ಭಾನುವಾರ, ಅಕ್ಟೋಬರ್ 25, 2020
27 °C
ಶಾಲಾ ಮಕ್ಕಳ ಶಿಕ್ಷಣಕ್ಕೆ ಮೀಸಲಾಗಿದ್ದ ಪ್ರಕೃತಿ ಶಿಬಿರಗಳು

PV Web Exclusive: ಪ್ರಕೃತಿ ಶಿಕ್ಷಣ ಶಿಬಿರಗಳು ಜೆಎಲ್‌ಆರ್‌ ತೆಕ್ಕೆಗೆ

ಯತೀಶ್‌ ಕುಮಾರ್‌ ಜಿ.ಡಿ Updated:

ಅಕ್ಷರ ಗಾತ್ರ : | |

Prajavani

ಶಾಲಾ ವಿದ್ಯಾರ್ಥಿಗಳಿಗೆ ಪ್ರಕೃತಿ ಶಿಕ್ಷಣ ನೀಡುವ ಮುಖ್ಯ ಉದ್ದೇಶದೊಂದಿಗೆ ಅರಣ್ಯ ಇಲಾಖೆಯು ರಾಜ್ಯದ ವಿವಿಧ ಸಂರಕ್ಷಿತ ಪ್ರದೇಶಗಳಲ್ಲಿ ಪ್ರಕೃತಿ ಶಿಬಿರಗಳನ್ನು ನಿರ್ಮಿಸಿದೆ. ಆದರೆ ವರ್ಷದಿಂದ ವರ್ಷಕ್ಕೆ ಈ ಶಿಬಿರಗಳು ಐಶಾರಾಮಿ ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ ತೆಕ್ಕೆಗೆ ಹೋಗುತ್ತಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣಾ ಶಿಕ್ಷಣವನ್ನು ನೀಡುವ ಗುರಿಯೊಂದಿಗೆ 2015-16ನೇ ಸಾಲಿನಲ್ಲಿ ರಾಜ್ಯ ಸರ್ಕಾರ ‘ಚಿಣ್ಣರ ವನದರ್ಶನ’ ಎಂಬ ಕಾರ್ಯಕ್ರಮವನ್ನು ಆರಂಭಿಸಿತು.

ಈ ಉಚಿತ ಕಾರ್ಯಕ್ರಮವನ್ನು, ಕಾಡಿನಂಚಿನಲ್ಲಿ ವಾಸಿಸುವ ಗ್ರಾಮೀಣ ಮಕ್ಕಳಿಗೆ ಪ್ರಕೃತಿ ಪಾಠ ಹೇಳುವ ಉದ್ದೇಶದಿಂದ ರೂಪಿಸಲಾಗಿತ್ತು. ಮೂಕಾಂಬಿಕಾ ವನ್ಯಜೀವಿಧಾಮದ ಅನೆಝರಿ, ಸೋಮೇಶ್ವರ ವನ್ಯಜೀವಿಧಾಮದ ಸೀತಾನದಿ ಪ್ರಕೃತಿ ಶಿಬಿರ, ಭೀಮಘಡ ವನ್ಯಜೀವಿಧಾಮದ ಪ್ರಕೃತಿ ಶಿಬಿರ, ಕಾವೇರಿ ವನ್ಯಜೀವಿಧಾಮದ ಗೋಪಿನಾಥಂ, ಶೆಟ್ಟಿಹಳ್ಳಿ ವನ್ಯಜೀವಿಧಾಮದ ಸಕ್ರೆಬೈಲ್ ಮತ್ತಿತರ ಪ್ರಕೃತಿ ಶಿಬಿರಗಳನ್ನು ಗುರುತಿಸಲಾಗಿತ್ತು. ಈ ಪ್ರಕೃತಿ ಶಿಬಿರಗಳನ್ನು ಅಭಿವೃದ್ಧಿಪಡಿಸಲು ಬೇಕಾದ ಎಲ್ಲಾ ಹಣವನ್ನು ಕರ್ನಾಟಕ ಅರಣ್ಯ ಇಲಾಖೆ ಭರಿಸಿತ್ತು.

ಆದರೆ, ಕೆಲವು ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜ್‌ಸ್ ಅಂಡ್ ರೆಸಾರ್ಟ್‌ (ಜೆಎಲ್‌ಆರ್) ಸಂಸ್ಥೆ ಈ ಪ್ರಕೃತಿ ಶಿಬಿರಗಳನ್ನು ಅಗತ್ಯ ಅನುಮತಿಗಳಿಲ್ಲದೆ ಪ್ರವಾಸೋದ್ಯಮ ರೆಸಾರ್ಟ್‌ಗಳಾಗಿ ಪರಿವರ್ತಿಸುತ್ತಿದೆ. ಸೀತಾನದಿ, ಸಕ್ರೆಬೈಲ್, ಅನೆಝರಿ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿರುವ ಭಗವತಿ ಪ್ರಕೃತಿ ಶಿಬಿರವನ್ನು ಈಗಾಗಲೇ ವಾಣಿಜ್ಯ ಪ್ರವಾಸೋದ್ಯಮ ಘಟಕಗಳಾಗಿ ಪರಿವರ್ತಿಸಲಾಗಿದೆ.

ಈ ಶಿಬಿರಗಳು ವನ್ಯಜೀವಿಧಾಮ ಅಥವಾ ರಾಷ್ಟ್ರೀಯ ಉದ್ಯಾನದೊಳಗೆ ಇರುವುದರಿಂದ ಇಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯುವ ಅಗತ್ಯವಿದೆ. ಆದರೆ ಈ ಅನುಮತಿಯಿಲ್ಲದೆ ಜೆಎಲ್‌ಆರ್‌ ವಾಣಿಜ್ಯ ಚಟುವಟಿಕೆ ಆರಂಭಿಸಿದೆ ಎಂದು ಹೆಸರೇಳಲು ಬಯಸದ ಪರಿಸರ ವಿಜ್ಞಾನಿಯೊಬ್ಬರು ಆರೋಪಿಸಿದರು.

ಗ್ರಾಮೀಣ ಮಕ್ಕಳಿಗೆ ಪ್ರಕೃತಿ ಶಿಕ್ಷಣವನ್ನು ನೀಡಲು, ಸಾರ್ವಜನಿಕ ಹಣವನ್ನು ಬಳಸಿಕೊಂಡು ಈ ಶಿಬಿರಗಳನ್ನು ನಿರ್ಮಿಸಲಾಗಿದೆ. ಇಂತಹ ಶಿಬಿರಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸುವುದರಿಂದ ಮೂಲ ಸ್ಥಳೀಯ ಮಕ್ಕಳು ಪ್ರಕೃತಿ ಪ್ರಕೃತಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು. 

ಈ ಪಟ್ಟಿಗೆ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮದಲ್ಲಿರುವ ಗೋಪಿನಾಥಂ ಪ್ರಕೃತಿ ಶಿಬಿರ ಸೇರ್ಪಡೆಯಾಗಲಿದೆ. ಅತಿ ಹಿಂದುಳಿದ ಜಿಲ್ಲೆಯ ಕಾವೇರಿ ಮತ್ತು ಮಲೈ ಮಹದೇಶ್ವರ ವನ್ಯಜೀವಿಧಾಮದ ಸುತ್ತಮುತ್ತ ವಾಸಿಸುವ ಮಕ್ಕಳು ‘ಚಿಣ್ಣರ ವನದರ್ಶನ’ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೋಗಬಹುದಾದ ಏಕೈಕ ಸ್ಥಳ ಎಂದರೆ ಗೋಪಿನಾಥಂ ಶಿಬಿರ. ಈ ಶಿಬಿರವನ್ನು ಪ್ರವಾಸೋದ್ಯಮಕ್ಕಾಗಿ ನೀಡಿದರೆ ಯುವ ಪೀಳಿಗೆಗೆ ಶಿಕ್ಷಣ ನೀಡಲು ಗೋಪಿನಾಥಂ ಪ್ರಕೃತಿ ಶಿಬಿರವನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಳ್ಳಬಹುದು ಎನ್ನುವ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದರು.

ಪರಿಸರ-ಸೂಕ್ಷ್ಮ ವಲಯ ಅಧಿಸೂಚನೆಯಲ್ಲಿ ‘ಸಂರಕ್ಷಿತ ಪ್ರದೇಶದ ಗಡಿಯ ಒಂದು ಕಿಲೋಮೀಟರ್ ಒಳಗೆ ಅಥವಾ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಪರಿಸರ-ಪ್ರವಾಸೋದ್ಯಮ ಚಟುವಟಿಕೆಗಳಿಗಾಗಿ ಸಣ್ಣ ತಾತ್ಕಾಲಿಕ ರಚನೆಗಳನ್ನು ಹೊರತುಪಡಿಸಿ ಯಾವುದೇ ಹೊಸ ವಾಣಿಜ್ಯ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳನ್ನು ನಿರ್ಮಿಸಲು ಅನುಮತಿ ನೀಡುವಂತಿಲ್ಲ‘ ಎಂದಿದೆ. ಆದರ ಈ ಶಿಬಿರದ ಪರಿವರ್ತನೆ, ಕಾವೇರಿ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆಯ ಉಲ್ಲಂಘನೆಯಾಗಿದೆ. ಗೋಪಿನಾಥಂನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಬೇಕಾಗಿದ್ದರೂ ಸಹ ಪರಿಸರ ಸೂಕ್ಷ್ಮ ವಲಯ ಸಮಿತಿಯಿಂದ ಅನುಮತಿ ಪಡೆಯಬೇಕು.

ಜೆಎಲ್‌ಆರ್‌ಗೆ ಈ ಶಿಬಿರಗಳನ್ನು ಹಸ್ತಾಂತರ ಮಾಡಿದರೂ ಸಹ ಬಾಡಿಗೆಯನ್ನು ಕಡಿಮೆ ಮಾಡಿಯೇ ಟೆಂಟ್‌ಗಳನ್ನು ನೀಡಬೇಕು ಎನ್ನುವ ಒಪ್ಪಂದವನ್ನು ಅರಣ್ಯ ಇಲಾಖೆ ಮಾಡಿದೆ. ಜೊತೆಗೆ ಜೆಎಲ್‌ಆರ್‌ ಚಿಣ್ಣರ ವನದರ್ಶನಕ್ಕೆ ಉಚಿತವಾಗಿ ಟೆಂಟ್‌ಗಳನ್ನು ನೀಡುತ್ತಿದೆ. ಊಟದ ವೆಚ್ಚವನ್ನು ಮಾತ್ರ ಪಡೆಯುತ್ತಿದೆ. ಈ ಕಾರ್ಯಕ್ರಮ ನಡೆಸಲು ಸರ್ಕಾರೇತರ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸುವರು. ಆದರೆ ರಾಜ್ಯ ವನ್ಯಜೀವಿ ಮಂಡಳಿ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತು ಪರಿಸರ ಸೂಕ್ಷ್ಮ ವಲಯ ಸಮಿತಿಯ ಅನುಮತಿ ಪಡೆದು ಈ ಶಿಬಿರ ಹಸ್ತಾಂತರಿಸಲಾಗಿದೆಯೇ ಎನ್ನುವ ಉತ್ತರ ದೊರಕಲಿಲ್ಲ.

ಆನೆ ಕಾರಿಡಾರ್‌ ಬಳಿ ಜೆಎಲ್‌ಆರ್‌ನ ದೊಡ್ಡಮಾಕಳಿ ರೆಸಾರ್ಟ್‌ ಅನ್ನು ಕೆಲ ವರ್ಷಗಳ ಹಿಂದೆ ಮುಚ್ಚಲಾಯಿತು. ಗೋಪಿನಾಥಂ ಸಹ ಆನೆ ಕಾರಿಡಾರ್‌ ಬಳಿಯೇ ಇದೆ. ಕಾನೂನು ಉಲ್ಲಂಘಿಸಿ ಗೋಪಿನಾಥಂ ಪ್ರಕೃತಿ ಶಿಬಿರ ಹಸ್ತಾಂತರವಾದರೆ ಮಾನವ– ಪ್ರಾಣಿ ಸಂಘರ್ಷ ಎದುರಾಗುವ ಸಾಧ್ಯತೆಯಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು