ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಬಯಲುಸೀಮೆಯಲ್ಲಿ ಔಷಧಿ ಸಸ್ಯ ಸಂಜೀವಿನಿ ವನ

Last Updated 30 ಅಕ್ಟೋಬರ್ 2020, 5:50 IST
ಅಕ್ಷರ ಗಾತ್ರ
ADVERTISEMENT
""
""
""
""

ಧಾರವಾಡ ಅರಣ್ಯ ವಿಭಾಗದ ವತಿಯಿಂದ ಹುಬ್ಬಳ್ಳಿಯಿಂದ 12 ಕಿಮೀ ದೂರದ ಬುಡನಾಳದಲ್ಲಿ ಔಷಧೀಯ ವನವೊಂದನ್ನು ರೂಪಿಸಿದ್ದಾರೆ. ಸಾವಿರಾರು ಬಗೆಯ ಔಷಧೀಯ ಸಸ್ಯಗಳು ಅಲ್ಲಿವೆ...

---

‘ಆಕ್ಸಿಜನ್‌ ಬೆಲೆ ಗೊತ್ತಾ?’

‘ಒಬ್ಬ ಮನುಷ್ಯ ಒಂದು ದಿನದಲ್ಲಿ 3 ಸಿಲಿಂಡರ್‌ನಷ್ಟು ಆಮ್ಲಜನಕವನ್ನು ಉಸಿರಾಡಲು ಬಳಸುತ್ತಾನೆ. ಇವತ್ತಿನ ದರದಂತೆ ಒಂದು ಆಕ್ಸಿಜನ್‌ ಸಿಲಿಂಡರ್ ಬೆಲೆ ₹700. ಅಂದರೆ ಒಬ್ಬ ಮನುಷ್ಯ ಒಂದು ದಿನದಲ್ಲಿ ₹ 2,100 ಆಮ್ಲಜನಕವನ್ನು ಉಸಿರಾಡುತ್ತಾನೆ. ಈಗಿನಂತೆ ಆಮ್ಲಜನಕ ಗಿಡ ಮರಗಳಿಂದ ನಮಗೆ ಉಚಿತವಾಗಿ ಸಿಗದಿದ್ದರೆ ಒಂದು ವರ್ಷಕ್ಕೆ ಒಬ್ಬ ಬರೀ ಉಸಿರಾಡುವುದಕ್ಕಾಗಿಯೇ ₹7,66,500 ಖರ್ಚು ಮಾಡಬೇಕಾಗುತ್ತದೆ. ನೀವಷ್ಟು ಶ್ರೀಮಂತರಿದ್ದೀರಾ? ಇದೊಂದು ಕಾರಣ ಸಾಕಲ್ಲವೇ? ನಾವು ಗಿಡಮರಗಳನ್ನು ನೆಟ್ಟು ಬೆಳೆಸೋಣ’

–ಇಂಥದ್ದೊಂದು ಬರಹವುಳ್ಳ ಬೋರ್ಡ್ ಇಲ್ಲಿ ಕಣ್ಣಿಗೆ ಬಿದ್ದಾಗ ತುಂಬಾ ಕುತೂಹಲಗೊಂಡೆ. ಹೌದು ಈಗಂತೂ ಎಲ್ಲೆಲ್ಲೂ ಮಾಲಿನ್ಯ. ಶುದ್ಧ ಆಮ್ಲಜನಕ ಸಿಗುವುದೇ ಅಪರೂಪ. ಹೀಗಿರುವಾಗ ಆಮ್ಲಜನಕದ ಮಹತ್ವವನ್ನು ಸಾರಿ ಈ ಫಲಕ ಹಾಕಿರುವವರು ಯಾರು ಅಂತ ಮತ್ತಷ್ಟು ಆಸಕ್ತಿಯಿಂದ ಅದನ್ನು ಗಮನಿಸಿದೆ. ’ಕರ್ನಾಟಕ ಅರಣ್ಯ ಇಲಾಖೆ’ ಧಾರವಾಡ ಅರಣ್ಯ ವಿಭಾಗದವರು ಇದನ್ನು ಹಾಕಿದ್ದರು. ಇದು ಕಂಡಿದ್ದು ಔಷಧೀಯ ವನದ ಆವರಣವೊಂದರಲ್ಲಿ.

ಹುಬ್ಬಳ್ಳಿಯಿಂದ ಕಾರವಾರ ರಸ್ತೆಯಲ್ಲಿ ಸುಮಾರು 12 ಕಿಮೀ ಸಾಗಿದರೆ ಸಿಗುವ ಊರು ಬುಡನಾಳ. ಮೇಲ್ನೋಟಕ್ಕೆ ಅಲ್ಲೇನು ವಿಶೇಷ ಕಾಣಿಸದೇ ಇರಬಹುದು. ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಶರವೇಗದಲ್ಲಿ ಹಾದುಹೋಗುವ ವಾಹನಗಳ ಭರಾಟೆ, ದೂಳಿನಿಂದ ಶುದ್ಧಗಾಳಿ, ನೋಟವೂ ಸಿಗದಿರಬಹುದು. ಆದರೆ ಸ್ವಲ್ಪ ಗಮನವಿಟ್ಟು ನೋಡಿದರೆ ರಸ್ತೆ ಬಲಬದಿಯಲ್ಲಿ ‘ಅಮೃತ ಸಸ್ಯ ಸಂಜೀವಿನಿ ವನ’ವೊಂದರ ಫಲಕವನ್ನು ಕಾಣಬಹುದು. ಇನ್ನಷ್ಟು ಕಣ್ಣರಳಿಸಿದರೆ ಔಷಧೀಯ ವನವೊಂದನ್ನು ಕಾಣುವಿರಿ.

ಸ್ವಾಸ್ಥ್ಯ ವನ

ಇಲ್ಲಿನ ಕಿರು ಗುಡ್ಡವೊಂದರ ಮೇಲೆ ಅರಣ್ಯ ಇಲಾಖೆ ಧಾರವಾಡ ವಿಭಾಗದ ಹುಬ್ಬಳ್ಳಿ ವಲಯವು ಔಷಧಿ ವನವೊಂದನ್ನು ರೂಪಿಸಿದೆ. ಇದಕ್ಕೆ ‘ಸಾಲುಮರದ ತಿಮ್ಮಕ್ಕ ವೃಕ್ಷವನ‘ ಹಾಗೂ ‘ಔಷಧಿ ವನ’ ಎಂಬ ಹೆಸರು ಕೂಡ ನೀಡಲಾಗಿದೆ. ಒಟ್ಟು 14 ಹೆಕ್ಟೇರ್ ವಿಸ್ತೀರ್ಣದಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ವನವು ಸಾವಿರಾರು ಔಷಧೀಯ ಸಸ್ಯಗಳು, ಮರ, ಹೂಗಳಿಂದ ಕೂಡಿದ್ದು ಮನಸ್ಸಿಗೆ ಆಹ್ಲಾದ ನೀಡುವಂತಿದೆ.

ವಿಶೇಷವೆಂದರೆ ಇಲ್ಲಿ ಪ್ರತಿಯೊಂದು ಭಾಗದಲ್ಲಿಯೂ ಔಷಧೀಯ ವನಗಳ ಸಮಗ್ರವಾದ ವಿವರಗಳುಳ್ಳ ಮಾಹಿತಿ ಫಲಕವನ್ನು ಮಾರ್ಗದುದ್ದಕ್ಕೂ ಅಲ್ಲಲ್ಲಿ ನೆಡಲಾಗಿದೆ. ಹೀಗಾಗಿ ನೀವು ಈ ವನದೊಳಗೆ ಹೊಕ್ಕರೆ ಅಲ್ಲಿರುವ ಫಲಕ ನೋಡಿಕೊಂಡು ಮುಂದಕ್ಕೆ ಸಾಗಬಹುದು. ಶುದ್ಧ ಆಮ್ಲಜನಕವನ್ನು ಶ್ವಾಸಕೋಶದ ತುಂಬ ತುಂಬಿಕೊಳ್ಳಬಹುದು.

ಪ್ಲಾಸ್ಟಿಕ್‌ ಚೆಲ್ಲದಂತೆ ಜಾಗೃತಿ, ಧೂಮಪಾನದ ಅಪಾಯ, ಜಲ ಸಂರಕ್ಷಣೆ, ಆಮ್ಲಜನಕದ ಮಹತ್ವ ಹೀಗೆ... ವಿವಿಧ ವಿಷಯಗಳನ್ನು ತಿಳಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಜತೆಗೆ ಸಸ್ಯಗಳ ಕುರಿತಾದ ಸೂಚನಾ ಫಲ‌ಕಗಳು ಮಾಹಿತಿಯುಕ್ತವಾಗಿವೆ.

ಅಗ್ರ ಔಷಧಿಗಳ ವನ

ಉದಾಹರಣೆಗೆ ‘ಸ್ವಾಸ್ಥವನ’: ಈ ಫಲಕ ಓದಿದರೆ, ತಲೆಯಿಂದ ಕಾಲಿನವರೆಗಿರುವ ಎಲ್ಲ ಅಂಗಗಳಿಗೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಗೆ ಹೊಂದಿಕೊಂಡಿರುವ ಔಷಧೀಯ ಸಸ್ಯಗಳ ಮಾಹಿತಿ ಲಭ್ಯ. ಮೆದುಳು ಮತ್ತು ತಲೆಬುರುಡೆ, ನರಗಳ ರೋಗಳು, ಕಣ್ಣಿನ ರೋಗಗಳು, ಕಿವಿ ರೋಗಗಳು, ಮೂಗಿನ ರೋಗಗಳು... ಹೀಗೆ ಇವುಗಳ ಚಿಕಿತ್ಸೆಗೆ ಅನುಸಾರವಾಗಿ ಇಲ್ಲಿ ಔಷಧೀಯ ಗಿಡಗಳಿವೆ.

ಇಲ್ಲಿನ ಇನ್ನೊಂದು ವಿಶೇಷ ರಾಶಿ ವನ. ನಿಮ್ಮ ನಿಮ್ಮ ರಾಶಿ, ನಕ್ಷತ್ರಗಳಿಗೆ ಅನುಗುಣವಾಗಿ ಯಾವ ಮರಗಳು, ಗಿಡಗಳು ಪ್ರಭಾವಿಸುತ್ತವೆ ಎಂಬ ಮಾಹಿತಿ ಇದೆ.

ಧಾರ್ಮಿಕ ವನ: ಇದರಲ್ಲಿ 21 ವನಗಳ ಸಮೂಹವಿದೆ. ಶಿವ ಪಂಚಾಕ್ಷರ ವನ, ನವಗ್ರಹ ವನ, ಪಂಚವಟಿ ವನ, ರಾಶಿ ನಕ್ಷತ್ರ ವನ, ಅಷ್ಟ ದಿಕ್ಪಾಲಕ ವನ, ವೃತಗಳ ವನ, ಸಪ್ತರ್ಷಿವನ, ಷಡ್ರಸ ವನ, ಚರಕ ವನ, ತಪೋ ವನ, ಪಶು ಚಿಕಿತ್ಸಾ ವನ, ಅಗ್ರೌಷಧ ವನ, ಸೌಂದರ್ಯ ವನ, ಸಾಮಾನ್ಯ ರೋಗಗಳ ವನ, ಆಯುರ್ವೇದ ಗುಂಪುಗಳ ವನ, ಸುಗಂಧ ದ್ರವ್ಯಗಳ ವನ, ಗಿಡಮೂಲಿಕಾ ವನ, ಸ್ವಾಸ್ಥ್ಯ ವನ, ಮನೆ ಮದ್ದುಗಳ ವನ... ಹೀಗೆ ವಿಭಾಗಿಸಲಾಗಿದೆ.

ಔಷಧೀಯ ವನದಲ್ಲಿರುವ ತಂಗುದಾಣದಲ್ಲಿ ಅಳವಡಿಸಿರುವ ಗಮನಸೆಳೆವ ಫಲಕಗಳು

ಔಷಧೀಯ ಸಸ್ಯಗಳ ಸಂರಕ್ಷಣೆ

ದೈವೀವನ/ ದೇವರಕಾಡು ವನ ಯೋಜನೆಯಲ್ಲಿ ಕೂಡ ಇಂತಹ ಅಪರೂಪದ ಹಾಗೂ ನಶಿಸುತ್ತಿರುವ ಅಮೂಲ್ಯ ಸಸ್ಯಸಂಪತ್ತುಗಳನ್ನು ಸಂರಕ್ಷಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಆಲ, ಅರಳಿ, ಬೇವು, ಬನ್ನಿ, ತಾರೆ, ಬಿಲ್ವಪತ್ರೆ, ಗೊಂಡ, ನೇರಳೆ, ನಾಗಸಂಪಿಗೆ, ಅತ್ತಿ, ಕಗ್ಗಲಿ ಮುಂತಾದ ಪವಿತ್ರ ಎಂದು ಪರಿಗಣಿಸಲಾಗುವ ಪ್ರಭೇದಗಳಿಂದ ಅರಣ್ಯಗಳನ್ನು ಸಮೃದ್ಧಗೊಳಿಸುವುದು, ಅರಣ್ಯಗಳ ಪ್ರಾಮುಖ್ಯತೆ ಬಗ್ಗೆ ಸ್ಥಳೀಯ ಜನರಲ್ಲಿ ಜಾಗೃತಿ ಮೂಡಿಸುವುದು, ಸ್ಥಳೀಯ ಪರಿಸರವನ್ನು ಸುಧಾರಣೆ ಮಾಡುವುದು ಈ ಯೋಜನೆಯಲ್ಲಿ ಸೇರಿವೆ.

ಪರಿಸರದ ಬಗ್ಗೆ ಜಾಗೃತಿ ಹೆಚ್ಚಿಸಲು ಫಲಕಗಳನ್ನು ಹಾಕಲಾಗಿದೆ. ಕಾಲ್ನಡಿಗೆ ಹಾದಿಯೊಂದಿಗೆ, ಅಲ್ಲಲ್ಲಿ ಬೆಂಚುಗಳನ್ನು ಹಾಕಲಾಗಿದ್ದು ನೀವು ವಿಶ್ರಮಿಸುತ್ತ ಅವುಗಳನ್ನು ನೋಡಬಹುದು. ಇದರ ಜೊತೆಗೆ, ಸಸ್ಯ ಪ್ರಭೇದಗಳು, ರಾಶಿವನ, ನಕ್ಷತ್ರವನ ಮುಂತಾದವುಗಳ ಬಗ್ಗೆ ಫಲಕಗಳು ಮತ್ತು ಚಿತ್ರವಿವರಣೆಗಳ ಮೂಲಕ ಜನರಿಗೆ ತಿಳಿವಳಿಕೆ ಮೂಡಿಸಲಾಗಿದೆ. ಇಲ್ಲಿಗೆ ಭೇಟಿ ನೀಡುವ ಎಲ್ಲ ಸಂದರ್ಶಕರು ಆಹಾರ, ಪ್ಲಾಸ್ಟಿಕ್‌ ಕಸ ಇತ್ಯಾದಿಗಳನ್ನು ಚೆಲ್ಲದೆ ಸ್ವಚ್ಛತೆ ಕಾಪಾಡಲು ಪ್ರಯತ್ನಿಸುವುದು ಮುಖ್ಯವಾಗಿದೆ.

ಅಲ್ಲದೇ ಇಲ್ಲಿ ಮಕ್ಕಳಿಗಾಗಿ ಆಟವಾಡಲು ಜಾರುಬಂಡಿ, ಜೋಕಾಲಿ, ಐಸ್‌ಪೈಸ್‌ಗಳಿವೆ. ಮಕ್ಕಳಿಗಾಗಿ ಕಿರು ಮಾಹಿತಿ ಫಲಕಗಳಿವೆ. ಇವುಗಳ ಜತೆಗೆ, ಭೇಟಿ ನೀಡುವ ಜನರಿಗಾಗಿ ವಿಶ್ರಾಂತಿ ತಂಗುದಾಣವೊಂದನ್ನು ರೂಪಿಸಲಾಗಿದೆ. ಇಲ್ಲಿನ ವಿಶೇಷವೆಂದರೆ ತಂಗುದಾಣದೊಳಗೂ ಕೂಡ ಕತ್ತೆತ್ತಿ ನೋಡಿದರೆ ಸುತ್ತಲೂ ಹಲವು ಮಾಹಿತಿ ಫಲಕಗಳನ್ನು ತೂಗುಹಾಕಲಾಗಿದೆ.

– ಕನ್ನಡ ನಾಡು ಶ್ರೀಗಂಧದ ಬೀಡು ಕಡಿದರೆ ಆಗುವುದು ಬರಡು, ಚಂದನದ ಸನ್ನಿಧಿಯಲ್ಲಿ ಪರಿಮಳ ತಾಗಿ ಬೇವು, ಔಷಧೀಯ ಗಿಡ ನೆಟ್ಟು ರೋಗಗಳ ತಡೆಗಟ್ಟು, ವನ್ಯ ವೃಕ್ಷಗಳು ಹಾಗೂ ಪ್ರಾಣಿ ಪಕ್ಷಿಗಳು ಎಲ್ಲಿಯವರೆಗೆ ಬದುಕುತ್ತವೆಯೋ ಅಲ್ಲಿಯವರೆಗೆ ಮನುಕುಲ ಉಚ್ಛ್ರಾಯ ಸ್ಥಿತಿಯಲ್ಲಿರುತ್ತದೆ. ಪಂಚ ಮಹಾಭೂತಗಳಾದ ಮಣ್ಣು, ನೀರು, ಗಾಳಿ, ಬೆಳಕು, ಮತ್ತು ಆಕಾಶ ಪ್ರಕೃತಿ ಮಾತೆ ನಮಗಿತ್ತ ದಿವ್ಯ ಕೊಡುಗೆ ಅವುಗಳ ಗಿಡಮರಗಳನ್ನು ಬೆಳೆಸಿ ಸಂರಕ್ಷಿಸಿ...ಇತ್ಯಾದಿ ವಾಕ್ಯಗಳು ಮನಸ್ಸಿಗೆ ಮುದನೀಡುತ್ತವೆ.ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಈ ವನ ತೆರೆದಿರುತ್ತದೆ.

ಔಷಧೀಯ ವನದಲ್ಲಿರುವ ತಂಗುದಾಣ

ಒಟ್ಟಾರೆ ಸುಮಾರು 14 ಹೆಕ್ಟೇರ್‌ ವಿಸ್ತಾರವಾಗಿದ್ದು ಇದರಲ್ಲಿ 25 ಎಕರೆ ಜಾಗದಲ್ಲಿ ಅಂದಾಜು 10 ಸಾವಿರ ಬಗೆ ಬಗೆಯ ಔಷಧೀಯ ಸಸ್ಯಗಳನ್ನು ನೆಡುವ ಯೋಜನೆ ಇಲ್ಲಿದೆ. ‘ಟ್ರೀ ಪಾರ್ಕ್‌ ’ ಯೋಜನೆಯನ್ನು 2017ರಲ್ಲಿ ಪ್ರಾರಂಭಿಸಲಾಗಿದ್ದು 2021ರಲ್ಲಿ ಪೂರ್ಣಗೊಳಿಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ.

ಅರಣ್ಯ ಪ್ರದೇಶಗಳಲ್ಲಿ ಹಿಂದೆಲ್ಲ ಸಮೃದ್ಧವಾಗಿ ದೊರೆಯುತ್ತಿದ್ದ ಔಷಧೀಯ ಸಸ್ಯಗಳು ನಶಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಆಯುರ್ವೇದ, ಗಿಡಮೂಲಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಿದೆ. ಹೀಗಾಗಿ ಅರಣ್ಯ ಪ್ರದೇಶಗಳಲ್ಲಿ ಔಷಧೀಯ ಸಸ್ಯಗಳನ್ನು ಪುನರುಜ್ಜೀವನಗೊಳಿಸುವ ಅವಶ್ಯಕತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಯೋಜನೆ ಹಮ್ಮಿಕೊಂಡಿದೆ.

‘ಈ ಯೋಜನೆಯಡಿ ವಿಶೇಷವಾಗಿ ಅವಸಾನದ ಅಂಚಿನಲ್ಲಿರುವ ಹಾಗೂ ಅಮೂಲ್ಯವಾದ ಔಷಧಿ ಸಸ್ಯಗಳನ್ನು ಬೆಳೆಸುವುದು, ಅವುಗಳನ್ನು ರಕ್ಷಣೆ ಮಾಡುವುದು, ನಿರ್ವಹಣೆ ಮಾಡುವುದನ್ನು ಒಳಗೊಂಡಿದೆ. ಔಷಧೀಯ ಸಸ್ಯೋದ್ಯಾನ ಅಭಿವೃದ್ಧಿಪಡಿಸುವುದರೊಂದಿಗೆ ಪ್ರತಿ ಜಿಲ್ಲೆಯಲ್ಲಿ ಕೂಡ ’ಟ್ರೀ–ಪಾರ್ಕ್‌’ ಯೋಜನೆಯಡಿ ಇಂತಹ ವನ ನಿರ್ಮಾಣ ಮಾಡಲಾಗಿದೆ. ಇವುಗಳಿಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಇದೆ. ಆದರೆ ಕೋವಿಡ್‌ ಸಮಯದಿಂದಾಗಿ ಹೆಚ್ಚಿನ ಅನುದಾನ ದೊರಕಿಲ್ಲ. ಅನುದಾನ ದೊರೆತ ಕೂಡಲೇ ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು’ ಎನ್ನುತ್ತಾರೆ ಧಾರವಾಡ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಆರ್‌. ಚವಾಣ್ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT