ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮತ್ತೆ ಕಸ್ತೂರಿ ರಂಗನ್ ವರದಿ ತಲ್ಲಣ

Last Updated 9 ಅಕ್ಟೋಬರ್ 2020, 2:45 IST
ಅಕ್ಷರ ಗಾತ್ರ

ಶಿವಮೊಗ್ಗ:ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠ ಡಾ.ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ತಾಕೀತು ಮಾಡಿದ ಬೆನ್ನಲ್ಲೇ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲೂ ಕಂಪನ ಆರಂಭವಾಗಿದೆ.

ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ವ್ಯಾಪ್ತಿಯ 1,64,280 ಚದರ ಕಿ.ಮೀ ಪ್ರದೇಶವನ್ನು ಕಸ್ತೂರಿ ರಂ‌ಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ.ಕರ್ನಾಟಕದ ಶಿವಮೊಗ್ಗ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಕೊಡಗು, ಚಾಮರಾಜನಗರ ಜಿಲ್ಲೆಗಳ 44,448 ಚ.ಕಿ.ಮೀ ಪಶ್ಚಿಮಘಟ್ಟದ ಪ್ರದೇಶ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಟ್ಟಿದೆ.ಸೇರಿ ರಾಜ್ಯದ 1,576 ಗ್ರಾಮಗಳು ವ್ಯಾಪ್ತಿಗೆ ಬರುತ್ತವೆ.

ತೀರ್ಥಹಳ್ಳಿ ತಾಲ್ಲೂಕಿನ 149, ಹೊಸನಗರದ 129, ಸಾಗರದ 135, ಶಿಕಾರಿಪುರದ 13 ಹಾಗೂ ಶಿವಮೊಗ್ಗ ತಾಲ್ಲೂಕಿನ 66 ಗ್ರಾಮಗಳುಸೇರಿ ಶಿವಮೊಗ್ಗ ಜಿಲ್ಲೆಯ 492 ಗ್ರಾಮಗಳು ವ್ಯಾಪ್ತಿಗೆ ಒಳಪಟ್ಟಿರುವ ಕಾರಣ ಜಿಲ್ಲೆಯ ಜನರಲ್ಲೂ ಆತಂಕ ಆರಂಭವಾಗಿದೆ.

ಶಿವಮೊಗ್ಗ ಜಿಲ್ಲೆಯ 68 ಹಳ್ಳಿಗಳ ಗ್ರಾಮಸಭೆಗಳು ವರದಿ ಜಾರಿಗೆ ಒಪ್ಪಿಗೆ ಸೂಚಿಸಿದ್ದವು. ಉಳಿದ ಹಳ್ಳಿಗಳ ಗ್ರಾಮಸಭೆಗಳಲ್ಲಿ ವರದಿ ಜಾರಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.53 ಗ್ರಾಮಗಳಲ್ಲಿ ಶೇ 20ರಿಂದ 50, ಒಂದು ಹಳ್ಳಿಯಲ್ಲಿ ಶೇ 20ಕ್ಕಿಂತ ಕಡಿಮೆ ನೈಸರ್ಗಿಕ ಭೂ ಪ್ರದೇಶವಿದೆ. ವರದಿ ಜಾರಿಯ ಸಂಬಂಧ ಆರ್‌ಎಂಎನ್ ಸಹಾಯ್ ನೇತೃತ್ವದಲ್ಲಿ ರಾಜ್ಯಮಟ್ಟದ ಸಮಿತಿಗೆ 172 ಅಹವಾಲು ಅರ್ಜಿಗಳು ಸಲ್ಲಿಕೆಯಾಗಿದ್ದವು. ವರದಿಯ ವಿರುದ್ಧ 169, ಪರವಾಗಿ 2 ಅರ್ಜಿಗಳು ಸಲ್ಲಿಕೆಯಾಗಿದ್ದವು.ವರದಿ ಸಂಬಂಧ ಜನರ ಅಭಿಪ್ರಾಯಗಳನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲು ರಾಜ್ಯ ಸರ್ಕಾರ ನಡೆಸಿದ ಪ್ರಯತ್ನ ಯಶಸ್ಸು ಕಂಡಿಲ್ಲ.ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ 2014ರಿಂದ ಇಲ್ಲಿಯವರೆಗೂ ನಾಲ್ಕು ಬಾರಿ ಕರಡು ಅಧಿಸೂಚನೆ ಹೊರಡಿಸಿದೆ. ಪ್ರತಿ ಬಾರಿಯೂ ರಾಜ್ಯ ಸರ್ಕಾರ ಅಧಿಸೂಚನೆ ವಿರೋಧಿಸುತ್ತಲೇ ಬಂದಿದೆ.

ವರದಿ ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದರೆ ನಿತ್ಯ ಹರಿದ್ವರ್ಣದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿ, ಜನಜೀವನಕ್ಕೆ ಮಾರಕವಾಗಲಿದೆ.ಜನರನ್ನು ಒಕ್ಕಲೆಬ್ಬಿಸಲಾಗುವುದು,ಕೃಷಿ, ತೋಟಗಾರಿಕೆ, ಪ್ಲಾಂಟೇಷನ್‌ಗಳಿಗೂ ನಿರ್ಬಂಧ ಹೇರಲಾಗುವುದು. ಕೀಟನಾಶಕ, ರಾಸಾಯನಿಕ ಗೊಬ್ಬರ ಬಳಕೆಗೆ, ಏಕ ಜಾತಿಯ ಅಡಿಕೆ, ಕಾಫಿ ಬೆಳೆ, ಅಡಿಕೆ ಕೊಳೆರೋಗಕ್ಕೆ ಸಿಂಪಡಿಸುವ ಬೋರ್ಡೊ ದ್ರಾವಣ ಬಳಕೆಯೂ ಸಾಧ್ಯವಾಗುವುದಿಲ್ಲ. ರಸ್ತೆ,ಆಸ್ಪತ್ರೆ, ಶಾಲೆ ನಿರ್ಮಾಣ ಸೇರಿದಂತೆ ಸಾಮುದಾಯಿಕ ಕೆಲಸಗಳಿಗೂ ತೊಡಕಾಗಲಿದೆ ಎನ್ನುವುದು ಮಲೆನಾಡಿನ ಜನರ ಆತಂಕ.

ಮಿಶ್ರ ಜಾತಿಯ ಸಸ್ಯಗಳ ನೆಡುತೋಪು, ಅಪರೂಪ ಪರಿಸರ ಧಾರಣಾ ಸಾಮರ್ಥ್ಯಕ್ಕೆ ನಿಧಿ ಬಿಡುಗಡೆ, ಮೇಲ್ವಿಚಾರಣಾ ತಂಡ ರಚನೆ, ಪರಿಸರ ಸೂಕ್ಷ್ಮ ಪ್ರದೇಶದ 10 ಕಿ.ಮೀ ವ್ಯಾಪ್ತಿಯ ಒಳಗೆ ಯೋಜನೆ ಆರಂಭಕ್ಕೆ ಪರಿಸರ ಮಂತ್ರಾಲಯದ ಅನುಮತಿ ಕಡ್ಡಾಯಮೊದಲಾದ ಅಂಶಗಳು ವರದಿಯಲ್ಲಿವೆ.ಗ್ರಾಮಸಭೆಗಳ ತೀರ್ಮಾನವನ್ನು ಕೇಂದ್ರ ಗಣನೆಗೆ ತೆಗೆದುಕೊಂಡಿಲ್ಲ. ವರದಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆಇದೆ.ಮಲೆನಾಡಿನ ಜನರ ಭಾವನೆಗೆ ವಿರುದ್ಧವಾಗಿ ವರದಿ ಜಾರಿ ಮಾಡಬರದು ಎನ್ನುವುದು ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಜನರ ಆಗ್ರಹ.

ವರದಿಯಲ್ಲಿ ಶೇ 50ಕ್ಕಿಂತ ಹೆಚ್ಚು ನೈಸರ್ಗಿಕ ಭೂಪ್ರದೇಶ ಗಣನೆಗೆ ತೆಗೆದುಕೊಂಡ 858 ಗ್ರಾಮಗಳಲ್ಲಿ13.09 ಲಕ್ಷ ಹೆಕ್ಟೇರ್ ವಿಸ್ತೀರ್ಣವಿದೆ.ಸಚಿವ ಸಂಪುಟ ಉಪ ಸಮಿತಿ ತೀರ್ಮಾನದ ಅನ್ವಯ 594 ಗ್ರಾಮಗಳಲ್ಲಿ5,94,835 ಹೆಕ್ಟೇರ್‌ಗೂ ಹೆಚ್ಚು ಪ್ರದೇಶ ಪರಿಸರ ಸೂಕ್ಷ್ಮ ವ್ಯಾಪ್ತಿಯಿಂದ ಹೊರಗುಳಿದಿದೆ.

ರಾಜಕೀಯ ಲಾಭದ ವಿಷಯ: ದಶಕದಿಂದ ಈಚೆಗೆಕಸ್ತೂರಿ ರಂಗನ್ ವರದಿ ವಿಷಯ ರಾಜಕೀಯ ಪಕ್ಷಗಳಿಗೂ ಲಾಭ–ನಷ್ಟದ ಲೆಕ್ಕಾಚಾರಕ್ಕೆ ದಾರಿ ಮಾಡಿಕೊಟ್ಟಿತ್ತು. ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದೇ ಚುನಾವಣೆಯ ಸಮಯದಲ್ಲೂ ಜನರಿಗೆ ಭರವಸೆ ನೀಡಿದ್ದವು. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್‌ ಅಧಿಕಾರದಲ್ಲಿ ಇದ್ದಾಗ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಹಸಿರು ಪೀಠ ಆದೇಶ ನೀಡಿದಾಗಲೆಲ್ಲ ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ನಿರಂತರ ವಾಗ್ದಾಳಿ ನಡೆಸಲಾಗಿತ್ತು. ಪಾದಯಾತ್ರೆಗಳನ್ನೂ ಹಮ್ಮಿಕೊಳ್ಳಲಾಗಿತ್ತು.

ಕೇಂದ್ರದ ಮೇಲೆ ಬಿಜೆಪಿಯ ಸಂಸದರು ಒತ್ತಡವನ್ನು ಹಾಕಲಿಲ್ಲ. ಪಶ್ಚಿಮಘಟ್ಟದಲ್ಲಿ ನಡೆದ ಯಾವ ಸಭೆಗೂ ಅವರು ಹೋಗಲಿಲ್ಲ. ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದಾಗ ಸುಮ್ಮನಿದ್ದರು ಎಂದು ಕಾಂಗ್ರೆಸ್, ಜೆಡಿಎಸ್ ಮುಖಂಡರು ಆರೋಪಿಸಿದ್ದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2017ರಲ್ಲಿ ಈ ವರದಿ ಕೈ ಬಿಡುವಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರೂ, ಮನವಿ ಪರಿಗಣಿಸಲಿಲ್ಲ. ರಾಷ್ಟ್ರೀಯ ಹಸಿರು ಪೀಠಕ್ಕೆ ವರದಿ ಜಾರಿಗೊಳಿಸುವುದಾಗಿ ಪ್ರಮಾಣಪತ್ರ ಸಲ್ಲಿಸಿದ ಕಾರಣ ಪರಿಸರ ಸೂಕ್ಷ್ಮ ಪ್ರದೇಶ ಅಧಿಸೂಚನೆ ಕಗ್ಗಂಟಾಗಿದೆ ಎಂದೂ ಆರೋಪಿಸಲಾಗಿತ್ತು. ಬಿಜೆಪಿ ಅಂದಿನ ರಾಜ್ಯ ಸರ್ಕಾರಗಳು ಸರಿಯಾದ ನಿರ್ಧಾರ ಕೈಗೊಳ್ಳದೇ ಇಂತಹ ಸಂದಿಗ್ಧತೆ ಎದುರಾಗಿದೆ ಎಂದು ದೂರುತ್ತಾ ಬಂದಿದೆ.

1980ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿತು.ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರ ಪ್ರದೇಶವನ್ನು 1984ರಲ್ಲಿ ಸರ್ಕಾರ ಅಭಯಾರಣ್ಯ ಎಂದು ಘೋಷಿಸಿತು. ನಂತರ ಹುಲಿ ಸಂರಕ್ಷಣಾ ಯೋಜನೆ ರೂಪಿಸಲಾಗಿದೆ. ಈಗ ಕಸ್ತೂರಿ ರಂಗನ್ ವರದಿ ಜಾರಿಗೆ ದಿನಗಣನೆ ಆರಂಭವಾಗಿದೆ.

ಆಗುಂಬೆಯಿಂದ 6 ಕಿ.ಮೀ. ದೂರದಲ್ಲಿ ದಟ್ಟ ಮಳೆಕಾಡಿನ ಮಧ್ಯೆ 80 ಕುಟುಂಬಗಳು ವಾಸಿಸುತ್ತಿವೆ. ಹುಲಿ ಸಂರಕ್ಷಿತ ಯೋಜನೆ ಜಾರಿ ನಂತರ ಆತಂಕಕ್ಕೆ ಒಳಗಾಗಿದ್ದರು. ಈಗ ಕಸ್ತೂರಿ ರಂಗನ್ ವರದಿ ಜಾರಿಯಾದರೆ ಎಲ್ಲರೂ ಊರು ತೊರೆಯಬೇಕು ಎನ್ನುತ್ತಾರೆ ಗ್ರಾಮದ ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT