ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸಹರಾ ಮರುಭೂಮಿ ವಿಸ್ತರಣೆಗೆ ‘ಹಸಿರು ಮಹಾಗೋಡೆ’ ತಡೆ

ಚೀನಾ ಮಹಾಗೋಡೆಗಿಂತಲೂ ನಾಲ್ಕು ಪಟ್ಟು ಹೆಚ್ಚು ಉದ್ದ
Last Updated 8 ಸೆಪ್ಟೆಂಬರ್ 2020, 2:30 IST
ಅಕ್ಷರ ಗಾತ್ರ

ಅಸಾಧಾರಣವಾದ ಯಾವುದನ್ನೇ ಆಗಲಿ ಆಫ್ರಿಕಾ ಮಾಡೇ ತೀರುತ್ತದೆ. ಆಧುನಿಕ ಅಮೆರಿಕ ಮತ್ತು ಯೂರೋಪ್‌ ಅನ್ನು ಕಟ್ಟಿದ್ದು, ಆಫ್ರಿಕಾದಿಂದ ವಲಸೆ ಹೋದ ಶ್ರಮಿಕ ವರ್ಗವ ಅಲ್ಲವೇ. ಉತ್ತರ ಆಫ್ರಿಕಾದ 20 ದೇಶಗಳು ದಶಕದಿಂದ ಜಗತ್ತಿನ ಅತಿ ದೊಡ್ಡ ಮರುಭೂಮಿ ಸಹರಾದಂಚಿನಲ್ಲಿಹಸಿರನ್ನು ಹೊದಿಸುವ ಸಾಹಸಕ್ಕೆ ಜೊತೆಯಾಗಿವೆ. ಅದೇ ‘ಹಸಿರು ಮಹಾಗೋಡೆ’ ನಿರ್ಮಾಣ ಯೋಜನೆ. ವಿಶ್ವಸಂಸ್ಥೆ, ಆಫ್ರಿಕಾ ಒಕ್ಕೂಟವು ಈ ರಾಷ್ಟ್ರಗಳ ಜಂಟಿ ಯೋಜನೆಗೆ ಬೆಂಬಲ ನೀಡಿವೆ.

ಕಲಹಗಳಿಂದಾಚೆಗೆ:ಆಫ್ರಿಕಾದ ದೇಶಗಳ ಕಲಹಕ್ಕೆ ಮತ್ತು ಅರಾಜಕತೆಗೆ ಮುಂದುವರಿದ ರಾಷ್ಟ್ರಗಳ ಕುಮ್ಮಕ್ಕು ಇದೆ ಎಂಬುದು ತಿಳಿದಿರುವ ವಿಷಯವೇ.. ಸಂಪನ್ಮೂಲ ಹೇರಳವಾಗಿರುವ ಆಫ್ರಿಕಾದತ್ತ ಈಗಲೂ ಮುಂದುವರಿದ ರಾಷ್ಟ್ರಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತಮ್ಮ ಪ್ರಭಾವವನ್ನು ಬೀರುತ್ತಿವೆ. ಹೀಗಾಗಿಯೇ ಸರ್ವಾಧಿಕಾರ, ಸೇನೆಯ ಆಡಳಿತ ಆಫ್ರಿಕಾದ ರಾಷ್ಟ್ರಗಳಲ್ಲಿ ಸಾಮಾನ್ಯ. ಅದರಲ್ಲಿಯೂ ಸಹರಾ ಮರುಭೂಮಿ ಹೊಂದಿರುವ ಮತ್ತು ಇದರಂಚಿನ ರಾಷ್ಟ್ರಗಳು ಜನಾಂಗೀಯ ಕಲಹಗಳಲ್ಲಿ ಮುಳುಗಿವೆ. ಇದರಿಂದ ಆದ ರಕ್ತಪಾತ ಆಫ್ರಿಕಾವನ್ನು ನೆಮ್ಮದಿಯಾಗಿರಲು ಬಿಟ್ಟಿಲ್ಲ.ಉದಾಹರಣೆಗೆ ದಕ್ಷಿಣ ಸುಡಾನ್‌ನಲ್ಲಿ‌ ಈಗಲೂ ಆಂತರಿಕ ಕಲಹಗಳ ಮೇಲಾಟ ನಡೆಯುತ್ತಿದೆ. ದಶಕದಿಂದೀಚೆಗೆ ಟ್ಯುನಿಷಿಯಾ, ಲಿಬಿಯಾ, ಈಜಿಪ್ಟ್‌ಗಳಲ್ಲಿ ರಾಜಕೀಯ ಬದಲಾವಣೆಗಳು ಘಟಿಸಿ ಹೋಗಿವೆ. ಇವುಗಳ ಜೊತೆಗೆ ಒಂದಿಷ್ಟು ಸ್ವಾತಂತ್ರ್ಯ, ಪ್ರಜಾಪ್ರಭುತ್ವವೆಂಬ ಸಸಿಗಳು ಹುಟ್ಟಿ ಬದಲಾವಣೆಗಳಾಗಿವೆ.ಇದರೊಂದಿಗೆ ಪೃಕೃತಿಯಲ್ಲೂ ಬದಲಾವಣೆಯಾಗುತ್ತಿದೆ.

ಪರಸರದಲ್ಲಿ ಎರಡೇ ಬದಲಾವಣೆ ಆಗುವುದು. ಒಂದು ಹಸಿರೆಚ್ಚಳ ಮತ್ತು ಹಸಿರಿಳಿಕೆ. ಇವೆರಡರಲ್ಲೂ ಮಾನವನ ಹಸ್ತಕ್ಷೇಪ ಇರುತ್ತದೆ. ಹಸಿರಿಳಿಕೆಯಲ್ಲಿ ಅವನ ಪಾಲು ಹೆಚ್ಚು. ಅರಣ್ಯ ನಾಶ ಕಳೆದ ಹಲವು ದಶಕಗಳಿಂದ ವಿಶ್ವದ ಉದ್ದಗಲಕ್ಕೂ ಅವ್ಯಾಹತವಾಗಿ ನಡೆದಿರುವುದು. ನೀರ್ಗಲ್ಲುಗಳು ಕರಗಿ ಸಮುದ್ರದ ಮಟ್ಟ ಹೆಚ್ಚಿಸುತ್ತಿರುವುದು. ಜೀವಿಗಳ ಆವಾಸಸ್ಥಾನಗಳು ಕಿರಿದಾಗುತ್ತಿರುವುದು. ವಾಸಯೋಗ್ಯ ಭೂಮಿ ಬಿಸಿಯಾಗುತ್ತಿರುವುದು. ಅವನೇ ರೂಪಿಸಿದ ಸಂಸ್ಥೆಗಳು ನಡೆಸುವ ಜಾಗತಿಕ ಸಮಾವೇಶಗಳಲ್ಲಿ ಮೊಳಗುವ ವಿಷಯಗಳಾಗಿವೆ.

ಅಗ್ನಿಕುಂಡವಾದ ಭೂಮಿ:2019–20ರಲ್ಲಿ‌ ಘಟಿಸಿದ ಹಲವು ವಿದ್ಯಮಾನಗಳು ಎಲ್ಲರನ್ನು ಆತಂಕಕ್ಕೆ ದೂಡಿವೆ. ಕಳೆದ ಒಂದು ವರ್ಷದಲ್ಲಿ ದಕ್ಷಿಣ ಅಮೆರಿಕದ ಅಮೆಜಾನ್, ಆಸ್ಟ್ರೇಲಿಯಾದ ಆಗ್ನೇಯ ಭಾಗದ ಕಾಡುಗಳು, ಇಂಡೋನೇಷ್ಯಾದ ಮಳೆಕಾಡುಗಳು ಮತ್ತು ಕ್ಯಾಲಿಫೋರ್ನಿಯಾದ ಅರಣ್ಯ ಭಾಗಗಳು ಅಗ್ನಿಕುಂಡಗಳಾಗಿದ್ದವು. ಈ ವಿದ್ಯಾಮಾನಗಳು ಭೂಮಿಯು ಬರಡಾಗುತ್ತಿರುವ ಸಂಕೇತಗಳಷ್ಟೇ. ಇವುಗಳ ಮಧ್ಯೆಯೇ ಪ್ರಕೃತಿಯನ್ನು ಮರುಸ್ಥಾಪಿಸುವ ಮಾನವ ಪ್ರಯತ್ನಗಳೂ ನಡೆಯುತ್ತಲೇ ಇವೆ ಎಂಬುದು ಸತ್ಯವೇ. ‘ಹಸಿರು ಮಹಾಗೋಡೆ’ ನಿರ್ಮಾಣ ಇಂಥ ಪ್ರಯತ್ನಗಳಲ್ಲಿ ಒಂದು.

ಹಸಿರನ್ನು ಕಬಳಿಸಿದ ಸಹರಾ: ಸಹರಾ ಮರುಭೂಮಿ ಅಂಚಿನಲ್ಲಿ ಸಹೇಲ್ ಭೂ ಪ್ರದೇಶವಿದೆ. ಸಹೇಲ್‌ನ ದಕ್ಷಿಣಕ್ಕೆ ಸವನ್ನಾ ಹುಲ್ಲುಗಾವಲು ವ್ಯಾಪಿಸಿದೆ. ಇದು ವನ್ಯಜೀವಿಗಳ ಬಹುದೊಡ್ಡ ಆವಾಸಸ್ಥಾನ. ಸಹೇಲಿ ಭೂ ಪ್ರದೇಶವು11 ದೇಶಗಳಲ್ಲಿ ವ್ಯಾಪಿಸಿದೆ. ಸೆನೆಗಲ್‌, ನೈಲ್‌, ನೈಜರ್‌ ನದಿಗಳ ಜಲಾಯನ ಪ್ರದೇಶ ಇದಾಗಿದೆ. ಅಟ್ಲಾಂಟಿಕ್‌ ಮಹಾಸಾಗರದಿಂದ ಕೆಂಪು ಸಮುದ್ರದವರೆಗೆ ಸುಮಾರು 30,50,200 ಚ.ಕಿ.ಮೀ ವ್ಯಾಪ್ತಿ ಹೊಂದಿದ್ದು, ಇಲ್ಲಿ ವಾರ್ಷಿಕ ಸರಾಸರಿ ಮಳೆ ಪ್ರಮಾಣ 200 ಮಿ.ಮೀ ನಿಂದ 700 ಮಿ.ಮೀ.

ಆಫ್ರಿಕಾ ಹುಲ್ಲುಗಾವಲುಗಳಲ್ಲಿ ನೋಡುವ ವನ್ಯಜೀವಿಗಳು ವಿರಳವಾಗಿ ಸಹೇಲ್‌ನಲ್ಲೂ ಇದ್ದವು. ಹೈನುಗಾರಿಕೆ ಮತ್ತು ಕೃಷಿಗೆ ಸಹೇಲ್‌ ಪ್ರದೇಶದ ಫಲವತ್ತಾದ ಭೂಮಿಯನ್ನುಕಳೆದ 50 ವರ್ಷಗಳಲ್ಲಿ ಮಿತಿಯಿಲ್ಲದಂತೆ ಬಳಸಲಾಯಿತು. ಇದರಿಂದಾಗಿ ಉಂಟಾದ ವಾತಾವರಣದ ಏರುಪೇರು ಉಂಟಾಯಿತು. ಮಣ್ಣಿನ ಸವಕಳಿಗೆ ಕಾರಣವಾಯಿತು. ಇದರಿಂದಾಗಿ ಸಹರಾ ಮರುಭೂಮಿಯು ತನ್ನ ವಿಸ್ತರಣೆಯನ್ನು ಆರಂಭಿಸಿತು.

ದೂಳಿನ ಬಿರುಗಾಳಿ:ಇದೇ ಜೂನ್‌ನಲ್ಲಿ ದೆಹಲಿಗೆ ದೂಳಿನ ಬಿರುಗಾಳಿ ಬೀಸಿರುವುದನ್ನು ನೋಡಿದ್ದೇವೆ. ಸಾಮಾನ್ಯವಾಗಿ ಮರುಭೂಮಿಯ ಅಂಚಿನಲ್ಲಿರುವ ನಗರಗಳು ಈ ದೂಳಿನ ಮಳೆಯನ್ನು ಕಾಣುತ್ತವೆ. ಇದು ಮರುಭೂಮಿ ವಿಸ್ತರಣೆಯ ವಿದ್ಯಮಾನ. ಭೂಮಿ ಬರಡಾಗುತ್ತಿರುವ ಲಕ್ಷಣ. ಸಹರಾ ಮರುಭೂಮಿ ಕೂಡ ಸಹೇಲಿ ಪ್ರದೇಶವನ್ನು ಆಕ್ರಮಿಸುತ್ತಿತ್ತು. ಇದನ್ನು ತಡೆಗಟ್ಟಲುಹಸಿರು ಗೋಡೆಯೊಂದನ್ನು ಕಟ್ಟಲು2007ರಲ್ಲಿ ಇಲ್ಲಿನ 20 ರಾಷ್ಟ್ರಗಳು ಒಂದಾಗಿವೆ.

ಆಫ್ರಿಕಾ ಒಕ್ಕೂಟದ ಈ ಮಹತ್ವಕಾಂಕ್ಷಿ ಯೋಜನೆಗೆಎರಿಟ್ರಿಯಾ, ಇಥಿಯೋಪಿಯಾ, ಘಾನ, ಮಾಲಿ, ಕ್ಯಾಮೆರೂನ್‌, ಜಿಬೂಟಿ, ಮೌರಿಟಾನಿಯಾ, ನೈಜೀರಿಯಾ, ಸೆನೆಗಲ್‌, ದಕ್ಷಿಣ‌ ಸೂಡಾನ್‌, ಅಲ್ಜೀರಿಯಾ, ಬೆನಿನ್‌, ಲಿಬಿಯಾ, ಈಜಿಪ್ಟ್‌, ಕೇಪ್‌ ವರ್ಡಿ, ಸೋಮಾಲಿಯಾ, ಟ್ಯುನಿಷಿಯಾ, ಚಾಡ್‌, ನೈಜರ್ ಮತ್ತು ಬುರ್ಕಿನಾ ಫಾಸೊ ಜೊತೆಯಾಗಿವೆ.

ಜೀವಂತ ಗೋಡೆ: ಮರುಭೂಮಿ ಅಂಚಿನಲ್ಲಿ ಸುಮಾರು 15 ಕಿ.ಮೀ ಅಗಲದ 8,000 ಕಿ.ಮೀ ಉದ್ದದ ಮಹಾಗೋಡೆ ಇದು. ಇದರ ನಿರ್ಮಾಣದ ಯೋಜನಾ ವೆಚ್ಚ ₹ 59 ಸಾವಿರ ಕೋಟಿ. ಆಫ್ರಿಕಾದ ಉತ್ತರಭಾಗದ ಅಗಲಕ್ಕೂ ನಿರ್ಮಾಣ ಮಾಡಲಾಗುತ್ತಿದೆ. ಅಟ್ಲಾಂಟಿಕ್‌ ಸಾಗರ ತೀರದ ಸೆನೆಗಲ್‌ನಿಂದ ಕೆಂಪು ಸಮುದ್ರದ ಜಿಬೂಟಿವರೆಗೆ ವ್ಯಾಪಿಸಿರುವ ಹಸಿರು ಗೋಡೆಯು, ಚೀನಾ ಮಹಾ ಗೋಡೆಗಿಂತ ನಾಲ್ಕು ಪಟ್ಟು ಹೆಚ್ಚು ಉದ್ದವಾದದ್ದು. ಹಸಿರು ಗಿಡ– ಮರಗಳ ಗೋಡೆಯ ನಿರ್ಮಾಣದ ಉದ್ದೇಶವೇ ಸಹೇಲಿ ಭೂ ಪ್ರದೇಶ‌ಗಳ ನೈಸರ್ಗಿಕ ರಚನೆಯಲ್ಲಿ ಆದ ಬದಲಾವಣೆಯನ್ನು ಪುನರ್‌‌ಸ್ಥಾಪಿಸುವುದಾಗಿದೆ.

ತಪ್ಪಿತು ವಲಸೆ:ಯೋಜನೆಆರಂಭವಾಗಿ 13 ವರ್ಷ ಉರಳಿವೆ. ಶೇ 15ರಷ್ಟು ಫಲಿತಾಂಶ ಈಗಾಗಲೇ ದೊರೆತಿದೆ.ಮರುಭೂಮಿ ಅಂಚಿನಲ್ಲಿ ಅಂತರ್ಜಲ ಹೆಚ್ಚಾಗಿದೆ. ಭೂ ಪ್ರದೇಶ 50 ವರ್ಷಗಳ ಹಿಂದೆ ಇದ್ದ ಸ್ಥಿತಿಗೆ ಮರಳುತ್ತಿದೆ.ಗಿಡ ನೆಡುವ ಕೆಲಸ ಇಲ್ಲಿನ ನಾಗರಿಕರು ಮತ್ತು ಬುಡಕಟ್ಟು ಜನರಿಗೆ ಸಿಕ್ಕಿದೆ. ವಲಸೆಯೂ ತಪ್ಪಿದೆ. ಕೆಲಸಕ್ಕಾಗಿ ನಗರಗಳತ್ತ ವಲಸೆ ಹೋಗುತ್ತಿದ್ದ ಜನರು ಕಾಡು, ಹಸಿರು ಸೃಷ್ಟಿಸಲು ಬೆವರು ಹರಿಸುತ್ತಿದ್ದಾರೆ.

ಜೀವಗಳನ್ನು ಬೆಸೆದ ಗೋಡೆ:ಗೋಡೆಯು ಇಲ್ಲಿನ ಜೀವಗಳನ್ನು ಬೆಸೆಯುತ್ತಿದೆ. ಭೂಮಿ ಬರಡಾಗುವುದನ್ನು ತ‌ಪ್ಪಿಸಲು ಆಫ್ರಿಕನ್ನರು ಒಂದಾಗಿದ್ದಾರೆ. ಕೋಟಿಗೂ ಹೆಚ್ಚು ನಾಗರಿಕರು ಗಿಡ ನೆಡುವ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಜಾಗತಿಕ ಹವಾಮಾನ ಹೆಚ್ಚಳದ ಬಿಸಿಯನ್ನು ತಂಪಾಗಿಸಲು ಕಾಣಿಕೆ ನೀಡುತ್ತಿದ್ದಾರೆ. ಈ ಗೋಡೆ ಜನರನ್ನು ಬೆಸೆದದ್ದಷ್ಟೇ ಅಲ್ಲ ಬರ, ಕ್ಷಾಮ, ವಲಸೆಯನ್ನ ತಡೆಯುತ್ತಿದೆ. ಹಸಿವಿನಿಂದ ಎಲುಬು ಕಾಣುವ ಚಿತ್ರಗಳು ಇನ್ನು ದಕ್ಷಿಣ ಸೂಡಾನ್‌ನಸಹೇಲಿ ಪ್ರದೇಶದಲ್ಲಿ ಇನ್ನು ಕಾಣಸಿಗಲಾರವು.

ಅತಿದೊಡ್ಡ ಮಾನವ ನಿರ್ಮಿತಿ:ಹಸಿರು ಮಹಾಗೋಡೆಯ ಗಾತ್ರವು ಆಸ್ಟ್ರೇಲಿಯಾದ ಬ್ಯಾರಿಯರ್‌ ಹವಳ ದಿಬ್ಬದ ಮೂರು ಪಟ್ಟು ಹೆಚ್ಚಾಗಿದ್ದು. ಈ ಮಹಾ ಯೋಜನೆ ಪೂರ್ಣಗೊಂಡರೆ ಭೂಮಿಯ ಅತಿದೊಡ್ಡ ಮಾನವ ನಿರ್ಮಿತಿ ಎಂದೆನಿಸಿಕೊಳ್ಳಲಿದೆ.ಸಹೇಲಿ ಪ್ರದೇಶದ ಜನರಿಗೆ ಮಾತ್ರ ಈ ಗೋಡೆಯ ಪ್ರಯೋಜನ ಸಿಗುವುದಿಲ್ಲ. ಇಡೀ ವಿಶ್ವವೇ ಈ ಯೋಜನೆಯಿಂದ ಲಾಭ ಪಡೆದುಕೊಳ್ಳಲಿದೆ. 2030ರ ವೇಳೆಗೆ 25 ಕೋಟಿ ಎಕರೆ ಬರಡು ಭೂಮಿಯನ್ನು ಮತ್ತೆ ಫಲವತ್ತಾಗಿಸುವುದು. ಗ್ರಾಮೀಣ ಭಾಗದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಸುವುದು. 25 ಕೋಟಿ ಟನ್‌ ಇಂಗಾಲವನ್ನು ತಗ್ಗಿಸುವುದು ಯೋಜನೆಯ ಗುರಿಗಳು. ಇದರಿಂದ ಜಾಗತಿಕ ತಾಪಮಾನವೂ ತಗ್ಗಲಿದೆ.

ಸುಸ್ಥಿರ ಅಭಿವೃದ್ಧಿಯ ಗುರಿ:ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಆಧಾರವಾಗಿಟ್ಟುಕೊಂಡೇ ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈ ಭಾಗದಲ್ಲಿನ ಬಡತನ ನಿರ್ಮೂಲನೆ, ಅಸಮಾನತೆ ಹೋಗಲಾಡಿಸುವುದು ಮತ್ತು ಹವಾಮಾನ ಬದಲಾವಣೆಗೆ ತಡೆಯೊಡ್ಡುವ ಉದ್ದೇಶಗಳಿಗಾಗಿ ಸರ್ಕಾರಗಳು, ನಾಗರಿಕರು, ಉದ್ಯಮಿಗಳು ಒಟ್ಟಾಗಿ ದುಡಿಯುತ್ತಿದ್ದಾರೆ.ಈ ಭಾಗದಲ್ಲಿ ಶತಮಾನಗಳಿಂದ ನೆಲೆಯೂರಿದ ಬಡತನ ಹೋಗಲಾಡಿಸುವುದರ ಜೊತೆಗೆ ಪ್ರಕೃತಿಯನ್ನು ಪರಿವರ್ತಿಸಿ ವಾಸಯೋಗ್ಯ ಮಾಡುವುದಾಗಿದೆ.

ಹಿಂದೆ ಸರಿಯುತ್ತಿರುವ ಸಹರಾ:ಅನುತ್ಪಾದಕ ಭೂಮಿಯನ್ನು ಪರಿವರ್ತಿಸುವಲ್ಲಿ ಇಲ್ಲಿನ ನಾಗರಿಕರು ಶ್ರಮಿಸುತ್ತಿದ್ದಾರೆ. ಗಿಡ ನೆಡುವ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಸ್ಥಳೀಯವಾಗಿ ಬೆಳೆಯುವ ಗಿಡ– ಮರಗಳಿಂದ ದೊರೆತ ಬೀಜಗಳನ್ನು ಬಿತ್ತಿ ಸಸಿ ಮಾಡುತ್ತಿದ್ದಾರೆ. ಕೋಟಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ್ದಾರೆ. ಇದರ ಫಲವಾಗಿಯೇ ಸಹೇಲ್‌ ಪ್ರದೇಶದಲ್ಲಿ ಹಸಿರು ತುಂಬುತ್ತಿದೆ. ಸಹರಾ ಮರುಭೂಮಿ ಹಿಂದೆ ಸರಿಯುತ್ತಿದೆ. ಅಂತರ್ಜಲವೂ ಹೆಚ್ಚಾಗುತ್ತಿದೆ. ಕೃಷಿ ಇಲ್ಲಿನ ಜನರನ್ನು ಮತ್ತೆ ಕೈ ಹಿಡಿದಿದೆ. ಆಹಾರ ಭದ್ರತೆ, ಉದ್ಯೋಗ ದೊರೆತಿದ್ದು, ಜೀವನ ಮಟ್ಟ ಉತ್ತಮಗೊಂಡಿದೆ. ದೂರ ಹೋಗಿದ್ದ ವನ್ಯ ಪ್ರಾಣಿಗಳು ಸೃಷ್ಟಿಯಾದ ಹೊಸ ಹುಲ್ಲುಗಾವಲಿನ ಕಾಡಿಗೆ ಮತ್ತೆ ಮರಳುತ್ತಿವೆ.

ಯೋಜನೆಯ ಪರಿಣಾಮ:

* ಇಥಿಯೋಪಿಯಾದ 3.70 ಕೋಟಿ ಎಕರೆ ಬರಡು ಭೂಮಿಯು ಹಸಿರು ಹೊದ್ದಿದೆ. ಮಣ್ಣಿನ ಪೋಷಕಾಂಶ ಹೆಚ್ಚಾಗಿದೆ

* ಸೆನೆಗಲ್‌ನಲ್ಲಿ 1.14 ಕೋಟಿ ಮರಗಳನ್ನು ನೆಡಲಾಗಿದೆ. 67,770 ಎಕರೆ ಬರಡು ಭೂಮಿ ಫಲವತ್ತಾಗಿದೆ

* ನೈಜೀರಿಯಾದ 1.23 ಕೋಟಿ ಎಕರೆ ಪ್ರದೇಶ ಹಸಿರಾಗಿದ್ದು, 20,000 ಉದ್ಯೋಗ ಸೃಷ್ಟಿಯಾಗಿದೆ

* ಬುರ್ಕಿನಾ ಫಾಸೊ, ಮಾಲಿ, ನೈಜರ್‌ ದೇಶಗಳ 120 ಸಮುದಾಯಗಳು 6 ಸಾವಿರ ಎಕರೆ ಪ್ರದೇಶದಲ್ಲಿ 20 ಲಕ್ಷ ಸ್ಥಳೀಯ ಗಿಡಗಳನ್ನು ನೆಟ್ಟಿದ್ದಾರೆ,

ವಿಶ್ವ ಸಂಸ್ಥೆಯ ಭೂ ಬರಡು ತಡೆ ಸಮಿತಿ (ದ ಯುನೈಟೆಡ್‌ ನೇಷನ್ಸ್‌ ಕನ್ವೆನ್ಷನ್ ಟು ಕಾಂಬ್ಯಾಟ್‌ ಡೆಸೆರ್ಟಿ ಫಿಕೇಷನ್–ಯುಎನ್‌ಸಿಸಿಡಿ) ಭೂಮಿಯ ಫಲವಂತಿಕೆ ಹೆಚ್ಚಿಸುವ ಈ ಯೋಜನೆಗೆ ಧನ ಸಹಾಯ ಮಾಡುತ್ತಿದೆ. ಅಲ್ಲದೇ ವಿಶ್ವದಾದ್ಯಂತ ದಾನಿಗಳನ್ನು ಈ ಯೋಜನೆಗೆ ಬಲ ತುಂಬುವಂತೆ ಕೋರಿದೆ. ವಿಶ್ವಬ್ಯಾಂಕ್‌ ನೆರವು ನೀಡಿದೆ. ಯೂರೋಪಿಯನ್‌ ಕಮಿಷನ್‌ ‌₹ 60 ಕೋಟಿ ನೀಡಿದ್ದರೆ, ಐರ್ಲೆಂಡ್‌ ₹ 10 ಕೋಟಿ ನೀಡಿದೆ. ಇವುಗಳಲ್ಲದೇ ಇನ್ನೂ ಹಲವು ದೇಶಗಳು ದೇಣಿಗೆ ನೀಡುತ್ತಿವೆ.

ಭಾರತ – ಚೀನಾಕ್ಕೂ ಸ್ಫೂರ್ತಿ :ಭಾರತ ಮತ್ತು ಚೀನಾಗಳೂ ಮರಭೂಮಿ ವಿಸ್ತರಣೆಯನ್ನು ತಡೆಯಲು ಹಸಿರು ಗೋಡೆ ನಿರ್ಮಾಣಕ್ಕೆ ಮುಂದಾಗಿವೆ. ಆಫ್ರಿಕಾ ಮಾದರಿಯನ್ನು ಅನುಸರಿಸುತ್ತಿವೆ.

ಭಾರತವು ಗುಜರಾತ್‌ನ ಪೋರಬಂದರ್‌ನಿಂದ ಪಾಣಿಪತ್‌ವರೆಗೆ ಥಾರ್‌ ಮರುಭೂಮಿಯ ಅಂಚಿನಲ್ಲಿ 1,400 ಕಿ.ಮೀ ಉದ್ದದ ಹಸಿರು ಗೋಡೆ ನಿರ್ಮಾಣಕ್ಕೆ ಮುಂದಾಗಿದೆ. ಅರಾವಳಿ ಬೆಟ್ಟಗಳು ಮತ್ತು ಥಾರ್‌ ಮರುಭೂಮಿಯಲ್ಲಿ ಹಸಿರನ್ನು ಉಕ್ಕಿಸುವ ಯೋಜನೆ ಇದಾಗಿದೆ.

ಗೋಬಿ ಮರುಭೂಮಿಯು ಫಲವತ್ತಾದ ಭೂಮಿ ನುಂಗುವುದನ್ನು ತಪ್ಪಿಸಲು ಚೀನಾ ಕೂಡ 4,500 ಕಿ.ಮೀ ಉದ್ದದ ಹಸಿರು ಗೋಡೆಯನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದು, ಕಾರ್ಯಗತಗೊಳಿಸಿದೆ. 2050ರ ವೇಳೆಗೆ ಈ ಯೋಜನೆ ಪೂರ್ಣಗೊಳಿಸಲಿದೆ.

ಬ್ರೆಜೆಲ್, ಇಂಡೊನೇಷ್ಯಾ, ರಿಪಬ್ಲಿಕ್‌ ಆಫ್‌ ಕಾಂಗೋ ಸೇರಿದಂತೆ ಮಳೆಕಾಡನ್ನು ಹೊಂದಿರುವ ದೇಶಗಳು ಕೃಷಿ ಭೂಮಿಗಾಗಿ ಅರಣ್ಯ ನಾಶದಲ್ಲಿ ತೊಡಗಿರುವಾಗಲೇ ಉತ್ತರ ಆಫ್ರಿಕಾದ ಸಹರಾ ಮರುಭೂಮಿಯಂಚಿನ ದೇಶಗಳು ಹಸಿರನ್ನು ಉಕ್ಕಿಸಲು ಜೊತೆಯಾಗಿರುವುದು ಮುಂದುವರಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಮಾದರಿಯಾಗಿದೆ. ಈ ‘ಆಫ್ರಿಕಾ ಮಾದರಿ’ಯನ್ನು ಎಲ್ಲ ದೇಶಗಳೂ ಅನುಸರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT