ಶನಿವಾರ, ಜನವರಿ 25, 2020
28 °C
ದಶಕದ ನಂತರ ಮೈದುಂಬಿದ ಕೆರೆ; ಮೀನು ಬೇಟೆಗಾಗಿ ಹಾರಿ ಬಂದ ವಲಸೆ ಪಕ್ಷಿಗಳು

‘ಹೆಗ್ಗೇರಿ’ಯಲ್ಲಿ ರಿವರ್‌ ಟರ್ನ್‌ಗಳ ಕಲರವ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಪುಟ್ಟ ಮೀನನ್ನು ತೋರಿಸಿ ಸಂಗಾತಿಗೆ ಆಸೆ ಹುಟ್ಟಿಸುವ ಮೋಹಕ ಕಲೆ, ಕಣ್ಣ ರೆಪ್ಪೆ ಬಿಡುವ ಮುನ್ನವೇ ಬಾಯಿ ತೆರೆಯುವ ಮುದ್ದು ಮರಿಗಳಿಗೆ ತುತ್ತು ತಿನಿಸುವ ಮಾತೃತ್ವದ ಮಮಕಾರ, ಎದೆಗೂಡಿನಲ್ಲಿ ಮರಿಗಳನ್ನು ಬಚ್ಚಿಟ್ಟು, ಬೆಚ್ಚನೆಯ ಕಾವು ಕೊಡುತ್ತಾ, ಬದುಕಿನ ಪಾಠ ಹೇಳುವ ಆರೈಕೆಯ ಕೌಶಲವನ್ನು ಅದೆಲ್ಲಿಂದ ಕಲಿತವೋ? ಈ ರಿವರ್‌ ಟರ್ನ್‌ (ನದಿ ರೀವ) ಪಕ್ಷಿಗಳು.  

ಜೀವ–ಭಾವ ಮೇಳೈಸುವ ಚೆಂದದ ಆಟವನ್ನು, ಜೀವ–ಜೀವಗಳು ಶ್ರುತಿಗೊಳ್ಳುವ ದಿವ್ಯ ಗಳಿಗೆಯನ್ನು ನೀವು ಕಣ್ತುಂಬಿಕೊಳ್ಳಬೇಕೆಂದರೆ ನಗರದ ಹೊರವಲಯದಲ್ಲಿರುವ ಹೆಗ್ಗೇರಿ ಕೆರೆಗೆ ಬರಬೇಕು.    

ಹೌದು, ರಾಷ್ಟ್ರಿಯ ಹೆದ್ದಾರಿಗೆ (ಪುಣೆ– ಬೆಂಗಳೂರು) ಹೊಂದಿಕೊಂಡಿರುವ ಈ ಕೆರೆ ದಶಕಗಳ ನಂತರ ಮೈದುಂಬಿದೆ. ಹಾಗಾಗಿ ಉತ್ತರ ಭಾರತದಿಂದ ನೂರಾರು ರಿವರ್‌ ಟರ್ನ್‌ಗಳು ಸಂತಾನೋತ್ಪತ್ತಿಗಾಗಿ ವಲಸೆ ಬಂದಿವೆ. ಕೆರೆಯಲ್ಲಿ ಗಾಜಿನ ಮನೆ ನಿರ್ಮಿಸಲು ಕಟ್ಟಿರುವ ತಡೆಗೋಡೆಯ ಮೇಲೆ ಮುಂಜಾನೆ ಮತ್ತು ಮುಸ್ಸಂಜೆ ಹೊತ್ತಿನಲ್ಲಿ ಕುಳಿತುಕೊಳ್ಳುವ ‘ನದಿ ರೀವ’ಗಳ ಸೊಬಗನ್ನು ನೋಡುವುದೆಂದರೆ ಕಣ್ಣುಗಳಿಗೆ ಹಬ್ಬ. 

ಆವಾಸಸ್ಥಾನಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯದಿಂದ ಅಳಿವಿನಂಚಿನಲ್ಲಿರುವ ಈ ಪಕ್ಷಿಗಳು, ಬಹು ವರ್ಣಗಳನ್ನು ಹೊಂದಿರುವುದರಿಂದ ನೋಡಲು ಆಕರ್ಷಕವಾಗಿ ಕಾಣುತ್ತವೆ. ಮೇಲ್ಭಾಗ ಬೂದು ಬಣ್ಣ, ಕೆಳಭಾಗ ಬಿಳಿ ಬಣ್ಣವಿದ್ದು, ಕೊಕ್ಕು ಹಳದಿ ಬಣ್ಣದಿಂದ ಕೂಡಿರುತ್ತದೆ. ಪಾದಗಳು ನಸುಗೆಂಪಾಗಿದ್ದು, ಶಿರದ ಮೇಲ್ಭಾಗ ಕಪ್ಪು ಬಣ್ಣ ಹೊಂದಿರುತ್ತವೆ. 

ಜನಸಾಂದ್ರತೆ ಕಡಿಮೆ ಇರುವ ನದಿ ತೀರ ಮತ್ತು ಕೆರೆಯ ದಂಡೆಗಳನ್ನು ಆಯ್ಕೆ ಮಾಡಿಕೊಂಡು, ಮರಳು ದಿಬ್ಬ, ಕಲ್ಲಿನ ಪೊಟರೆ, ಹುಲ್ಲಿನ ಗರಿಗಳ ಮೇಲೆ ಹೆಚ್ಚಾಗಿ ರಿವರ್‌ ಟರ್ನ್‌ಗಳು ಮೊಟ್ಟೆ ಇಡುತ್ತವೆ. ಇವುಗಳ ಮುಖ್ಯ ಆಹಾರ ಮೀನು, ಕಪ್ಪೆ ಹಾಗೂ ಜಲಕೀಟಗಳು.   

ಕೆರೆ ದಂಡೆಯಲ್ಲಿ ಹೊಂಚು ಹಾಕಿ ಕುಳಿತುಕೊಳ್ಳುವ ಗಂಡು ರಿವರ್‌ ಟರ್ನ್, ಮೀನು ಸಿಕ್ಕಿದ ಮೇಲೆ ಅದನ್ನು ಶುದ್ಧ ನೀರಿನಲ್ಲಿ ತೊಳೆದು, ಸಂಗಾತಿ ಬಳಿ ಹೋಗಿ ರೆಕ್ಕೆಯನ್ನು ಗರಿಗೆದರಿಸಿ ಕೊಕ್ಕಿನಲ್ಲಿರುವ ಪುಟ್ಟ ಮೀನನ್ನು ತೋರಿಸಿ ಆಸೆ ಹುಟ್ಟಿಸುತ್ತದೆ. ಮೀನಿನ ಆಸೆಗಾಗಿ, ಸಂಗಾತಿಯ ಸಾಂಗತ್ಯವನ್ನು ಬಯಸುತ್ತದೆ ಹೆಣ್ಣು ‘ರೀವ’. ಆಗ ಜೀವ–ಜೀವಗಳು ಶ್ರುತಿಗೊಳ್ಳುತ್ತವೆ. ಹಕ್ಕಿ ವಿಕಸನದ ಈ ಅದ್ಭುತ ದೃಶ್ಯಗಳು ಹೆಗ್ಗೇರಿ ಕೆರೆಯಲ್ಲಿ ಕಂಡು ಬರುತ್ತಿವೆ. 

ಈ ಕೆರೆ 682 ಎಕರೆ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದ್ದು, 12 ಅಡಿ ಆಳವನ್ನು ಹೊಂದಿದೆ. ಈ ಕೆರೆಯ ನೀರನ್ನು ಸದ್ಯ ಕೃಷಿ ಚಟುವಟಿಕೆಗಾಗಿ ಬಳಸಲಾಗುತ್ತದೆ. ಹಾವೇರಿ ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿರುವ ನಗರಸಭೆಗೆ, ಹೆಗ್ಗೇರಿ ಕೆರೆ ತುಂಬಿರುವುದು ‘ಆನೆ ಬಲ’ ಬಂದಂತಾಗಿದೆ. 

ಈ ‘ನದಿ ರೀವ’ಗಳ ಜತೆ ನೀರು ಕಾಗೆ, ಬೆಳ್ಳಕ್ಕಿ, ಮಿಂಚುಳ್ಳಿಗಳು ಕಂಡು ಬರುತ್ತಿವೆ. ಪೇಂಟೆಂಡ್‌ ಸ್ಟಾರ್ಕ್ (ಬಣ್ಣದ ಕೊಕ್ಕರೆ), ಕಾಟನ್‌ ಟೀಲ್‌ (ಬಿಳಿ ಬಾತು), ಸ್ಪಾಟ್‌ ಬಿಲ್ಡ್‌ ಡಕ್ (ವರಟೆ) ಮುಂತಾದ ಅತಿಥಿಗಳು ಬೆರಳೆಣಿಕೆಯಷ್ಟು ಬಂದಿದ್ದರೂ, ಅವು ಅಷ್ಟಾಗಿ ಕಣ್ಣಿಗೆ ಕಾಣುತ್ತಿಲ್ಲ. ಈ ಕೆರೆಯನ್ನು ಪ್ರತಿ ವರ್ಷ ತುಂಬಿಸುವ ಜತೆಗೆ ಸಂರಕ್ಷಿಸಿದರೆ, ತರಹೇವಾರಿ ವಲಸೆ ಪಕ್ಷಿಗಳು ಬಂದು ಇಲ್ಲಿ ಬದುಕು ಕಟ್ಟಿಕೊಳ್ಳುತ್ತವೆ ಎನ್ನುತ್ತಾರೆ ಪಕ್ಷಿ ಪ್ರಿಯರು. 

ಪ್ರತಿಕ್ರಿಯಿಸಿ (+)