ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Drought | ಯಾಕಾದರೂ ಮಳೆ ಹೋದವೋ...

Published 22 ಅಕ್ಟೋಬರ್ 2023, 0:30 IST
Last Updated 22 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ನಾಡಿನ ಹಲವು ಜಿಲ್ಲೆಗಳಲ್ಲಿ ಬರ ಆವರಿಸಿದೆ. ಮುಂಗಾರು ಕೈಕೊಟ್ಟ ನಂತರದ ಕಾಲದಲ್ಲಿ ರೈತರ ಆಚರಣೆಗಳಲ್ಲಿ ಎಂದಿನ ಸಂಭ್ರಮ ಇಲ್ಲವಾಗಿದೆ.

‘ನೌಕರಿ ಮಾಡೌರು ಪಗಾರ ಬರೋದು ಒಂದೆರ್ಡ್‌ ದಿನಾ ತಡಾ ಆದ್ರೂ ಪರದಾಡ್ತಾರೆ. ನಾವು ಎಂಟು ತಿಂಗಳಿಂದ ಹೊಲದಲ್ಲಿ ಸತತ ಕೆಲಸ ಮಾಡ್ತಾ ಅದವಿ. ಆದ್ರೂ ನಮಗೆ ಪ್ರತಿಫಲ ಸಿಗುತ್ತೆ ಅನ್ನೂ ಗ್ಯಾರಂಟಿ ಇಲ್ಲ. ಮಳೆ ಕೈಕೊಟ್ಟು ಹೋಯ್ತು. ಇನ್ನೇನು ಕೈಗೆ ಬಂದೇಬಿಟ್ತು ಅನ್ಕಂಡಿರೋ ಬೆಳೀ ಎಲ್ಲಾ ಒಣಗಿದ್ವು. ಇನ್ನೆಲ್ಲಿ ಪ್ರತಿಫಲ?’

ಭರಪೂರ ಹಸಿರಿನಿಂದ ಕೂಡಿದ್ದ ಮೆಕ್ಕೆಜೋಳ ಕೇವಲ ಎರಡೇ ಎರಡು ವಾರಗಳ ಅವಧಿಯಲ್ಲಿ ಸಂಪೂರ್ಣ ಒಣಗಿ ನಿಂತಿದ್ದಲ್ಲದೇ, ತನ್ನೆಲ್ಲ ಭರವಸೆಯನ್ನೂ ಒಣಗಿಸಿಬಿಟ್ಟಿದ್ದಕ್ಕೆ ನಸೀಬನ್ನೇ ಹಳಿದುಕೊಳ್ಳುತ್ತ ಮಾತಿಗೆ ಇಳಿದಿದ್ದು ಹರಿಹರ ಸಮೀಪದ ಚಳಗೇರಿಯ ರೈತ ರಾಜು ಹೊನ್ನಕ್ಕಳವರ್‌.

‘ಮಾರ್ಚ್‌ ತಿಂಗಳಿಂದ ಬಿಟ್ಟೂ ಬಿಡದೇ ದಿನವೂ ಹೊಲದಲ್ಲಿ ಕೆಲಸ ಮಾಡ್ತಾ ಅದವಿ. ಬೇಸಿಗೆಯಲ್ಲಿ ರಂಟೆ ಹೊಡೆಯೋ ಮೂಲಕ ನಮ್ಮ ಈ ವರ್ಷದ ಕೆಲಸ ಶುರು ಆಗೇತಿ. ಆಮೇಲೆ ಬಿತ್ತನೆ, ಕಳೇವು, ಎಡೆಕುಂಟೆ ಅಂತೆಲ್ಲ ಮುಗಿಸಿ ಗೊಬ್ಬರನೂ ಇಟ್ಟೇವಿ. ಮೇ, ಜೂನ್‌ನ್ಯಾಗ ಮಳೀ ಬರಬೇಕಿತ್ತು, ಬರಲಿಲ್ಲ. ಜುಲೈನಲ್ಲಿ ಹದಿನೈದ್‌ ಇಪ್ಪತ್‌ ದಿನ ಬಿಡದೇ ಸುರಿದು ನಮ್ಮಲ್ಲಿ ಭರವಸೆಯನ್ನೇನೋ ಮೂಡಿಸಿತ್ತು. ನಡನಡುವೆ ಮಳೆ ಕಣ್ಣಾಮುಚ್ಚಾಲೆ ಆಡಕಂತ ಹೋಯ್ತು. ಈ ವರ್ಸದ್‌ ಕತೀ ಇನ್ನೇನ್‌ ಮುಗೀತು ಅಂತ ಕೈ ಬಿಡಾಣ ಅನ್ನಷ್ಟರಾಗ ಮತ್‌ ಮಳೀ ಸುರೀತಿತ್ತು. ಹಿಂಗೆ ಬೆಳೀ ಒಣಗದು, ಚಿಗೀಯದು, ಒಣಗದು ಚಿಗೀಯದು ನಡದೇ ಇತ್ತು. ಕೆಲವರು ಮೊಳಕಾಲುದ್ದ ಬೆಳೆದು ಒಣಗಿದ್ದ ಮೆಕ್ಕೆಜೋಳದ ಹೊಲವನ್ನು ಹರಗಿ ಸಾಫ್‌ ಮಾಡಿದ್ರು. ನಾವು ಹಂಗೆ ಬಿಟ್ವಿ. ಬೆಳೀಗೆ ಒಂದಷ್ಟು ಕೀಡಿ (ಕೀಟ) ಹಿಡಕಂಡ್ವು ಅಂತ ಎಣ್ಣೀ (ಕೀಟನಾಶಕ) ಹೊಡದ್ವಿ. ಕೀಡಿ ಸತ್ವು. ಮತ್ತ ಗಿಡಾ ಚಿಗತ್ವು. ಸೂಲಂಗಿನೂ ಬಂತು. ಇನ್ನೇನು ಕಾಳ್‌ ಕಟ್ಟಬೇಕು, ತ್ಯನೀ ಹಿಡೀಬೇಕು ಅನ್ನುವಾಗ ಮಳೆ ಕೈಕೊಡ್ತು. ಬಹುಶಃ ಸೆಪ್ಟೆಂಬರ್‌ ಎರಡನೇ ವಾರ. ಆಗ ಕಣ್ಮರೆಯಾದ ಮಳೆ ಮತ್ತ ಬರಲಿಲ್ಲ. ಮೆಕ್ಕೆಜೋಳ ತ್ಯಲಿಮಟ ಬೆಳೆದು ಬಾಡಿ ಹೋಯ್ತು. ಕೆಲವು ಕಡೆ ತ್ಯನಿ ಹಿಡಕಂಡ್ರೂ ಭರಪೂರ ಕಾಳು ಹಿಡೀಲಿಲ್ಲ. ಕಣ್‌ ಹಾಯಿಸಿದಷ್ಟೂ ಹಸಿರೇ ಹಸಿರು ಕಾಣುತ್ತಿತ್ತು. ಈಗ ಎಲ್ಲ ಒಣಗಿಹೋಯ್ತು. ನಮ್ಮೂರ ರೈತರೆಲ್ಲ ಬೆಳೆಯುವ ಮುಖ್ಯಬೆಳೆ ಮೆಕ್ಕೆಜೋಳ. ಏನಿಲ್ಲ ಅಂದ್ರೂ 2,500 ಎಕರೆ ಭೂಮ್ಯಾಗ ಬೆಳೆದಿದ್ರು. ಒಬ್ಬರ ಮನೀಗೂ ಒಂದ್‌ ಕಾಳ್ ಬರಲಿಲ್ಲ.’

ರಾಜು ಎಲ್ಲವನ್ನೂ ಎಳೆಎಳೆಯಾಗಿ ವಿವರಿಸುತ್ತ ಹೋದರು. ಅವರ ಕಣ್ಣುಗಳಲ್ಲಿ ವಿಷಾದ ಮಡುಗಟ್ಟಿತ್ತು. ‘ಇನ್ನೊಂದು ದೊಡ್ಡ ಮಳೆ ಆಗಿದ್ರೆ...’ ಎನ್ನುತ್ತಾ ಕೈಕೈ ಹಿಸುಕಿಕೊಂಡಿದ್ದನ್ನು ನೋಡಿದರೆ, ಸದ್ಯದ ಮಟ್ಟಿಗೆ ಮಳೆ ಮರೀಚಿಕೆ ಆಗಿದ್ದು ತೀವ್ರ ನಿರಾಸೆ ಮೂಡಿಸಿತ್ತು. ಅಂತೆಯೇ ಅವರಲ್ಲಿ ಹಿಂಗಾರು ಹಂಗಾಮಿನ ಬಗೆಗೂ ಯಾವುದೇ ವಿಶ್ವಾಸ ಉಳಿದಂತೆ ಕಾಣಲಿಲ್ಲ.

ಮೆಕ್ಕೆಜೋಳ ಕಾಳು ಕಟ್ಟುವ ಹಂತದಲ್ಲಿ ಒಂದೆರಡು ಬಾರಿ ಹದ ಮಳೆ ಸುರೀಬೇಕು. ಜಮೀನಿನ ತುಂಬ ನೀರು ಹರಿಯಬೇಕು.

ಉತ್ತರೀ ಬಿಸಿಲಿನ ಚುರುಗುಟ್ಟುವಿಕೆಯನ್ನು ತಡೆದುಕೊಂಡು, ತೆನೆಯ ತುಂಬ ಕಾಳುಗಳನ್ನು ತುಂಬಿಸಿಕೊಳ್ಳಲು ತಲೆಯಮಟ್ಟಕ್ಕೆ ಬೆಳೆದ ಬೆಳೆಗೆ ಅಂಥದ್ದೊಂದು ಮಳೆ ಬೇಕೇಬೇಕು. ಅದೇ ಕೈಕೊಟ್ಟಿದ್ದಕ್ಕೆ ರಾಜು ಅವರಂತಹ ರೈತರೆಲ್ಲ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಇದು ಬರೀ ಚಳಗೇರಿಯ ರೈತರ ನಿಟ್ಟುಸಿರಲ್ಲ. ಚಾಮರಾಜನಗರದಿಂದ ಬೀದರ್‌ವರೆಗಿನ ಅನೇಕ ಹಳ್ಳಿಗಳ ರೈತರ ನಿಟ್ಟುಸಿರು. ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಅನ್ನೋದಕ್ಕೆ ಈ ವರ್ಷದ ಮುಂಗಾರು ಒಂದು ಉದಾಹರಣೆಯಷ್ಟೆ.

ಮೆಕ್ಕೆಜೋಳ ಮಾತ್ರವಲ್ಲದೆ ಹೆಸರು, ಶೇಂಗಾ, ಹತ್ತಿ, ಮೆಣಸಿನಕಾಯಿ, ಉಳ್ಳಾಗಡ್ಡಿ ಮತ್ತಿತರ ಬೀಜಗಳನ್ನು ಬಿತ್ತಿ ಪ್ರತಿಫಲಕ್ಕೆ ಕಾಯುತ್ತಿದ್ದ ರೈತರು ಬರಗಾಲದ ಹೊಡೆತಕ್ಕೆ ಸಿಲುಕಿದ್ದಾರೆ.

ಕೆಲವು ನದಿ ಪಾತ್ರದ ಪ್ರದೇಶಗಳಲ್ಲಿ ಕಬ್ಬು, ತೋಟಗಾರಿಕೆ ಬೆಳೆ ಬೆಳೆಯುವ ಪಂಪ್‌ಸೆಟ್‌ ಅವಲಂಬಿತ ರೈತರಿಗೂ ನೀರಿನ ಕೊರತೆ ಕಾಡಿದೆ. 15ರಿಂದ 18 ಗಣಿಕೆ ಇರುತ್ತಿದ್ದ ಪ್ರತಿ ಕಬ್ಬಿನ ಜಲ್ಲೆಯಲ್ಲಿ ಈ ಬಾರಿ ಕೇವಲ ಎಂಟ್ಹತ್ತು ಗಣಿಕೆ ಕಾಣಿಸಿಕೊಂಡಿದೆ. ತೂಕವೂ ಇಲ್ಲ. ಕಬ್ಬು ಅರೆಯುವ ಕಾರ್ಖಾನೆಗಳಿಗೆ ಈ ಬಾರಿ ಅರ್ಧದಷ್ಟು ಮಾತ್ರ ಕೆಲಸ ಇರಲಿದೆ. ಮಧ್ಯ ಕರ್ನಾಟಕ ಮತ್ತು ಮಲೆನಾಡಿನ ಅಡಿಕೆ ಬೆಳೆಗಾರರದ್ದೂ ಇದೇ ಗೋಳು. ಅಡಿಕೆ ತೂಕವಿಲ್ಲ. ಬೇಸಿಗೆ ವೇಳೆ ಅಡಿಕೆ ಗಿಡ ಉಳಿಸಿಕೊಳ್ಳಲು ಆಗುವುದೇ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ, ಮಳೆಯಾಶ್ರಿತ ಬೆಳೆಗಾರರಂತೆ ಇವರಿಗೆ ದಿಢೀರ್‌ ಸಮಸ್ಯೆ ತಲೆದೋರುವುದಿಲ್ಲ ಎಂಬುದು ನೆಮ್ಮದಿಯ ಸಂಗತಿಯಾಗಿದೆ.

ಮುಂಗಾರು ಕೊರತೆಯಿಂದ ಹರಿಹರದ ಬಳಿ ಒಣಗಿ ಹೋಗಿರುವ ಮೆಕ್ಕೆಜೋಳ ಬೆಳೆ

ಮುಂಗಾರು ಕೊರತೆಯಿಂದ ಹರಿಹರದ ಬಳಿ ಒಣಗಿ ಹೋಗಿರುವ ಮೆಕ್ಕೆಜೋಳ ಬೆಳೆ

ಹಬ್ಬದ ಹುರುಪಿಲ್ಲ

ಹಬ್ಬಗಳ ಸಾಲು ಶುರುವಾಗಿದೆ. ಶ್ರಾವಣದಲ್ಲಿ ವರಮಹಾಲಕ್ಷ್ಮಿ ಪೂಜೆ ಆಯ್ತು, ಗೌರಿ– ಗಣೇಶೋತ್ಸವ ಮುಗಿಯಿತು. ಈದ್‌ ಮಿಲಾದ್‌ ಆಚರಿಸಿಯಾಯ್ತು. ನವರಾತ್ರಿಯ (ದಸರಾ) ದುರ್ಗಾಪೂಜೆ ಕಳೆಗಟ್ಟುತ್ತಿದೆ. ಮುಂದೆ ಹಟ್ಟಿಹಬ್ಬ (ದೀಪಾವಳಿ) ಇದೆ. ಮುಂಗಾರು ಕೈಹಿಡಿದಿದ್ದರೆ ಹಬ್ಬದ ಕಥೆಯೇ ಬೇರೆ ಇರುತ್ತಿತ್ತು. ನವರಾತ್ರಿ ಕಳೆಯುವುದರೊಳಗೆ ಅಥವಾ ದೀಪಾವಳಿಯ ಆಸುಪಾಸಿನಲ್ಲಿ ಸುಗ್ಗಿಯ ಕಾಲ. ಕೃಷಿ ನಂಬಿದವರಲ್ಲಿ ಹುರುಪು ಸಹಜವಾಗಿ ಕಂಡುಬರುತ್ತಿತ್ತು. ಅದೀಗ ಮಾಯವಾಗಿದೆ. ಭರಪೂರ ಮಳೆಗಾಲದಲ್ಲೂ ಬಿರುಬಿಸಿಲು ಕಾಡಿತ್ತು.ಈಗ ಚಳಿಯ ಸುಳಿವೇ ಇಲ್ಲದಂತಾಗಿದೆ. ಇಬ್ಬನಿಗೆ ಚಿಗಿತುಕೊಳ್ಳುತ್ತಿದ್ದ ಫಸಲನ್ನೂ ಈ ಬಾರಿ ನೆಚ್ಚಿಕೊಳ್ಳುವಂತಿಲ್ಲ ಎಂಬಂತಾಗಿದೆ.

ಗ್ರಾಮೀಣರಿಗೂ, ಪಟ್ಟಣವಾಸಿಗಳಿಗೂ ಅವಿನಾಭಾವ ಸಂಬಂಧವಿದೆ. ಹಳ್ಳಿಗಳಲ್ಲಿ ಸೊಬಗಿದ್ದರೆ ಪಟ್ಟಣದಲ್ಲಿ ಸಡಗರವಿರುತ್ತದೆ. ಆದರೀಗ ಗ್ರಾಮಗಳಲ್ಲಿನ ಬಹುತೇಕರ ಮುಖಗಳಲ್ಲಿ ಮಂದಹಾಸವಿಲ್ಲ. ಬಿಕೋ ಎನ್ನುತ್ತಿರುವ ಪೇಟೆಬೀದಿಗಳೂ ಹೆಚ್ಚಾಗಿವೆ. ಮಾರುಕಟ್ಟೆಗಳಲ್ಲಿ ಆಸೆಗಣ್ಣಿನಿಂದ ಕಾಯುತ್ತಿರುವ ವ್ಯಾಪಾರಿಗಳನ್ನು ಕೇಳುವವರ ಸಂಖ್ಯೆ ಕ್ಷೀಣಿಸಿದೆ. ಕೊಳ್ಳುವವರಿಲ್ಲದಿದ್ದರೆ ಹುರುಪು ಇರುವುದಾದರೂ ಹೇಗೆ? ಕೃಷಿಯನ್ನೇ ನೆಚ್ಚಿಕೊಂಡಿರುವ ಬಹುತೇಕ ಗ್ರಾಮೀಣರಲ್ಲಿ ದಸರಾ, ದೀಪಾವಳಿಗೆ ಖರೀದಿ ಭರಾಟೆ ಮೊದಲಿನಂತೆ ಇಲ್ಲ.

‘ದಸರಾ ಮತ್ತು ದೀಪಾವಳಿ ಹಬ್ಬಗಳ ನಡುವೆ ಭೂಮಿ (ಸೀಗಿ) ಹುಣ್ಣಿಮೆ ಇದೆ. ಭೂಮಿತಾಯಿಯನ್ನು ಮನದುಂಬಿ ಪೂಜಿಸುವ ದಿನ ಅದು. ಹಸಿರುಟ್ಟು ನಲಿಯುವ ಭೂತಾಯಿ ಆ ಹಬ್ಬಕ್ಕೆ ಪುಟವಿಟ್ಟಂತೆ. ಮುಂಗಾರು ಉತ್ಪನ್ನವನ್ನು ಮನೆ ತುಂಬಿಸಿಕೊಂಡು, ಹಿಂಗಾರು ಬೆಳೆಯ ನಿರೀಕ್ಷೆಯಲ್ಲಿರುವ ಕೃಷಿಕರ ಹೃದಯ ತುಂಬಿಬರುವ ದಿನವೂ ಅದೇ. ಆದರೆ, ಈ ವರ್ಷ ಭೂಮಿ ಹುಣ್ಣಿಮೆಗೆ ರೈತರ ಜೇಬು ಮಾತ್ರವಲ್ಲ ಮನಸ್ಸೂ ಖಾಲಿಯಾಗಿದೆ’ ಎಂದು ಜಗಳೂರು ಬಳಿಯ ಅಣಜಿಯ ರೈತ ಶ್ರೀನಿವಾಸ ಮಾತು ಮುಂದುವರಿಸಿದರು.

‘ಮಕ್ಕಳಿಗೆ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಬೇಕು. ಕೈಯಲ್ಲಿ ದುಡ್ಡಿಲ್ಲ. ಸಾಲದ ಹೊರೆ ಹೆಚ್ಚುತ್ತಿದೆ. ಮತ್ತೆ ಸಾಲ ಹುಟ್ಟುವುದಿಲ್ಲ. ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ಇದೇ ರೀತಿ ಆದರೆ ಜೀವನ ನಡೆಸುವುದೇ ಕಷ್ಟ’ ಎಂದು ಹೇಳುವಾಗ ಅವರ ಧ್ವನಿಯಲ್ಲಿ ಆತಂಕ ಬೆರೆತಿತ್ತು.

‘ಭೂಮಿ ಹುಣ್ಣಿಮೆಯಂದೇ ಮಹರ್ಷಿ ವಾಲ್ಮೀಕಿ ಜಯಂತಿಯೂ ಇರುತ್ತದೆ. ಅವತ್ತು ರಜಾ ದಿನ. ನಮ್ಮವರೊಂದಿಗೆ ಬೆರೆತು, ಹಳ್ಳಿಗಳಲ್ಲಿನ ಹೊಲಗಳಿಗೆ ಹೋಗಿ ಸಂಭ್ರಮಿಸುವ, ಜೊತೆಗೆ ಕುಳಿತು ಭೋಜನ ಸವಿಯುವ ದಿನ. ಈ ಬಾರಿ ಆ ಸಂಭ್ರಮಕ್ಕೆ ಸಕಾರಣವೇ ಇಲ್ಲ. ತೀವ್ರ ಬರ ಆ ಎಲ್ಲ ಸಂಭ್ರಮಕ್ಕೂ ತೆರೆ ಎಳೆದಿದೆ’ ಎಂಬ ಅವರ ಮಾತು ಆ ಭಾಗದ ಬಹುತೇಕ ರೈತರ ಅನಿಸಿಕೆ ಎಂಬಂತೆ ಭಾಸವಾಯಿತು.

ಭೂಮಿ ಹುಣ್ಣಿಮೆಯ ಈ ಸಂಭ್ರಮ ಮುಂಗಾರು ಕೊರತೆಯಿಂದಾಗಿ ಈ ವರ್ಷ ಕಂಡುಬರುವುದು ವಿರಳ

ಭೂಮಿ ಹುಣ್ಣಿಮೆಯ ಈ ಸಂಭ್ರಮ ಮುಂಗಾರು ಕೊರತೆಯಿಂದಾಗಿ ಈ ವರ್ಷ ಕಂಡುಬರುವುದು ವಿರಳ

ಇವರಿಗೆ ಬರ ಹೊಸದಲ್ಲ

ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳ ರೈತರಿಗೆ ಬರಗಾಲ ಹೊಸದಲ್ಲ. ಅವರು ಬೆಳೆಯುವ ಹೆಸರು ಕಾಳು 10 ವರ್ಷಗಳಲ್ಲಿ ಸರಾಸರಿ ನಾಲ್ಕು ವರ್ಷ ಮುದುರಿಕೊಳ್ಳುತ್ತದೆ. ಹತ್ತಿ ಬೀಜವನ್ನು ಬಿತ್ತಿದರೂ ಮೇಲಕ್ಕೇಳುವುದಿಲ್ಲ. ಉಳ್ಳಾಗಡ್ಡಿ ಹೆಚ್ಚು ಖರ್ಚನ್ನು ಅಪೇಕ್ಷಿಸುತ್ತದೆಯಾದರೂ, ಅದರ ಲಾಭ ರೌದಿಯಲ್ಲೇ ಕೊನೆಗೊಳ್ಳುತ್ತದೆ. ಆದರೆ, ದಟ್ಟ ಮಲೆನಾಡು ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು ಅರೆಮಲೆನಾಡು ಪ್ರದೇಶಗಳನ್ನು ಒಳಗೊಂಡಿರುವ ಹಾವೇರಿ, ಕಾರವಾರ, ಉಡುಪಿ, ಕೊಡಗು ಮಾತ್ರವಲ್ಲ ನೀರಾವರಿಗೆ ಹೆಸರಾಗಿರುವ ಮಂಡ್ಯ ಜಿಲ್ಲೆಯ ರೈತರ ಸ್ಥಿತಿ ಉತ್ತರ ಕರ್ನಾಟಕದ ರೈತರ ಸ್ಥಿತಿಗೆ ಭಿನ್ನವೆಂಬಂತೆ ಕಾಣುತ್ತಿಲ್ಲ.

ಒಮ್ಮೆ ಬೀಜ ಬಿತ್ತಿ ಬಂದರೆ ಅಲ್ಲಿಂದ ಖರ್ಚಿನ ಸರಣಿ ಶುರುವಾದಂತೆಯೇ. ಬಿತ್ತನೆಗೂ ಮೊದಲಿನ ಖರ್ಚು ರೈತರನ್ನು ಅಷ್ಟಾಗಿ ಬಾಧಿಸುವುದಿಲ್ಲ. ನಂತರದ ವೆಚ್ಚವೇ ಅವರ ಕಿಸೆಯನ್ನೆಲ್ಲ ಖಾಲಿ ಮಾಡುವಂಥದ್ದು. ಒಂದರ ಹಿಂದೆ ಒಂದರಂತೆ ಖರ್ಚು ತಪ್ಪಿದ್ದಲ್ಲ. ಬಿತ್ತನೆ ಮಾಡಿದರೆ ಸಾಕು ಮುಂದಿನ ಪರಿಸ್ಥಿತಿ ಖರ್ಚು ಮಾಡಲು ಹಚ್ಚಿಸುತ್ತದೆ. ಒಂದು ಕೆಲಸವನ್ನೂ ಅಲಕ್ಷಿಸುವಂತಿಲ್ಲ. ಬಿಟ್ಟರೆ ಇಳುವರಿ ಬರದು. ಏನೆಲ್ಲ ಖರ್ಚು ಮಾಡಿದರೂ ಮಳೆ ಬೇಕೇಬೇಕು. ಬರದಿದ್ದರೆ ಎಲ್ಲವೂ ನಿಷ್ಪ್ರಯೋಜಕ. ಈಗ ಇವರ ಸ್ಥಿತಿಗೆ ಕಾರಣವೂ ಅದೇ.

ಮುಂಗಾರು ಕೊರತೆಯಿಂದ ಹರಿಹರದ ಬಳಿ ಒಣಗಿ ಹೋಗಿರುವ ಮೆಕ್ಕೆಜೋಳ ಬೆಳೆ

ಮುಂಗಾರು ಕೊರತೆಯಿಂದ ಹರಿಹರದ ಬಳಿ ಒಣಗಿ ಹೋಗಿರುವ ಮೆಕ್ಕೆಜೋಳ ಬೆಳೆ 

– ಚಿತ್ರ/ಸತೀಶ್‌ ಬಡಿಗೇರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT