ಬುಧವಾರ, ನವೆಂಬರ್ 25, 2020
24 °C
ಜೊಯಿಡಾದ ಒಂದು ಹೆಕ್ಟೇರ್‌ ಪ್ರದೇಶದಲ್ಲಿ 103 ವಿಧದ ಚಿಟ್ಟೆಗಳ ವಿಹಾರ

PV Web Exclusive: ಸ್ವಚ್ಛಂದ ಉದ್ಯಾನದಲ್ಲಿ ಪಾತರಗಿತ್ತಿ ಬಿನ್ನಾಣ!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜೊಯಿಡಾ.. ಹೆಸರು ಕೇಳುತ್ತಿದ್ದಂತೆ ಪಕ್ಷಿ, ವನ್ಯಜೀವಿ, ಕಾಡು, ನದಿ, ಹೋಮ್ ಸ್ಟೇಗಳನ್ನು ಇಷ್ಟಪಡುವ ಪ್ರವಾಸಿಗರ ಕಿವಿ ನೆಟ್ಟಗಾಗುತ್ತದೆ. ಇಲ್ಲಿನ ಆಕರ್ಷಣೆಗೆ ಈಗ ಬಣ್ಣ ಬಣ್ಣದ ರೆಕ್ಕೆಗಳೂ ಮೂಡಿ, ತೆರೆದ ಪ್ರದೇಶದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿವೆ!

ಹೌದು, ತಾಲ್ಲೂಕು ಕೇಂದ್ರದಲ್ಲಿರುವ ‘ಚಿಟ್ಟೆ ಉದ್ಯಾನ’ವು ನೂರಾರು ಪ್ರಭೇದಗಳ ಅಪರೂಪದ ಪಾತರಗಿತ್ತಿಗಳಿಗೆ ಆಶ್ರಯ ತಾಣವಾಗಿದೆ. ಅರಣ್ಯ ಇಲಾಖೆಯ 43 ಹೆಕ್ಟೇರ್ ವಿಸ್ತೀರ್ಣದಲ್ಲಿರುವ ‘ಸಾಲುಮರದ ತಿಮ್ಮಕ್ಕ ಉದ್ಯಾನ’ದಲ್ಲಿ, ಒಂದು ಹೆಕ್ಟೇರ್ ಪ್ರದೇಶದಲ್ಲಿ ಈ ಉದ್ಯಾನವನ್ನು ನಿರ್ಮಿಸಲಾಗಿದೆ. ಇದು ಕಳೆದ ವರ್ಷ ಮೇನಲ್ಲಿ ಸಾರ್ವಜನಿಕರಿಗೆ ತೆರೆದುಕೊಂಡಿತು. ಈಗ ನಿತ್ಯವೂ ನೂರಾರು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ಕಾಡಿನಿಂದ ಕೂಡಿರುವ ಜೊಯಿಡಾದಲ್ಲಿ ಸಹಜವಾಗಿ ಚಿಟ್ಟೆಗಳ ಸಂಖ್ಯೆ ಹೆಚ್ಚಿದೆ. ಆದರೆ, ಅವುಗಳ ಜೀವನವನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡುವ ಹಾಗೂ ಸಂತಾನಾಭಿವೃದ್ಧಿಗೆ ಪೂರಕವಾದ ವಾತಾವರಣ ಕಲ್ಪಿಸುವ ವ್ಯವಸ್ಥೆ ಇರಲಿಲ್ಲ. ಈ ಉದ್ಯಾನವು ಇಂತಹ ಚಟುವಟಿಕೆಗಳಿಗೆ ಸಹಕಾರಿಯಾಗಿವೆ. ಇಲ್ಲಿ ನೈಸರ್ಗಿಕವಾದ ವಾತಾವರಣದಲ್ಲಿ ಚಿಟ್ಟೆಗಳು ಸಂತಾನಾಭಿವೃದ್ಧಿ ಮಾಡುತ್ತವೆ.

‘ಈ ಉದ್ಯಾನದಲ್ಲಿ ಆರಂಭದಲ್ಲಿ 30–40 ಪ್ರಭೇದಗಳಷ್ಟೇ ಕಂಡುಬಂದಿದ್ದವು. ಈಗ ಒಂದು ವರ್ಷದ ಅವಧಿಯಲ್ಲಿ 103 ವಿಧದ ಚಿಟ್ಟೆಗಳನ್ನು ಗುರುತಿಸಲಾಗಿದೆ. ಕೇವಲ ಹೆಕ್ಟೇರ್ ಎಕರೆ ಪ್ರದೇಶದಲ್ಲಿ ಇಷ್ಟೊಂದು ಪ್ರಭೇದಗಳಿದ್ದರೆ, ವಿಸ್ತಾರವಾಗಿ ಚಾಚಿಕೊಂಡಿರುವ ಅರಣ್ಯದಲ್ಲಿ ಇನ್ನೆಷ್ಟಿರಬಹುದು, ಇಲ್ಲಿ ಜೀವವೈವಿಧ್ಯ ಹೇಗಿರಬಹುದು ಎನ್ನುವುದು ಕುತೂಹಲಕಾರಿ’ ಎನ್ನುತ್ತ ‘ಪ್ರಜಾವಾಣಿ’ ಜೊತೆ ಮಾತಿಗಿಳಿದವರು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಅಜ್ಜಯ್ಯ.

‘ರಾಜ್ಯದಲ್ಲಿ ನೈಸರ್ಗಿಕವಾಗಿರುವ ಮೊದಲ ಚಿಟ್ಟೆ ಉದ್ಯಾನವಿದು. ಈ ಉದ್ಯಾನವನ್ನು ನಿರ್ಮಾಣ ಮಾಡಿದ ಬಳಿಕ 27 ವಿಧದ ಚಿಟ್ಟೆಗಳ ಜೀವನ ಕ್ರಮವನ್ನು ಅಧ್ಯಯನ ಮಾಡಲು ನಮಗೆ ಸಾಧ್ಯವಾಗಿದೆ. ಚಿಟ್ಟೆಯ ಜೀವನವು ನಾಲ್ಕು ಹಂತಗಳಲ್ಲಿರುತ್ತದೆ. ತನಗೆ ಆಹಾರ ಸಿಗುವ ಗಿಡದಲ್ಲಿ ಮೊಟ್ಟೆಯಿಟ್ಟು, ಮರಿಗಳಾಗುತ್ತವೆ. ನಂತರ ಲಾರ್ವಾ ಅಥವಾ ಕಂಬಳಿಹುಳಗಳಾಗುತ್ತವೆ (ಕ್ಯಾಟರ್ ಪಿಲ್ಲರ್). ಅವು ಎಲೆಗಳನ್ನು ತಿಂದು ಪ್ಯೂಪಗಳಾಗುತ್ತವೆ. ಬಳಿಕ ರೂಪಾಂತರವಾಗಿ ಬಣ್ಣಬಣ್ಣದ ಆಕರ್ಷಕ ಚಿಟ್ಟೆಗಳಾಗುತ್ತವೆ. ಈ ರೀತಿ ಎಲ್ಲ ಹಂತಗಳನ್ನೂ ನಾವು ಸುಲಭವಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ’ ಎಂದು ವಿವರಿಸುತ್ತಾರೆ.

‘ಚಿಟ್ಟೆಗಳ ಬಗ್ಗೆ ಆಸಕ್ತಿ ಇರುವವರಿಗೆ, ಪರಿಸರ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇದು ಸೂಕ್ತ ಸ್ಥಳವಾಗಿದೆ. ಅವುಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಪ್ರವಾಸಿಗರನ್ನು ಚಿಟ್ಟೆ ಉದ್ಯಾನಕ್ಕೂ ಕರೆದುಕೊಂಡು ಬರುವಂತೆ ಇಲ್ಲಿನ ರೆಸಾರ್ಟ್, ಹೋಮ್‌ ಸ್ಟೇಗಳ ಮಾಲೀಕರಿಗೆ ತಿಳಿಸಿದ್ದೇವೆ. ಅವರ ಪ್ರವಾಸದ ಪ್ಯಾಕೇಜ್‌ನಲ್ಲಿ ಸೇರಿಸುವಂತೆ ಸಲಹೆ ನೀಡಲಾಗಿದೆ. ಇದೇ ರೀತಿ, ಧಾರವಾಡದ ಅಳ್ನಾವರದಲ್ಲಿ ಕೂಡ ಉದ್ಯಾನ ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡುತ್ತಾರೆ.

‘ದೇಶದಲ್ಲೇ ಅತಿ ದೊಡ್ಡ, ನಮ್ಮ ರಾಜ್ಯದ ಚಿಟ್ಟೆ ಎಂದು ಗುರುತಿಸಲಾಗಿರುವ ಸದರ್ನ್ ಬರ್ಡ್ ವಿಂಗ್ ಪ್ರಭೇದವೂ ಇಲ್ಲಿದೆ. ಈ ಚಿಟ್ಟೆಯ ರೆಕ್ಕೆಗಳು 190 ಮಿಲಿಮೀಟರ್‌ಗಳ ತನಕವೂ ಬೆಳೆಯುತ್ತವೆ. ಕಳೆದ ವರ್ಷ ಒಂದು ಅಥವಾ ಎರಡು ಕಂಡುಬರುತ್ತಿದ್ದವು. ಇದೇ ಮೊದಲ ಬಾರಿಗೆ ನಾಲ್ಕು ಚಿಟ್ಟೆಗಳು ಕಾಣಿಸಿಕೊಂಡಿವೆ. ಉಳಿದಂತೆ, ಮಲಬಾರ್ ಬ್ಯಾಂಡೆಡ್ ಪೀಕಾಕ್, ಕ್ಲಿಪ್ಪರ್, ಪ್ಲೈನ್ ಟವ್ನಿ ರಜಾಹ್ ಮುಂತಾದ ವಿಧದ ಚಿಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ’ ಎಂದು ಅವರು ವಿವರಿಸುತ್ತಾರೆ.

‘ಚಿಟ್ಟೆಗಳಿಗೆ ಮಕರಂದವೇ ಮುಖ್ಯ ಆಹಾರ. ಹಾಗಾಗಿ ಹೆಚ್ಚು ಹೂ ಬಿಡುವ, ವಿವಿಧ ಪ್ರಭೇದಗಳ ಚಿಟ್ಟೆಗಳಿಗೆ ಬೇಕಾಗುವ ಬೇರೆ ಬೇರೆ ಸಸಿಗಳನ್ನು ಇಲ್ಲಿ ನೆಡಲಾಗಿದೆ. ಅವುಗಳಲ್ಲಿ ಈಶ್ವರ ಬಳ್ಳಿ, ಕಾಡುಬಸಳೆ, ಲಿಂಬೆ, ದಾಲ್ಚಿನ್ನಿ, ಎಕ್ಕೆ, ಕದಂಬ, ಗುಲ್ಮೊಹರ್, ಫಾಲ್ಸ್ ಅಶೋಕ, ಕವಲು, ಗೇರು, ಮಾವು, ಹೊಂಗೆ ಸೇರಿದಂತೆ 80ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಲಾಗಿದೆ. ಮಕರಂದಕ್ಕಾಗಿ ತೇರು ಹೂ, ಎಕ್ಸೋರಾ, ಪೆಂಟಾಸ್, ಸದಾ ಪುಷ್ಪ, ಮಿಲ್ಕ್ ವೀಡ್, ಕರಿ ಉತ್ರಾಣಿ ಮುಂತಾದ 35 ಗಿಡಗಳನ್ನು ನೆಡಲಾಗಿದೆ’ ಎನ್ನುತ್ತಾರೆ ಜೊಯಿಡಾ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜಿ.ನಾಯ್ಕ.

‘ಅಕ್ಟೋಬರ್‌ನಿಂದ ಮೇವರೆಗೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿಟ್ಟೆಗಳಿರುತ್ತವೆ. ಹಾಗಾಗಿ ಈ ಅವಧಿಯಲ್ಲಿ ಭೇಟಿ ನೀಡುವುದು ಉತ್ತಮ. ಉದ್ಯಾನವು ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ತೆರೆದಿರುತ್ತದೆ. ಶಾಲಾ ಮಕ್ಕಳು, ಅಧ್ಯಯನದಲ್ಲಿ ಆಸಕ್ತಿ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ’ ಎಂದು ಹೆಚ್ಚುವರಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಅಂ.ಗವಸ ಸಂತಸ ವ್ಯಕ್ತಪಡಿಸುತ್ತಾರೆ. ಈ ಉದ್ಯಾನದ ನಿರ್ವಹಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಮನಸ್ಸಿಗೆ ಉಲ್ಲಾಸ: ‘ಮನೆಯ ಹತ್ತಿರ ಬರುವ ಚಿಟ್ಟೆಗಳನ್ನು ಕಂಡಾಗಲೇ ಮನಸ್ಸು ಸಂತಸ ಪಡುತ್ತದೆ. ಬಣ್ಣಬಣ್ಣದ ನೂರಾರು ಚಿಟ್ಟೆಗಳನ್ನು ಒಂದೇ ಕಡೆ ಕಂಡಾಗ ಮನಸ್ಸಿಗೆ ಆಗುವ ಉಲ್ಲಾಸವನ್ನು ವರ್ಣಿಸಲು ಸಾಧ್ಯವಿಲ್ಲ. ಮಕ್ಕಳಂತೂ ತುಂಬ ಖುಷಿ ಪಡುತ್ತಾರೆ’ ಎಂದು ಮುಗುಳ್ನಕ್ಕವರು ಬೆಂಗಳೂರಿನ ಪ್ರವಾಸಿ ಪ್ರತೀಕ್ಷಾ ಗೌಡ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು