ಸೋಮವಾರ, ಜುಲೈ 26, 2021
22 °C

PV Web Exclusive: ತಡೆಯಿರಿ ಆತ್ಮಹತ್ಯೆಯ ಪಿಡುಗು

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ಸುಶಾಂತ್‌ ಸಿಂಗ್ ರಜಪೂತ್‌ ಅವರ ಆತ್ಮಹತ್ಯೆ ಪ್ರಕರಣ ನಡೆದು ಈಚೆಗೆ ವರ್ಷ ಕಳೆಯಿತು. ಆದರೆ ಈಗಲೂ ಅವರ ಅಭಿಮಾನಿಗಳು ಸಾವಿನ ಆಘಾತದಿಂದ ಹೊರಬಂದಿಲ್ಲ. ಅವರದ್ದು ಕೊಲೆಯೋ, ಆತ್ಮಹತ್ಯೆಯೋ ಎಂಬ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಆದರೆ ಆತ್ಮಹತ್ಯೆ ಎಂಬ ಪಿಡುಗು ಜಗತ್ತಿನಾದ್ಯಂತ ವಿವಿಧ ಸ್ತರಗಳ ಜನರನ್ನು ಕಾಡುತ್ತಿರುವುದು ಸುಳ್ಳಲ್ಲ. ಬಡವರು, ಶ್ರೀಮಂತರು, ಮಧ್ಯಮವರ್ಗದವರು, ಕೋಟ್ಯಧೀಶರು, ಉನ್ನತ ಶಿಕ್ಷಣ ಪಡೆದವರು... ಹೀಗೆ ಪತ್ರಿಕೆಗಳಲ್ಲಿ ಆತ್ಮಹತ್ಯೆಯ ಸುದ್ದಿಗಳು ಇಲ್ಲ ಎಂಬ ದಿನಗಳೇ ಇಲ್ಲ ಎಂಬಂತಾಗಿದೆ.

ಜಗತ್ತಿನಲ್ಲಿ ಆಗುವ 100 ಸಾವುಗಳಲ್ಲಿ ಒಂದು ಆತ್ಮಹತ್ಯೆಯಿಂದ ಆಗಿರುತ್ತದೆ ಎಂದು ಈಚೆಗೆ ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದೆ. ಕೋವಿಡ್‌ ಕಾಲದಲ್ಲಿ ಯಾವ ಸ್ಥಿತಿಗತಿಯಿದೆ ಎಂಬ ಅಂಕಿ–ಅಂಶ ಇನ್ನೂ ಸ್ಪಷ್ಟವಾಗಿ ಲಭ್ಯವಿಲ್ಲದಿದ್ದರೂ, ಐಸೊಲೇಷನ್‌ ಹಾಗೂ ಲಾಕ್‌ಡೌನ್‌ ಜನರ ಮನಸ್ಥಿತಿಯ ಮೇಲೆ ಪರಿಣಾಮ ಬೀರಿರುವ ಹಲವು ಪ್ರಕರಣಗಳು ವರದಿಯಾಗಿವೆ.

2019ನೇ ಸಾಲಿನಲ್ಲಿ ಎಚ್‌ಐವಿ, ಮಲೇರಿಯಾ, ಸ್ತನ ಕ್ಯಾನ್ಸರ್‌, ಯುದ್ಧ ಹಾಗೂ ಕುಟುಂಬ ಕಲಹಗಳಿಗಿಂತ ಹೆಚ್ಚಾಗಿ ಆತ್ಮಹತ್ಯೆಯಿಂದ ಮೃತಪಟ್ಟವರು ಹೆಚ್ಚು ಎಂದು ತಿಳಿದುಬಂದಿದೆ. ಜಗತ್ತಿನಲ್ಲಿ 7 ಲಕ್ಷ ಜನ ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಅಂಕಿ–ಅಂಶಗಳು ಹೇಳುತ್ತಿವೆ. ಹೀಗಾಗಿ ಈ ಪಿಡುಗನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ 2030ರ ಹೊತ್ತಿಗೆ ಈ ಪ್ರಮಾಣವನ್ನು 0.3ಕ್ಕೆ ಇಳಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. ‘ಲಿವ್‌ ಲೈಫ್‌’ ಎಂಬ ಹೊಸ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.

ಸಂಸ್ಥೆಯ ವಿಶ್ಲೇಷಣೆಗಳಲ್ಲಿ ಒಂದು ಅಚ್ಚರಿಯ ಸಂಗತಿ ಕಂಡುಬಂದಿದೆ. ಜಗತ್ತಿನಲ್ಲಿ ಮಹಿಳೆಯರ ಆತ್ಮಹತ್ಯೆಯ ಪ್ರಮಾಣಕ್ಕಿಂತ ಪುರುಷರ ಆತ್ಮಹತ್ಯೆಯ ಪ್ರಮಾಣ ದುಪ್ಪಟ್ಟಾಗಿದೆ. ಹೀಗಾಗಿ ಇದ್ದುದರಲ್ಲೇ ಮಹಿಳೆಯರು ಮಾನಸಿಕವಾಗಿ ಗಟ್ಟಿ ಎನ್ನಬಹುದೇನೋ? 1,00,000ದಲ್ಲಿ 12.5ರಷ್ಟು ಪುರುಷರು ಆತ್ಮಹತ್ಯೆಯಿಂದ ಮೃತಪಟ್ಟರೆ, 1,00,000ದಲ್ಲಿ 5.4ರಷ್ಟು ಪ್ರಮಾಣ ಮಹಿಳೆಯರದ್ದಾಗಿದೆ. ಆತಿ ಹೆಚ್ಚು ಆದಾಯ ಇರುವ ರಾಷ್ಟ್ರಗಳಲ್ಲಿ ಪುರುಷರ ಆತ್ಮಹತ್ಯೆ ಪ್ರಮಾಣ ಹೆಚ್ಚಿರುವುದು ಕಂಡುಬಂದಿದ್ದರೆ, ಕೆಳ ಮಧ್ಯಮ ಆದಾಯ ಇರುವ ರಾಷ್ಟ್ರಗಳಲ್ಲಿ ಮಹಿಳೆಯರ ಆತ್ಮಹತ್ಯೆ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ.

ಜಗತ್ತಿನಲ್ಲಿ ಆತ್ಮಹತ್ಯೆಯ ಸರಾಸರಿ ಪ್ರಮಾಣ 1,00,000ಕ್ಕೆ 9ರಷ್ಟು ಎಂದು ಲೆಕ್ಕಾಚಾರ ಇದೆ. ಆದರೆ ಆಫ್ರಿಕಾದಲ್ಲಿ ಇದು 11.2, ಯುರೋಪಿಯನ್‌ಗಳಲ್ಲಿ 10.5 ಹಾಗೂ ದಕ್ಷಿಣ ಪೂರ್ವ ಏಷ್ಯಾಗಳಲ್ಲಿ ಇದು 10.2ರಷ್ಟು ಪ್ರಮಾಣದಲ್ಲಿದೆ. ಜಗತ್ತಿನಲ್ಲಿ ಅತಿ ಕಡಿಮೆ ಆತ್ಮಹತ್ಯೆ ಪ್ರಕರಣಗಳು ಕಂಡುಬರುವುದು ಪೂರ್ವ ಮೆಡಿಟರೇನಿಯನ್‌ ಭಾಗಗಳಲ್ಲಿ ಅದು 6.4ರಷ್ಟು ಇದೆ. ಸಮಾಧಾನದ ಸಂಗತಿಯೆಂದರೆ ಜಗತ್ತಿನಲ್ಲಿ ಆತ್ಮಹತ್ಯೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಅಮೆರಿಕದಲ್ಲಿ ಮಾತ್ರ ಹೆಚ್ಚಳವಾಗುತ್ತಿರುವುದು ಆತಂಕ ಉಂಟುಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ–ಅಂಶಗಳ ಪ್ರಕಾರ 2019ರಲ್ಲಿ ಭಾರತದಲ್ಲಿ 1,73,347 ಜನ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಲ್ಲಿ 1,00,413 ಪುರುಷರು, 72,935 ಮಂದಿ ಮಹಿಳೆಯರು. ಭಾರತದ ನ್ಯಾಷನಲ್‌ ಕ್ರೈಮ್‌ ರೆಕಾರ್ಡ್ಸ್‌ ಬ್ಯೂರೊ (ಎನ್‌ಸಿಆರ್‌ಬಿ) ಪ್ರಕಾರ 2019ರಲ್ಲಿ ದೇಶದಲ್ಲಿ ಆಗಿರುವ ಆತ್ಮಹತ್ಯೆಗಳು 1,39,123. ಇದರಲ್ಲಿ 4,324 ರೈತರ ಆತ್ಮಹತ್ಯೆಗಳೂ ಸೇರಿವೆ. ಪ್ರತಿ ರಾಜ್ಯದಲ್ಲಿ ಆಗಿರುವ ಆತ್ಮಹತ್ಯೆಗಳ ಶೇಕಡಾವಾರು ಸಂಖ್ಯೆ ಈ ರೀತಿ ಇದೆ. ಮಹಾರಾಷ್ಟ್ರ 13.6, ತಮಿಳುನಾಡು 9.7, ಕರ್ನಾಟಕ 8.1, ಪಶ್ಚಿಮ ಬಂಗಾಳ 9.1, ಮಧ್ಯಪ್ರದೇಶ 9, ಕರ್ನಾಟಕ 8.1, ಕೇರಳ 6.1, ತೆಲಂಗಾಣ 5.5, ಗುಜರಾತ್‌ 5.5, ಛತ್ತೀಸ್‌ಗಢ 5.5, ಆಂಧ್ರಪ್ರದೇಶ 4.6, ಉತ್ತರಪ್ರದೇಶ 3.9, ಒಡಿಶಾ 3.3, ಉಳಿದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಶೇ 16.1.

ಇಲ್ಲಿ ಕಂಡುಬರುವ ಆತ್ಮಹತ್ಯೆಗೆ ಪ್ರಮುಖ ಕಾರಣಗಳು: ಕೌಟುಂಬಿಕ ಸಮಸ್ಯೆಗಳು ಶೇ 32.4, ಅನಾರೋಗ್ಯ ಶೇ 17.1, ಮದ್ಯಪಾನ ಹಾಗೂ ಮಾದಕ ವ್ಯಸನ ಶೇ 5.6, ವೈವಾಹಿಕ ಕಾರಣಗಳು ಶೇ 5.5, ಪ್ರೇಮ ವೈಫಲ್ಯ ಶೇ 4.5, ಆರ್ಥಿಕ ಸಮಸ್ಯೆ ಹಾಗೂ ದಿವಾಳಿತನ ಶೇ 4.2, ಪರೀಕ್ಷೆಗಳಲ್ಲಿ ಫೇಲ್‌ ಆಗಿದ್ದರಿಂದ ಶೇ 2, ನಿರುದ್ಯೋಗ ಶೇ 2, ವೃತ್ತಿಯಲ್ಲಿಯ ಸಮಸ್ಯೆಗಳು ಶೇ 1.2, ಆಸ್ತಿ ವಿವಾದ ಶೇ 1.1, ಆತ್ಮೀಯರ ಸಾವು ಶೇ 0.9, ಬಡತನ ಶೇ 0.8, ಅನೈತಿಕ ಸಂಬಂಧ ಹಾಗೂ ಅನೈತಿಕ ಸಂಬಂಧದ ಶಂಕೆ ಶೇ 0.5, ಸಮಾಜದಲ್ಲಿ ಗೌರವಕ್ಕೆ ಕುತ್ತು ಶೇ 0.4, ಮಕ್ಕಳಾಗದಿರುವುದು ಶೇ 0.3, ಇತರ ಕಾರಣಗಳು ಶೇ 11.1, ಕಾರಣ ತಿಳಿಯದೇ ಇರುವ ಆತ್ಮಹತ್ಯೆಗಳು ಶೇ 10.3.

ಭಾರತದ ಹೆಸರು ಉಲ್ಲೇಖ: ಆತ್ಮಹತ್ಯೆ ನಿಯಂತ್ರಣಕ್ಕಾಗಿ ಹಲವು ರಾಷ್ಟ್ರಗಳು ಸೂತ್ರಗಳನ್ನು ರೂಪಿಸಿವೆ. ಆದರೆ ಕೆಲವು ರಾಷ್ಟ್ರಗಳು ಮಾತ್ರ ಇನ್ನೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತ ಪಡಿಸಿದೆ. ಪ್ರಸ್ತುತ 38 ದೇಶಗಳಲ್ಲಿ ರಾಷ್ಟ್ರೀಯ ಆತ್ಮಹತ್ಯಾ ತಡೆ ಕಾರ್ಯಕ್ರಮಗಳು ಜಾರಿಯಲ್ಲಿವೆ.

ಕೋವಿಡ್‌ ಹುಟ್ಟುಹಾಕಿರುವ ಉದ್ಯೋಗ ನಷ್ಟ, ಆರ್ಥಿಕ ಸಮಸ್ಯೆಗಳು ಹಾಗೂ ಐಸೊಲೇಷನ್‌ ಸ್ಥಿತಿ ಮತ್ತಷ್ಟು ಆತ್ಮಹತ್ಯೆಗಳಿಗೆ ಪ್ರಚೋದನೆ ನೀಡಬಹುದು. ಹೀಗಾಗಿ ಆಡಳಿತಗಳು ಇವುಗಳನ್ನು ತಡೆಯಲು ಹಾಗೂ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ತುರ್ತು ಅಗತ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ.

ಆತ್ಮಹತ್ಯೆ ತಡೆಗೆ 4 ಪ್ರಮುಖ ಅಂಶಗಳನ್ನು ಜಾರಿ ಮಾಡುವಂತೆ ವಿಶ್ವ ಸಂಸ್ಥೆ ಮಾರ್ಗದರ್ಶಿಸಿದೆ.

1) ಆತ್ಮಹತ್ಯೆಗೆ ಕಾರಣವಾಗುವಂಥ ವಸ್ತುಗಳನ್ನು ಜನರಿಗೆ ಸುಲಭವಾಗಿ ಎಟುಕದಂತೆ ಮಾಡುವುದು. ಉದಾಹರಣೆಗೆ ಜೀವ ಹಾನಿ ಉಂಟು ಮಾಡುವಂಥ ಕೀಟನಾಶಕ ಹಾಗೂ ಬೆಂಕಿಗೆ ಕಾರಣವಾಗುವ ವಸ್ತುಗಳು.

2) ಆತ್ಮಹತ್ಯೆಯಂಥ ದುರ್ಘಟನೆಗಳನ್ನು ಜವಾಬ್ದಾರಿಯುತವಾಗಿ ಅಗತ್ಯವಿದ್ದಷ್ಟೇ ವರದಿ ಮಾಡುವುದು. ಆತ್ಮಹತ್ಯೆಗೆ ಕಾರಣ ಹಾಗೂ ವಿಧಾನಗಳ  ಬಣ್ಣನೆ ಬೇಡ.

3) ಹದಿಹರೆಯದವರಲ್ಲಿ ಸಾಮಾಜಿಕ–ಭಾವನಾತ್ಮಕ ಮೌಲ್ಯಗಳನ್ನು ಬೆಳೆಸುವುದು. ಆತ್ಮಹತ್ಯೆಗೆ ಕಾರಣವಾಗುವಂಥ ಸಂಗತಿಗಳನ್ನು ಮೊದಲೇ ಗುರುತಿಸಿ ಅದರ ಸಂತ್ರಸ್ತರಿಗೆ ರಕ್ಷಣೆ ಒದಗಿಸುವುದು. ನಿರಂತರವಾಗಿ ಅವರಿಗೆ ಸಹಾಯ ಒದಗಿಸುವುದು.

4) ಅಪಾಯಕಾರಿ ಕೀಟನಾಶಕಗಳನ್ನು ನಿಷೇಧಿಸುವುದು.

ಇವುಗಳ ಜೊತೆಗೆ ಮಾನಸಿಕ ತಲ್ಲಣಗಳಿಂದ ಹೊರಬಂದವರ ಯಶಸ್ಸಿನ ಗಾಥೆಗಳನ್ನು ವರ್ಣಿಸುವ ವರದಿಗಳೂ ಆತ್ಮಹತ್ಯೆ ಮನಃಸ್ಥಿತಿಯವರಲ್ಲಿ ಸಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ. ಹೀಗಾಗಿ ಇಂಥ ವರದಿಗಳನ್ನೂ ಹೆಚ್ಚಾಗಿ ಪ್ರಕಟಿಸಿ ಎಂದು ಮಾಧ್ಯಮಗಳಿಗೆ ಸಂದೇಶ ನೀಡಿದೆ.

ಹದಿಹರೆಯದವರಲ್ಲಿ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಶಾಲೆ–ಹಾಗೂ ಕಾಲೇಜುಗಳನ್ನು ಜೀವನ ಮೌಲ್ಯಗಳ ಶಿಕ್ಷಣಕ್ಕೆ ಇನ್ನಷ್ಟು ಆದ್ಯತೆ ದೊರಕಬೇಕಿದೆ ಎಂಬ ಅಂಶವನ್ನೂ ಈ ವರದಿಯಲ್ಲಿ ಹೇಳಲಾಗಿದೆ.

ಜನರಲ್ಲಿ ಆತ್ಮಹತ್ಯೆಯ ಮನಃಸ್ಥಿತಿ ಹೋಗಲಾಡಿಸಲು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಬಹುದು. ಖಿನ್ನತೆಗೆ ಒಳಗಾಗಿರುವವರನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬಹುದು. ಆತ್ಮಹತ್ಯೆ ತಡೆಯುವಲ್ಲಿ ಆಸ್ಟ್ರೇಲಿಯಾ, ಘಾನಾ, ಗಯಾನಾ, ಭಾರತ, ಇರಾಖ್‌, ದಿ ರಿಪಬ್ಲಿಕ್‌ ಆಫ್‌ ಕೋರಿಯಾ, ಸ್ವಿಡನ್‌ ಹಾಗೂ ಯುಎಸ್‌ಎಗಳಲ್ಲಿ ಜಾರಿ ಮಾಡಿರುವ ಕಾರ್ಯಕ್ರಮಗಳನ್ನು ಶ್ಲಾಘಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಇಂಥದ್ದೇ ಕ್ರಮಗಳನ್ನು ಉಳಿದ ದೇಶಗಳೂ ಅನುಸರಿಸಬಹುದು ಎಂದು ಸೂಚಿಸಿದೆ.

‘ಆತ್ಮಹತ್ಯೆ ತಡೆಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಒಳಗೊಂಡು ಕಾರ್ಯಕ್ರಮ ರೂಪಿಸಿ ಜಾರಿ ಮಾಡುವುದು ಅಗತ್ಯ’ ಎಂದು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಆತ್ಮಹತ್ಯೆ ತಡೆ ತಜ್ಞರಾಗಿರುವ ಡಾ. ಅಲೆಕ್ಸಾಂಡ್ರಾ ಫ್ಲೈಶ್‌ಮನ್‌ ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು