ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಹೆಬ್ಬಾತು...ಹಾರಿ ಹೋಯಿತು!

Last Updated 29 ಜನವರಿ 2022, 19:45 IST
ಅಕ್ಷರ ಗಾತ್ರ

ಗದಗ: ಚಳಿಗಾಲದ ಆರಂಭದಲ್ಲೇ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆಗೆ ಬಂದಿಳಿಯುತ್ತಿದ್ದ ಪಟ್ಟೆ ತಲೆ ಹೆಬ್ಬಾತುಗಳ ಸಂಖ್ಯೆ ಈ ಬಾರಿ ಗಣನೀಯವಾಗಿ ಕುಸಿದಿದೆ.

ಹೆಬ್ಬಾತುಗಳಿಗೆ ಮಾಗಡಿ ಕೆರೆ ಅಚ್ಚುಮೆಚ್ಚಾಗಿತ್ತು. ನಾಲ್ಕು ತಿಂಗಳು ಕೆರೆಯಲ್ಲಿ ಸ್ವಚ್ಛಂದವಾಗಿ ಈಜುತ್ತಿದ್ದ ಹಕ್ಕಿಗಳ ಮೇಲೆ ಊರಿನ ಗ್ರಾಮಸ್ಥರೂ ಅಷ್ಟೇ ಪ್ರೀತಿ ತೋರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಸುತ್ತಲಿನ ಪರಿಸರದಲ್ಲಿ ಆದ ಬದಲಾವಣೆಯಿಂದಾಗಿ ಬರುವ ಹಕ್ಕಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಕಲ್ಲು ಸಿಡಿಸುವ ಸದ್ದು, ಕೆರೆಯ ಏರಿ ಮೇಲೆ ನಿರಂತರವಾಗಿ ಸಾಗುವ ಟಿಪ್ಪರ್‌ಗಳ ಶಬ್ದ ಹಕ್ಕಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ಕಳೆದ ವರ್ಷ ಗದಗ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಶೇಂಗಾ, ಕಡಲೆ, ಗೋಧಿ ಮೊದಲಾದ ಬೆಳೆಗಳಿಗೆ ಅಪಾರ ಹಾನಿಯಾಯಿತು. ಪಟ್ಟೆ ತಲೆ ಹೆಬ್ಬಾತುಗಳಿಗೆ ಶೇಂಗಾ ಅಚ್ಚುಮೆಚ್ಚಿನ ಆಹಾರ. ರೈತರ ಹೊಲಕ್ಕೆ ಹಿಂಡು ಹಿಂಡಾಗಿ ಲಗ್ಗೆಯಿಟ್ಟು ಶೇಂಗಾ ಮೆಲ್ಲುತ್ತಿದ್ದ ಹೆಬ್ಬಾತುಗಳಿಗೆ ಈ ಬಾರಿ ನಿರಾಸೆ ಕಾಡಿತು. ಅಕಾಲಿಕ ಮಳೆಗೆ ಶೇಂಗಾ ಕೊಳೆತು ಹೋಗಿದ್ದರಿಂದ ಹಕ್ಕಿಗಳಿಗೆ ಆಹಾರದ ಕೊರತೆಯೂ ಎದುರಾಯಿತು. ಆಹಾರ ಸಿಗದ ಕಾರಣಕ್ಕೆ ವಲಸೆ ಹಕ್ಕಿಗಳು ಜಾಗ ಬದಲಿಸಿವೆ.

‘ಗಣಿ ಸದ್ದು, ವಾಹನಗಳ ಶಬ್ದಕ್ಕೆ ಪಟ್ಟೆ ತಲೆ ಹೆಬ್ಬಾತುಗಳು ಬೆದರುತ್ತಿರಲಿಲ್ಲ. ನನ್ನ ಅನಿಸಿಕೆ ಪ್ರಕಾರ ವಲಸೆ ಹಕ್ಕಿಗಳಿಗೆ ಈ ಬಾರಿ ಆಹಾರದ ಕೊರತೆ ಪ್ರಮುಖವಾಗಿ ಕಾಡಿದೆ’ ಎನ್ನುತ್ತಾರೆ ಮಾಗಡಿ ಕೆರೆಯಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿ ಸೋಮಣ್ಣ.

ಹಕ್ಕಿಗಳ ವಲಸೆ ಪ್ರಮಾಣ ಕುಸಿಯಲು ಆಹಾರದ ಕೊರತೆ ಒಂದು ಕಾರಣವಾದರೆ, ಶಿರಹಟ್ಟಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯೂ ಮತ್ತೊಂದು ಕಾರಣವಾಗಿದೆ.

---------

‘ಗದಗದಿಂದ ಹೋದವೇ ಕಬಿನಿಯತ್ತ?’

ದಾವಣಗೆರೆ: ಪಟ್ಟೆ ತಲೆಯ ಹೆಬ್ಬಾತುಗಳು ನಂಜನಗೂಡಿನ ಹದಿನಾರು ಕರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹೋಗಿವೆ ಎಂಬ ಮಾಹಿತಿ ಇದೆ. ಕಳೆದ ವರ್ಷ ಗದಗದ ಮಾಗಡಿ ಕೆರೆಗೆ 16 ಸಾವಿರದಷ್ಟು ಈ ಹಕ್ಕಿಗಳು ಬಂದಿದ್ದವು. ಈ ವರ್ಷ ಸಂಖ್ಯೆ ಅರ್ಧದಷ್ಟು ಅಲ್ಲಿ ಕಡಿಮೆಯಾಗಿದೆ. ಇದಕ್ಕೆ ಆಹಾರದ ಅಲಭ್ಯತೆಯೇ ಕಾರಣ ಎನ್ನುತ್ತಾರೆ ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿ ವಿಜ್ಞಾನ ವಿಭಾಗದ ಪ್ರೊಫೆಸರ್ ಎಸ್.ಶಿಶುಪಾಲ.

ಮಂಗೋಲಿಯಾದಿಂದ ಹಿಮಾಲಯ ದಾಟಿಕೊಂಡು 4,500 ಕಿ.ಮೀ. ಪಯಣಿಸಿ ರಾಜ್ಯಕ್ಕೆ ಬರುವ ಪಟ್ಟೆ ತಲೆಯ ಹೆಬ್ಬಾತುಗಳ ವರ್ತನೆಯನ್ನು ಪಕ್ಷಿ ಫೋಟೊಗ್ರಾಫರ್ ಕೂಡ ಆಗಿರುವ ಶಿಶುಪಾಲ ಅವರು ಗಮನಿಸುತ್ತಾ ಬಂದಿದ್ದಾರೆ. ಜಾಗತಿಕ ತಾಪಮಾನದಲ್ಲಿನ ಬದಲಾವಣೆ, ಅಣೆಕಟ್ಟೆಗಳಲ್ಲಿ ನೀರು ಈ ಸಲ ಕಡಿಮೆಯಾಗದೇ ಇರುವುದು ಕೂಡ ಹೆಬ್ಬಾತುಗಳ ವಲಸೆಯ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ಅವರು.

‘ದಾವಣಗೆರೆಯ ಕುಂದವಾಡ, ಟಿವಿ ಸ್ಟೇಷನ್ ಹಾಗೂ ಕೊಂಡಜ್ಜಿ ಕೆರೆಗೆ ಮಾಗಡಿಯಿಂದ ಹೆಬ್ಬಾತುಗಳು ಬರುತ್ತಿದ್ದವು. ಈ ಸಲ ಕುಂದವಾಡ ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಬಂದಿಳಿದ ಒಂದೆರಡು ಹಕ್ಕಿಗಳು ಚಕಿತವಾದಂತೆ ವರ್ತಿಸಿದ್ದನ್ನು ನಾನು ಕಂಡೆ. ಮಾಗಡಿ ಕೆರೆಯ ಸುತ್ತಮುತ್ತ ಕಡಲೆಗೆ ಕೀಟನಾಶಕ ಹೊಡೆಯುತ್ತಿರುವುದರಿಂದ ಹಕ್ಕಿಗಳು ಸಾಯುತ್ತಿವೆ. ಹೆಬ್ಬಾತುಗಳಿಗೆ ಕಡಲೆ ಪ್ರಿಯವಾದ ಆಹಾರ. ಈಗ ಬೆಳೆಯ ಪ್ರಮಾಣ ಕೂಡ ಕಡಿಮೆಯಾಗಿರುವುದರಿಂದ ಅವು ಬೇರೆ ಜಾಗಗಳನ್ನು ಹುಡುಕಿಕೊಂಡು ಹೋಗಿರಬಹುದು’ ಎನ್ನುತ್ತಾರೆ ಶಿಶುಪಾಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT