ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಲೆನಾಡಿನಲ್ಲಿ ಡೇರೆ... ಮನಸೂರೆ

Last Updated 15 ಸೆಪ್ಟೆಂಬರ್ 2020, 5:23 IST
ಅಕ್ಷರ ಗಾತ್ರ
ADVERTISEMENT
""

ಒಂದು ಹೂ ಬಣ್ಣದ ಕಡ್ಡಿಗಳ ಗುಚ್ಛವಿಟ್ಟಂತೆ ಕಂಡರೆ, ಇನ್ನೊಂದು ವೃತ್ತಾಕಾರವಾಗಿ ಒಪ್ಪವಾಗಿ ಜೋಡಿಸಿದ ದಳಗಳ ಹಂದರ. ಮಗದೊಂದು ಎರಡು ಬಣ್ಣಗಳ ಓಕಳಿಯಂತಿದ್ದು, ಪ್ರಕೃತಿಯ ವರ್ಣ ಸಂಯೋಜನೆ ಅದ್ಭುತವನ್ನು ತೆರೆದಿಟ್ಟಿತ್ತು. ಮತ್ತೆಷ್ಟು ವಿಧಗಳು ಇವೆ ಎಂದು ನೋಡಹೊರಟರೆ ನಮ್ಮ ಕಣ್ಣಿಗೇ ಹಬ್ಬ. ಒಂದೊಂದು ಹೂವೂ ಸೌಂದರ್ಯದ ಖನಿ.

ಮಲೆನಾಡಿನ ಹಳ್ಳಿಗಳಲ್ಲಿ ಈಗ ಯಾರ ಮನೆಯ ಎದುರು ನೋಡಿದರೂ ಡೇರೆ ಹೂಗಳು ಅರಳಿ ನಿಂತು ಕಣ್ಮನ ತಣಿಸುತ್ತಿವೆ. ಮಳೆಗಾಲ ಬಂತೆಂದರೆ ಇಲ್ಲಿಯ ಹಳ್ಳಿಯ ಹೆಣ್ಣುಮಕ್ಕಳಿಗೆ ಡೇರೆ ಹೂ ಬೆಳೆಸುವ ಉತ್ಸಾಹ. ಯಾರ ಕೈತೋಟದಲ್ಲೂ ಇದರ ಹಾಜರಿ ಇದ್ದೇ ಇರುತ್ತದೆ.

‘ಜೂನ್‌ನಲ್ಲಿ ಭೂಮಿಗೆ ಮಳೆ ಸ್ಪರ್ಶವಾಗುತ್ತಲೇ ಅಟ್ಟ ಅಥವಾ ಗೋದಾಮುಗಳಲ್ಲಿ ಕಾಪಿಟ್ಟ ಡೇರೆಗಡ್ಡೆಗಳನ್ನು ಹೊರತೆಗೆದಿಡುವ ಸಮಯವಾಯಿತೆಂದು ಲೆಕ್ಕ. ತೆಗೆದಿಟ್ಟ ಕೆಲವು ದಿನಗಳಲ್ಲೇ ಗಡ್ಡೆಗಳಿಂದ ಸಸಿಗಳು ಹುಟ್ಟುತ್ತವೆ. ಅವುಗಳನ್ನು ಹೂಕುಂಡ, ಸಿಮೆಂಟ್‌ ಚೀಲ ಅಥವಾ ಪ್ಲಾಸ್ಟಿಕ್‌ ಕವರ್‌ಗಳಲ್ಲಿ ನೆಟ್ಟು ಬೆಳೆಸಬಹುದು. ಗಿಡ ನೆಟ್ಟು ಒಂದು ತಿಂಗಳ ನಂತರ ಹೂ ಬಿಡಲು ಆರಂಭವಾಗುತ್ತದೆ’ ಎಂದು ಶಿರಸಿ ತಾಲ್ಲೂಕು ದೊಡ್ನಳ್ಳಿಯ ಕುಮುದಾ ಸತ್ಯನಾರಾಯಣ ಹೆಗಡೆ ವಿವರಿಸುತ್ತಾರೆ.

ಡೇರೆ ಹೂ

ಜೂನ್‌ನಲ್ಲಿ ಮುಂಗಾರುಮಳೆ ಸರಿಯಾಗಿ ಆರಂಭವಾದರೆ ಸಾಮಾನ್ಯವಾಗಿ ಆಗಸ್ಟ್‌ ಅಂತ್ಯದವರೆಗೂ ಡೇರೆ ಹೂಗಳು ಅರಳುತ್ತವೆ. ಆದರೆ ಈ ಬಾರಿ ಜೂನ್‌–ಜುಲೈನಲ್ಲಿ ಸಾಕಷ್ಟು ಮಳೆಯಾಗದ ಕಾರಣ ಹೂಗಳು ಹಾಳಾದವು. ಈಗ ಒಂದು ವಾರದಿಂದ ಮಳೆ ಹೊಯ್ಯುತ್ತಿರುವ ಕಾರಣ ಡೇರೆ ಗಿಡ ಮತ್ತೆ ಹೂ ಬಿಡಲು ಆರಂಭಿಸಿದೆ. ಮಳೆ ಹೀಗೆಯೇ ಇದ್ದರೆ ಇನ್ನೂ ಒಂದೆರಡು ತಿಂಗಳು ಹೂ ಬಿಡಬಹುದು ಎಂದು ಅವರು ತಿಳಿಸಿದರು.

‘ಮಳೆ ಬೀಳುತ್ತಿದ್ದರೆ ಮಾತ್ರ ಡೇರೆ ಹೂ ಅರಳುತ್ತದೆ. ಉಳಿದ ಕಾಲದಲ್ಲಿ ದಿನವೂ ನೀರು ಹಾಕಿದರೂ ಅದು ಹೂ ಬಿಡುವುದಿಲ್ಲ, ಹೂ ಬಿಡುವುದು ನಿಂತ ಕೂಡಲೇ ಗಿಡಕ್ಕಿರುವ ಗಡ್ಡೆಗಳನ್ನು ಮಣ್ಣು ಸಮೇತ ತೆಗೆದು ಸಿಮೆಂಟ್‌ ಚೀಲಗಳಲ್ಲಿ ಹಾಕಿ ಅಟ್ಟದಲ್ಲೋ, ಗೋದಾಮಿನಲ್ಲೋ ಇಡುತ್ತೇವೆ. ನೆಲದಲ್ಲೇ ಬಿಟ್ಟರೆ ವರಲೆ ಅಥವಾ ಹುಳು ಹಿಡಿದು ಹಾಳಾಗುತ್ತದೆ. ಹೀಗಾಗಿ ನೀರು–ಬಿಸಿಲು ಬೀಳದಂತೆ ಇಡಬೇಕಾಗುತ್ತದೆ’ ಎಂಬುದು ಅವರ ಅನುಭವದ ಮಾತು.

ಹಲವು ನರ್ಸರಿಗಳಲ್ಲಿ ಡೇರೆ ಗಡ್ಡೆಗಳು ಲಭ್ಯವಿದ್ದರೂ, ಪ್ರತಿ ವರ್ಷವೂ ತಪ್ಪದೇ ಡೇರೆ ಹೂಗಳನ್ನು ಬೆಳೆಸುವ ಉತ್ಸಾಹ ಕಂಡು ಬರುವುದು ಮಲೆನಾಡಿನಲ್ಲೇ.

ಒಂದು ಗಿಡದಿಂದ ಸುಮಾರು 10 ಗಡ್ಡೆಗಳು ಸಿಗುತ್ತವೆ. ಆ ಗಡ್ಡೆಗಳನ್ನು ಒಣಗಿಸಿ ಮುಂದಿನ ಮಳೆಗಾಲಕ್ಕಾಗಿ ಹುಳುಗಳಿಲ್ಲದ ಒಣಮಣ್ಣಿನಲ್ಲಿ ಶೇಖರಿಸಿ ಇಡಬಹುದು. ಗಡ್ಡೆಗಳಿರುವ ಕುಂಡದಲ್ಲಿ ನೀರು ಸರಿಯಾಗಿ ಬಸಿದು ಹೋಗುವಂತಿರಬೇಕು, ನೀರು ಕುಂಡದಲ್ಲೇ ಇದ್ದರೆ ಕೊಳೆತು ಹೋಗುವ ಸಂಭವವಿರುತ್ತದೆ. ಡೇರೆಗಡ್ಡೆಗಳನ್ನು, ಗಿಡಗಳನ್ನು ಮಾಡಿ ಮಾರಾಟ ಮಾಡುವವರೂ ಹಲವರು ಇದ್ದಾರೆ. ಆದರೆ ಮನೆಯ ಕೈತೋಟ ಹಾಗೂ ಹಿತ್ತಲುಗಳಲ್ಲಿ ಮನಸ್ಸಂತೋಷಕ್ಕಾಗಿ ಬೆಳೆಸುವವರೇ ಇಲ್ಲಿ ಹೆಚ್ಚು.

ಡೇರೆ ಹೂಗಳು ಮೆಕ್ಸಿಕೊ ಹಾಗೂ ಮಧ್ಯ ಅಮೆರಿಕ ಮೂಲದವು. ಅವುಗಳಲ್ಲಿ 42 ಪ್ರಮುಖ ವಿಧಗಳು ಕಂಡುಬರುತ್ತವೆ. ಬಣ್ಣ ಹಾಗೂ ವಿನ್ಯಾಸ ವೈವಿಧ್ಯವನ್ನು ನೋಡಿಯೇ ಕಣ್ಣುತುಂಬಿಕೊಳ್ಳಬೇಕು. 5 ಸೆಂ.ಮೀ ವ್ಯಾಸದಿಂದ 30 ಸೆಂ.ಮೀ ವ್ಯಾಸದಷ್ಟು ದೊಡ್ಡ ಹೂಗಳು ಬೆಳೆಯಬಲ್ಲವು. ಗಿಡದಲ್ಲಿಯೇ ಇದ್ದರೆ, ಏಳೆಂಟು ದಿನ ತಾಜಾತನದಿಂದ ಕೂಡಿರುತ್ತದೆ. ಒಂದು ಗಿಡದಲ್ಲಿ 15ರವರೆಗೂ ಹೂಗಳು ಬಿಡುತ್ತವೆ. ಮಲೆನಾಡಿನಲ್ಲಿ ಮುಡಿಯಲು ಬಳಸುವುದಕ್ಕಿಂತ ದೇವರ ಪೂಜೆಗೆ ಬಳಕೆಯಾಗುವುದೇ ಹೆಚ್ಚು.

ಚಿತ್ರಗಳು– ಕುಮುದಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT