ಭಾನುವಾರ, ಏಪ್ರಿಲ್ 5, 2020
19 °C

ಆನೆ ದಂತ ವ್ಯಾಮೋಹ

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

prajavani

ಇತಿಹಾಸದುದ್ದಕ್ಕೂ ಆನೆಯಷ್ಟು ಕಷ್ಟ–ನಷ್ಟ ಅನುಭವಿಸಿದ ಜೀವಿ ಮತ್ತೊಂದಿಲ್ಲ. ಅವುಗಳ ದಂತದ ಮೇಲೆ ಮನುಷ್ಯನ ಮೋಹ ಇಂದು ನಿನ್ನೆಯದಲ್ಲ. ಚರಿತ್ರೆಯುದ್ದಕ್ಕೂ ಮನುಷ್ಯ ಗಂಡಾನೆಗಳನ್ನು ನಿರಂತರವಾಗಿ ಶೋಷಿಸಿದ್ದಾನೆ. ದಂತಕ್ಕಾಗಿ ಮಾರುಕಟ್ಟೆ ಸೃಷ್ಟಿಸಿ ಲಕ್ಷಾಂತರ ಆನೆಗಳ ಮಾರಣಹೋಮ ನಡೆಸಿ ವಿಜೃಂಭಿಸಿದ್ದಾನೆ. ವಿವೇಚನಾರಹಿತ ಈ ಹತ್ಯೆಯಿಂದ ಅವುಗಳ ತಳಿವೈವಿಧ್ಯಕ್ಕೆ ಆಪತ್ತು ಎದುರಾಗಿದೆ.

ಆ ಬೇಸಿಗೆಯ ಮಧ್ಯಾಹ್ನ ಏರಿದ ತಾಪಮಾನಕ್ಕೆ ಬಿಆರ್‌ಟಿ ಹುಲಿ ರಕ್ಷಿತಾರಣ್ಯ ಜೀವ ಕಳೆದುಕೊಂಡಂತೆ ಮೌನವಾಗಿತ್ತು. ಕಾಡಿಗೆ ಜೀವ ತುಂಬಲು ಕಾಮಳ್ಳಿ ಮತ್ತು ಉದ್ದ ಬಾಲದ ಕಾಜಾಣಗಳ ನಡುವೆ ಜುಗಲ್‌ಬಂದಿ ನಡೆದಿತ್ತು. ಅರಣ್ಯ ಇಲಾಖೆಯ ವಾಹನಗಳು ನಿರಂತರವಾಗಿ ಚಲಿಸಿ ಸವೆದಿದ್ದ ಹಾದಿಯಲ್ಲಿಯೇ ನಾವು ಸಾಗಿದ್ದೆವು. ಮುಗಿಲಿನತ್ತ ಮುಖ ಮಾಡಿದ್ದ ಬೃಹದಾಕಾರದ ಮರಗಳು, ಬಿದಿರು ಮೆಳೆಗಳು ದಟ್ಟವಾಗಿದ್ದ ಆ ಭಾಗದ ಅರಣ್ಯ ಸಮೃದ್ಧವಾಗಿತ್ತು.

ಒಂದೆರಡು ಕಿಲೋಮೀಟರ್‌ ಸಾಗಿದ ಬಳಿಕ ತೊರೆಯೊಂದು ಎದುರಾಯಿತು. ಮಳೆಗಾಲದಲ್ಲಿ ಆರ್ಭಟಿಸಿ ಹರಿದಿದ್ದ ಅದರಲ್ಲಿ ನೀರಿನ ಹರಿವು ಕಡಿಮೆಯಾಗಿತ್ತು. ರಸ್ತೆಬದಿಯಲ್ಲಿ ಚುಕ್ಕಿಜಿಂಕೆಗಳ ಹಿಂಡು ಬೆದರಿ ನಿಂತಿತ್ತು. ಲಂಟಾನಾ ಪೊದೆಯಲ್ಲಿ ನಿಂತಿದ್ದ ಕಾಟಿ ದೃಷ್ಟಿಯುದ್ಧಕ್ಕೆ ಇಳಿದಿತ್ತು. ದೂರದ ಹಳ್ಳದಿಂದ ಆಗೊಮ್ಮೆ ಈಗೊಮ್ಮೆ ಕಾಡಾನೆಗಳ ಕೂಗು ಕೇಳಿಬರುತ್ತಿತ್ತು. ನಮಗೆ ಅರಿವಿಲ್ಲದಂತೆಯೇ ನಮ್ಮ ಸುತ್ತಲೂ ನಿಗೂಢ ಜಗತ್ತೊಂದು ಸುತ್ತುವರಿಯುತ್ತಿರುವ ಅನುಭವವಾಗತೊಡಗಿತು.

ಆಗ ಇದ್ದಕ್ಕಿದ್ದಂತೆ ಬೀಸಿದ ಗಾಳಿಯು ಖಚಿತವಾದ ಸುದ್ದಿಯೊಂದನ್ನು ಹೊತ್ತು ತಂದಿತು. ಗಾಳಿಯಲ್ಲಿದ್ದ ಆ ಕಟುವಾಸನೆ ನಿಸ್ಸಂದೇಹವಾಗಿ ಹತ್ತಿರದಲ್ಲಿಯೇ ಆನೆಯ ಕಳೇಬರ ಇದೆ ಎಂಬುದನ್ನು ಖಾತ್ರಿಪಡಿಸಿತು. ಅದೇ ವೇಳೆಗೆ ಟಿಟ್ಟಭ ಹಕ್ಕಿಯ ಎಚ್ಚರಿಕೆಯ ಕರೆ ಬಂದ ದಿಕ್ಕಿನತ್ತ ಹೆಜ್ಜೆ ಹಾಕಿದೆವು. ಹತ್ತಿರ ಹೋಗಿ ನೋಡಿದಾಗ ಅಲ್ಲಿನ ಬೀಭತ್ಸ ದೃಶ್ಯ ಮನಕಲಕಿತು.

ಗಂಡಾನೆಯ ಮೃತದೇಹದ ಸುತ್ತಲೂ ಚೆಲ್ಲಿದ್ದ ರಕ್ತ ಆನೆದಂತದ ಕಳ್ಳಬೇಟೆ ಕಥೆಯ ಕರಾಳ ಅಧ್ಯಾಯವನ್ನು ತೆರೆದಿಟ್ಟಿತು. ಒಡಹುಟ್ಟಿದ ಅಕ್ಕ, ತಂಗಿ, ಚಿಕ್ಕಮ್ಮಂದಿರ ಸ್ಪರ್ಶವನ್ನು ಮನನ ಮಾಡಿಕೊಂಡು, ತನ್ನ ಮಣ್ಣಿನ ವಾಸನೆ ಗ್ರಹಿಸುವ ಆನೆಯ ಸೊಂಡಿಲು ತುಂಡರಿಸಿ ಬಿದ್ದಿತ್ತು. 

ಭೂಮಂಡಲದ ಮೇಲೆ ಮನುಷ್ಯನನ್ನು ಆಕರ್ಷಿಸಿದ ಆನೆಯಂತಹ ಪ್ರಾಣಿ ಬೇರೊಂದಿಲ್ಲ. ಹಾಗಾಗಿಯೇ, ಅದಕ್ಕೆ ಪಾರಂಪ‍ರಿಕ ಪ್ರಾಣಿಯ ಪಟ್ಟ ನೀಡಿದ್ದೇವೆ. ಅಲ್ಲದೇ, ಅದು ಭಾರತೀಯ ಸಾಂಪ್ರದಾಯಿಕ ಸಂಸ್ಕೃತಿಯ ಭಾಗವೂ ಆಗಿದೆ. ಆದರೆ, ಇತಿಹಾಸದುದ್ದಕ್ಕೂ ಅದರಷ್ಟು ಕಷ್ಟ–ನಷ್ಟ ಅನುಭವಿಸಿದ ಜೀವಿ ಮತ್ತೊಂದಿಲ್ಲ. ಅವುಗಳ ದಂತದ ಮೇಲೆ ಮನುಷ್ಯನ ಮೋಹ ಇಂದು ನಿನ್ನೆಯದಲ್ಲ. ಚರಿತ್ರೆಯುದ್ದಕ್ಕೂ ಮನುಷ್ಯ ಗಂಡಾನೆಗಳನ್ನು ನಿರಂತರವಾಗಿ ಶೋಷಿಸಿದ್ದಾನೆ. ದಂತಕ್ಕಾಗಿ ಮಾರುಕಟ್ಟೆ ಸೃಷ್ಟಿಸಿ ಲಕ್ಷಾಂತರ ಆನೆಗಳ ಮಾರಣಹೋಮ ನಡೆಸಿ ವಿಜೃಂಭಿಸಿದ್ದಾನೆ. ವಿವೇಚನಾರಹಿತ ಈ ಹತ್ಯೆಯಿಂದ ಅವುಗಳ ತಳಿವೈವಿಧ್ಯಕ್ಕೆ ಆಪತ್ತು ಎದುರಾಗಿದೆ.    

ಪ್ರತಿಯೊಂದು ಜೀವಿಯ ಬದುಕಿನ ಮೂಲ ಉದ್ದೇಶವೇ ವಂಶಾಭಿವೃದ್ಧಿ. ಅವುಗಳ ಆರೋಗ್ಯ ಸದೃಢವಾಗಿದ್ದಾಗಲಷ್ಟೇ ಪರಿಸರದಲ್ಲಿ ಎದುರಾಗುವ ಎಲ್ಲಾ ಸವಾಲುಗಳ ವಿರುದ್ಧ ಈಜಿ ಬದುಕುಳಿಯಲು ಸಾಧ್ಯ. ಇದಕ್ಕೆ ವಂಶವಾಹಿನಿಯಲ್ಲಿನ ವೈವಿಧ್ಯವು ನಿರ್ಣಾಯಕ ಪಾತ್ರ ವಹಿಸುತ್ತದೆ. ಮತ್ತೊಂದೆಡೆ ಈ ಗುಣಮಟ್ಟದ ವಂಶವಾಹಿನಿಯು ಪರಿಣಾಮಕಾರಿಯಾಗಿ ಹಾಗೂ ನಿರಂತರವಾಗಿ ಪ್ರವಹಿಸುತ್ತಿರಬೇಕು. ಆಗಷ್ಟೇ ಆ ಸಂಕುಲದ ಭವಿಷ್ಯ ಸದೃಢವಾಗಿರುತ್ತದೆ. ಇಲ್ಲವಾದರೆ ಕತ್ತಲಿಗೆ ಜಾರುತ್ತದೆ. ಆನೆ ಸಂಕುಲವೂ ಇದರಿಂದ ಹೊರತಲ್ಲ.

ಆನೆ ಸಂಕುಲದ ವಂಶವಾಹಿನಿ ನಿರಂತರವಾಗಿ ಪಸರಿಸಿ ಸದೃಢವಾದ ತಳಿಗಳು ಅರಳಿ, ದೀರ್ಘಕಾಲ ಬದುಕುಳಿಯಲು ಕಾರಿಡಾರ್‌(ಆನೆ ಪಥ)ಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಸಂಗಾತಿಯ ಆಯ್ಕೆ, ಅವುಗಳ ಕೂಡುವಿಕೆಯಲ್ಲಿ ಇವುಗಳದ್ದು ನಿರ್ಣಾಯಕ ಪಾತ್ರ. ಕಾರಿಡಾರ್‌ಗಳು ಕಾಡುಗಳ ನಡುವೆ ವನ್ಯಜೀವಿಗಳು ಸಂಚರಿಸಲು ಇರುವ ಹಾದಿಗಳೆಂದು ನಮಗೆ ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ, ಇವು ದ್ವೀಪಗಳಂತೆ ತುಂಡಾಗಿ ಹರಿದು, ಚದುರಿ ಹೋಗಿರುವ ಅರಣ್ಯಗಳ ನಡುವೆ ಜೀವಕೋಠಿಗಳು ಸಂಚರಿಸಲು ಉಳಿದುಕೊಂಡಿರುವ ಸಂಪರ್ಕ ಹಾದಿಗಳಾಗಿವೆ. ಹಾಗಾದರೆ, ಈ ಕಾರಿಡಾರ್‌ಗಳು ಗುಣಮಟ್ಟ ಕಾಯ್ದುಕೊಂಡಿವೆಯೇ?

ಆನೆ ಪಥಕ್ಕೂ ಆಪತ್ತು 

ಕಾಡಿನ ಜೀವವೈವಿಧ್ಯ ಕಾಪಾಡುವಲ್ಲಿ ಆನೆಗಳ ಪಾತ್ರ ಹಿರಿದು. ಬೀಜ ಪ್ರಸರಣದಲ್ಲೂ ಅವುಗಳ ಪಾಲಿದೆ. ಲದ್ದಿಯ ಮೂಲಕ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ ಪ್ರಸರಣವಾಗುವ ಬೀಜಗಳು ಅರಣ್ಯದ ಪುನರುತ್ಪತ್ತಿಗೆ ಸಹಕಾರಿ. ಆನೆಯ ಹಿಂಡು ದಟ್ಟಪೊದೆಗಳನ್ನು ಸೀಳಿ ಮುನ್ನುಗುತ್ತದೆ; ಆ ಪ್ರದೇಶದಲ್ಲಿ ಹೊಸ ಸಸ್ಯಸಂಕುಲ ಮರುಹುಟ್ಟು ಪಡೆಯುತ್ತದೆ.

ಕಾಡಿನಲ್ಲಿ ಸದಾಕಾಲ ಚಲಿಸುತ್ತಿರುವುದೇ ಅವುಗಳ ವಿಶಿಷ್ಟ ಗುಣ. ವರ್ಷದಲ್ಲಿ ಆನೆಯ ಕುಟುಂಬವೊಂದು ಐನೂರರಿಂದ ಒಂದು ಸಾವಿರ ಚ.ಕಿ.ಮೀ.ನಷ್ಟು ಸಂಚರಿಸುತ್ತದೆ. ಕಾನನದಲ್ಲಿ ಋತುಮಾನದ ಬದಲಾವಣೆಗೆ ತಕ್ಕಂತೆ ಲಭಿಸುವ ಆಹಾರ, ಲಭ್ಯವಿರುವ ನೀರಿನ ಮೂಲಗಳನ್ನು ಶೋಧಿಸುತ್ತಾ ಚಲಿಸುತ್ತಿರುತ್ತದೆ.

ಆನೆ ಸಂಘ ಜೀವಿ. ಅವುಗಳದ್ದು ಮಾತೃಪ್ರಧಾನ ವ್ಯವಸ್ಥೆ. ಹಿರಿಯ ಹೆಣ್ಣಾನೆಯೇ ಗುಂಪಿನ ಅಧಿನಾಯಕಿ. ಹಲವು ಸೋದರ ಸಂಬಂಧಿ ಗುಂಪುಗಳು ಸೇರಿಯೇ ಆನೆಯ ವಂಶವೊಂದು ಹುಟ್ಟು ಪಡೆಯುತ್ತದೆ. ಆದರೆ, ಹತ್ತು ವರ್ಷದ ಪ್ರಾಯಕ್ಕೆ ತಲುಪುವ ವೇಳೆಗೆ ಗಂಡಾನೆಗಳಿಗೆ ಕುಟುಂಬದ ರೀತಿ ನೀತಿಗಳು ರುಚಿಸುವುದಿಲ್ಲ. ಗುಂಪಿನಿಂದ ಬೇರ್ಪಟ್ಟು ಏಕಾಂಗಿಯಾಗಿ ಸುತ್ತುತ್ತಾ ಬೆದೆಗೆ ಬರುವುದಕ್ಕೂ ಮೊದಲು ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತವೆ. ಆಗಷ್ಟೇ ಅವು ಸಂಗಾತಿಯ ಒಲುಮೆ ಗಿಟ್ಟಿಸಿಕೊಳ್ಳಲು ಸಾಧ್ಯ. ಜೀವಪರಿಸರದಲ್ಲಿ ಸ್ವೀಕೃತವಾಗಿರುವ ಸರಳ ಪದ್ಧತಿ ಇದು.

ಆದರೆ, ಭಾರತದಲ್ಲಿ ಆನೆ ಸಂಕುಲದ ಬದುಕಿಗೆ ಪೂರಕವಾದ ಸಮೃದ್ಧ, ವಿಸ್ತಾರವಾದ ಕಾಡುಗಳೇ ಇಲ್ಲ. ಅಳಿದುಳಿದಿರುವ, ಹರಿದು ಬಿಡಿಬಿಡಿಯಾಗಿರುವ ಅರಣ್ಯಗಳ ವಿಸ್ತ್ರೀರ್ಣವನ್ನು ವಿಸ್ತರಿಸಲು ಅವಕಾಶವೂ ಇಲ್ಲ. ಇಂತಹ ಅರಣ್ಯಗಳ ನಡುವೆ ಸಂಪರ್ಕ ಕಲ್ಪಿಸುವ ಕಾರಿಡಾರ್‌ಗಳನ್ನು ಸಂರಕ್ಷಿಸುವುದೇ ಈಗಿರುವ ಏಕೈಕ ಸವಾಲು. ಆದರೆ, ಆನೆ ಸಂಕುಲದ ತಳಿವೈವಿಧ್ಯ ಅರಳಲು ಮಹತ್ವದ ಪಾತ್ರವಹಿಸುವ ಕಾರಿಡಾರ್‌ಗಳದ್ದು ಚಿಂತಾಜನಕ ಸ್ಥಿತಿ. ಮಾನವನ ಒತ್ತಡದಿಂದ ದಿನೇ ದಿನೇ ಸೊರಗುತ್ತಿವೆ. ನಲುಗಿ, ನಿತ್ರಾಣಗೊಂಡಿರುವ ಈ ಪಥಗಳಿಂದ ಆನೆ ಸಂಕುಲದ ಸಂಭ್ರಮಕ್ಕೆ ಅವಕಾಶವೇ ಇಲ್ಲ. ಜೊತೆಗೆ ಈ ಹಾದಿಯಲ್ಲಿ ಮಾನವರ ಹೆಜ್ಜೆಗುರುತುಗಳು ದೊಡ್ಡದಾಗಿ ಮೂಡಿವೆ. ತನ್ನ ಬದುಕು ಮತ್ತು ಖಾಸಗಿತನಕ್ಕೆ ಅಕ್ಷರಶಃ ಸವಾಲಾಗಿ ಕಾಣಿಸುತ್ತಿರುವ ಈ ಹೆಜ್ಜೆಗಳನ್ನು ನೋಡಿ ದೈತ್ಯ ಆನೆಗಳೂ ಬೆಚ್ಚಿಬೀಳುತ್ತಿವೆ.

ದಂತದ ಮೇಲೆ ಮೋಹ ಏಕೆ?‌

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆನೆ ದಂತಗಳಿಂದ ತಯಾರಿಸಿದ ದೇವರ ಮೂರ್ತಿಗಳು, ನೆಕ್‌ಲೆಸ್‌, ಬ್ರಾಸ್‌ಲೇಟ್‌, ಕಿವಿಯೋಲೆ, ತಾಯತ, ಕಲಾಕೃತಿಗಳಿಗೆ ಬೇಡಿಕೆ ಹೆಚ್ಚು. ಪಿಯಾನೊ ಸೇರಿದಂತೆ ವಾದ್ಯ ಪರಿಕರಗಳ ತಯಾರಿಕೆಯಲ್ಲೂ ದಂತ ಬಳಸಲಾಗುತ್ತದೆ.

ದಂತದಿಂದ ತಯಾರಿಸಿದ ಆಭರಣ ಧರಿಸುವುದು ಅಲ್ಲಿನವರಿಗೆ ಪ್ರತಿಷ್ಠೆ. ಮನೆಯಲ್ಲಿ ದಂತದ ಗೃಹಾಲಂಕಾರಿಕ ವಸ್ತುಗಳಿದ್ದರೆ ಅದೃಷ್ಟ ಖುಲಾಯಿಸಲಿದೆ ಎಂಬುದು ಚೀನಿಯರ ನಂಬಿಕೆ. ಭಾರತದಲ್ಲಿರುವಂತೆ ಜಪಾನಿಗರು ಪೆನ್‌ ಬಳಸಿ ಸಹಿ ಹಾಕುವುದಿಲ್ಲ. ಅಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಸಹಿಮುದ್ರೆ ಇರುತ್ತದೆ. ಶ್ರೀಮಂತರ ಮನೆಗಳಲ್ಲಿ ದಂತಗಳಿಂದ ತಯಾರಿಸಿದ ಠಸ್ಸೆಗಳು ಇರುತ್ತವೆ.

ಆನೆ ದಂತಕ್ಕೆ ಚೀನಾವೇ ಬಹುದೊಡ್ಡ ಮಾರುಕಟ್ಟೆ. ವಿಶ್ವದಲ್ಲಿ ಮುಕ್ಕಾಲು ಭಾಗದಷ್ಟು ದಂತ ಬಳಸುವ ದೇಶವದು. ಜೊತೆಗೆ, ಚೀನಿಯರು ಸಾಂಪ್ರದಾಯಿಕ ಔಷಧಿಪ್ರಿಯರು. ಆನೆಯ ಚರ್ಮ, ಶಿಶ್ನವನ್ನು ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ. ಚರ್ಮವು ‘ಇಸುಬು’ ರೋಗಕ್ಕೆ ದಿವೌಷಧ ಎಂದು ನಂಬುತ್ತಾರೆ.

ದಂತದ ಕಳ್ಳಬೇಟೆಯ ದಂಧೆ ಚೀನಾಕಷ್ಟೇ ಸೀಮಿತವಾಗಿಲ್ಲ. ಥಾಯ್ಲೆಂಡ್‌, ಫಿಲಿಪೈನ್ಸ್‌, ಮಲೇಷ್ಯಾ, ದಕ್ಷಿಣ ಕೊರಿಯಾ, ಹಾಂಗ್‌ಕಾಂಗ್‌, ವಿಯೆಟ್ನಾಂ, ಕಾಂಬೋಡಿಯಾ, ಜಪಾನ್‌, ಇಂಗ್ಲೆಂಡ್‌, ಅಮೆರಿಕ, ಸ್ಪೇನ್‌, ಜರ್ಮನಿ, ಇಟಲಿ, ಫ್ರಾನ್ಸ್‌ವರೆಗೂ ಈ ವ್ಯವಸ್ಥಿತ ವನ್ಯಜೀವಿ ವ್ಯಾಪಾರದ ಕಬಂಧಬಾಹು ವಿಸ್ತರಿಸಿದೆ. ಈ ರಾಷ್ಟ್ರಗಳ ದಂತದ ವ್ಯಾಮೋಹ ತಣಿಸಲು ಪ್ರತಿವರ್ಷ 27 ಸಾವಿರ ಆಫ್ರಿಕನ್‌ ಆನೆಗಳ ಹತ್ಯೆ ನಡೆಯುತ್ತಿದೆ.

ಆಫ್ರಿಕನ್‌ ಆನೆಗಳ ಸ್ಥಿತಿಗತಿ

1989ರಲ್ಲಿ ಅಪಾಯಕ್ಕೀಡಾಗಿರುವ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಒಡಂಬಡಿಕೆಯಾದ ‘ಸೈಟೀಸ್‌’ (CITES) ಆನೆಗಳ ಕಳ್ಳಬೇಟೆ ಮತ್ತು ದಂತ ಮಾರಾಟಕ್ಕೆ ನಿಷೇಧ ಹೇರಿತು. ಈ ಒಕ್ಕೂಟದಡಿ ಸದಸ್ಯ ರಾಷ್ಟ್ರಗಳ ಸಂಖ್ಯೆ ಮಾತ್ರ ಹೆಚ್ಚಿದೆ. ಆದರೆ, ಕಳ್ಳಬೇಟೆಗೆ ಕಡಿವಾಣ ಬಿದ್ದಿಲ್ಲ.

ಆಫ್ರಿಕನ್‌ ಆನೆಗಳ ಹತ್ಯೆ ಎಗ್ಗಿಲ್ಲದೆ ಸಾಗಿದೆ. ತಾಂಜೇನಿಯಾ, ಮೊಜಾಂಬಿಕಾ, ಜಿಂಬಾಬ್ವೆ, ಕೀನ್ಯಾದಲ್ಲಿ ಆನೆ ಸಂಕುಲ ತೀವ್ರವಾಗಿ ಕುಸಿದಿದೆ. ಇದರಿಂದ ಕಂಗಾಲಾದ ಸ್ವಯಂಸೇವಾ ಸಂಸ್ಥೆಗಳು ಏಳು ವರ್ಷದ ಹಿಂದೆ ಸಮೀಕ್ಷೆಗೆ ಮುಂದಾದವು. ಇದಕ್ಕೆ ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಪೌಲ್‌ ಜಿ. ಅಲೆನ್ ಅವರಿಂದ ಆರ್ಥಿಕ ನೆರವು ದೊರೆಯಿತು.

ಆಫ್ರಿಕಾದ 18 ರಾಷ್ಟ್ರಗಳಲ್ಲಿ ನಡೆದ ಈ ವೈಮಾನಿಕ ‘ಗ್ರೇಟ್‌ ಎಲಿಫೆಂಟ್ ಸೆನ್ಸಸ್‌’ ವರದಿಯು ಬಿಡುಗಡೆಯಾಗಿದ್ದು 2016ರಲ್ಲಿ. ಈ ವರದಿಯು ಇಡೀ ಜಗತ್ತನ್ನೇ ಬೆಚ್ಚಿಬೇಳಿಸಿತ್ತು. ಒಂದು ದಶಕದ ಅವಧಿಯಲ್ಲಿ ದಂತಕ್ಕಾಗಿ 1.44 ಲಕ್ಷ ಗಂಡಾನೆಗಳ ಹತ್ಯೆಯಾಗಿದ್ದು, ಒಟ್ಟಾರೆ ಶೇಕಡ 30ರಷ್ಟು ಆನೆಗಳು ತಮ್ಮ ಮೂಲ ನೆಲೆಯಲ್ಲಿಯೇ ಸಾವು ಕಂಡಿವೆ ಎಂದು ಸಮೀಕ್ಷೆ ಬಹಿರಂಗಪಡಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು