ಗುರುವಾರ , ಮಾರ್ಚ್ 30, 2023
24 °C
ಮಾದರಿಯಾದ ‘ಹಸಿರು ಇಂಧನ’ ನಡೆ

PV Web Exclusive: ಹೆಸ್ಕಾಂಗೇ ವಿದ್ಯುತ್ ಕೊಡುತ್ತಿದೆ ಬೆಳಗಾವಿ ಜಿ.ಪಂಚಾಯಿತಿ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ ಜಿಲ್ಲಾ ಪಂಚಾಯಿತಿಯ ಚಾವಣಿಯಲ್ಲಿ ಸೋಲಾರ್‌ ವಿದ್ಯುತ್‌ ಉತ್ಪಾದನಾ ಘಟಕ ಅಳವಡಿಸಲಾಗಿದೆಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿ: ನವೀಕರಿಸಬಹುದಾದ ಇಂಧನಗಳ ಬಳಕೆಗೆ ಆದ್ಯತೆ ನೀಡುವುದು ಇಂದಿನ ತುರ್ತು ಅಗತ್ಯಗಳಲ್ಲೊಂದು. ಈ ನಿಟ್ಟಿನಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿಯ ‘ಹಸಿರು ಇಂಧನ ನಡೆ’ ಮಾದರಿಯಾಗಿದೆ. ರಾಜ್ಯದ ಜಿಲ್ಲಾ ಪಂಚಾಯಿತಿಗಳ ಗಮನಸೆಳೆದಿದೆ.

ಜಿಲ್ಲಾ ‍ಪಂಚಾಯಿತಿಯ ಕಟ್ಟಡದ ಚಾವಣಿಯಲ್ಲಿ ಸೌರ ವಿದ್ಯುತ್‌ ಘಟಕ ಅಳವಡಿಸುವ ಮೂಲಕ ವಿದ್ಯುತ್‌ ಸ್ವಾವಲಂಬನೆ ಸಾಧಿಸಿದೆ. ಒಂದು ಕಾಲದಲ್ಲಿ ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯ (ಹೆಸ್ಕಾಂ) ಮೇಲೆ ಅವಲಂಬಿತವಾಗಿದ್ದ ಜಿಲ್ಲಾ ಪಂಚಾಯಿತಿಯು ಈಗ ಆ ಕಂಪನಿಗೇ ವಿದ್ಯುತ್‌ ಕೊಡುತ್ತಿದೆ! ಇದನ್ನು ಗಮನಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ‍ಪಂಚಾಯತ್‌ರಾಜ್‌ ಇಲಾಖೆಯು ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳ ಕಟ್ಟಡಗಳಲ್ಲಿ ಇಂಥಾದ್ದೇ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.

ತಪ್ಪಿದ ಅವಲಂಬನೆ

ಹೊಸ ಯೋಜನೆಯಿಂದಾಗಿ ಜಿಲ್ಲಾ ಪಂಚಾಯಿತಿಯು, ಹೆಸ್ಕಾಂಗೆ ಪ್ರತಿ ತಿಂಗಳು ಕಟ್ಟುವ ಬಿಲ್‌ ಪ್ರಮಾಣವನ್ನೂ ಗಣನೀಯವಾಗಿ ಇಳಿಸಿಕೊಂಡಿದೆ. ಇದಕ್ಕೆ ನೆರವಾಗಿರುವುದು ಸೌರವಿದ್ಯುತ್‌ನ ವ್ಯವಸ್ಥಿತ ಹಾಗೂ ಯೋಜಿತ ಬಳಕೆ. ವ್ಯರ್ಥವಾಗಿ ಹೋಗುವ ಸೌರಶಕ್ತಿಯನ್ನು ಇಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಇದರೊಂದಿಗೆ, ಸಾಂಪ್ರದಾಯಿಕ ವಿದ್ಯುತ್‌ ಮೂಲದ ಅವಲಂಬನೆಯನ್ನು ತಗ್ಗಿಸಿಕೊಂಡಿರುವುದು ವಿಶೇಷ.

ಕೇಂದ್ರ ಸರ್ಕಾರದ ಸಮಗ್ರ ಇಂಧನ ಅಭಿವೃದ್ಧಿ ಯೋಜನೆಯಲ್ಲಿ (ಐಪಿಡಿಎಸ್) ಯೋಜನೆ ಕೈಗೊಳ್ಳಲಾಗಿದೆ. ‘ಹಸಿರು ಇಂಧನ ಉಪಯೋಗಿಸುವ ಸರ್ಕಾರಿ ಕಾರ್ಯಾಲಯ’ವನ್ನಾಗಿ ಮಾಡುವ ಉದ್ದೇಶವಿಲ್ಲಿ ಈಡೇರಿದೆ. ಕಚೇರಿಯ ಬಹುತೇಕ ಇಂಧನದ ಅಗತ್ಯವನ್ನು ಸೌರಶಕ್ತಿಯಿಂದಲೇ ಪಡೆಯುತ್ತಿರುವುದು ಇಲ್ಲಿನ ಹೆಗ್ಗಳಿಕೆ. ಯೋಜನೆಯನ್ನು ಹೆಸ್ಕಾಂನಿಂದ ಅನುಷ್ಠಾನಗೊಳಿಸಲಾಗಿದ್ದು, ಬೆಂಗಳೂರಿನ ಪ್ರಥಮ ಇಂಟಿಗ್ರೇಟೆಡ್ ಎಂಜಿನಿಯರಿಂಗ್ ಪ್ರೈ.ಲಿ. ಕಂಪನಿಯು ಘಟಕವನ್ನು ಅಳವಡಿಸಿದೆ.

(ವಿಡಿಯೊ ವರದಿ)

ಅನುಕೂಲವೇನು?

2018ರ ಜನವರಿಯಲ್ಲಿ 10 ಕಿ.ವಾಟ್ ಹಾಗೂ ಅದೇ ವರ್ಷದ ಅಕ್ಟೋಬರ್‌ನಲ್ಲಿ 20 ಕಿ.ವಾಟ್. ಸಾಮರ್ಥ್ಯದ ಘಟಕ ಸಿದ್ಧಪಡಿಸಲಾಗಿದೆ. ಒಟ್ಟು 30 ಕಿಲೋ ವಾಟ್ ಸಾಮರ್ಥ್ಯದ ಸೌರ ವಿದ್ಯುತ್‌ ಘಟಕ ಇದಾಗಿದೆ. ಆರ್. ರಾಮಚಂದ್ರನ್ ಅವರು ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಇದು ಕ್ರಮೇಣ ಉತ್ತಮ ‘ವಿದ್ಯುತ್‌ ಇಳುವರಿ’ ಕೊಡುತ್ತಿದೆ!

ತಲಾ 250 ವಾಟ್ ಸಾಮರ್ಥ್ಯದ 120 ಪೆನಲ್‌ಗಳನ್ನು ಅಳವಡಿಸಲಾಗಿದೆ. ಘಟಕಕ್ಕೆ ಆಗಿರುವ ಒಟ್ಟು ವೆಚ್ಚ ₹ 24 ಲಕ್ಷ. ಘಟಕ ಸ್ಥಾಪನೆಗೂ ಮುನ್ನ ಜಿಲ್ಲಾ ಪಂಚಾಯಿತಿಯಿಂದ ತಿಂಗಳಿಗೆ ₹ 40ಸಾವಿರ ವಿದ್ಯುತ್‌ ಬಿಲ್‌ ಪಾವತಿಸಲಾಗುತ್ತಿತ್ತು. ಸೌರ ಶಕ್ತಿಯ ಮೊರೆ ಹೊದ ಬಳಿಕ ಕೇವಲ ₹ 10ಸಾವಿರ ಬಿಲ್ ಬರುತ್ತಿದೆ. ಅಂದರೆ ₹ 30ಸಾವಿರ ಉಳಿತಾಯವಾಗುತ್ತಿದೆ!

15.80 ಮೆಗಾ ವಾಟ್ ಉತ್ಪಾದನೆ

ಇಲ್ಲಿ ಈವರೆಗೆ ಉತ್ಪಾದಿಸಿದ ವಿದ್ಯುತ್‌ ಪ್ರಮಾಣ 15.80 ಮೆಗಾ ವಾಟ್‌ಗೂ ಜಾಸ್ತಿಯಾಗಿದೆ. ಹೆಚ್ಚುವರಿಯಾಗಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಹೆಸ್ಕಾಂ ಜಾಲಕ್ಕೆ ನೀಡಲಾಗುತ್ತಿದೆ. ಇದರ ಪ್ರಮಾಣ ಪ್ರತಿ ತಿಂಗಳು ಸರಾಸರಿ 500 ಯುನಿಟ್‌ಗಳು. ಘಟಕದಿಂದ ಬಹಳಷ್ಟು ಪ್ರಯೋಜನವಾಗಿರುವುದನ್ನು ಅಂಕಿ–ಅಂಶಗಳು ತಿಳಿಸುತ್ತಿವೆ.

‘ಜಿಲ್ಲಾ ಪಂಚಾಯಿತಿ ಕಚೇರಿಯೊಂದಿಗೆ ಚಿಕ್ಕೋಡಿ, ಬೈಲಹೊಂಗಲ, ಸವದತ್ತಿ, ಮೂಡಲಗಿ, ಘಟಪ್ರಭಾ ಸೇರಿದಂತೆ ಅಲ್ಲಲ್ಲಿ 49 ಕಡೆಗಳಲ್ಲಿ ಸೌರ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಅಳವಡಿಸಲಾಗಿದೆ. ಇವೆಲ್ಲವುಗಳಿಂದ ತಿಂಗಳಿಗೆ 412 ಕಿ.ವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಇದರಿಂದ ಬಹಳಷ್ಟು ನೆರವಾಗಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್‌ ಎಚ್‌.ವಿ.

ಇನ್ನೂ ಹಲವೆಡೆ ಅಳವಡಿಕೆ

ಘಟಕದ ತಾಂತ್ರಿಕ ಮಾಹಿತಿಯನ್ನು ‘ಪ್ರಜಾವಾಣಿ’ಗೆ ನೀಡಿದ ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಇಂಧನ ಶಕ್ತಿ ವಿಭಾಗದ ಯೋಜನಾ ಎಂಜಿನಿಯರ್‌ ಎಸ್‌.ಬಿ. ಕಮತಗಿ, ‘ಪ್ರಸ್ತುತ 10 ಕಿ.ವಾಟ್ ವಿದ್ಯುತ್‌ಗೆ ಮಾತ್ರವೇ ಹೆಸ್ಕಾಂ ಮೇಲೆ ಅವಲಂಬಿಸಿದ್ದೇವೆ. ರಜಾ ದಿನಗಳಿದ್ದಾಗ, ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಹೆಸ್ಕಾಂ ಗ್ರಿಡ್‌ಗೆ ನೇರವಾಗಿ ಹೋಗುವಂತೆ ಸ್ವಯಂಚಾಲಿತ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಿವಿಧ ವಿದ್ಯಾರ್ಥಿನಿಲಯಗಳು, ಇಲಾಖೆಗಳ ಕಚೇರಿಗಳು, ಪಂಚಾಯತ್‌ರಾಜ್‌ ಸಂಸ್ಥೆಗಳ ಕಟ್ಟಡಗಳ ಮೇಲೂ ಘಟಕಗಳನ್ನು ಅಳವಡಿಸಲಾಗಿದೆ’ ಎಂದು ಯೋಜನೆಯ ಮೇಲೆ ‘ಬೆಳಕು’ ಚೆಲ್ಲಿದರು.

ನಿರ್ವಹಣೆಗೆ ತೊಡಕಿಲ್ಲ

‘ಜಿಲ್ಲಾ ‍ಪಂಚಾಯಿತಿ ಘಟಕದಲ್ಲಿ ‘ಆನ್‌ ಗ್ರಿಡ್‌ ಸಿಸ್ಟಂ’ ಬಳಸಲಾಗುತ್ತಿದೆ. ಅಂದರೆ ವಿದ್ಯುತ್‌ ಅನ್ನು ಬ್ಯಾಟರಿಗಳಲ್ಲಿ ಸ್ಟೋರ್ ಮಾಡುವುದಿಲ್ಲ. ಉತ್ಪಾದನೆ ಆಗುವುದನ್ನು ನೇರವಾಗಿ ಬಳಸುವಂತೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಬಿಸಿಲಿಲ್ಲದ ವಾತಾವರಣವಿಲ್ಲದೇ ಉತ್ಪಾದನೆ ಕುಸಿತವಾದಲ್ಲಿ ಹೆಸ್ಕಾಂ ವಿದ್ಯುತ್‌ ಅವಲಂಬಿಸುತ್ತೇವೆ. ಕಚೇರಿಯಲ್ಲಿನ ಬಲ್ಬ್‌ಗಳು, ಕಂಪ್ಯೂಟರ್‌ಗಳು, ಫ್ಯಾನ್‌ಗಳು ಕಾರ್ಯನಿರ್ವಹಿಸುತ್ತಿರುವುದು ಸೌರ ವಿದ್ಯುತ್‌ನಿಂದಲೇ’ ಎಂದು ಅವುಗಳತ್ತ ಕೈತೋರಿಸಿದರು.

‘ಬ್ಯಾಟರಿಗಳನ್ನು ಬಳಸದೇ ಇರುವುದರಿಂದ ನಿರ್ವಹಣೆಗೆ ವೆಚ್ಚ ಮಾಡುವ ಅಗತ್ಯ ಬರುವುದಿಲ್ಲ. ಪೆನಲ್‌ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಧೂಳು ಕೂರದಂತೆ ಆಗಾಗ ಶುಚಿಗೊಳಿಸುತ್ತಿರಬೇಕು. ಇದು ಬಿಟ್ಟರೆ ನಿರ್ವಹಣೆಗೆ ಹೆಚ್ಚಿನ ವ್ಯಯ ಮಾಡಬೇಕಿಲ್ಲ. ಪೆನಲ್‌ಗಳು 25 ವರ್ಷಗಳವರೆಗೆ ಬಾಳಿಕೆ ಬರುತ್ತವೆ’ ಎಂಬ ತಾಂತ್ರಿಕ ಮಾಹಿತಿ ಕಟ್ಟಿಕೊಟ್ಟರು.

ಸಚಿವ ಈಶ್ವರಪ್ಪ ಆಸಕ್ತಿ

ಬೆಳಗಾವಿ ಮಾದರಿಯನ್ನು ಇತರ ಜಿಲ್ಲಾ ಪಂಚಾಯಿತಿಗಳಲ್ಲೂ ಅನುಷ್ಠಾನಕ್ಕೆ ತರಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಅವರು ಆಸಕ್ತಿ ತೋರಿದ್ದಾರೆ. ಕೆಲ ತಿಂಗಳುಗಳ ಹಿಂದೆಯೇ ಇಲ್ಲಿನ ಅಧಿಕಾರಿಗಳಿಂದ ಮಾಹಿತಿಯನ್ನೂ ಪಡೆದಿದ್ದಾರೆ.

ವಿಶೇಷವಾಗಿ, ಗ್ರಾಮ ಪಂಚಾಯಿತಿಗಳಿಗೂ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಅದರಲ್ಲೂ ವಿದ್ಯುತ್‌ ವ್ಯತ್ಯಯದಂತಹ ಸಮಸ್ಯೆ ಎದುರಿಸುವ ಪ್ರದೇಶಗಳಲ್ಲಿರುವ ಪಂಚಾಯಿತಿ ಕಟ್ಟಡಗಳ ಮೇಲೆ 2 ಕಿ.ವಾಟ್ ಸಾಮರ್ಥ್ಯದ ಘಟಕ ಅಳವಡಿಕೆಗೆ ಯೋಜಿಸಲಾಗಿದೆ. ‘ವಿದ್ಯುತ್‌ ವ್ಯತ್ಯಯದಂತಹ ಕಾರಣಕ್ಕೆ ಸಾರ್ವಜನಿಕರಿಗೆ ಸೇವೆ ದೊರೆಯುವಲ್ಲಿ ವಿಳಂಬವಾಗಬಾರದು. ಇದಕ್ಕಾಗಿ ಸೌರ ವಿದ್ಯುತ್‌ ಬಳಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಈಚೆಗೆ ನಡೆದ ಸಭೆಯಲ್ಲಿ ಸಚಿವರು ನಿರ್ದೇಶನ ನೀಡಿದ್ದಾರೆ.

ಘಟಕಕ್ಕೆ ₹ 5 ಲಕ್ಷ ಬೇಕಾಗುತ್ತದೆ. ಹೀಗಾಗಿ, ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳಿಗೆ ದೊರೆತ ₹ 5 ಲಕ್ಷ ಅನುದಾನ ಬಳಸಿಕೊಳ್ಳಲು ಸಚಿವರು ಸಲಹೆ ನೀಡಿದ್ದಾರೆ. ಈ ಮೂಲಕ ಗ್ರಾಮ ಪಂಚಾಯಿತಿಗಳನ್ನೂ ‘ಹಸಿರು ಇಂಧನ ಉಪಯೋಗಿಸುವ ಸರ್ಕಾರಿ ಕಚೇರಿ’ಯನ್ನಾಗಿ ರೂಪಿಸಲು ಯೋಜಿಸಲಾಗಿದೆ. ಜೊತೆಗೆ ಪಂಚಾಯಿತಿಗಳ ಮೇಲಿರುವ ‘ವಿದ್ಯುತ್‌ ಬಿಲ್‌ ಹೊರೆ’ ಇಳಿಸುವ ಉದ್ದೇಶ ಹೊಂದಲಾಗಿದೆ. ಯೋಜನೆಯು ಆಯ್ದ ಪಂಚಾಯಿತಿಗಳಲ್ಲಿ ಗಾಂಧಿ ಜಯಂತಿ ವೇಳೆಗೆ ಆರಂಭಗೊಳ್ಳುವ ನಿರೀಕ್ಷೆ ಇದೆ.

ಅಂಕಿ ಅಂಶ

* 2018: ಅಳವಡಿಕೆ ಆರಂಭಿಸಿದ ವರ್ಷ

* 30 ಕಿಲೋ ವಾಟ್: ಸೌರವಿದ್ಯುತ್‌ ಘಟಕದ ಸಾಮರ್ಥ್ಯದ

* 120: ಇಲ್ಲಿ ಅಳವಡಿಸಿರುವ ಪೆನಲ್‌ಗಳು

* 250 ವಾಟ್: ತಲಾ ಪೆನಲ್‌ನ ಸಾಮರ್ಥ್ಯ

* ₹ 25 ಲಕ್ಷ: ಘಟಕಕ್ಕೆ ಮಾಡಲಾದ ವೆಚ್ಚ

* 15.80 ಮೆಗಾವಾಟ್: ಇಲ್ಲಿ ಈವರೆಗೆ ಉತ್ಪಾದಿಸಲಾದ ವಿದ್ಯುತ್‌ ಪ್ರಮಾಣ

* 500 ಯುನಿಟ್‌: ಹೆಸ್ಕಾಂಗೆ ಪ್ರತಿ ತಿಂಗಳು ನೀಡುತ್ತಿರುವ ವಿದ್ಯುತ್‌ ಪ್ರಮಾಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು