ಭಾನುವಾರ, ಅಕ್ಟೋಬರ್ 25, 2020
23 °C

PV Web Exclusive: ವಲಸೆ ಹಕ್ಕಿ ನುಡಿದೈತೆ ಭವಿಷ್ಯ...

ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

Prajavani

ಆದಿಕಾಲದಿಂದಲೂ ಕವಿಗಳ ಕಲ್ಪನಾಶಕ್ತಿಯನ್ನು ಗರಿಗೆದರಿಸಿರುವುದು ‍ಪ‍ಕ್ಷಿಸಂಕುಲದ ಹೆಗ್ಗಳಿಕೆ. ಅವುಗಳ ವೈವಿಧ್ಯಮಯ ರೂಪ, ಗಾಯನ, ನರ್ತನ, ಗೂಡು ಕಟ್ಟುವ ಕೌಶಲ ಮಾನವನ ಭಾವನೆಗಳಿಗೆ ರೆಕ್ಕೆ ಮೂಡಿಸುತ್ತದೆ. ಅವುಗಳಿಗೆ ಇರುವ ಹಾರಾಟದ ಶಕ್ತಿಗೆ ಮನುಷ್ಯ ಮಾರುಹೋಗಿರುವುದರಲ್ಲಿ ಅಚ್ಚರಿ ಇಲ್ಲ. ಕವಿಗಳನ್ನು ಆಕರ್ಷಿಸಿದಂತೆಯೇ ವಿಜ್ಞಾನಿಗಳನ್ನೂ ಪ್ರಚೋದಿಸುತ್ತಿರುವುದು ಹಕ್ಕಿಗಳ ವಿಶೇಷ.

ಮನುಷ್ಯ ನಿರ್ಮಿತ ಗಡಿರೇಖೆ, ಪ್ರಕೃತಿ ನಿರ್ಮಿಸಿದ ಅಡೆತಡೆ ದಾಟುವ ಶಕ್ತಿ ಇರುವುದು ಹಕ್ಕಿಗಳಿಗೆ ಮಾತ್ರ. ಶೃಂಗಸಭೆಯಲ್ಲಿ ಕುಳಿತು ಗಣ್ಯರು ರೂಪಿಸುವ ಯಾವುದೇ ದೇಶದ ಕಾನೂನುಗಳ ಕಟ್ಟಳೆಗೆ ಅವು ತಲೆಬಾಗುವುದಿಲ್ಲ. ಕಾಲದೇಶಗಳನ್ನು ಮೀರಿದ ಅವುಗಳ ಶಕ್ತಿ ಬೆರಗು ಮೂಡಿಸುತ್ತದೆ. 

ಖಗಸಂಕುಲದ ಈ ವಲಸೆ ಪ್ರವೃತ್ತಿಗೆ ಕಾರಣವಾದರೂ ಏನು? ತವರು ನೆಲದಲ್ಲಿ ತಲೆದೋರುವ ಆಹಾರದ ಅಭಾವ, ಹವಾಮಾನ ವೈಪರೀತ್ಯ, ಪ್ರತಿಕೂಲ ಹವಾಮಾನದಿಂದ ಬಿಡುಗಡೆ ಪ‍ಡೆದು ಸಂತಾನೋತ್ಪತ್ತಿಗಾಗಿ ಅವು ವಲಸೆ ಹೋಗುತ್ತವೆ. ಅದರಲ್ಲೂ ಆಹಾರದ ಪ್ರಮಾಣ ಕಡಿಮೆಯಾಗುವ ಪಕ್ಷಿಗಳೇ ವಲಸೆ ಹೋಗುವುದು ಹೆಚ್ಚು.


ಧಾರವಾಡದ ಮಾವಿನಕೊಪ್ಪ ಕೆರೆ ಅಂಗಳದಲ್ಲಿ ವಿಹರಿಸುತ್ತಿರುವ ವಲಸೆ ಹಕ್ಕಿ ಪ್ಯಾಸಿಫಿಕ್ ಗೋಲ್ಡನ್ ಪ್ಲೊವರ್

ಸಂತಾನೋತ್ಪತ್ತಿ, ಆಹಾರ ಅನ್ವೇಷಿಸಿ ಪಕ್ಷಿಸಂಕುಲ ಯಾತ್ರೆ ಕೈಗೊಳ್ಳುತ್ತಿದ್ದರೂ ಅವುಗಳಲ್ಲಿ ವಲಸೆ ಪ್ರವೃತ್ತಿ ಹೇಗೆ ಜಾಗೃತವಾಗುತ್ತದೆ ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ವಿಶ್ವದಾದ್ಯಂತ ಪಕ್ಷಿಗಳ ಮ್ಯಾಗ್ನಟಿಕ್‌ ಕಂಪಾಸ್‌ ಕುರಿತು ಈಗಾಗಲೇ ಸಾಕಷ್ಟು ಸಂಶೋಧನೆಗಳು ನಡೆದಿವೆ; ನಡೆಯುತ್ತಲೂ ಇವೆ. ಅದರ ಭೌತಿಕ ಸಂಯೋಜನೆಯು ಇಂದಿಗೂ ವಿಜ್ಞಾನಿಗಳ ಪಾಲಿಗೆ ಬಿಡಿಸಲಾಗದ ಕಗ್ಗಂಟಾಗಿಯೇ ಉಳಿದಿದೆ. ಇದರಲ್ಲಿ ಕ್ವಾಂಟಂ ಎಂಟಾಂಗಲ್ಮೆಂಟ್‌ ಆಫ್‌ ಎಲೆಕ್ಟ್ರಾನ್ ಸ್ಪಿನ್‌ನ ಕೈವಾಡ ಇರಬಹುದು ಎಂಬುದು ವಿಜ್ಞಾನಿಗಳ ಅಭಿಮತ.

ಯೂರೋಪಿನಲ್ಲಿಯೇ ಅತಿಹೆಚ್ಚು ವಲಸೆ ಹಕ್ಕಿಗಳಿವೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಅಲ್ಲಿ ಚಳಿಗಾಲ ಆರಂಭವಾದೊಡನೆ ಅವುಗಳ ವಲಸೆ ಪ್ರಕ್ರಿಯೆ ಶುರುವಾಗುತ್ತದೆ. ಸೂರ್ಯ, ಚಂದ್ರ, ನಕ್ಷತ್ರಗಳ ಸುಳಿವು ಸಿಗದಂತಹ ಸನ್ನಿವೇಶದಲ್ಲಿ ಯುರೋಪಿಯನ್‌ ರಾಬಿನ್‌ ಹಕ್ಕಿಗಳನ್ನು ಸೆರೆಯಲ್ಲಿಟ್ಟರೂ ವಲಸೆ ಹೋಗುವ ಕಾಲ ಬಂದಾಗ ತಾವು ಪಯಣಿಸಬೇಕಾದ ದಿಕ್ಕನ್ನು ಅವು ನಿಖರವಾಗಿ ಗುರುತಿಸುವುದು ಸಂಶೋಧನೆಗಳಿಂದ ಸಾಬೀತಾಗಿದೆ.

ವಲಸೆ, ಮನುಷ್ಯ ಸೇರಿದಂತೆ ಎಲ್ಲಾ ಪ್ರಾಣಿ ಮತ್ತು ಪಕ್ಷಿಸಂಕುಲದಲ್ಲಿ ವಿಕಾಸ ಪಥದ ಆರಂಭದಿಂದಲೂ ನಡೆದುಕೊಂಡು ಬಂದಿರುವ ಪ್ರಕ್ರಿಯೆ. ಆದರೆ, ಪಕ್ಷಿಸಂಕುಲದ ಪ್ರತಿಯೊಂದು ಪೀಳಿಗೆಯೂ ತನ್ನ ಸಂಕುಲ ಭೇಟಿ ನೀಡಿದ ಜಾಗಕ್ಕೆ ಹೇಗೆ ಬಂದು ಹೋಗುತ್ತದೆ; ಅದೇ ಸ್ಥಳವನ್ನು ಅವುಗಳು ಹೇಗೆ ಪತ್ತೆ ಹಚ್ಚುತ್ತವೆ? ಇದಕ್ಕೆ ಉತ್ತರ ನಿಗೂಢ. ಅವುಗಳ ಸಾಮರ್ಥ್ಯ, ತರ್ಕ

ಮಾನವನ ಗ್ರಹಿಕೆಗೆ ನಿಲುಕುವುದಿಲ್ಲ.

ಉದಾಹರಣೆಗೆ ಪಟ್ಟೆತಲೆಯ ಹೆಬ್ಬಾತುಗಳ (Bar headed goose) ವಲಸೆಯನ್ನೇ ಗಮನಿಸಿ. ಮಂಗೋಲಿಯಾದಲ್ಲಿ ಚಳಿಗಾಲ ಆರಂಭವಾಗುವುದು ನವೆಂಬರ್‌ನಲ್ಲಿ. ಅಲ್ಲಿನ ಪಟ್ಟೆತಲೆ ಹೆಬ್ಬಾತುಗಳ ವಲಸೆ ಶುರುವಾಗುವುದೂ ಆಗಲೇ. ಕರ್ನಾಟಕದ ಮಾಗಡಿ ಕೆರೆ, ತುಂಗಭದ್ರಾ ಮತ್ತು ಕಬಿನಿ ಹಿನ್ನೀರು ಪ್ರದೇಶ, ಮೈಸೂರು, ಚಾಮರಾಜನಗರ ಜಿಲ್ಲೆಯ ಜಲಾಶಯ, ಕೆರೆಯ ತಾಣಗಳಿಗೆ ಅವು ವಲಸೆ ಬರುತ್ತವೆ. ಐದು ಸಾವಿರಕ್ಕೂ ಹೆಚ್ಚು ಕಿ.ಮೀ. ದೂರವನ್ನು ಕ್ರಮಿಸಿ ಭಾರತಕ್ಕೆ ಬರುವ ಅವುಗಳ ಬದುಕು ಕೂಡ ಅಷ್ಟೇ ಕುತೂಹಲಕಾರಿ.

2008ರಿಂದಲೂ ವಿಜ್ಞಾನಿ ಮಾರ್ಟಿನ್ ಗಿಲ್ಬರ್ಟ್‌ ಈ  ಹೆಬ್ಬಾತುಗಳ ವಲಸೆ ಜಾಡಿನ ಬೆನ್ನು ಹತ್ತಿದ್ದಾರೆ. ಅವುಗಳಿಗೆ ಕೊರಳಪಟ್ಟಿ (ಕಾಲರ್‌ ಐಡಿ) ತೊಡಿಸಿ ಎಷ್ಟು ದೂರ ಕ್ರಮಿಸುತ್ತವೆ; ಎಲ್ಲೆಲ್ಲಿಗೆ ಭೇಟಿ ನೀಡುತ್ತವೆ; ಯಾವಾಗ ತವರು ನೆಲೆಗೆ ಮರಳುತ್ತವೆ ಎಂದು ದಾಖಲಿಸುತ್ತಿದ್ದಾರೆ.

ಭಾರತಕ್ಕೆ ಬರುವ ವಲಸೆ ಹಕ್ಕಿಗಳಲ್ಲಿ ಸೈಬೀರಿಯನ್‌ ಬೆಳ್ಳಕ್ಕಿಯ ಬದುಕು ಕೂಡ ಅಷ್ಟೇ ಕೌತುಕವಾದುದು. ಸೈಬೀರಿಯಾದಲ್ಲಿ ಹಿಮಗಾಲ ಶುರುವಾದಾಗ ಈ ಹಕ್ಕಿಯು ಅಲ್ಲಿನ ಹಿಮವನ್ನು ತೊರೆದು ಹಿಮಾಲಯ ಪರ್ವತ ಶ್ರೇಣಿಗಳನ್ನು ದಾಟಿಕೊಂಡು ಭಾರತಕ್ಕೆ ವಲಸೆ ಬರುತ್ತದೆ. ಐದು ಸಾವಿರಕ್ಕೂ ಹೆಚ್ಚು ಕಿ.ಮೀ. ದೂರ ಕ್ರಮಿಸಿ ಭಾರತಕ್ಕೆ ವಲಸೆ ಬರುತ್ತದೆ ಎಂದರೆ ಅಚ್ಚರಿ ಮೂಡಿಸುತ್ತದೆ.

ವಲಸೆಯ ಹಿಂದಿನ ಕಷ್ಟನಷ್ಟ

ಪಕ್ಷಿಗಳ ಪಾಲಿಗೆ ವಲಸೆ ತ್ರಾಸದಾಯಕವೂ ಹೌದು. ಅವುಗಳ ಈ ಸುದೀರ್ಘ ಯಾತ್ರೆಯಲ್ಲಿ ಸಾವಿರಾರು ಕಿ.ಮೀ.ನಷ್ಟು ಸಮುದ್ರ, ಮರುಭೂಮಿ ಪ್ರದೇಶ, ಪರ್ವತಗಳನ್ನು ದಾಟಬೇಕಿದೆ. ಮಳೆ, ಗಾಳಿ, ಚಂಡಮಾರುತಗಳನ್ನು ಎದುರಿಸಬೇಕಿದೆ. ಈ ಪ್ರತಿಕೂಲ ಹವಾಮಾನವನ್ನು ಜಯಿಸುವುದು ಅವುಗಳಿಗೆ ನಿಜಕ್ಕೂ ಸವಾಲು. ಮತ್ತೊಂದೆಡೆ ವಲಸೆ ವೇಳೆ ಅವುಗಳ ಬೇಟೆಗೆ ಹೊಂಚು ಹಾಕಿ ಕುಳಿತುಕೊಂಡಿರುವ ಹಿಂಸ್ರ ಪಕ್ಷಿಗಳಿಂದಲೂ ತಪ್ಪಿಸಿಕೊಳ್ಳಬೇಕಿದೆ. ಈ ಯಾತ್ರೆಯಲ್ಲಿ ಕೆಲವು ಪಕ್ಷಿಗಳು ಸಾವಿಗೂ ಕೊರಳೊಡ್ಡುತ್ತವೆ. ಈ ವೇಳೆ ಬೇಟೆಗಾರರ ತಂತ್ರಕ್ಕೂ ಬಲಿಯಾಗುತ್ತವೆ.

ಬೇಟೆಯಿಂದ ತಪ್ಪಿಸಿಕೊಳ್ಳಲು ಕೆಲವು ಪ್ರಭೇದಕ್ಕೆ ಸೇರಿದ ಪಕ್ಷಿಗಳು ಹಗಲಿನಲ್ಲಿ ಅಡಗಿ ಕುಳಿತುಕೊಂಡು ಇರುಳಿನಲ್ಲಿ ಮಾತ್ರವೇ ಹಾರಾಟ ಆರಂಭಿಸುತ್ತವೆ. ಮತ್ತೆ ಕೆಲವು ಪ್ರಭೇದದ ಸದೃಢ ಹಕ್ಕಿಗಳದ್ದು ಇದಕ್ಕೆ ತದ್ವಿರುದ್ಧ ಸ್ಥಿತಿ. ಹಗಲು–ರಾತ್ರಿ ಎನ್ನದೇ ಅವುಗಳ ಪಯಣ ನಿರಂತರವಾಗಿ ಸಾಗುತ್ತಿರುತ್ತದೆ.

ರಾತ್ರಿ ಆಗಸವನ್ನು ನೋಡುತ್ತಾ ನಕ್ಷತ್ರಗಳ ಸಾಪೇಕ್ಷ ಸ್ಥಾನ ಅನುಸರಿಸಿ ತಮ್ಮ ನೆಲೆ ಮತ್ತು ದಾರಿಯನ್ನು ಕಂಡುಕೊಳ್ಳುವ ಜ್ಞಾನ ಹಕ್ಕಿಗಳಿಗೆ ಅನುವಂಶಿಕವಾಗಿ ಸಿದ್ಧಿಸಿದೆ. ಹಗಲಿನಲ್ಲಿ ಹಾರುವ ಪಕ್ಷಿಗಳಿಗೆ ಸೂರ್ಯನ ಚಲನೆಯೇ ದಿಕ್ಸೂಚಿ ಎನ್ನುತ್ತಾರೆ ವಿಜ್ಞಾನಿಗಳು. ಈ ಚಲನೆ ಅನುಸರಿಸಿಯೇ ಅವು ತಮ್ಮ ನಿರ್ದಿಷ್ಟ ಸ್ಥಳಕ್ಕೆ ಸಾಗುತ್ತವೆ. ಕೆಲವು ಪಕ್ಷಿಗಳು ಭೂ ಆಯಸ್ಕಾಂತ ಕ್ಷೇತ್ರವನ್ನು ಗಮನಿಸಿ ಯಾತ್ರೆ ಮುಂದುವರಿಸುತ್ತವಂತೆ. ಹಾಗಾಗಿಯೇ, ವಲಸೆ ಹಕ್ಕಿಗಳು ಎಂದಿಗೂ ದಿಕ್ಕು ತಪ್ಪುವುದು ಕಡಿಮೆ. ತನ್ನ ಅಜ್ಜ–ಅಜ್ಜಿ, ಅಪ್ಪ–ಅಮ್ಮ, ಸೋದರ ಸಂಬಂಧಿಗಳು ಭೇಟಿ ನೀಡಿದ ಸ್ಥಳಕ್ಕೆ ತಾನು ಹಿಂದೆ ಎಂದೂ ನೋಡದೇ ಇದ್ದರೂ ಸರಿಯಾದ ಸಮಯಕ್ಕೆ ಬಂದಿಳಿಯುತ್ತವೆ.


ಸೈಬೀರಿಯನ್ ಕ್ರೇನ್

ವಲಸೆ ಹಕ್ಕಿಗಳಿಗೆ ಎದುರಾಗಿರುವ ಅಪಾಯವೇನು?

ಪಕ್ಷಿಗಳಿಗೆ ಋತುಮಾನ ಬದಲಾವಣೆ ಮತ್ತು ಹವಾಮಾನ ವೈಪರೀತ್ಯವನ್ನು ಗ್ರಹಿಸುವ ಅದ್ಭುತ ಶಕ್ತಿಯಿದೆ. ಇದೇ ಅವುಗಳ ವಲಸೆಗೆ ರಹದಾರಿ. ಕೆಲವು ಪಕ್ಷಿಗಳು ಸ್ಥಳೀಯವಾಗಿ ವಲಸೆ ಹೋಗುವುದು ಉಂಟು. ಅದರಲ್ಲೂ ವಲಸೆಯಲ್ಲಿ ನೀರು ಆಶ್ರಿತ ಹಕ್ಕಿಗಳ ಪಾಲು ದೊಡ್ಡದು. ವಿದೇಶಗಳಿಂದ ಭಾರತಕ್ಕೆ ಬರುವ ಸಾವಿರಾರು ಹಕ್ಕಿಗಳು ಮನುಷ್ಯನ ದುರಾಸೆಯಿಂದ ಅಪಾಯವನ್ನು ಎದುರಿಸುತ್ತಿವೆ. ಅವುಗಳ ಆವಾಸದಲ್ಲಿ ಆಗುತ್ತಿರುವ ಅಗಾಧ ವ್ಯತ್ಯಾಸವೇ ಇದಕ್ಕೆ ಮೂಲ ಕಾರಣ.

ಸಂತಾನೋತ್ಪತ್ತಿ ಬಯಸಿ ವಿದೇಶಗಳಿಂದ ಬರುವ ಹಕ್ಕಿಗಳ ಪಾಲಿಗೆ ಪರಿಸರ ಮಾಲಿನ್ಯ ಮಾರಕವಾಗಿ ಪರಿಣಮಿಸಿದೆ. ಅತಿಯಾದ ಕೀಟನಾಶಕದ ಬಳಕೆಯು ಅವುಗಳ ಕೊರಳನ್ನು ಬಿಗಿದಿದೆ. ದಶಕಗಳ ಹಿಂದೆ ಕರ್ನಾಟಕಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದ ಪಟ್ಟೆತಲೆ ಹೆಬ್ಬಾತುಗಳ ಸಂಖ್ಯೆಯಲ್ಲಿ ಕಡಿಮೆಯಾಗಿರುವುದೇ ಇದಕ್ಕೊಂದು ನಿದರ್ಶನ. ಹಕ್ಕಿಯ ವಲಸೆಯೂ ಪಕ್ಷಿಸಂಕುಲದ ಬದುಕಿಗೆ ಎದುರಾಗಿರುವ ಅಪಾಯದ ಮುನ್ಸೂಚನೆ ಬಗ್ಗೆ ಭವಿಷ್ಯ ನುಡಿಯುತ್ತಿದೆ. ಮತ್ತೊಂದೆಡೆ ಸ್ಥಳೀಯ ಬೇಟೆಗಾರರ ಹಾವಳಿ, ಬಿಡಾಡಿ ನಾಯಿಗಳ ಕಾಟ ವಲಸೆ ಹಕ್ಕಿಗಳ ನೆಮ್ಮದಿಗೆ ಭಂಗ ತಂದಿದೆ. ಹಾಗಾಗಿ, ಅವುಗಳ ಬದುಕಿಗೆ ಪೂರಕ ವಾತಾವರಣ ಸೃಷ್ಟಿಸಿ, ಆವಾಸವನ್ನು ಸಂರಕ್ಷಿಸುವ ಜವಾಬ್ದಾರಿ ಸರ್ಕಾರ ಮತ್ತು ಜನರ ಮೇಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು