ಬುಧವಾರ, ಆಗಸ್ಟ್ 4, 2021
25 °C

ಕುಶಲ ಕಲೆಗಾರ ಗೀಜಗ

ಡಾ. ಎಸ್. ಶಿಶುಪಾಲ Updated:

ಅಕ್ಷರ ಗಾತ್ರ : | |

Prajavani

ಮುಂಗಾರು ಮಳೆಯೊಂದಿಗೆ ಇಳೆಯಲ್ಲಿ ಮಾಯಾಜಾಲದಂತಹ ಬದಲಾವಣೆ. ಎಲ್ಲೋ ನೆಲದಲ್ಲಿ ಗೊತ್ತುಗುರಿಯಿಲ್ಲದೆ ಬಿದ್ದಂತಿದ್ದ ಬೀಜಗಳಲ್ಲಿ ಜೀವಾಂಕುರ. ಎಲ್ಲ ಕಡೆ ಹಸಿರಿನ ಆಹ್ಲಾದಕರ ವಾತಾವರಣ. ಹುಳು-ಹುಪ್ಪಟೆ ಮತ್ತು ಕಪ್ಪೆಗಳ ಧ್ವನಿ. ಹಲವಾರು ಹಕ್ಕಿಗಳಿಗೆ ಮಿಲನದ ಮತ್ತು ತಾಯ್ತತನದ ಸಂಭ್ರಮ... ಸದ್ಯಕ್ಕೆ ಈ ಮಿಲನದ ಸಂತೋಷದಲ್ಲಿ ಪಾಲ್ಗೊಂಡಿರುವುದು ಗೀಜಗ ಹಕ್ಕಿಗಳು. ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ ಬಾಯಾ ವೀವರ್‌ ಎಂದು ಮತ್ತು ವೈಜ್ಞಾನಿಕವಾಗಿ ‘ಪ್ಲೋಸಿಯಸ್ ಫಿಲಿಫೈನಸ್‌’ ಎಂದು ಕರೆಯಲಾಗುತ್ತದೆ.

ಗುಣಲಕ್ಷಣಗಳು: ಗುಬ್ಬಿಚ್ಚಿಯಷ್ಟು ಗಾತ್ರದ ಹಕ್ಕಿ (15 ಸೆಂ.ಮೀ.). ಸಂತಾನ ಋತುವಿನಲ್ಲಿ ಗಂಡಿನಲ್ಲಿ ತಲೆ ಮೇಲೆ ಮತ್ತು ಎದೆಯಲ್ಲಿ ಉಜ್ವಲ ಹಳದಿ ಬಣ್ಣ ಕಾಣುತ್ತದೆ. ದೇಹದ ಮೇಲ್ಭಾಗ, ಕಿವಿಗಳ ಅಚೀಚೆ ಮತ್ತು ಕುತ್ತಿಗೆಯು ಕಡುಕಂದು ಬಣ್ಣದಲ್ಲಿರುತ್ತದೆ. ಸಣ್ಣ ಗುಂಪುಗಳಲ್ಲಿ ವಾಸಿಸುತ್ತವೆ. ಹೆಣ್ಣುಹಕ್ಕಿ ಗುಬ್ಬಚ್ಚಿಯನ್ನೇ ಹೋಲುತ್ತದೆ.ಕಾಳುಗಳು ಮತ್ತು ಕೀಟಗಳನ್ನು ಭಕ್ಷಿಸುತ್ತವೆ.

ಸಂತಾನೋತ್ಪತ್ತಿ: ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ. ಮುಂಗಾರು ಮಳೆ ಮತ್ತು ಭತ್ತದ ಕೃಷಿಯೊಂದಿಗೆ ಸಂತಾನ ಋತು ಹೊಂದಾಣಿಕೆಯಾಗುತ್ತದೆ. ಬೆದೆಗೆ ಬಂದ ಗಂಡು ಹಕ್ಕಿ ನೀರಿಗೆ ಹತ್ತಿರದ ಪ್ರದೇಶದಲ್ಲಿ ಜಾಲಿ ಅಥವಾ ತಾಳೆ ಗಿಡಗಳ ಸಣ್ಣಕೊಂಬೆಯ ತುದಿಗೆ ಹಸಿ ಭತ್ತದ ಹುಲ್ಲನ್ನು ನೇಯ್ದು ನೇತಾಡುವ ವಿಶೇಷ ಗೂಡನ್ನು ತಯಾರಿಸುತ್ತದೆ. ಗೂಡಿನ ಒಳಭಾಗದಲ್ಲಿ ಹಸಿಯಾದ ಮೆದು ಮಣ್ಣನ್ನು ಮೆತ್ತಿ ಮೊಟ್ಟೆಯಿಡುವ ಜಾಗವನ್ನು ತಯಾರು ಮಾಡುತ್ತದೆ.

ವಿಶೇಷತೆ: ವಿಶಿಷ್ಟ ಗೂಡು ನಿರ್ಮಾಣ ಮತ್ತು ಬಹುಪತ್ನಿತ್ವ ಈ ಹಕ್ಕಿಗಳ ವಿಶೇಷತೆ. ಸಮೂಹದಲ್ಲಿ ಗೂಡು ಮಾಡುವ ಈ ಹಕ್ಕಿಗಳಿಗೆ ಗೂಡಿಗಾಗಿ ಸ್ಥಳ ಆಯ್ಕೆಯಲ್ಲೂ ಸ್ಪರ್ಧೆ ಏರ್ಪಟ್ಟಿರುತ್ತದೆ. ವಯಸ್ಸಿಗೆ ಬಂದ ಗಂಡು ಸಂತಾನ ಋತುವಿನಲ್ಲಿ ಮೊದಲಿಗೆ ಸ್ಥಳ ಗುರುತಿಸಿಕೊಂಡು ಭತ್ತ ಅಥವಾ ಇತರೆ ನಾರುಗಳನ್ನು ತಂದು ಕೊಂಬೆಯ ತುದಿಗೆ ಗಂಟು ಹಾಕುತ್ತದೆ. ನಾರುಗಳನ್ನು ಒಂದರೊಳಗೊಂದನ್ನು ಹೆಣೆಯುತ್ತಾ ಜೋತು ಬಿದ್ದಿರುವಂತಹ ಗೂಡು ನೇಯುತ್ತದೆ. ಗೂಡು ಶೇ 69ರಷ್ಟಾದಾಗ ಗೂಡಿನ ಮೇಲೆ ಕುಳಿತು ರೆಕ್ಕೆ ಬಡಿಯುತ್ತಾ ಹೆಣ್ಣನ್ನು ಆಹ್ವಾನಿಸುತ್ತದೆ. ಸುತ್ತಮುತ್ತಲೂ ಸರಿ ಸುಮಾರು ಅದೇ ಹಂತದಲ್ಲಿ ಗೂಡು ಕಟ್ಟುತ್ತಿರುವ ಇತರೆ ಗಂಡು ಹಕ್ಕಿಗಳು ಸಹ ಇದೇರೀತಿ ಹೆಣ್ಣಿಗಾಗಿ ಸ್ಪರ್ಧೆಸುತ್ತಿರುತ್ತವೆ. ಸುತ್ತಲೂ ಉತ್ತೇಜಿತ ಸಂಭ್ರಮದ ವಾತಾವರಣ ಸೃಷ್ಟಿಯಾಗಿರುತ್ತದೆ. ಹೆಣ್ಣು ಪ್ರತ್ಯಕ್ಷವಾದೊಡನೆ ಎಲ್ಲ ಗಂಡುಗಳು ಗೂಡು ಕಟ್ಟುವ ತಮ್ಮ ಸಾಮರ್ಥ್ಯವನ್ನು ಹೆಣ್ಣಿಗೆ ತೋರಿಸಲು ಕಾತರರಾಗಿ ತಾವು ಮಾಡುತ್ತಿರುವಗೂಡಿನ ಮೇಲೆ ಕುಳಿತು ಕೀಚ್....ಕೀಚ್...ಎಂದು ಹುಮ್ಮಸ್ಸಿನಿಂದ ಕರೆಯುವುದನ್ನು ಕಾಣಬಹುದು. ತನ್ನ ಬಿಂಕ-ಬಿನ್ನಾಣದೊಂದಿಗೆ ಬಂದ ಹೆಣ್ಣು ಮೊದಲು ಪರೀಕ್ಷಿಸುವುದು ಗೂಡು ಸರಿಯಾದ ರೀತಿಯಲ್ಲಿದೆಯೇ ಎಂದು. ಅವಳು ಗೂಡಿಗೆ ಬಂದು ಒಳ ಹೊಕ್ಕು ಸೂಕ್ಷ್ಮವಾಗಿ ಪರೀಕ್ಷಿಸಿ, ಅಲ್ಲಲ್ಲಿ ಕೊಕ್ಕಿನಿಂದ ಹಿಡಿದೆಳೆದು ಗೂಡು ಗಟ್ಟಿಯಾಗಿದೆಯೇ ಎಂದು ನೋಡುತ್ತಾಳೆ. ಗೂಡು ಆಕೆಯ ಮನಸ್ಸಿಗೆ ಸರಿಯಿಲ್ಲವೆಂದು ಅನ್ನಿಸಿದರೆ ಅದನ್ನು ಕಟ್ಟಿದ ಗಂಡು ಹಕ್ಕಿಯನ್ನು ತಿರಸ್ಕರಿಸಿ ಬೇರೆ ಗಂಡುಗಳ ಗೂಡು ಪರಿಶೀಲಿಸಲು ತೆರಳುತ್ತಾಳೆ. ಹೆಣ್ಣು ತಿರಸ್ಕರಿಸಿದ್ದಕ್ಕೆ ಅವಮಾನಿತನಾದ ಗಂಡು ಈ ಮೊದಲು  ಕಟ್ಟಿದ್ದ ಗೂಡನ್ನು ಕಿತ್ತು ಹಾಕಿ ಅದೇ ಜಾಗದಲ್ಲಿ ಹೊಸ ಗೂಡನ್ನು ಕಟ್ಟುತ್ತಾನೆ. ಇಲ್ಲದಿದ್ದರೆ ಆ ತಿರಸ್ಕೃತ ಗೂಡನ್ನು ಬಿಟ್ಟು ಬೇರೆ ಜಾಗದಲ್ಲಿ ಗೂಡನ್ನು ಕಟ್ಟಲು ಪ್ರಾರಂಭಿಸುತ್ತಾನೆ. ಹೆಣ್ಣುಗಳು ಬಂದು ಗೂಡನ್ನು ಪರೀಕ್ಷಿಸುವ ಕೆಲಸ ಪುನರಾವರ್ತನೆಯಾಗುತ್ತದೆ. ಒಳ್ಳೆಯ ಚುರುಕಾದ ಗಂಡು ಬೇಗನೆ ಹೆಣ್ಣು ಮೆಚ್ಚುವಂತಹ ಗೂಡು ಕಟ್ಟುವ ಕೌಶಲ ಸಂಪಾದಿಸುತ್ತಾನೆ. ಅಂತಹ ಕೌಶಲವಿರುವ ಗಂಡಿಗೆ ಹೆಣ್ಣು ಒಲಿಯುತ್ತಾಳೆ.

ಹೆಣ್ಣು ಒಪ್ಪಿದ ಗೂಡನ್ನು ಗಂಡು ಮುಂದುವರೆಸಿ ಪೂರ್ತಿ ಗೂಡನ್ನು ಕಟ್ಟುತ್ತಾನೆ. ಇದೇ ಸಂದರ್ಭದಲ್ಲಿ ಮಿಲನ ಕ್ರಿಯೆ ನಡೆದು ಹೆಣ್ಣು ಆ ಗೂಡಿನಲ್ಲಿ ಮೊಟ್ಟೆ ಇಡುತ್ತಾಳೆ. ನಂತರ ಈ ಗಂಡು ಈಗಾಗಲೇ ಗೂಡು ಕಟ್ಟುವ ಕೌಶಲವನ್ನು ಪಡೆದುದರಿಂದ ತಕ್ಷಣ ಇನ್ನೊಂದು ಗೂಡನ್ನು ಕಟ್ಟಿ, ಇನ್ನೊಬ್ಬಳನ್ನು ಆಹ್ವಾನಿಸುತ್ತಾನೆ. ಈಗಾಗಲೇ ಹೆಣ್ಣು ಮೆಚ್ಚುವಂತಹ ಗೂಡುಕಟ್ಟುವ ನೈಪುಣ್ಯ ಅವನಿಗೆ ಬಂದಿರುವುದರಿಂದ ಬೇಗ ಗೂಡು ಕಟ್ಟಿ ಇತರ ಹೆಣ್ಣಿನೊಂದಿಗೆ ಕೂಡುತ್ತಾನೆ. ಇದೇ ರೀತಿ ಒಂದು ಸಂತಾನ ಋತುವಿನಲ್ಲಿ ನಾಲ್ಕೈದು ಗೂಡುಕಟ್ಟಿ ಅಷ್ಟು ಸಂಗಾತಿಗಳನ್ನು ಸೇರುವ ಕ್ಷಮತೆ-ಕೌಶಲವನ್ನು ಕೆಲವು ಗಂಡುಗಳು ಹೊಂದಿರುತ್ತವೆ. ಬಹುಪತ್ನಿತ್ವ ಈ ಹಕ್ಕಿಗಳ ವಿಶೇಷತೆ. ಹಾಗೆಯೇ ಈ ಗೂಡು ಗಾಳಿಗೆ ಅಲ್ಲಾಡುತ್ತಿದ್ದರೂ ಬಿದ್ದು ಹೋಗುವುದಿಲ್ಲ. ಸಣ್ಣ ಕೊಂಬೆಯ ತುದಿಯಲ್ಲಿ ತಲೆ ಕೆಳಗಾಗಿ ಇರುವುದರಿಂದ ಹಾವು ಮುಂತಾದ ಬೇಟೆ ಪ್ರಾಣಿಗಳಿಗೆ ಮೊಟ್ಟೆ ಅಥವಾ ಮರಿಗಳು ಸಿಗುವುದು ದುರ್ಲಭ.

ಸಮೂಹದಲ್ಲಿ ಗೂಡುಕಟ್ಟಿರುವಾಗ ಅರ್ಧಕ್ಕೆ ನಿಂತಿರುವ ತಿರಸ್ಕೃತ ಗೂಡುಗಳನ್ನು ಕಾಣಬಹುದು. ಈ ಹಕ್ಕಿಗಳ ವಿವಿಧ ತಳಿಗಳು ಎರಡಂತಸ್ತಿನ ಅಥವಾ ಮೂರಂತಸ್ತಿನ ಗೂಡುಗಳನ್ನು ಸಹ ಕಟ್ಟುತ್ತವೆ. ಮರಿಗಳ ಪಾಲನೆಯಾದ ನಂತರ ಈ ಗೂಡುಗಳನ್ನು ಅಥವಾ ಇದರಲ್ಲಿನ ನಾರುಗಳನ್ನು ಬೇರೆ ಹಕ್ಕಿಗಳು ಬಳಸಿಕೊಳ್ಳುವುದುಂಟು. ಪ್ರಕೃತಿಯಲ್ಲಿ ಒಂದು ಅದ್ಭುತ ಗೂಡು ಮಾಡುವ ಕಲೆಯನ್ನು ಸ್ವಾಭಾವಿಕವಾಗಿ ಈ ಹಕ್ಕಿಗಳು ಆಳವಡಿಸಿಕೊಂಡಿವೆ. ನಿಸರ್ಗದಲ್ಲಿ ಕೌಶಲವಿದ್ದು, ಪರಿಸರಕ್ಕೆ ಹೊಂದಿಕೊಳ್ಳುವಂತಹ ಸ್ವಭಾವವಿರುವ ಗಂಡುಗಳ ಆಯ್ಕೆಯ ರಹಸ್ಯ ಈ ಸಂತತಿಯನ್ನು ಉಳಿಸುವ ಮತ್ತು ಸೂಕ್ತ ಗುಣಾಣು (ಜೀನ್ಸ್)ಗಳನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಮಹತ್ವ ಅಡಗಿದೆ. ಭಾರತದಲ್ಲಿ ವಾಸಿಸುವ ನಾಲ್ಕು ಗೀಜಗ ಪ್ರಭೇದಗಳಲ್ಲಿ ಮೂರು ದಾವಣಗೆರೆಯಲ್ಲಿ ಕಾಣಸಿಕ್ಕಿರುವುದು ವಿಶೇಷ.

(ಲೇಖಕರು ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿವಿಜ್ಞಾನ ವಿಭಾಗದ ಪ್ರಾಧ್ಯಾಪಕರು. ಚಿತ್ರಗಳು: ಲೇಖಕರವು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು