ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಇಲ್ಲದೇ ಸೊರಗಿದ ಘಟಪ್ರಭಾ ಪಕ್ಷಿಧಾಮ

ಅಭಿವೃದ್ಧಿ ಯೋಜನೆಗೆ ಅನುದಾನದ ಕೊರತೆ
Last Updated 4 ಜನವರಿ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಗೋಕಾಕ ತಾಲ್ಲೂಕಿನಲ್ಲಿ ನಿಸರ್ಗ ನಿರ್ಮಿತ ಘಟಪ್ರಭಾ ಪಕ್ಷಿಧಾಮ ಪ್ರವಾಸಿಗರು ಅಥವಾ ಸಂದರ್ಶಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಆಕರ್ಷಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯದಿರುವುದು ಇದಕ್ಕೆ ಕಾರಣ.

ಧುಪದಾಳ ಜಲಾಶಯಕ್ಕೆ ಹರಿದು ಬರುವ ಘಟಪ್ರಭಾ ನದಿಯ ಹಿನ್ನೀರಿನ ನಡುಗಡ್ಡೆಯಲ್ಲಿ ಮೈದಳೆದಿರುವ ಪಕ್ಷಿಧಾಮವನ್ನು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಪೂರಕವಾಗಿ ಬಳಸಿಕೊಳ್ಳಲು ಬಹಳಷ್ಟು ಅವಕಾಶವಿದ್ದರೂ, ಆ ಕಾರ್ಯ ನಡೆಯುತ್ತಿಲ್ಲ. ಬದಲಿಗೆ, ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಪರಿಸರ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಅಲ್ಲಿಗೆ ಹೋಗುವ ಆಸಕ್ತ ಪ್ರವಾಸಿಗರು ಸೌಲಭ್ಯಗಳ ಕೊರತೆ ಇರುವುದು, ಉದ್ಯಾನವು ಸೊರಗಿರುವುದನ್ನು ಕಂಡು ಮತ್ತು ಪಕ್ಷಿಗಳನ್ನು ವೀಕ್ಷಿಸಲು ವ್ಯವವ್ಥೆ ಇಲ್ಲದಿರುವುದರಿಂದ ನಿರಾಸೆಯಿಂದ ಹಿಂತಿರುಗಬೇಕಾದ ದುಃಸ್ಥಿತಿ ಇದೆ.

ನಡೆಯದ ಅಭಿವೃದ್ಧಿ

ಈ ಪಕ್ಷಿಧಾಮವನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ಕಚೇರಿಯಿಂದ ಗೋಕಾಕ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಗೆ ಹಸ್ತಾಂತರಿಸಲಾಗಿದೆ. ಆಗ, ಆರಂಭದಲ್ಲಿ ಕೆಲವೊಂದಿಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಬಳಿಕ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇತ್ತೀಚೆಗೆ ಅಲ್ಲಿನ ಉದ್ಯಾನವೂ ಕೂಡ ಸೊರಗಿದೆ. ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಆಗುತ್ತಿಲ್ಲ ಎನ್ನುವ ಅಸಹಾಯಕತೆಯನ್ನು ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.

ಚಳಿಗಾಲದಲ್ಲಿ ಹಲವು ಕಡೆಗಳಿಂದ ವಲಸೆ ಬರುವ ನೂರಾರು ಪಕ್ಷಿಗಳು ಇಲ್ಲಿ ಸಂತಾನೋತ್ಪತ್ತಿ ಕ್ರಿಯೆ ನಡೆಸುತ್ತವೆ. ಅಷ್ಟು ಪೂರಕ ವಾತಾವರಣ ಅಲ್ಲಿದೆ. ವಿವಿಧ ಜಾತಿಯ ಪಕ್ಷಿಗಳನ್ನು ವೀಕ್ಷಿಸಿ, ಅವುಗಳ ಕಲರವವನ್ನು ಆಲಿಸಬಹುದಾಗಿದೆ. ವಿಶಾಲವಾದ ಪ್ರದೇಶ ಹೊಂದಿರುವ ಈ ಧಾಮವು ಜಲಾಶಯದ ನಡುಗಡ್ಡೆಯಲ್ಲೇ ಇದೆ. ಧುಪದಾಳ ಜಲಾಶಯದ ನಡುವೆ ಇರುವ ಈ ಪಕ್ಷಿಧಾಮದ ಒಳಗಿನ ಸೌಂದರ್ಯ ಕಣ್ತುಂಬಿಕೊಳ್ಳಬೇಕಾದರೆ, ಪ್ರವಾಸಿಗರು ಬೋಟ್‌ನಲ್ಲೇ ತೆರಳಬೇಕು.

ವಾರಾಂತ್ಯ ಅಥವಾ ರಜಾ ದಿನಗಳಲ್ಲಿ ಬಹಳಷ್ಟು ಮಂದಿ ಕುಟುಂಬ ಸಮೇತ ಬರುತ್ತಾರೆ. ಗೋಕಾಕ ಅಥವಾ ಗೊಡಚಿನಮಲ್ಕಿ ಜಲಪಾತಗಳಿಗೆ ಬರುವವರಲ್ಲಿ ಹಲವರು ಪಕ್ಷಿಧಾಮದ ಕಡೆಗೂ ಬರುತ್ತಾರೆ. ಆದರೆ, ಅಲ್ಲಿ ದೋಣಿಯ ವ್ಯವಸ್ಥೆ ಇಲ್ಲದಿರುವುದರಿಂದ ಅವರು ಪಕ್ಷಿಧಾಮಕ್ಕೆ ಹೋಗುವುದು ಸಾಧ್ಯವಾಗುತ್ತಿಲ್ಲ. ಹಕ್ಕಿಗಳ ಏಕಾಂತಕ್ಕೆ ನಿಸರ್ಗದ ಸ್ವರ್ಗದಂತಿರುವುದರಿಂದ ಈ ತಾಣವನ್ನು ಕಣ್ತುಂಬಿಕೊಳ್ಳುವುದು ಆಗುತ್ತಿಲ್ಲ. ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಾವಲಿಗಳು ಕೂಡ ಇವೆ.

₹ 2 ಕೋಟಿ ಕೋರಲಾಗಿತ್ತು

ಪಕ್ಷಿಧಾಮದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ಪ್ರವಾಸಿಗರನ್ನು ಸೆಳೆಯಲು ₹ 2 ಕೋಟಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಅನುದಾನ ದೊರೆಯದೆ ಯೋಜನೆ ನನೆಗುದಿಗೆ ಬಿದ್ದಿದೆ. ಕೋವಿಡ್–19 ಲಾಕ್‌ಡೌನ್‌ ಕಾರಣದಿಂದಾಗಿ ಈ ಬಾರಿಯೂ ಅನುದಾನ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷ ಆಸಕ್ತಿ ವಹಿಸಿ ಅನುದಾನ ಕೊಡಿಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ನಡುಗಡ್ಡೆಯಲ್ಲಿ ಕಳೆಗಡಿಗಳನ್ನು ತೆರವುಗೊಳಿಸಿ, ದನ, ಕರುಗಳು ಅಥವಾ ಎಮ್ಮೆಗಳು ಬಾರದಂತೆ ಸುತ್ತಲೂ ಚೈನ್‌ಲಿಂಕ್ಡ್ ಮೆಸ್ (ಬೇಲಿ) ಹಾಕುವುದು, ಬೋಟಿಂಗ್‌, ಕ್ಯಾಂಟೀನ್, ಟಿಕೆಟ್ ಕೌಂಟರ್ ಮೊದಲಾದ ವ್ಯವಸ್ಥೆ ಮಾಡುವುದಕ್ಕೆ ಮತ್ತು ಪ್ರವಾಸಿ ಮಂದಿರದ ಎದುರಿನ ಉದ್ಯಾನದ ಅಭಿವೃದ್ಧಿಗೆ ಯೋಜಿಸಲಾಗಿದೆ. ನಡುಗಡ್ಡೆಯಲ್ಲಿ ಪಕ್ಷಿಗಳ ಮಾಹಿತಿ ಒದಗಿಸುವುದಕ್ಕಾಗಿ, ಬೋಟ್ ಮೂಲಕ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ಬೋಟ್‌ಗಳನ್ನು ಬಳಸಲು ಮತ್ತು ಉತ್ತಮ ಪಿಕ್‌ನಿಕ್‌ ತಾಣವನ್ನಾಗಿಸಲು ಉದ್ದೇಶಿಸಲಾಗಿದೆ. ಅನುದಾನಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT