅಳವಡಿಸಿದೆ ಎಂಬುದು ನಂತರ ತಿಳಿದು ಬಂತು. 

ಕೊಳ್ಳೇಗಾಲ ತಾಲ್ಲೂಕಿನ ಗುಂಡಾಲ್‌, ಆಂಜನೇಯಪುರ, ಉಗನಿಯ ಸೇರಿದಂತೆ ಹಲವು ಕಡೆಗಳಲ್ಲಿ ಕೃಷಿ ಜಮೀನುಗಳಲ್ಲಿ ಓಡಾಡಿರುವ ಆನೆ, ಕಬ್ಬು ಹಾಗೂ ಭತ್ತದ ಬೆಳೆಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿ ಮಾಡಿದೆ. ಜನರಿಗೆ ಯಾವುದೇ ತೊಂದರೆ ಮಾಡಿಲ್ಲ. 

ಶುಕ್ರವಾರ ಬೆಳಿಗ್ಗೆ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ, ಧನೆಗೆರೆ, ಉಗನಿಯ, ಪಾಳ್ಯ ಗ್ರಾಮದಲ್ಲಿ ಸಂಚರಿಸಿದ ಆನೆ, ಗುಂಡೇಗಾಲದ ರಸ್ತೆಯ ಮೂಲಕ ಮಧುವನಹಳ್ಳಿ, ಆಂಜನೆಯಪುರ ಮುಖ್ಯ ರಸ್ತೆಯ ತೋಟಗಳಲ್ಲಿ ಸುತ್ತಾಡಿ ನಂತರ ಸಿದ್ದೇಶ್ವರ ಬೆಟ್ಟದ ಮೂಲಕ ಬಿಳಿಗಿರಿರಂಗನ ಬೆಟ್ಟ ಅರಣ್ಯವನ್ನು ಸೇರಿತು. 

ಗ್ರಾಮೀಣ ಭಾಗಗಳಲ್ಲಿ ಆನೆಯನ್ನು ಕಂಡು ಜನರು ಹೆದರಿದರು. ಜನರ ಕೂಗಾಟದಿಂದ ಗಾಬರಿ ಬಿದ್ದ ಆನೆ, ವೇಗವಾಗಿ ಕಾಡನ್ನು ಸೇರಿತು. ಆನೆ ತಮಿಳುನಾಡಿನಿಂದ ಬಂದಿರಬಹುದು ಎಂಬ ಶಂಕೆಯನ್ನೂ ಸ್ಥಳೀಯರು ವ್ಯಕ್ತಪಡಿಸಿದರು.  

ಜಿಲ್ಲೆಯದ್ದೇ ಆನೆ

ಆದರೆ, ಆನೆಯು ಹೊರಗಡೆಯಿಂದ ಬಂದಿಲ್ಲ. ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಸೇರಿದ್ದು ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಧ್ಯಯನದ ಉದ್ದೇಶಕ್ಕಾಗಿ ಇಲಾಖೆಯ ವತಿಯಿಂದ ಅದಕ್ಕೆ ರೇಡಿಯೊ ಕಾಲರ್‌ ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು, ‘ಅಧ್ಯಯನದ ಭಾಗವಾಗಿ ಮೂರೂವರೆ ತಿಂಗಳ ಹಿಂದೆ 35 ವರ್ಷ ವಯಸ್ಸಿನ ಗಂಡಾನೆಗೆ ರೇಡಿಯೊ ಕಾಲರ್‌ ಅಳವಡಿಸಿದ್ದೇವೆ. ಶುಕ್ರವಾರ ಬೆಳಿಗ್ಗೆ ಗ್ರಾಮಗಳಲ್ಲಿ ಓಡಾಡಿದ್ದು ಇದೇ ಆನೆ. ಅದರ ಚಲನವಲನದ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ ಇದೆ’ ಎಂದು ಹೇಳಿದರು.

‘ಅದು ಕಾಡಿನಿಂದ ಹೊರಗಡೆ ಬಂದ ತಕ್ಷಣ ಸಿಬ್ಬಂದಿ ಅದನ್ನು ಮತ್ತೆ ಕಾಡಿಗೆ ಓಡಿಸುತ್ತಾರೆ. ಶುಕ್ರವಾರ ಬೆಳಿಗ್ಗೆ ನೀರು ಮತ್ತು ಆಹಾರ ಹುಡುಕಿಕೊಂಡು ಅದು ಕಾಡಿನಿಂದ ಹೊರಗಡೆ ಬಂದಿದೆ. ಜನರಿಗೆ ಯಾರಿಗೂ ತೊಂದರೆ ಮಾಡಿಲ್ಲ. ಎಲ್ಲಿಯೂ ನಿಂತಿಲ್ಲ. ಅದು ನಡೆದಾಡಿದ ಜಾಗದಲ್ಲಿ ಬೆಳೆ ಸ್ವಲ್ಪ ಹಾನಿಯಾಗಿದೆ. ಆನೆಯು ಈಗ ಬಿಆರ್‌ಟಿಯ ಸಿದ್ದಯ್ಯನಬೆಟ್ಟ ಪ್ರದೇಶದಲ್ಲಿ ಕಾಡನ್ನು ಸೇರಿದೆ’ ಎಂದು ಅವರು ಮಾಹಿತಿ ನೀಡಿದರು. 

ಮಾನವ ವ‌ನ್ಯಜೀವಿ ಸಂಘರ್ಷದ ಅಧ್ಯಯನದ ಉದ್ದೇಶ

ಮಾನವ–ವನ್ಯಜೀವಿ ಸಂಘರ್ಷಕ್ಕೆ ಸಂಬಂಧಿಸಿದ ಅಧ್ಯಯನದ ಭಾಗವಾಗಿ ಅರಣ್ಯ ಇಲಾಖೆ ಆನೆಗೆ ರೇಡಿಯೊ ಕಾಲರ್‌ ಅಳವಡಿಸಿದೆ. ಅರಣ್ಯ ಇಲಾಖೆ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಜಂಟಿಯಾಗಿ ಈ ಅಧ್ಯಯನ ನಡೆಸುತ್ತಿವೆ. 

‘ರೇಡಿಯೊ ಕಾಲರ್ ಮೂಲಕ ಆನೆಯ ಚಲನವಲನದ ಮೇಲೆ ನಿಗಾ ಇಡುತ್ತಿದ್ದೇವೆ. ಮಾನವ ವನ್ಯಜೀವಿ ಸಂಘರ್ಷದ ಬಗ್ಗೆ ಅಧ್ಯಯನ ನಡೆಸುವುದು ನಮ್ಮ ಮೊದಲ ಉದ್ದೇಶ. ಇದಲ್ಲದೇ, ಆನೆ ಕಾರಿಡಾರ್‌ ಗುರುತಿಸುವುದು, ಆನೆಗಳ ವರ್ತನೆಯ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕುವುದು ಇದರಿಂದ ಸಾಧ್ಯವಾಗಲಿದೆ‌’ ಎಂದು ವಿ.ಏಡುಕುಂಡಲು ಅವರು ತಿಳಿಸಿದರು. 

ಸ್ಥಳೀಯವಾಗಿ ಸುತ್ತಾಟ

ಮೂರೂವರೆ ತಿಂಗಳ ಹಿಂದೆ ರಾಮಾಪುರ ವನ್ಯಜೀವಿ ವಲಯದಲ್ಲಿ ಆನೆಗೆ ರೇಡಿಯೊ ಕಾಲರ್‌ ಹಾಕಲಾಗಿತ್ತು. ಆವಾಗಿನಿಂದಲೂ ಈ ಸಲಗ ಸ್ಥಳೀಯ ಅರಣ್ಯ ಪ್ರದೇಶದಲ್ಲಿ ಓಡಾಡುತ್ತಿದೆ. ಬಂಡಳ್ಳಿ, ಕೊತ್ತನೂರು ಪ್ರದೇಶದ ಅರಣ್ಯದಲ್ಲಿ ಇದ್ದ ಆನೆ ಎರಡು ದಿನಗಳ ಹಿಂದೆ ಗುಂಡಾಲ್‌ ಜಲಾಶಯ, ಪಾಳ್ಯ ಭಾಗಕ್ಕೆ ಬಂದಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು