ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಭೂ ಕುಸಿತ: ಮಳೆಯಷ್ಟೇ ಕಾರಣವಲ್ಲ...

ಭೂ ಕುಸಿತ ಅಧ್ಯಯನ ಸಮಿತಿ ಹೇಳುವುದೇನು ?
Last Updated 27 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಮಲೆನಾಡಿನ ಮಳೆಯೆಂದರೆ ಅದು ಬೀಳುವ ನೀರ ಹನಿಯಲ್ಲ, ಅದೊಂದು ದೃಶ್ಯಕಾವ್ಯ, ಪ್ರಣಯಗೀತೆ, ನೆನಪುಗಳ ಕನವರಿಕೆ...ಇನ್ನೂ ಏನೆಲ್ಲ. ಹೀಗೆ ಸಂಭ್ರಮವನ್ನು ಹೊತ್ತು ತರುತ್ತಿದ್ದ ಮಳೆ ಇತ್ತೀಚಿನ ವರ್ಷಗಳಲ್ಲಿ ಆತಂಕವನ್ನು ಸೃಷ್ಟಿಸುತ್ತಿದೆ. ಮಳೆ ಬಂತೆಂದರೆ ಎಲ್ಲಿ ಏನು ಅನಾಹುತವಾಗುತ್ತೋ ಎನ್ನುವ ಭಯ ಕಾಡುತ್ತದೆ. ಯಾಕೆ ಈ ಅನಾಹುತಗಳು ಘಟಿಸುತ್ತಿವೆ, ಇದರಲ್ಲಿ ಪ್ರಕೃತಿ ಮತ್ತು ಮನುಷ್ಯರ ಪಾಲು ಎಷ್ಟು ಎಂಬುದನ್ನು ಭೂಕುಸಿತ ಅಧ್ಯಯನ ಸಮಿತಿ ಸದಸ್ಯರು ಅಧ್ಯಯನ ಮಾಡುತ್ತಿದ್ದಾರೆ. ಅವರ ಅನುಭವದ ಸಾರ ಇಲ್ಲಿದೆ.

ನಾಲ್ಕಾರು ವರ್ಷಗಳಿಂದ ಮಲೆನಾಡು ಮತ್ತು ಕರಾವಳಿಯಲ್ಲಿ ಆಗುತ್ತಿರುವ ಭಾರೀ ಭೂ ಕುಸಿತಗಳ ವೈಜ್ಞಾನಿಕ ಅಧ್ಯಯನಕ್ಕೆ ರಾಜ್ಯ ಸರ್ಕಾರ 10 ಸದಸ್ಯರು, ವಿಜ್ಞಾನಿಗಳು, ಭೂಗರ್ಭ ಶಾಸ್ತ್ರಜ್ಞರನ್ನೊಳಗೊಂಡ ಭೂ ಕುಸಿತ ಅಧ್ಯಯನ ಸಮಿತಿ ರಚಿಸಿದೆ. ಈ ಸಮಿತಿ ಈಗಾಗಲೇ ಕರಾವಳಿ, ಮಲೆನಾಡಿನ ಎಂಟು ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಇನ್ನು ಒಂದು ತಿಂಗಳಲ್ಲಿ ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಲಿದೆ.

ಸಮಿತಿಯ ಸದಸ್ಯರು ವಿವಿಧ ಆಯಾಮಗಳನ್ನು ಅಭ್ಯಸಿಸಿ ವರದಿ ಸಿದ್ಧಪಡಿಸುತ್ತಿದ್ದಾರೆ. ಈ ಸಮಿತಿಯ ಅಧ್ಯಕ್ಷರೂ ಆಗಿರುವ, ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಅವರು ತಮ್ಮ ತಂಡದೊಂದಿಗೆ ಭೇಟಿ ನೀಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಅನಂತ ಅಶೀಸರ

‘ಪಶ್ಚಿಮಘಟ್ಟದಲ್ಲಿ ಭೂ ಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡುವುದು ನಮ್ಮ ಉದ್ದೇಶವಾಗಿತ್ತು. ಮೊದಲು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಮತ್ತು ಕಳಸ ನಡುವಿನ ಕಣಿವೆಗೆ ಭೇಟಿ ನೀಡಿದ್ದೆವು. ಅಲ್ಲಿ ಅಪಾಯದ ಪರಿಸ್ಥಿತಿ ತೀವ್ರವಾಗಿರುವುದರಿಂದ ಈಗಾಗಲೇ ಹಲವರನ್ನು ಸ್ಥಳಾಂತರಿಸಲಾಗಿದೆ. ಕೊಡಗು ಜಿಲ್ಲೆ ಸಹ ಭೂ ಕುಸಿತದಿಂದ ಸಾಕಷ್ಟು ನೊಂದಿರುವ ಪ್ರದೇಶ. ಕಾಫಿ ಎಸ್ಟೇಟ್, ಪ್ರವಾಸೋದ್ಯಮ, ಬೆಟ್ಟದ ಮೇಲ್ಭಾಗದಲ್ಲಿ ರಸ್ತೆ, ರೆಸಾರ್ಟ್‌ಗಳ ನಿರ್ಮಾಣ, ನೈಸರ್ಗಿಕ ಅರಣ್ಯದ ಜಾಗದಲ್ಲಿ ನೆಡುತೋಪು ನಿರ್ಮಾಣ ಇವು ಅಲ್ಲಿ ಗಮನಿಸಿರುವ ಅಂಶಗಳು. ಅತಿಯಾದ ಮಾನವ ಹಸ್ತಕ್ಷೇಪದಿಂದ ಭಾರೀ ಅನಾಹುತ ಘಟಿಸಿರುವ ಸಾಧ್ಯತೆಗಳು ಮೇಲ್ನೋಟಕ್ಕೆ ಕಾಣುತ್ತವೆ.

‘ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿ ಬಂದ ತಕ್ಷಣ ಸರ್ಕಾರಕ್ಕೆ ತುರ್ತು ವರದಿ ಸಲ್ಲಿಸಿ, ಅಪಾಯದಲ್ಲಿರುವ ಜನರನ್ನು ಮನವೊಲಿಸಿ ಸ್ಥಳಾಂತರಿಸಬೇಕು ಎಂದು ಮುಖ್ಯಮಂತ್ರಿಗೆ ವಿನಂತಿಸಿದ್ದೆವು. ಮನೆ ಕಳೆದುಕೊಂಡವರಿಗೆ ಪರಿಹಾರ ದೊರೆತಂತೆ, ಭೂಮಿ ಕಳೆದುಕೊಂಡವರಿಗೆ, ಪರಿಹಾರ ನೀಡಲು ಪ್ರತ್ಯೇಕ ಪ‍್ಯಾಕೇಜ್ ನೀಡಬೇಕು ಎಂದು ಸಹ ಸಲಹೆ ನೀಡಲಾಗಿದೆ.

‘ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಸಿಗಂಧೂರು ದೇವಾಲಯ ಸಮೀಪದಲ್ಲಿರುವ ಗುಡ್ಡದಲ್ಲಿ ಆರೆಂಟು ಕಡೆಗಳಲ್ಲಿ ಸೀಳು ಕಾಣಿಸಿಕೊಂಡಿದೆ. ಇಲ್ಲಿ ಸಡಿಲವಾಗಿರುವ ಮಣ್ಣು, ಆಗಾಗ ಕುಸಿದು ಬೀಳುತ್ತದೆ. ಈ ಗುಡ್ಡದ ಕೆಳಭಾಗದಲ್ಲಿ ಶರಾವತಿ ಹಿನ್ನೀರಿನ ಪ್ರದೇಶವಿದೆ. ಹಿನ್ನೀರು ಒತ್ತಿ ಬಂದು, ಗುಡ್ಡಕ್ಕೆ ಅಪಾಯವಾಗಿರಬಹುದು ಎಂದು ಸ್ಥಳೀಯರು ಹೇಳುತ್ತಾರಾದರೂ, ಅದರ ವಿಶ್ಲೇಷಣೆ ಆಗಬೇಕಾಗಿದೆ.

‘ಲಿಂಗನಮಕ್ಕಿ ಅಣೆಕಟ್ಟೆ ಸಮೀಪದಲ್ಲಿ ಅರಲಗೋಡು ಗ್ರಾಮ ಪಂಚಾಯ್ತಿಯ ಮೂರು ಹಳ್ಳಿಗಳಲ್ಲಿ ಗುಡ್ಡ ಕುಸಿತವಾಗಿದೆ. ಇಲ್ಲಿ ಮನೆಗಳು, ಊರಿಗೆ ಹೋಗುವ ರಸ್ತೆ ಕೂಡ ಬಿರುಕು ಬಿಟ್ಟಿದೆ. ಅಭಯಾರಣ್ಯದ ನಡುವೆ ಇರುವ ಪ್ರದೇಶದಲ್ಲಿ ಕಾಡು ನಾಶವಾಗಿಲ್ಲ. ಆದರೂ ಭೂಮಿ ಕುಸಿದಿದೆ. ಇದರ ಬಗ್ಗೆ ತಂಡದ ಸದಸ್ಯರು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದಾರೆ.

‘ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿಯ ಜಾಜಿಗುಡ್ಡೆ ಭಾಗದಲ್ಲಿ ಸಹ ಭೂ ಕುಸಿತವಾಗಿದೆ. ಗುಡ್ಡ ಕಡಿತ, ರಸ್ತೆ ನಿರ್ಮಾಣ, ಹವಾಮಾನ ವೈಪರೀತ್ಯ ಇವುಗಳ ಒಟ್ಟು ಮೊತ್ತ, ಭೂ ಕುಸಿತದಲ್ಲಿ ಪ್ರತಿಫಲನಗೊಂಡಿರುವ ಸಂಭವವಿದೆ. ಹೆಚ್ಚುತ್ತಿರುವ ಭೂ ಕುಸಿತಕ್ಕೆ ಅತಿಯಾದ ಮಾನವ ಹಸ್ತಕ್ಷೇಪ ಕಾರಣವೆಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಎಲ್ಲ ಚಟುವಟಿಕೆಗಳನ್ನು ಒಮ್ಮೆಲೇ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ಕ್ರಮೇಣ ಇವನ್ನು ನಿಯಂತ್ರಣಕ್ಕೆ ತರುವ, ಎಚ್ಚರಿಕೆಯ ಪ್ರಜ್ಞೆ ಬೆಳೆಸುವ ಕ್ರಮಗಳ ಬಗ್ಗೆ ಅನೇಕ ಸುತ್ತಿನ ಚರ್ಚೆಗಳು ನಡೆದಿವೆ. ಸರ್ಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಇವುಗಳನ್ನು ಶಿಫಾರಸು ಮಾಡಲಾಗುತ್ತದೆ.

‘ಧಾರಾಕಾರ ಮಳೆ ಇಂದಿಗಿಂತಲೂ ಹಿಂದೆಯೇ ಜೋರಿತ್ತು. ಆದರೆ, ಮೂರ್ನಾಲ್ಕು ವರ್ಷಗಳ ಈಚೆಗೆ ಅನಾಹುತಗಳು ಹೆಚ್ಚುತ್ತಿವೆ. ಇಷ್ಟಾದರೂ ಜನರಲ್ಲಿ ಜಾಗೃತಿ ಮೂಡಿಲ್ಲ. ಮಳೆಗಾಲ ಮುಗಿಯಿತೆಂದರೆ ಎಲ್ಲವನ್ನೂ ಮರೆತು ಬಿಡುತ್ತೇವೆ. ಮುಂದಿನ ಮಳೆಗಾಲಕ್ಕೇ ಮತ್ತೆ ಅದು ನೆನಪಾಗುವುದು. ರಾಕ್ಷಸ ಯಂತ್ರಗಳು ಗುಡ್ಡವನ್ನೇ ಕಡಿಯುತ್ತವೆ. ನೈಸರ್ಗಿಕ ಭೂ ಭಾಗವನ್ನು ಕಡಿದು, ಕೃತಕ ವಿಸ್ತರಣೆ ಮಾಡುವುದು ಎಂದಿದ್ದರೂ ಅಪಾಯಕಾರಿಯೇ. ಹೀಗಾಗಿ, ಘಟ್ಟ ಪ್ರದೇಶದಲ್ಲಿ ಈಗಾಗಲೇ ಇರುವ ರಸ್ತೆಯನ್ನೇ ಸುವ್ಯವಸ್ಥಿತಗೊಳಿಸಲು ಗಮನ ಹರಿಸಿ, ಕೇಂದ್ರ, ರಾಜ್ಯ ಸರ್ಕಾರಗಳು ಇದಕ್ಕೆ ಕಟ್ಟುನಿಟ್ಟಿನ ಕಾಯ್ದೆ ರೂಪಿಸಿದರೆ ಒಳಿತು. ನಿಸರ್ಗದ ಜತೆ ಯುದ್ಧಕ್ಕೆ ಇಳಿದಾಗಿದೆ. ಮತ್ತೆ ಪ್ರಕೃತಿ ಸಹಜ ಸ್ಥಿತಿಗೆ ಮರಳಲು ಜನರು ಸ್ವಯಂ ಕಡಿವಾಣ ಹಾಕಿಕೊಳ್ಳಬೇಕಾಗಿದೆ.

‘ಮೂರು ವಿಭಿನ್ನ ದೃಷ್ಟಿಕೋನ’

ಭೂ ಕುಸಿತ ಅಧ್ಯಯನ ತಂಡದ ಸದಸ್ಯರಾಗಿರುವ ವಿಜ್ಞಾನಿ ಕೇಶವ ಕೊರ್ಸೆ ಇದನ್ನು ವಿಶ್ಲೇಷಿಸಿದ್ದು ಹೀಗೆ:

‘ಭೂ ಕುಸಿತದ ಕಾರಣಗಳನ್ನು ಮೂರು ದೃಷ್ಟಿಕೋನಗಳಲ್ಲಿ ನೋಡಬೇಕಾಗಿದೆ. ನನಗನ್ನಿಸಿದ ಹಾಗೆ ಮಳೆ ಕೊನೆಯ ಕೊಂಡಿ. ಮೊದಲನೆಯದು ‘ಅಪಾಯದ ಅಂಶಗಳು’, ಎರಡನೆಯದು ‘ಕಾರಣಗಳು‘ ಮತ್ತು ಮೂರನೆಯದಾಗಿ ‘ಕುಂಭದ್ರೋಣ ಮಳೆ’. ಆದರೆ, ನಾವು ಕಣ್ಣಿಗೆ ಕಾಣುವ ಮಳೆಯನ್ನೇ ಶಪಿಸಿ, ಅಲ್ಲಿಯೇ ಎಡವುತ್ತಿದ್ದೇವೆ. ಮಲೆನಾಡು ಮತ್ತು ಕರಾವಳಿ ಸ್ವಾಭಾವಿಕವಾಗಿ ಹೆಚ್ಚು ಮಳೆಯಾಗುವ ಪ್ರದೇಶಗಳು. ಇಲ್ಲಿನ ಸಡಿಲ ಮಣ್ಣೇ ನಮಗೆ ಮುಳುವಾಗಿದೆ. ಬಸಾಲ್ಟ್ ಕಲ್ಲಿನ ಮಿಶ್ರಣದ ಈ ಸಡಿಲ ಮಣ್ಣಿನ ಮೇಲ್ಮೈಗೆ ಕಾಡಿನ ರಕ್ಷಾಕವಚ ಇಲ್ಲದಿದ್ದರೆ, ಇದು ಭೂ ಕುಸಿತಕ್ಕೆ ದಾರಿ ಮಾಡಿಕೊಡುತ್ತದೆ.

‘ನೈಸರ್ಗಿಕ ಅರಣ್ಯದಲ್ಲಿ ಏಕಜಾತಿ ನೆಡುತೋಪು ನಿರ್ಮಾಣವಾಗುತ್ತಿದೆ. ಕಾಡಿನ ಬೃಹತ್ ಮರಗಳ ಬೇರು ಕೊಳೆಯಲು 2–3 ದಶಕಗಳು ಬೇಕು. ಹಿಂದೆ ನೈಸರ್ಗಿಕ ಕಾಡು ಕಟಾವಾದ ಪ್ರದೇಶಗಳಲ್ಲಿ, ಭೂಮಿಯ ಕೆಳಮೈಯಲ್ಲಿ ಕೊಳೆತ ಬೇರುಗಳ ನಡುವೆ ಪೊಳ್ಳು ಜಾಗ ಸೃಷ್ಟಿಯಾಗುತ್ತಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಈ ಪೊಳ್ಳು ಜಾಗದಲ್ಲಿ ನುಗ್ಗುವ ಮಳೆ ನೀರು, ಅಲ್ಲಿ ಸೃಷ್ಟಿಯಾಗುವ ಒತ್ತಡಕ್ಕೆ, ಮಣ್ಣು ಸಡಿಲವಾಗಿ ಭೂ ಕುಸಿತಕ್ಕೆ ಕಾರಣವಾಗುತ್ತದೆ.

‘ಇಲ್ಲಿನ ಕಡಿದಾದ ಗುಡ್ಡಗಳಲ್ಲಿ ನೈಸರ್ಗಿಕ ವಿಕೋಪ ಸೃಷ್ಟಿಯಾಗುವ ಸಾಧ್ಯತೆಗಳು ಸಹಜವಾಗಿಯೇ ಇರುತ್ತವೆ. ಇವನ್ನು ನಿಯಂತ್ರಿಸಬೇಕಾಗಿದ್ದ ನಾವು, ಈ ಪ್ರಾಕೃತಿಕ ಅವಘಡ ಸಂಭವಿಸಲು ಪೂರಕವಾದ ಕಾರ್ಯಗಳಿಗೆ ಪುಷ್ಟಿ ನೀಡುತ್ತಿದ್ದೇವೆ. ಗುಡ್ಡಗಳನ್ನು ಲಂಬಕೋನದಲ್ಲಿ ಕತ್ತರಿಸುವ ಇತ್ತೀಚಿನ ಅಭಿವೃದ್ಧಿಯ ಮಾದರಿಗಳು ಕೂಡ ಭೂ ಕುಸಿತಕ್ಕೆ ಎಡೆಮಾಡಿಕೊಡುತ್ತಿವೆ.

‘ನದಿಯಂಚಿನ ಮರಳು ಗಣಿಗಾರಿಕೆ, ಸಾವಿರಾರು ಸಂಖ್ಯೆಯಲ್ಲಿರುವ ಕ್ವಾರಿಗಳು, ನಮಗರಿವಿಲ್ಲದಂತೆ ಭೂಮಿಯ ಒಳಪದರಕ್ಕೆ ಧಕ್ಕೆ ಮಾಡುತ್ತವೆ. ಕ್ವಾರಿಗಳಲ್ಲಿ ಬಳಸುವ ಸ್ಫೋಟಕಗಳು ಭೂಮಿಯೊಳಗೆ ಬಿರುಕು ಸೃಷ್ಟಿಸಿ, ಅವು ಕ್ರಮೇಣ ಭೂ ಕುಸಿತಕ್ಕೆ ಕಾರಣವಾಗುತ್ತವೆ. ಭೂ ಬಳಕೆ ವಿಧಾನಕ್ಕೆ ನೀತಿ ರೂಪಿತವಾಗಬೇಕಿತ್ತು. ಅದಿಲ್ಲದ ಪರಿಣಾಮ, ಭೂಮಿಯ ದುರ್ಬಳಕೆ ನಮ್ಮ ಅಸ್ತಿತ್ವವನ್ನು ಅಲ್ಲಾಡಿಸುವ ಹಂತಕ್ಕೆ ತಂದಿದೆ.

‘ಕೊನೆಯದಾಗಿ ಮಳೆ. ಜಾರುವ ಹಂತದಲ್ಲಿರುವ ಮಣ್ಣಿಗೆ ಮಳೆಯೊಂದು ಅಂತಿಮ ನೆಪವಾಗುತ್ತಿದೆ. ಹವಾಮಾನ ಬದಲಾವಣೆಯಿಂದ ಮಳೆಯ ಮಾರುತದಲ್ಲಿ ವ್ಯತ್ಯಾಸವಾಗುತ್ತಿದೆ. ನಾಲ್ಕು ತಿಂಗಳುಗಳಲ್ಲಿ ಆಗುವಷ್ಟು ಮಳೆ ಎರಡು ತಿಂಗಳುಗಳಲ್ಲಿ, ವಾರ ಸುರಿಯುವ ಮಳೆ 24 ಗಂಟೆಗಳಲ್ಲಿ ದಾಖಲಾಗುತ್ತಿದೆ. ಅತಿಯಾದ ಮಳೆ, ಭೂಮಿಯೊಳಗಿನ ಭದ್ರ ಹೆಣಿಕೆಯ ಕೊಂಡಿಯನ್ನು ಕಳಚಿ ಕೆಳಕ್ಕುರುಳಿಸುತ್ತಿದೆ.

ನೀತಿರೂಪಕರು, ಆಡಳಿತಕ್ಕೆ ಮಾತ್ರವಲ್ಲ, ಜನರಿಗೆ ಈ ಕಾರಣಗಳ ಗಂಭೀರತೆ ಅರ್ಥವಾಗಬೇಕಾಗಿದೆ. ಈ ಸಮಸ್ಯೆಗೆ ತಕ್ಷಣಕ್ಕೆ ಸಿದ್ಧ ಮಾದರಿಯ ಪರಿಹಾರ ನಿರೀಕ್ಷಿಸಲು ಸಾಧ್ಯವಿಲ್ಲ. ಇವು ಸರ್ಕಾರದ ಆದೇಶ, ಕಾರ್ಯಕ್ರಮಗಳಿಂದ ಪರಿಹಾರವಾಗುವಂತಹುದಲ್ಲ. ಇದಕ್ಕೆ ಹಲವಾರು ಆಯಾಮಗಳಿವೆ. ದೀರ್ಘಾವಧಿ ಮತ್ತು ಅಲ್ಪಾವಧಿಯ ಬಹುಮುಖಿ ಯೋಜನೆಗಳು ರೂಪುಗೊಳ್ಳಬೇಕಾಗಿವೆ. ಇದನ್ನು ಸಮಿತಿ ಚರ್ಚಿಸಿ, ಸರ್ಕಾರಕ್ಕೆ ಪ್ರತ್ಯೇಕವಾದ ಸಲಹೆಗಳನ್ನು ನೀಡಲಿದೆ. ಸ್ಥಳೀಯ ಆಡಳಿತ(ಗ್ರಾಮ ಪಂಚಾಯ್ತಿ)ದ ಸಹಭಾಗಿತ್ವ ಕೂಡ ಮಹತ್ವದ್ದಾಗಿದೆ.

ಭೂ ಕುಸಿತದಿಂದ ಆಗಿರುವ ಜೀವಹಾನಿ, ಕೃಷಿ ಭೂಮಿ, ಆಸ್ತಿ–ಪಾಸ್ತಿ ತುಂಬಲಾರದ ನಷ್ಟ. ಈ ದೃಷ್ಟಿಯಲ್ಲಿ ನೋಡಿದಾಗ, ಪಶ್ಚಿಮ ಘಟ್ಟದ ರಕ್ಷಣೆಯ ಕೂಗಿನಲ್ಲಿ ಪರಿಸರ ಕಾಳಜಿಯಷ್ಟೇ ಅಲ್ಲ, ಜೀವಪರ ಕಾಳಜಿಯೂ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT