ಭಾನುವಾರ, ಅಕ್ಟೋಬರ್ 17, 2021
23 °C

ತಮಿಳುನಾಡಿನಲ್ಲಿ ಹುಲಿ ಪತ್ತೆಗೆ ಬಂಡೀಪುರದ ರಾಣಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮದುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಾಲ್ವರನ್ನು ಕೊಂದಿರುವ ಹುಲಿ ಪತ್ತೆಗೆ, ಅರಣ್ಯ ಅಪರಾಧ ಪತ್ತೆಯಲ್ಲಿ ನಿಷ್ಣಾತವಾಗಿರುವ ಬಂಡೀಪುರದ ಶ್ವಾನ ರಾಣಾನ ಸಹಕಾರವನ್ನು ಅಲ್ಲಿನ ಅರಣ್ಯ ಇಲಾಖೆ ಪಡೆದಿದೆ. 

ನೀಲಗಿರಿ ಜಿಲ್ಲೆಯ ಪಂದಲೂರು ತಾಲ್ಲೂಕಿನ ದೇವನ್ ಎಸ್ಟೇಟ್ ಸೇರಿದಂತೆ ಮಸಿನಗುಡಿ ವಲಯದಲ್ಲಿ ಮೂವರನ್ನು ಹುಲಿ ಹತ್ಯೆ ಮಾಡಿತ್ತು. ಕಳೆದ ವರ್ಷ ಮಸಿನಗುಡಿ ಬಳಿ ಗೌರಿ, ಮಾದ ಎಂಬುವರನ್ನು ಹತ್ಯೆ ಮಾಡಿತ್ತು.

ಕಳೆದ ವಾರ ದೇವನ್ ಎಸ್ಟೇಟ್‌ನ ತೋಟದ ಕೆಲಸಗಾರರೊಬ್ಬರನ್ನು ಹುಲಿ ಕೊಂದಿತ್ತು. ಮದುಮಲೆ ಬಳಿಯ ಸಿಂಗಾರ ವಲಯದ ಬಳಿ ಹಸು ಮೇಯಿಸುತ್ತಿದ್ದ ಬಸವ ಎಂಬ ಆದಿವಾಸಿಯನ್ನು ಕೊಂದಿತ್ತು. ಇದರಿಂದಾಗಿ ಆ ಪ್ರದೇಶದಲ್ಲಿ ಜನರು ಭಯಭೀತರಾಗಿದ್ದು, ಮನುಷ್ಯರನ್ನು ಹತ್ಯೆ ಮಾಡಿರುವ ಹುಲಿಯನ್ನು ಕೊಲ್ಲುವಂತೆ ಪ್ರತಿಭಟನೆ ನಡೆಸಿದ್ದರು. 

ತಮಿಳುನಾಡಿನ ಅರಣ್ಯ ಇಲಾಖೆ ಹುಲಿಯ ಸೆರೆಗೆ ಕ್ಯಾಮೆರಾ ಅಳವಡಿಕೆ, ಡ್ರೋನ್‌ ಬಳಕೆ, ಹೆಜ್ಜೆ ಗುರುತಿನ ಆಧಾರದಲ್ಲಿ ಪತ್ತೆ ಹುಲಿ ಜಾಡನ್ನೂ ಅರಸುತ್ತಿದ್ದರೂ; ವ್ಯಾಘ್ರ ಪತ್ತೆಯಾಗಿಲ್ಲ. ಹೀಗಾಗಿ ರಾಣಾನ ಸಹಾಯವನ್ನು ಅಲ್ಲಿನ ಅಧಿಕಾರಿಗಳು ಕೋರಿದ್ದಾರೆ. 

ಜರ್ಮನ್‌ ಶೆಫರ್ಡ್‌ ತಳಿಯ ರಾಣಾ ಅರಣ್ಯ ಅಪರಾಧ ಪತ್ತೆಗೆ ಹೆಸರುವಾಸಿ. ನಿವೃತ್ತಿಯ ಅಂಚಿನಲ್ಲಿದ್ದರೂ, ಸೂಕ್ಷ್ಮಮತಿ ರಾಣಾ ಹಲವು ಮಹತ್ವದ ಪ್ರಕರಣ ಭೇದಿಸಲು ಅರಣ್ಯ ಇಲಾಖೆಗೆ ಸಹಾಯ ಮಾಡಿದೆ. 2015ರಿಂದ ಕರ್ತವ್ಯದಲ್ಲಿರುವ ರಾಣಾನ ಸಹಾಯದಿಂದ 50 ಹೆಚ್ಚು ಕ್ಲಿಷ್ಟಕರವಾದ ಪ್ರಕರಣಗಳನ್ನು ಅಧಿಕಾರಿಗಳು ಭೇದಿಸಿದ್ದಾರೆ.

‘ಮದುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರ ಮೇಲೆ ದಾಳಿ ಮಾಡಿರುವ ಹುಲಿಯನ್ನು ಪತ್ತೆ ಹಚ್ಚುವುದಕ್ಕಾಗಿ ಅಲ್ಲಿನ ಅಧಿಕಾರಿಗಳು ರಾಣಾನನ್ನು ಕಳುಹಿಸಿಕೊಡುವಂತೆ ಕೇಳಿದ್ದಾರೆ. ಹಾಗಾಗಿ, ಎರಡು ದಿನದ ಹಿಂದೆ ಕಳುಹಿಸಲಾಗಿದೆ’ ಎಂದು ವಲಯ ಅರಣ್ಯ ಅಧಿಕಾರಿ ನವೀನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು