ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೆ ಬಂತು ‘ಬೀಜದ ಬಾಂಬ್’

Last Updated 10 ನವೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಪಟಾಕಿ ಸುಡಬೇಡಿ, ಬದಲಾಗಿ ಹೂವು ಬೆಳೆಸಿ.. ಹೀಗೆಂದು ಹೇಳುತ್ತಾ ಬೀಜದ ಬಾಂಬ್‌ (ಸೀಡ್‌ ಬಾಂಬ್‌) ಹಂಚುತ್ತಿದೆ ಸೀಡ್‌ ಪೇಪರ್‌ ಇಂಡಿಯಾ ಕಂಪನಿ.

ನೋಡಲು ಥೇಟ್‌ ಪಟಾಕಿಯದ್ದೇ ರಚನೆ, ಬಣ್ಣ, ಪ್ಯಾಕಿಂಗ್‌ ಎಲ್ಲವೂ. ಆದರೆ, ಈ ಪಟಾಕಿಗಳು ಸಿಡಿಯುವುದಿಲ್ಲ. ಸುಮ್ಮನೆ ಒಂದು ಕಡೆ ಎಸೆದರೆ ಸಾಕು, ಅಲ್ಪ ಪ್ರಮಾಣದ ನೀರು ಬಿದ್ದರೆ ಅಲ್ಲೇ ಮೊಳಕೆಯೊಡೆದು ಚಿಗುರಿ ಚೆಂದದ ಗಿಡ ಬೆಳೆದು ಹೂವರಳಿಸಿ ನಗುತ್ತದೆ. ಈ ಹಬ್ಬ ಕಳೆದು ಮೂರು ನಾಲ್ಕು ತಿಂಗಳಲ್ಲೇ ನಿಮ್ಮ ಮನೆಯ ಆವರಣದಲ್ಲಿ ಹೂವಿನ ಗಿಡ ಕಾಣಬಹುದು.

ಬೀಜದಬಾಂಬ್‌ ತಯಾರಿ ಹೇಗೆ?
ರದ್ದಿ ಕಾಗದ, ಚಿಂದಿ ಬಟ್ಟೆಯ ಪಲ್ಪ್‌ ತಯಾರಿಸಲಾಗುತ್ತದೆ. ಅದನ್ನು ಬೇಕಾದ ಆಕಾರಕ್ಕೆ (ಪಟಾಕಿಯ ಆಕಾರ) ಸಿದ್ಧಪಡಿಸ ಲಾಗುತ್ತದೆ. ಹಾಗೆ ಸಿದ್ಧಪಡಿಸುವಾಗ ಅದರೊಳಗೆ ನಿರ್ದಿಷ್ಟ ಸಸಿಗಳ ಬೀಜಗಳನ್ನು ಹುದುಗಿಸಲಾಗುತ್ತಿದೆ. ಈ ‘ಪಟಾಕಿ’ಯನ್ನು ಸಾಮಾನ್ಯ ಪಟಾಕಿಯ ರೀತಿಯಲ್ಲೇ ತೋರಿಸುತ್ತಾ ಸಂಭ್ರಮಿಸಿ ಬಳಿಕ ಅದನ್ನು ಪುಟ್ಟ ಹೂಕುಂಡದಲ್ಲಿ ಅಥವಾ ಮನೆಯ ಮುಂದಿನ ಜಾಗದಲ್ಲಿ ಹುದುಗಿಸಿ ನೀರೆರೆಯಬೇಕು.

ಬೀಜದ ಬಾಂಬ್‌ನ ಅವತಾರಗಳು

ಒಂದು ವಿಶೇಷ ಬಾಕ್ಸ್‌ನಲ್ಲಿರುವ ಬೀಜದ ಬಾಂಬ್‌ಗಳ ರೂಪ ಹೀಗಿವೆ.

ಬಿಜಲಿ ಸೀಡ್‌ ಬಾಂಬ್‌ (ಕೆಂಪು ಪಟಾಕಿಯ ರಚನೆ)– ತುಳಸಿ ಬೀಜ ಒಳಗೊಂಡಿದೆ.

ಹೈಡ್ರೋಜನ್‌ ಬಾಂಬ್‌: ಟೊಮೆಟೊ ಬೀಜ ಒಳಗೊಂಡಿದೆ. (ತುಳಸಿ ಬೀಜವುಳ್ಳ ಈ ಬಾಂಬ್‌ ಕೂಡಾ ಲಭ್ಯ).

ರಾಕೆಟ್‌ಪಟಾಕಿ, ರಾಜಾ ಪಟಾಕಿ, ಸೀಡ್‌, ಸೆಣಬು ಪ್ಯಾಕ್‌ ರಚನೆಯ ನೆಲಚಕ್ರ.. ಹೀಗೆ ವೈವಿಧ್ಯಮಯ ಬೀಜ ಬಾಂಬ್‌ಗಳು ಲಭ್ಯ.

ಇವಷ್ಟೆ ಅಲ್ಲದೆ ದೀಪಾವಳಿಯ ಗ್ರೀಟಿಂಗ್‌ ಕಾರ್ಡ್‌, ಕೋಕೋಪಿಟ್‌ ಇತ್ಯಾದಿ ಲಭ್ಯ ಇದೆ.
₹250ರಿಂದ ₹ 350 ನಡುವೆ ಸೀಡ್‌ ಬಾಂಬ್‌ ಪ್ಯಾಕ್ ಲಭ್ಯ.

ಬೀಜದ ಬಾಂಬ್‌ ಮತ್ತು ಪರಿಸರ ಸ್ನೇಹಿ ಕಾರ್ಡ್‌ಗಳು

ರೂವಾರಿ ಯಾರು?: ರೋಷನ್‌ ರೇ ಅವರು ಈ ಸೀಡ್‌ಪೇಪರ್‌ ಇಂಡಿಯಾ ಕಂಪನಿಯ ಸ್ಥಾಪಕರು. ಹಳೆಯ ಪೇಪರ್‌ ಮರುಬಳಕೆ, ಬೀಜಗಳನ್ನು ಒಳಗೊಂಡ ಬಾವುಟ, ಸೀಡ್‌ ಪೆನ್ಸಿಲ್‌, ಪೆನ್‌ ಸಹಿತ ಪರಿಸರ ಸ್ನೇಹಿ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿದ್ದ ಕಂಪನಿ ಕಳೆದ ವರ್ಷದಿಂದ ಸೀಡ್‌ ಬಾಂಬ್‌ (ಗ್ರಾಮೀಣ ಪ್ರದೇಶಗಳಲ್ಲಿ ಬೀಜದುಂಡೆ ಮಾಡಿ ಎಸೆಯುತ್ತಾರೆಲ್ಲಾ, ಅದರ ಇನ್ನೊಂದುರೂಪ) ಉತ್ಪಾದನೆ ಆರಂಭಿಸಿದೆ.

‘ಬಾಲ್ಯದಲ್ಲಿ ಪಟಾಕಿಯಿಂದ ಕೈ ಸುಟ್ಟುಕೊಂಡ ಘಟನೆಯೇ ಪರಿಸರ ಸ್ನೇಹಿ ಪಟಾಕಿ ಉತ್ಪಾದನೆಗೆ ಪ್ರೇರಣೆ ಆಯಿತು’ ಎನ್ನುತ್ತಾರೆ ರೋಷನ್‌ ರೇ.

‘ಶಬ್ದ ಮಾಲಿನ್ಯ, ವಾಯು ಮಾಲಿನ್ಯ ರಹಿತ, ಹಸಿರು ಬೆಳೆಸುವ ದೀಪಾವಳಿ ಆಚರಿಸೋಣ ಎಂದು ನೀಡಿದ ಕರೆಗೆ ವ್ಯಾಪಕ ಸ್ಪಂದನೆ ಸಿಕ್ಕಿದೆ. ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ಹಲವಾರು ಸಂಘ– ಸಂಸ್ಥೆಗಳಿಗೆ ತರಬೇತಿಯನ್ನೂ ನೀಡುತ್ತಿದ್ದೇನೆ. ಬೆಂಗಳೂರು ಸೇರಿ ವಿವಿಧೆಡೆ ಹಸಿರು ಸೈನಿಕನಾಗಿಯೂ ಕೆಲಸ ಮಾಡುತ್ತಿದ್ದೇನೆ’ ಎಂದು ವಿವರ ಬಿಚ್ಚಿಡುತ್ತಾರೆ ರೋಷನ್‌.

ರೋಷನ್‌ ರೇ

(ಮಾಹಿತಿಗೆ: 9535867009, 6364699837)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT