ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪ್ರಿಯರ ಈಶ್ವರ ವನ

Last Updated 13 ಜನವರಿ 2020, 19:30 IST
ಅಕ್ಷರ ಗಾತ್ರ

ಶಿವಮೊಗ್ಗ ನಗರದ ಸವಳಂಗ ರಸ್ತೆಯ ಅಬ್ಬಲಗೆರೆ ಸಮೀಪ ನಗರಕ್ಕೆ ಹೊಂದಿಕೊಂಡಂತೆ ನಾಗೇಶ್ ತಮ್ಮ ಹೆಸರಿನಲ್ಲಿರುವ ಒಂದು ಎಕರೆ ಭೂಮಿಯನ್ನು ನಿವೇಶನವಾಗಿ ಪರಿವರ್ತಿಸದೇ ಪಕ್ಷಿಗಳ, ಪರಿಸರ ಪ್ರಿಯರ ತಾಣವಾಗಿ ರೂಪಿಸಿದ್ದಾರೆ.

ನಗರ‌ದ ಸಮೀಪದ ಒಂದು ನಿವೇಶನ ಸಿಕ್ಕರೆ ಸಾಕು ಮನೆಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸಬಹುದು ಎನ್ನುವುದು ಮಧ್ಯಮ ವರ್ಗದ ಜನರ ಕನಸು. ಸಾಮಾನ್ಯ ಕುಟುಂಬದಿಂದ ಬಂದ ಶಿವಮೊಗ್ಗದ ನಾಗೇಶ್ (ನವ್ಯಶ್ರೀ ನಾಗೇಶ್ ಎಂದೇ ಜನಪ್ರಿಯ) ಆಲೋಚನೆಗಳು ಮಧ್ಯಮ ವರ್ಗದವರಿಗಿಂತಲೂ ಭಿನ್ನ. ಸವಳಂಗ ರಸ್ತೆಯ ಅಬ್ಬಲಗೆರೆ ಸಮೀಪ ನಗರಕ್ಕೆ ಹೊಂದಿಕೊಂಡಂತೆ ತಮ್ಮ ಹೆಸರಿನಲ್ಲಿರುವ ಒಂದು ಎಕರೆ ಭೂಮಿಯನ್ನು ನಿವೇಶನವಾಗಿ ಪರಿವರ್ತಿಸದೇ ಪಕ್ಷಿಗಳ, ಪರಿಸರ ಪ್ರಿಯರ ತಾಣವಾಗಿ ರೂಪಿಸಿದ್ದಾರೆ.

ಇಂದು ಆ ಒಂದು ಎಕರೆ ಭೂಮಿಯ ಬೆಲೆ ₨ 1 ಕೋಟಿಗೂ ಅಧಿಕ. ನಿವೇಶನವಾಗಿ ಪರಿವರ್ತಿಸಿದರೆ ಮತ್ತಷ್ಟು ಹಣ ಮಾಡಬಹುದು. ಅಂತಹ ಯಾವ ಲಾಭಕ್ಕೂ ಆಸೆ ಪಡದ ಅವರು ಒಂದು ಎಕರೆ ಜಾಗದಲ್ಲಿ 30 ವಿವಿಧ ತಳಿಯ 300ಕ್ಕೂ ಹೆಚ್ಚು ಔಷಧೀಯ, ಹಣ್ಣು ಹಂಪಲುಗಳ ಗಿಡಬೆಳೆಸಿದ್ದಾರೆ.ವನದಲ್ಲಿ ಹತ್ತಿ, ಆಲ. ಅರಳಿ, ಹಲಸು, ಮಾವು, ನೇರಲೆ, ಹೆಬ್ಬೇವು, ಪನರ್ಪುಳಿ ಮತ್ತಿತರ ಸಸ್ಯಗಳಿವೆ. ಕೊಳವೆ ಬಾವಿ ಕೊರೆಸಿ, ಪ್ರತಿ ಮರ, ಗಿಡಗಳಿಗೂ ಹನಿನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಈಶ್ವರನ ಪುಟ್ಟ ದೇಗುಲ ನಿರ್ಮಿಸಿ ಅದಕ್ಕೆ ‘ಈಶ್ವರ ವನ’ ಎಂದು ಹೆಸರಿಟ್ಟಿದ್ದಾರೆ. ಐದಾರು ವರ್ಷಗಳ ಶ್ರಮದ ಫಲವಾಗಿ ಇಂದು ಆ ವನ ಪರಿಸರಾಸಕ್ತರನ್ನು ಆಕರ್ಷಿಸುತ್ತಿದೆ. ಪಕ್ಷಿಗಳ ಕಲರವ ಕೇಳಿ ಬರುತ್ತಿದೆ.

ಗಂಟೆ ನಾದವಿಲ್ಲದ, ಹುಂಡಿ ಕಾಣದ ಈಶ್ವರ

ವನದಲ್ಲಿ ಇರುವ ಪುಟ್ಟ ಶಿವನ ದೇಗುಲದಲ್ಲಿ ಗಂಟೆ ನಾದಕ್ಕೆ ಅವಕಾಶವಿಲ್ಲ. ಬಂದ ಭಕ್ತರು ಕಾಣಿಕೆ ಹಾಕಲು ಹುಂಡಿ ಇಟ್ಟಿಲ್ಲ. ಜಾತಿ, ಭೇದಗಳಿಲ್ಲ. ಅಲ್ಲಿಗೆ ಬರುವ ಯಾರು ಬೇಕಾದರೂ ಶಿವನಿಗೆ ಪೂಜೆ ಸಲ್ಲಿಸಬಹುದು.ಪೂಜೆ ಮಾಡದೇ ಬಿಟ್ಟ, ಮುಕ್ಕಾದ ವಿಗ್ರಹಗಳನ್ನೂ ತಂದು ಈ ವನದಲ್ಲೇ ಜೋಡಿಸಿಡಲಾಗಿದೆ.

‘ಗಂಟೆ ಶಬ್ದ ಇದ್ದರೆ ಪಕ್ಷಿಗಳಿಗೆ ತೊಂದರೆಯಾಗುತ್ತದೆ. ಕಾಣಿಕೆ ಹುಂಡಿ ಇದ್ದರೆ ವ್ಯವಹಾರವಾಗುತ್ತದೆ. ಅದಕ್ಕೆ ಎರಡಕ್ಕೂ ಅವಕಾಶ ನೀಡಿಲ್ಲ’ ಎನ್ನುತ್ತಾರೆ ನಾಗೇಶ್.

ಇಂದಿನ ಜನರು ಪ್ರಕೃತಿ ನಾಶ ಮಾಡುತ್ತಿದ್ದಾರೆ. ಕಾಡು ಕೃಷಿ ಭೂಮಿಯಾಗುತ್ತಿದೆ. ನಗರ ಸಮೀಪದ ಕೃಷಿ ಭೂಮಿಗಳು ನಿವೇಶನಗಳಾಗಿ ಬದಲಾಗುತ್ತಿವೆ. ಸಮಾಜಕ್ಕೆ ಮಾದರಿಯಾಗಬೇಕು ಎನ್ನುವ ಕಾರಣಕ್ಕೆ ವನ ಬೆಳೆಸಿರುವೆ. ದೇವರು ನೆಪ ಮಾತ್ರ. ದೇವಸ್ಥಾನವಿದ್ದರೆ ಸಮಾಜ ಘಾತುಕರು ಗಿಡ, ಮರ ಕಡಿಯುವುದಿಲ್ಲ. ಅನೈತಿಕ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ ಎನ್ನುವ ಆಲೋಚನೆಯಿಂದ ಇಂತಹ ನಿರ್ಧಾರ ಮಾಡಿದೆಎಂದು ವಿವರಿಸಿದರು.

ಅವರ ನಡೆಗೆ ಮಾರು ಹೋದ ಅವರ ಸ್ನೇಹಿತ ಮಹಾದೇವ ಸ್ವಾಮಿ ಅವರ ಜತೆ ಸೇರಿ ಪಕ್ಕದಲ್ಲೇ ಮತ್ತೆ ಒಂದೂವರೆ ಎಕರೆ ಖರೀದಿಸಿದ್ದಾರೆ. ಈಚೆಗೆ ಅಲ್ಲೂ 700 ಗಿಡಗಳನ್ನು ನೆಟ್ಟಿದ್ದಾರೆ.

ಮೂಲತಃ ಶೃಂಗೇರಿ ಸಮೀಪದ ಬೆಣ್ಣೆಗುಡ್ಡೆಯ ವಿಶ್ವನಾಥ ಭಟ್‌, ಶಾಂತಮ್ಮ ದಂಪತಿ ಪುತ್ರ ನಾಗೇಶ್. ಬಿ.ಕಾಂ ಓದಲು 1985ರಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು. ಹಗಲು ಅಡುಗೆ ಕೆಲಸ ಮಾಡುತ್ತಾ, ಸಂಜೆ ಕಾಲೇಜಿನಲ್ಲಿ ಪದವಿ ಮುಗಿಸಿದ ಬಳಿಕ ಇಲ್ಲೇ ನೆಲೆ ನಿಂತಿದ್ದಾರೆ. ಈಗಲೂ ಕೇಟರಿಂಗ್ ಕೆಲಸ ಮಾಡುತ್ತಲೇ ಪತ್ನಿ ಶಶಿಕಲಾ ಜತೆ ಇಂತಹ ಪರಿಸರಮುಖಿ ಕಾರ್ಯ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT