ಬುಧವಾರ, ಜೂನ್ 16, 2021
23 °C

ಆನೆಗೆ ಅಂಕುಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶ್ವದಲ್ಲಿಯೇ ಅತಿಹೆಚ್ಚು ಆನೆಗಳಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದಲ್ಲಿ ಆನೆ ಮತ್ತು ಮನುಷ್ಯ ಸಂಘರ್ಷವೂ ಹೆಚ್ಚು. ಈ ಸಂಘರ್ಷದಲ್ಲಿ ಪ್ರತಿವರ್ಷ ನೂರಕ್ಕೂ ಹೆಚ್ಚು ಕಾಡಾನೆಗಳು ಸತ್ತರೆ, 500ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಾರೆ.

ಈ ಸಂಘರ್ಷ ತಪ್ಪಿಸಲು ದೇಶದ ವಿವಿಧೆಡೆ ಕೈಗೊಂಡಿರುವ ಕ್ರಮಗಳ ವಿವರ ಇರುವ ವರದಿಯನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ವಿಶ್ವ ಆನೆ ದಿನದ (ಆಗಸ್ಟ್‌ 12) ಸಂದರ್ಭದಲ್ಲಿ ಪ್ರಕಟಿಸಿದೆ. ಡ್ರೋನ್‌, ರೇಡಿಯೊ ಕಾಲರ್‌ ಬಳಕೆ, ಸೌರಶಕ್ತಿ ಚಾಲಿತ ಬೇಲಿ ಮತ್ತು ಸೆನ್ಸರ್‌ಗಳ ಆಧುನಿಕ ತಂತ್ರಜ್ಞಾನ ಬಳಕೆ ಪರಿಣಾಮಕಾರಿ ಎಂದು ವರದಿಯು ಹೇಳಿದೆ. ಜತೆಗೆ, ಸಾಂಪ್ರದಾಯಿಕವಾದ ತಂತ್ರಗಳು ಕೂಡ ಫಲ ನೀಡುತ್ತಿವೆ ಎಂಬುದರತ್ತ ವರದಿಯು ಬೆಳಕು ಚೆಲ್ಲಿದೆ.  

ಸದ್ಯದ ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ 30 ಸಾವಿರ ಆನೆಗಳಿವೆ. ಆನೆಗಳ ಸಂರಕ್ಷಣೆಗೆ ಕೈಗೊಂಡ ಕ್ರಮಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಆನೆಗಳ ವಾಸಸ್ಥಾನ ರಕ್ಷಣೆ, ಅರಣ್ಯದಲ್ಲಿಯೇ ಕುಡಿಯುವ ನೀರು ಮತ್ತು ಆಹಾರ ಮೂಲ ಲಭ್ಯವಾಗುವಂತೆ ನೋಡಿಕೊಳ್ಳುವ ಪ್ರಯತ್ನಗಳು ಭರದಿಂದ ಸಾಗಿವೆ. ಮುಂಬರುವ ವರ್ಷಗಳಲ್ಲಿ ಅದರ ಪರಿಣಾಮ ಗೋಚರಿಸಲಿದೆ ಹಾಗೂ ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ಗಣನೀಯವಾಗಿ ನಿಯಂತ್ರಣಕ್ಕೆ ಬರಲಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್ ಆಶಯ ವ್ಯಕ್ತಪಡಿಸಿದ್ದಾರೆ.

ಆನೆಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಕರ್ನಾಟಕ, ಕೇರಳ, ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳು ಮಾನವನೊಂದಿಗೆ ವನ್ಯಜೀವಿಗಳ ಸಂಘರ್ಷ ಕೊನೆಗಾಣಿಸಲು ಅನುಸರಿಸುತ್ತಿರುವ ಕಾರ್ಯತಂತ್ರಗಳ ಸಮಗ್ರ ಮಾಹಿತಿ ವರ್ಷಾಂತ್ಯದಲ್ಲಿ ಅರಣ್ಯ ಇಲಾಖೆಯ ಪೋರ್ಟಲ್‌ನಲ್ಲಿ ದೊರೆಯಲಿದೆ.   

ಮಾನವ–ವನ್ಯಜೀವಿ ಸಂಘರ್ಷ ತಪ್ಪಿಸಲು ತಮಿಳುನಾಡಿನ ತೂಗು ಬೇಲಿಗಳು, ಕರ್ನಾಟಕದ ಅರಣ್ಯಗಳಲ್ಲಿ ನಿರ್ಮಿಸಿರುವ ತಡೆಗೋಡೆಗಳು, ಪಶ್ಚಿಮ ಬಂಗಾಳದಲ್ಲಿ ಚಾಲ್ತಿಯಲ್ಲಿರುವ ಮೆಣಸು ಅಥವಾ ಖಾರದಪುಡಿ ಹೊಗೆ ಪರಿಣಾಮಕಾರಿ. ಸ್ಥಳೀಯವಾಗಿ ಬಳಕೆಯಲ್ಲಿರುವ ಇಂಥ ಸಾಂಪ್ರದಾಯಿಕ ಪದ್ಧತಿಗಳನ್ನು ಇತರೆಡೆಯೂ ಅನುಸರಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಕಾಡಾನೆಗಳನ್ನು ವಸತಿ ಪ್ರದೇಶ ಮತ್ತು ಕೃಷಿ ಜಮೀನುಗಳಿಂದ ದೂರ ಇಡಲು ಕರ್ನಾಟಕದಲ್ಲಿ ಅತಿಕಡಿಮೆ ಖರ್ಚಿನಲ್ಲಿ ಸ್ಥಳೀಯರು ತಮ್ಮದೇ ತಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ. ಪಟಾಕಿ ಸದ್ದು, ಪರಿಸರಸ್ನೇಹಿ ಜೇನುಬೇಲಿ, ತಡೆಬೇಲಿ, ಕಂದಕ, ರೇಡಿಯೊ ಕಾಲರ್‌, ಟ್ರಿಪ್‌ ಅಲಾರಂ, ಪ್ರಖರ ಬೆಳಕು ಬೀರುವ ದೀಪ‌, ಟಾರ್ಚ್‌ ಮೂಲಕ ಕಾಡಾನೆಗಳ ದಾಳಿ ತಡೆಯಲಾಗುತ್ತಿದೆ. ಜೇನುನೊಣಗಳ ಮೂಲಕ ಆನೆಗಳನ್ನು ಹೆದರಿಸುವ ಜೇನುಬೇಲಿ ‘ಉತ್ತರ ಕನ್ನಡ ಮಾದರಿ’ ಎಂದು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು