ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವಜವನ್ನು ಮಣ್ಣಿನಲ್ಲಿ ಸೇರಿಸಿ ನೀರು ಹಾಕಿದರೆ ಮೇಲೇಳುವ ಸಸಿಗಳು! ಸೀಡ್‌ಪೇಪರ್‌

Last Updated 8 ಆಗಸ್ಟ್ 2021, 13:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜನವರಿ 26 ಹಾಗೂ ಆಗಸ್ಟ್‌ 15 ಬಂತೆಂದರೆ ಪ್ಲಾಸ್ಟಿಕ್‌ ಧ್ವಜಗಳ ಮಾರಾಟ ಜೋರಾಗಿಯೇ ಇರುತ್ತದೆ. ಈ ಎರಡೂ ರಾಷ್ಟ್ರೀಯ ದಿನಾಚರಣೆಯಲ್ಲಿ ಪ್ಲಾಸ್ಟಿಕ್‌ ಧ್ವಜಗಳನ್ನು ಹಿಡಿದು ಸಂಭ್ರಮಿಸುವವರು ಆಚರಣೆ ಮುಗಿಯುತ್ತಲೇ ಅವುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರಿಂದ ರಾಷ್ಟ್ರಧ್ವಜಕ್ಕೆ ಅವಮಾನದ ಜೊತೆಗೆ ಪರಿಸರಕ್ಕೂ ಪರೋಕ್ಷವಾಗಿ ಹಾನಿಯಾಗಿರುತ್ತದೆ.

ಹೀಗೆ ಸ್ವಾತಂತ್ರ್ಯೋತ್ಸವ ಆಚರಣೆ ನೆಪದಲ್ಲಿ ಪರಿಸರ ಹಾಳಾಗುವುದನ್ನು ತಪ್ಪಿಸಲೆಂದೇ ಧಾರವಾಡದ ದಂಪತಿ ಪರಿಸರಸ್ನೇಹಿ ಸೀಡ್‌ ಪೇಪರ್‌ ಫ್ಲ್ಯಾಗ್‌ ಸಿದ್ಧಪಡಿಸಿದ್ದಾರೆ. ಈ ಧ್ವಜವನ್ನು ಮನೆಯಂಗಳದ ಕೈತೋಟದಲ್ಲಾಗಲಿ, ಕುಂಡದಲ್ಲಾಗಲಿ ಮಣ್ಣಿನ ಜೊತೆ ಸೇರಿಸಿ, ನೀರೆರೆದರೆ ಕೆಲವೇ ದಿನಗಳಲ್ಲಿ ಅದರಲ್ಲಿ ಅಡಗಿರೋ ಬೀಜಗಳು ಸಸಿಗಳಾಗಿ ಮೇಲೇಳಲಿವೆ. ಮತ್ತೊಂದಿಷ್ಟು ದಿನಗಳು ಕಳೆದರೆ ತುಳಸಿ, ತರಕಾರಿ, ಹೂವುಗಳನ್ನೂ ಕೊಯ್ಯಬಹುದು.

ಧಾರವಾಡದ ಕೆ.ಸಿ.ಪಾರ್ಕ್‌ನ ನಿವಾಸಿಗಳಾದ ಅಕ್ಷತಾ ಭದ್ರಣ್ಣ ಹಾಗೂ ರಾಹುಲ್‌ ಪಾಗಾದ್‌ ದಂಪತಿ ತಯಾರಿಸಿರುವ ಸೀಡ್‌ಪೇಪರ್‌ ಫ್ಲ್ಯಾಗ್‌ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರದ್ದಿ ಪೇಪರ್‌ ಹಾಗೂ ಹಳೇ ಬಟ್ಟೆಗಳನ್ನು ಪುನರ್‌ಬಳಸಿಅದರೊಳಗೆ ತುಳಸಿ, ಜಾಸ್ಮಿನ್‌, ಟೊಮೆಟೊ ಬೀಜಗಳನ್ನು ಇಟ್ಟು ಫ್ಲ್ಯಾಗ್‌ ತಯಾರಿಸಿದ್ದಾರೆ.

ಧ್ವಜವನ್ನು ದಿರಿಸಿನ ಮೇಲೆ ಪಿನ್‌ ಮಾಡಿದರೆ, ಬ್ಯಾಂಡ್‌ ಅನ್ನು ಕೈಗೆ ಕಟ್ಟಿಕೊಳ್ಳಬಹುದು. ಈಗಾಗಲೇ 10 ಸಾವಿರ ಧ್ವಜಗಳು ಹಾಗೂ ಸಾವಿರ ಕೈಪಟ್ಟಿಗಳನ್ನು ಸಿದ್ಧಪಡಿಸಿ ಪರಿಸರಸ್ನೇಹಿ ಶಾಪ್‌ಗಳಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ. ಸದ್ಯ ಹುಬ್ಬಳ್ಳಿಯ ಶ್ರೇಯಾನಗರದ ಸಿರಿ ಪರಂಪರಾ ಸ್ಟೋರ್‌ ಹಾಗೂ ಧಾರವಾಡದ ನಾರಾಯಣನಗರದ ಆರ್ಗ್ಯಾನಿಕ್‌ ಅಂಗಡಿಗಳಲ್ಲಿ ಫ್ಲ್ಯಾಗ್‌ಗಳು, ಬ್ಯಾಂಡ್‌ಗಳು ಲಭ್ಯವಿದೆ. www.dopolgy.com ಆನ್‌ಲೈನ್‌ ಮೂಲಕವೂ ಖರೀದಿಸಬಹುದು.

‘ಪರಿಸರವನ್ನು ಗಮನದಲ್ಲಿಟ್ಟುಕೊಂಡು, ಅದರ ಸಂರಕ್ಷಣೆಗೆ ಆದ್ಯತೆ ನೀಡಲೆಂದೇ ಡೊಪೊಲ್ಜಿ ಹೆಸರಿನಡಿ ಆರಂಭಿಸಲಾದ ಪುನರ್ಬಳಕೆ ವಸ್ತುಗಳಿಗೆ ಜನರಿಂದಲೂ ಉತ್ತಮ ಸ್ಪಂದನೆ ದೊರೆತಿದೆ. ಸೀಡ್‌ಪೇಪರ್‌ ಫ್ಲ್ಯಾಗ್‌ ವಿಚಾರದಲ್ಲೂ ಕೂಡ ಒಳ್ಳೆ ಅಭಿಪ್ರಾಯಗಳು ವ್ಯಕ್ತವಾಗಿವೆ’ ಎಂದು ಡೊಪೊಲ್ಜಿ ಸಂಸ್ಥಾಪಕಿ ಅಕ್ಷತಾ ಭದ್ರಣ್ಣ ಹೇಳಿದರು.

ಪ್ಲಾಸ್ಟಿಕ್‌ ಧ್ವಜಗಳನ್ನು ಬಳಸಿ, ಎಲ್ಲೆಂದರಲ್ಲಿ ಒಗೆದು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿ, ಪರಿಸರಕ್ಕೂ ಹಾನಿ ಮಾಡುವ ಬದಲು ಸೀಡ್‌ಪೇಪರ್‌ ಫ್ಲ್ಯಾಗ್‌ ಬಳಸಿ, ದೇಶಪ್ರೇಮ ಮೆರೆದು, ನಂತರದಲ್ಲಿ ಮಣ್ಣಿಗೆ ಸೇರಿಗೆ ನೀರೆರೆದರೆ ಮನೆಮುಂದೆ ತುಳಸಿ, ಹೂವು, ತರಕಾರಿ ಪಡೆಯಬಹುದು ಎಂಬ ಸಲಹೆ ಅಕ್ಷತಾ ಅವರದ್ದು. (ಅಕ್ಷತಾ ಅವರ ಮೊಬೈಲ್‌ ಫೋನ್‌ 8971404264).

ತಮ್ಮ ಸಿರಿ ಪರಂಪರಾ ಸ್ಟೋರ್‌ನಲ್ಲಿ ಇಟ್ಟಿರುವ ಸೀಡ್‌ ಪೇಪರ್‌ ಧ್ವಜಗಳಿಗೆ ಉತ್ತಮ ಸ್ಪಂದನೆ ದೊರಕಿದೆ. ದೇಶಪ್ರೇಮದ ಜೊತೆ, ಪರಿಸರ ಸಂರಕ್ಷಣೆಯೂ ಅಡಗಿದೆ ಎನ್ನುತ್ತಾರೆ ಹುಬ್ಬಳ್ಳಿಯ ಸಿರಿ ಪರಂಪರಾ ಸ್ಟೋರ್ಸ್‌ ಮಾಲಕಿ ಶಿಲ್ಪಾ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT