ಭಾನುವಾರ, ಏಪ್ರಿಲ್ 18, 2021
24 °C

PV Web Exclusive| ದೂಳು, ಬ್ಯಾಕ್ಟಿರಿಯಾ ಹೀರುವ ಯಂತ್ರ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಗಾಳಿಯಲ್ಲಿರುವ ದೂಳು, ಬ್ಯಾಕ್ಟಿರಿಯಾ ಹಾಗೂ ಹೊಗೆಯ ಕಣಗಳನ್ನು ಶುದ್ಧೀಕರಿಸುವ ಸರಳ ಯಂತ್ರವನ್ನು ಹುಬ್ಬಳ್ಳಿಯ ಹಳೇ ವಿದ್ಯಾರ್ಥಿಗಳ ಸಂಘದ ಸಹಕಾರದೊಂದಿಗೆ ಇಲ್ಲಿನ ಜೈನ್‌ ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ನಗರದ ಇಂಡಿ ಪಂಪ್‌ ಬಳಿಯಿರುವ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯ ಆವರಣದಲ್ಲಿ ಈ ಯಂತ್ರವನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ.

ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರವಾಗಿರುವ ಹುಬ್ಬಳ್ಳಿಯ ವಾತಾವರಣದಲ್ಲಿ ದೂಳಿನ ಕಣಗಳು ಸಾಕಷ್ಟಿವೆ. ಇದು ಅಸ್ತಮಾದಂತಹ ಉಸಿರಾಟದ ತೊಂದರೆಗೆ ಕಾರಣವಾಗುತ್ತಿದೆ. ಹುಬ್ಬಳ್ಳಿಯ ಜೈನ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು, ವಾಯು ಶುದ್ಧೀಕರಿಸುವ ಈ ಯಂತ್ರವನ್ನು ತಯಾರಿಸಿದ್ದಾರೆ.

ಎಂಜಿನಿಯರಿಂಗ್‌ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಮೊಹಮ್ಮದ್‌ ಜುಬೇರ್‌, ಶಿವಪ್ರಸಾದ ವರ್ಣೇಕರ ಹಾಗೂ ಜುನೇದ ಸವಣೂರ ಸರಳ ತಂತ್ರಜ್ಞಾನ ಬಳಸಿ ಈ ಯಂತ್ರವನ್ನು ತಯಾರಿಸಿದ್ದಾರೆ.  ಉತ್ತಮ ಗುಣಮಟ್ಟದ ಮೂರು ವಿವಿಧ ಸಾಮಾನ್ಯ ಹಾಗೂ ವಿಶೇಷ ಫಿಲ್ಟರ್‌ಗಳನ್ನು ಇದರೊಳಗೆ ಅಳವಡಿಸಿದ್ದಾರೆ.

ಈ ಯಂತ್ರಕ್ಕೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ವಿದ್ಯುತ್‌ ಶಕ್ತಿಯಿಂದಾಗಿ, ಫಿಲ್ಟರ್‌ಗಳು ಸುಮಾರು 300 ಮೀಟರ್‌ ಸುತ್ತಲಿನ ಪ್ರದೇಶದಲ್ಲಿನ ವಾಯುವನ್ನು ತನ್ನೊಳಗೆ ಸೆಳೆದುಕೊಂಡು, ಶುದ್ಧೀಕರಿಸುತ್ತವೆ. ಪಿಎಂ 2.5 ದೂಳಿನ ಕಣಗಳನ್ನು ಹೀರಿಕೊಳ್ಳುತ್ತವೆ. ಜೊತೆಗೆ 0.02 ಮೈಕ್ರಾನ್‌ ಅಳತೆಗಿಂತ ದೊಡ್ಡ ಬ್ಯಾಕ್ಟಿರಿಯಾಗಳನ್ನು ಶುದ್ಧೀಕರಿಸುತ್ತವೆ.

ಜನರು ಹಾಗೂ ವಾಹನಗಳ ಸಂಚಾರ ದಟ್ಟಣೆ ಇದ್ದವೇಳೆ, ಈ ಯಂತ್ರವನ್ನು ಶುರು ಮಾಡಲಾಗುತ್ತದೆ. ಬೆಳಿಗ್ಗೆ 8ರಿಂದ 10ರವರೆಗೆ, ಮಧ್ಯಾಹ್ನ 1ರಿಂದ 2.30ರವರೆಗೆ, ಸಂಜೆ 5ರಿಂದ 7.30ರವರೆಗೆ ಹಾಗೂ ರಾತ್ರಿ 8ರಿಂದ 10ಗಂಟೆಯವರೆಗೆ ಇದನ್ನು ಬಳಸಲಾಗುತ್ತದೆ.

‘ಹುಬ್ಬಳ್ಳಿಯ ವಾತಾವರಣದಲ್ಲಿ ಸಾಕಷ್ಟು ದೂಳಿದೆ. ಇದರಿಂದ ಹಲವರಿಗೆ ಅಸ್ತಮಾ ಸೇರಿದಂತೆ ಹಲವು ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ತಡೆಯಬೇಕೆನ್ನುವ ಉದ್ದೇಶದಿಂದ ಈ ಯಂತ್ರವನ್ನು ಸಿದ್ಧಪಡಿಸಿದೆವು. ದೂಳಿನ ಕಣಗಳು ಹಾಗೂ ಬ್ಯಾಕ್ಟಿರಿಯಾಗಳ ಜೊತೆ ದುರ್ನಾತವನ್ನೂ ಇದು ಹೋಗಲಾಡಿಸುತ್ತದೆ’ ಎಂದು ವಿದ್ಯಾರ್ಥಿ ಮೊಹಮ್ಮದ್‌ ಜುಬೇರ್‌ ‘ಪ್ರಜಾವಾಣಿಗೆ ತಿಳಿಸಿದರು.

‘ತಗಡಿನಿಂದ ಗೋಪುರ ಆಕಾರದಲ್ಲಿ ಮಾಡಲಾಗಿದೆ. ಫಿಲ್ಟರ್‌ಗಳನ್ನು ಸಾಮಾನ್ಯವಾಗಿ 3ರಿಂದ 6 ತಿಂಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ. ಫಿಲ್ಟರ್‌ಗಳನ್ನು ಉತ್ತರ ಭಾರತದಿಂದ ತರಿಸಿಕೊಳ್ಳಲಾಗಿದೆ. ಪ್ರತಿ ಫಿಲ್ಟರ್‌ಗಳ ಬೆಲೆ ₹ 5,000–6,000 ಆಗುತ್ತದೆ. ₹ 35,000 ವೆಚ್ಚದಲ್ಲಿ  ಯಂತ್ರ ತಯಾರಿಸಿದೇವು’ ಎಂದು ನೀಡಿದರು.

‘ಜೈನ್‌ ಕಾಲೇಜಿನ ವಿದ್ಯಾರ್ಥಿಗಳು ಇಂತಹದೊಂದು ಯಂತ್ರವನ್ನು ಸಿದ್ಧಪಡಿಸುವುದಾಗಿ ತಿಳಿಸಿದಾಗ, ಅವರಿಗೆ ಅಗತ್ಯವಾದ ಆರ್ಥಿಕ ಸಹಾಯವನ್ನು ಸಂಘದ ವತಿಯಿಂದ ನೀಡಿದೆವು. ಯಂತ್ರ ಅಳವಡಿಸಲು ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯ ಆವರಣದಲ್ಲಿ 3x3 ಅಡಿ ಜಾಗ ಕೊಡಿಸಿದೆವು. ಠಾಣೆಯಿಂದಲೇ ವಿದ್ಯುತ್‌ ಸಂಪರ್ಕ ಕೂಡ ಕೊಡಿಸಿದೆವು. ಇಂತಹ ಯಂತ್ರಗಳನ್ನು ಮಹಾನಗರ ಪಾಲಿಕೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ನಗರದ ವಿವಿಧೆಡೆ ಅಳವಡಿಸಿದರೆ ದೂಳು ಮುಕ್ತ ನಗರವಾಗಿಸಲು ಸಹಕಾರಿಯಾಗಲಿದೆ’ ಎಂದು ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯ ಎ.ಎ. ಮಿರ್ಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು