ಸೋಮವಾರ, ಆಗಸ್ಟ್ 2, 2021
26 °C
ವ್ಯಾಪಕ ಆಕ್ರೋಶ | ಸ್ಫೋಟಕ ಇಟ್ಟಿದ್ದು ಯಾರು ಮತ್ತು ಏಕೆ?

ಕೇರಳದಲ್ಲಿ ಆನೆ ಸಾವು: ಅನಾನಸ್ ಪಟಾಕಿ ಮತ್ತು ಟ್ವೀಟಿಗರ ಜಟಾಪಟಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Kerala Elephant

ಬೆಂಗಳೂರು: ಟ್ವಿಟರ್‌ನಲ್ಲಿ #Palakkad ಎಂಬ ಹ್ಯಾಷ್‌ಟ್ಯಾಗ್ ಗುರುವಾರ ಬೆಳಿಗ್ಗೆ ಟಾಪ್ ಟ್ರೆಂಡಿಂಗ್ ಆಗಿತ್ತು. #Malappuram #KeralaElephantMurder #RIPHumanity ಎಂಬ ಹ್ಯಾಷ್‌ಟ್ಯಾಗ್ ಬುಧವಾರದಿಂದ ಟ್ರೆಂಡ್ ಆಗುತ್ತಲೇ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ #ElephantKerala  #Humanityisdead #Elephant ಹ್ಯಾಷ್‌ಟ್ಯಾಗ್‌ಗಳೊಂದಿಗೆ ಹಲವರು ಕೇರಳದಲ್ಲಿ 'ಆನೆ ಹತ್ಯೆ'ಯ ಸುದ್ದಿ ಶೇರ್ ಮಾಡುತ್ತಿದ್ದಾರೆ.

ಏನಿದು ಪ್ರಕರಣ? 

ಗರ್ಭ ಧರಿಸಿದ್ದ ಆನೆಯೊಂದು ಕೇರಳದ ಮಣ್ಣಾರ್‌ಕ್ಕಾಡ್ ಅರಣ್ಯ ಪ್ರದೇಶದಲ್ಲಿ ಸಾವನ್ನಪ್ಪಿದೆ. ಪಟಾಕಿ ತುಂಬಿದ್ದ ಅನಾನಸ್ ತಿಂದಿದ್ದೇ ಅದರ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಮಣ್ಣಾರ್‌ಕ್ಕಾಡ್ ಅರಣ್ಯ ಪ್ರದೇಶವು ಮಲಪ್ಪುರಂ- ಪಾಲಕ್ಕಾಡ್ ಜಿಲ್ಲೆಯ ಗಡಿಭಾಗದಲ್ಲಿದೆ. ಅರಣ್ಯ ಇಲಾಖೆಯ ಪ್ರಕಾರ 15 ವರ್ಷದ ಈ ಆನೆ ಮೇ 27ರಂದು ಅಸ್ವಸ್ಥವಾಗಿತ್ತು. ರಕ್ಷಿಸಲು ಪ್ರಯತ್ನಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯರ ಪ್ರಕಾರ ಆನೆ ಗರ್ಭಧರಿಸಿತ್ತು. ಆನೆಯ ಬಾಯಿಯಲ್ಲಿ ಪಟಾಕಿ ಸ್ಫೋಟಗೊಂಡಿದ್ದೇ ಸಾವಿಗೆ ಕಾರಣ. 'ಪಟಾಕಿ ತುಂಬಿಸಿದ ಅನಾನಸ್' ತಿಂದು ಆನೆ ಸಾವು,  'ಪಟಾಕಿ ತುಂಬಿಸಿದ ಅನಾನಸ್ ನೀಡಿ ಗರ್ಭಿಣಿ ಆನೆಯ ಹತ್ಯೆ ಎಂದೇ ಹಲವಾರು ಸುದ್ದಿ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿದ್ದವು.

ಆದರೆ ಇದು ಪಟಾಕಿ ತುಂಬಿಸಿದ ಅನಾನಸ್ ಅಲ್ಲ, ಸ್ಫೋಟಕ ತುಂಬಿಸಿದ್ದ ಅನಾನಸ್ ಆಗಿತ್ತು. ಕಾಡುಪ್ರಾಣಿಗಳ ಉಪದ್ರವ ತಡೆಯಲು ಆಹಾರ ವಸ್ತುಗಳಲ್ಲಿ ಸ್ಫೋಟಕ ತುಂಬಿಸಲಾಗಿತ್ತು. ಆನೆಗೆ ಅನಾನಸ್ ತಿನಿಸಿಲ್ಲ, ಆಹಾರ ಅರಸುತ್ತಾ ಬಂದ ಆನೆ ಆ ಅನಾನಸ್ ಸೇವಿಸಿದ್ದರಿಂದ ಸಾವಿಗೀಡಾಗಿದೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಹೇಳಿರುವುದಾಗಿ 'ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್ ಇಂಡಿಯಾ' ವರದಿ ಮಾಡಿದೆ.

ಟ್ವಿಟರ್‌ನಲ್ಲಿ #Palakkad ಟ್ರೆಂಡ್ ಆಗಿದ್ದು ಯಾಕೆ?

ಮಲಪ್ಪುರಂ ಜಿಲ್ಲೆಯಲ್ಲಿ ಆನೆ ಹತ್ಯೆ ನಡೆದಿದೆ ಎಂಬ ಸುದ್ದಿಯ ಬೆನ್ನಲ್ಲೇ ಕೆಲವು ಟ್ವೀಟಿಗರು ಮಲಪ್ಪುರಂ ಜಿಲ್ಲೆಯವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು. ಆದರೆ ಆನೆ ಸತ್ತಿರುವುದು ವೆಲ್ಲಿಯಾರ್ ನದಿಯಲ್ಲಿ, ಅದು ಪಾಲಕ್ಕಾಡ್ ಜಿಲ್ಲೆಗೆ ಸೇರಿದ್ದು ಎಂಬ ವಾದದೊಂದಿಗೆ ಟ್ವಿಟರ್‌ನಲ್ಲಿ ಪಾಲಕ್ಕಾಡ್ ಹ್ಯಾಷ್‌ಟ್ಯಾಗ್ ಬಳಸಲಾಗಿದೆ.

ಮಲಪ್ಪುರಂ ವಿರುದ್ಧ ಭುಗಿಲೆದ್ದ ಆಕ್ರೋಶ;  #Malappuram ಟ್ರೆಂಡಿಂಗ್

ಪರಿಸರ ಮತ್ತು ಪ್ರಾಣಿ ಸಂರಕ್ಷಣಾ ಹೋರಾಟಗಾರ್ತಿ, ಬಿಜೆಪಿ ಸಂಸದೆ ಮೇನಕಾ ಗಾಂಧಿ ಜೂನ್ 3 ರಂದು ಮಾಡಿದ ಟ್ವೀಟ್ ಹೀಗಿದೆ.

ಪ್ರಾಣಿಗಳ ವಿಷಯದಲ್ಲಿ ಮಲಪ್ಪುರಂ ತೀವ್ರ ಅಪರಾಧ ಚಟುವಟಿಕೆಗಳನ್ನು ನಡೆಸುವ ಸ್ಥಳವಾಗಿದೆ. ವನ್ಯಜೀವಿಗಳನ್ನು ಬೇಟೆಯಾಡುವ ಅಥವಾ ಕೊಲ್ಲುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕ್ರಮ ಕೈಗೊಳ್ಳುವುದಕ್ಕಾಗಿ ನೀವು ಕರೆ/ಇಮೇಲ್ ಮಾಡಿ ಎಂದು ನಾನು ಸೂಚಿಸುತ್ತೇನೆ.

ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮೇನಕಾ ಗಾಂಧಿ, ಅದು ಕೊಲೆ. ಈ ರೀತಿಯ ಪ್ರಕರಣಗಳಿಗೆ ಮಲಪ್ಪುರಂ ಖ್ಯಾತಿ ಪಡೆದಿದೆ. ಭಾರತದಲ್ಲಿ ಅತೀ ಹೆಚ್ಚು ಗಲಭೆಪೀಡಿತ ಜಿಲ್ಲೆ ಅದು. ಉದಾಹರಣೆಗೆ  ರಸ್ತೆಯಲ್ಲಿ ವಿಷ ಬಿಸಾಡಿದರೆ ಅದನ್ನು ತಿಂದು 300-400 ಹಕ್ಕಿ, ನಾಯಿಗಳು ಒಂದೇ ಕ್ಷಣಕ್ಕೆ ಸಾಯುತ್ತವೆ. ಕೇರಳ ಸರ್ಕಾರ ಮಲಪ್ಪುರಂ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಮೇನಕಾ ಗಾಂಧಿಯವರ ಈ ಹೇಳಿಕೆಯನ್ನು ನೆಟ್ಟಿಗರು ಖಂಡಿಸಿದ್ದರು. 'ಯಾರಾದರೂ ಉದ್ದೇಶಪೂರ್ವಕ ಆನೆಗೆ ಪಟಾಕಿ ತಿನ್ನಲು ಕೊಡುತ್ತಾರೆಯೇ? ಹಣ್ಣಿನಲ್ಲಿ ಪಟಾಕಿ ತುಂಬಿಸಿಟ್ಟಿದ್ದು ಕಾಡು ಹಂದಿ ಹಾವಳಿ ತಡೆಯಲು. ಆನೆ ಅದನ್ನು ತಿಂದುಬಿಟ್ಟಿತು. ಈ ಘಟನೆ ನಡೆದಿರುವುದು ಮಲಪ್ಪುರಂನಲ್ಲಿಯೇ? ಅಲ್ಲ, ಪಾಲಕ್ಕಾಡ್‌ನಲ್ಲಿ' ಎಂದು ಹೇಳಿದ್ದರು.

 

ಆನೆ ಸಾವು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್, ಕೇರಳದಲ್ಲಿ ಆನೆ ಹತ್ಯೆ ಆಘಾತವನ್ನುಂಟು ಮಾಡಿದೆ. ಇದನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ನಮ್ಮ ಹಿರಿಯ ಅಧಿಕಾರಿಗಳನ್ನು ಈಗಾಗಲೇ ನಿಯೋಜಿಸಿದ್ದೇವೆ. ತಪ್ಪು ಮಾಡಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಲಾಗುವುದು ಎಂದಿದ್ದಾರೆ.

ಇದರ ಜತೆಗೆ ಕೆಲವು ಟ್ವೀಟಿಗರು ಮಲಪ್ಪುರಂ ಜಿಲ್ಲೆ ವಿರುದ್ಧ ಆಕ್ರೋಶದ ಟ್ವೀಟ್ ಮಾಡಿದ್ದರು.

ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ರೈತರ ಉಪಾಯ

ಗರ್ಭಿಣಿ ಆನೆಗೆ ಪಟಾಕಿ ತುಂಬಿದ ಅನಾನಸ್ ತಿನ್ನಿಸಲಾಗಿತ್ತು ಎಂಬ ಸುದ್ದಿ ಬಗ್ಗೆ 'ಇಂಡಿಯಾ ಡಾಟ್ ಕಾಂ ಫ್ಯಾಕ್ಟ್‌ಚೆಕ್'ನಲ್ಲಿ ವರದಿಯೊಂದು ಪ್ರಕಟಿಸಿದೆ. 'ನಾನು ಪಾಲಕ್ಕಾಡ್ ನಿವಾಸಿ, ಈ ಘಟನೆ ನಡೆದದ್ದು ಅಲ್ಲಿಯೇ. ಗುಡ್ಡ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳು ಬೆಳೆ ನಾಶ ಮಾಡುವುದನ್ನು ತಡೆಯಲು ವಿದ್ಯುತ್ ತಂತಿ, ಕಾಡು ಹಂದಿ ಕಾಟದಿಂದ ಮುಕ್ತಿ ಪಡೆಯಲು ಹಣ್ಣುಗಳಲ್ಲಿ ಸ್ಫೋಟಕ ತುಂಬಿಸುವುದು ಸರ್ವೇ ಸಾಮಾನ್ಯ ಸಂಗತಿ' ಎಂದು ವ್ಯಕ್ತಿಯೊಬ್ಬರು ಹೇಳಿರುವುದಾಗಿ ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆನೆ ಸಾವಿನ ಬಗ್ಗೆ 'ದಿ ನ್ಯೂಸ್ ಮಿನಿಟ್' ಜಾಲತಾಣದ ಜತೆ ಮಾತನಾಡಿದ ಮಣ್ಣಾರ್‌ಕ್ಕಾಡ್ ವಿಭಾಗೀಯ ಅರಣ್ಯಾಧಿಕಾರಿ ಕೆ.ಕೆ.ಸುನಿಲ್ ಕುಮಾರ್, 'ಕಾಡುಹಂದಿಗೆ ಇರಿಸಲಾಗಿದ್ದ  ಸ್ಫೋಟಕ ತುಂಬಿದ್ದ ಹಣ್ಣನ್ನು ಆನೆ ತಿಂದಿದೆ, ಆನೆಗೆ ಉದ್ದೇಶಪೂರ್ವಕ ಆ ಹಣ್ಣು ತಿನ್ನಿಸಲಾಗಿತ್ತು' ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದಿದ್ದಾರೆ.

 ಪ್ರಕರಣ ಬೆಳಕಿಗೆ ಬಂದದ್ದು ಹೀಗೆ

ಆನೆ ಪಾಲಕ್ಕಾಡ್ ಜಿಲ್ಲೆಯ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನದ್ದಾಗಿದೆ. ಇದು ಸತ್ತಿರುವುದು ಮಲಪ್ಪುರಂನ ವೆಲ್ಲಿಯಾರ್ ನದಿಯಲ್ಲಿ, ಅರಣ್ಯಾಧಿಕಾರಿ ಮೋಹನ್ ಕೃಷ್ಣನ್ ಮತ್ತು ತಂಡ ಆನೆಯನ್ನು ರಕ್ಷಿಸುವ ಕಾರ್ಯ ಮಾಡಿದ್ದರು. ವೆಲ್ಲಿಯಾರ್ ನದಿಯಲ್ಲಿ ಸೊಂಡಿಲು ಮುಳುಗಿಸಿ ಆನೆ ನಿಂತಿದ್ದಾಗ ಇತರ ಆನೆಗಳ ಸಹಾಯದಿಂದ ಅದನ್ನು ದಡಕ್ಕೆ ತರುವ ಕಾರ್ಯ ಮಾಡಲಾಗಿತ್ತು, ಮೇ.25ರಂದು ಈ ಆನೆ ಸುಮಾರು 48 ಗಂಟೆಗಳ ಕಾಲ ನೀರಿನಲ್ಲಿ ನಿಂತಿತ್ತು ಎನ್ನಲಾಗಿದೆ.ಈ ಬಗ್ಗೆ ಮೋಹನ್ ಕೃಷ್ಣನ್ ಅವರು ಮೇ30ರಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು ಆ ಪೋಸ್ಟ್  ವೈರಲ್ ಆಗಿತ್ತು.

ಸ್ಫೋಟಕ ಸಿಡಿದಿದ್ದರಿಂದ ಮೇಲಿನ ದವಡೆ ಮತ್ತು ಕೆಳಗಿನ ದವಡೆ ಗಂಭೀರವಾಗಿ ಗಾಯಗೊಂಡಿತ್ತು. ಆ ಗಾಯದಲ್ಲಿ  ಹುಳವೆದ್ದಿತ್ತು, ತೀವ್ರ ಗಾಯದಿಂದಾಗಿ ಅದಕ್ಕೆ ತಿನ್ನುವುದಕ್ಕಾಗಲೀ, ಕುಡಿಯುವುದಕ್ಕಾಗಲೀ  ಸಾಧ್ಯವಾಗುತ್ತಿರಲಿಲ್ಲ. ಒಂದು ವಾರಗಳ ಕಾಲ ಅದೇನೂ ತಿನ್ನದೇ ಇದ್ದುದಿಂದ ತುಂಬಾ ಕ್ಷೀಣಿಸಿಕೊಂಡಿತ್ತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿದ ಅರಣ್ಯ ಇಲಾಖೆಯ ಸಹ ಪಶುವೈದ್ಯಾಧಿಕಾರಿ ಡಾ.ಡೇವಿಡ್  ಅಬ್ರಹಾಂ ಹೇಳಿದ್ದಾರೆ.

ಆದಾಗ್ಯೂ, ಆನೆ ಯಾವ ಹಣ್ಣನ್ನು ತಿಂದಿದೆ ಎಂದು ಪತ್ತೆಯಾಗಿಲ್ಲ .ಅದು ಅನಾನಸ್ ತಿಂದಿದೆ ಎಂದು ದೃಢೀಕರಿಸಿ ಹೇಳಲಾಗುವುದಿಲ್ಲ. ಸಾಮಾನ್ಯವಾಗಿ ಸ್ಫೋಟಕ  ತುಂಬುವುದು ಹಣ್ಣಿನಲ್ಲೇ ಆಗಿರುವುದರಿಂದ ಹಣ್ಣು ತಿಂದಿರಬಹುದು ಎಂದು ಊಹಿಸಲಾಗಿದೆ ಎಂದಿದ್ದಾರೆ.

ನಿರ್ದಿಷ್ಟ ಪ್ರದೇಶದಲ್ಲಿ ಅನಾಸಸ್ ಅಥವಾ ಇತರ ಹಣ್ಣಿನೊಳಗೆ ಪಟಾಕಿ ಇರಿಸಿರುವ ಪ್ರಕರಣ ಯಾವುದೂ ಇಲ್ಲಿಯವರೆಗೆ ನಡೆದಿಲ್ಲ. ಅನಾನಸ್ ಒಳಗೆ ಪಟಾಕಿ ಇಟ್ಟಿರಬಹುದು ಇಲ್ಲವೇ ಪಟಾಕಿಯನ್ನು ಅನಾನಸ್ ರೀತಿಯಲ್ಲಿ ತಯಾರಿಸಿರಬಹುದು. ಈ ಬಗ್ಗೆ ಇನ್ನೂ ದೃಢೀಕೃತ ಮಾಹಿತಿ ಲಭ್ಯವಾಗಿಲ್ಲ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ಜತೆಗೆ ಮಾತನಾಡಿದ ಕೂಂಬಿಂಗ್ ಕಾರ್ಯಾಚರಣೆಗೆ ನೇತೃತ್ವ ನೀಡಿದ ಮಣ್ಣಾರ್‌ಕ್ಕಾಡ್ ಅರಣ್ಯ ವಲಯ ಅಧಿಕಾರಿ ಯು ಆಶಿಕ್ ಅಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು