ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ| ಮತ್ತೊಂದು ಬೆಟ್ಟ ಕರಗುವ ಆತಂಕ

ಮಾಗಡಿ ತಾಲ್ಲೂಕಿನಾದ್ಯಂತ ಕಲ್ಲು ಗಣಿಗಾರಿಕೆಯದ್ದೇ ಸದ್ದು
Last Updated 13 ಆಗಸ್ಟ್ 2021, 8:56 IST
ಅಕ್ಷರ ಗಾತ್ರ

ರಾಮನಗರ: ಅರೆ ಮಲೆನಾಡು ಎಂದೇ ಖ್ಯಾತಿಯಾದ ಮಾಗಡಿಯ ಬೆಟ್ಟ–ಗುಡ್ಡಗಳು ಗಣಿಗಾರಿಕೆಯಿಂದಾಗಿ ಒಂದೊಂದೇ ಕರಗತೊಡಗಿವೆ. ಇದೀಗ ಜೇನುಕಲ್ಲು ಬೆಟ್ಟವೂ ಈ ಹಾದಿ ಹಿಡಿಯುವ ಕಾಲ ಸನ್ನಿಹಿತವಾಗಿದೆ.

ಮಾಗಡಿ ಪಟ್ಟಣದಿಂದ ಕೆಲವೇ ಕಿಲೋಮೀಟರ್‌ಗಳ ಅಂತರದಲ್ಲಿ ಇರುವ ಈ ಬೆಟ್ಟ ಇದೀಗ ವಿವಾದದ ಕೇಂದ್ರವಾಗಿದೆ. ಗುಡ್ಡ ಅಗೆದು ಕ್ರಷರ್‌ ಆರಂಭಕ್ಕೆ ಉದ್ಯಮಿಯೊಬ್ಬರು ಮುಂದಾಗಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಂದ ಪರವಾನಗಿ ಸಹ ದೊರೆತಿದೆ ಎನ್ನಲಾಗುತ್ತಿದೆ. ಆದರೆ ಇದರಿಂದಾಗಿ ಇಲ್ಲಿನ ಜನಜೀವನದ ಜೊತೆಗೆ ಜೀವ ವೈವಿಧ್ಯತೆಯೂ ಧಕ್ಕೆ ಆಗುವ ಕಾರಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮಾಗಡಿ ತಾಲ್ಲೂಕಿನ ಕಸಬಾ ಹೋಬಳಿಯ ಚನ್ನಮ್ಮನ ಪಾಳ್ಯದ ಮಹದೇಶ್ವರ ಬೆಟ್ಟದಿಂದ ಚೀಲೂರುವರೆಗೆ ಸುಮಾರು 200 ಎಕರೆ ಪ್ರದೇಶದಲ್ಲಿ ಜೇನುಕಲ್ಲು ಬೆಟ್ಟವಿದೆ. 1944ರಲ್ಲಿ ಮೈಸೂರು ಸಂಸ್ಥಾನವು ಇದನ್ನು ಹುಲ್ಲುಬಂಧಿ ಕಾವಲು ಎಂದು ಘೋಷಣೆ ಮಾಡಿದೆ. ಸುತ್ತಮುತ್ತ ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿವೆ.

ದುಬ್ಬಗೊಟ್ಟಿಗೆ ಗ್ರಾಮದ ಸರ್ವೆ ಸಂಖ್ಯೆಗೆ ಒಳಪಡುವ ಪ್ರದೇಶವನ್ನು ಸದ್ಯ ಗೋಮಾಳ ಎಂದೇ ನಮೂದಿಸಲಾಗಿದೆ. ದುಬ್ಬಗೊಟ್ಟಿಗೆ, ಕಲ್ಲಯ್ಯನ ಪಾಳ್ಯ, ಜೋಗಿ ಪಾಳ್ಯ, ಮದಲಾರಿ ಪಾಳ್ಯ, ತಗ್ಗೀಕುಪ್ಪೆ, ಕುರುಬರ ಪಾಳ್ಯ, ಮೋಟೆಗೌಡನ ಪಾಳ್ಯ, ಹೂಜಗಲ್‌... ಹೀಗೆ ಸುತ್ತಲಿನ ಹತ್ತಾರು ಗ್ರಾಮಗಳಿಗೆ ಈ ಗುಡ್ಡ ನೆರಳಂತೆ ನಿಂತಿದೆ.

ಜೇನುಕಲ್ಲು ಬೆಟ್ಟದಲ್ಲಿ ಬಸವಣ್ಣನ ದೇಗುಲ ಇದೆ. ಗುಡ್ಡಕ್ಕೆ ಹೊಂದಿಕೊಂಡಂತೆ ಕೆರೆಯೂ ಇದ್ದು, ನೂರಾರು ರೈತರು ಅದನ್ನು ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಗೋಮಾಳದಲ್ಲಿ ಸುತ್ತಲಿನ ಗ್ರಾಮಗಳ ಜಾನುವಾರುಗಳು ಹಸಿವು ನೀಗಿಸಿಕೊಳ್ಳುತ್ತಿವೆ. ಬೆಟ್ಟಕ್ಕೆ ಹೊಂದಿಕೊಂಡಂತೆ ಸ್ಮಶಾನವೂ ಇದೆ. ಈ ಬೆಟ್ಟಕ್ಕೆ ಹೊಂದಿಕೊಂಡಂತೆ ಪಶ್ಚಿಮ ದಿಕ್ಕಿನಲ್ಲಿ ಹೂಜಗಲ್‌ ಗ್ರಾಮವಿದ್ದು, ಅಲ್ಲಿ ಜೈನ ಮುನಿಗಳು ಸಲ್ಲೇಖನ ವ್ರತ ಕೈಗೊಂಡಿದ್ದ ನಿಷಧಿ ಶಾಸನಗಳ ಕುರುಹುಗಳಿವೆ.

ಒಂದೊಮ್ಮೆ ಇಲ್ಲಿ ಗಣಿಗಾರಿಕೆ ನಡೆದಲ್ಲಿ ಸುತ್ತಲಿನ ಪರಿಸರ ಹಾಳಾಗುತ್ತದೆ. ಹುಲ್ಲುಗಾವಲು ಹಾಗೂ ಕಿರು ಅರಣ್ಯ ಸಂಪೂರ್ಣ ನಾಶವಾಗಲಿದೆ. ಕ್ರಷರ್‌ ದೂಳಿನಿಂದಾಗಿ ಉಸಿರಾಡುವುದೂ ಕಷ್ಟವಾಗಲಿದೆ. ಜೊತೆಗೆ ಕೃಷಿ ಚಟುವಟಿಕೆಗೂ ಹೊಡೆತ ಬೀಳಲಿದೆ. ಹೀಗಾಗಿ ಗಣಿಗಾರಿಕೆಗೆ ಅನುಮತಿ ನೀಡಬಾರದು. ಇಲ್ಲಿನ ಹುಲ್ಲುಗಾವಲು ಹಾಗೂ ಪರಿಸರವನ್ನು ರಕ್ಷಿಸುವ ಕೆಲಸ ಆಗಬೇಕು ಎಂದು ಗುಡ್ಡದ ಸುತ್ತಲಿನ ಗ್ರಾಮಸ್ಥರು ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT