ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಿಗಳ ನೆಚ್ಚಿನ ಪ್ರವಾಸ ತಾಣ ರಾಜಹಂಸಗಡ

ಎತ್ತರದ ಕೋಟೆ ‘ರಾಜಹಂಸಗಡ’
Last Updated 13 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ ಭಾಗ ಕೋಟೆ–ಕೊತ್ತಲಗಳಿಗೆ ಹೆಸರುವಾಸಿ. ಇವುಗಳ ಪೈಕಿ ಬೆಳಗಾವಿ ನಗರದಿಂದ 15 ಕಿ.ಮೀ. ದೂರದಲ್ಲಿರುವ ರಾಜಹಂಸಗಡ ಕೋಟೆ ಗಮನಸೆಳೆಯುತ್ತದೆ. ಎತ್ತರದ ಗುಡ್ಡದಂತಹ ಪ್ರದೇಶದಲ್ಲಿರುವುದು ಇದರ ವಿಶೇಷ.

1674ರಲ್ಲಿ ಮರಾಠರಿಂದ ನಿರ್ಮಾಣವಾದ ಕೋಟೆ ಇದು. ಅಲ್ಲಿರುವ ಬಾವಿಯಲ್ಲಿ ವರ್ಷವಿಡೀ ನೀರು ತುಂಬಿರುತ್ತದೆ. ಇದೊಂದು ವಿಶೇಷ. ವೀಕ್ಷಣಾ ಗೋಪುರ. ಗಟ್ಟಿಮುಟ್ಟಾದ ಗೋಡೆಗಳಿದ್ದು, ಹಿಂದಿನ ಕಾಲದ ವಿಶೇಷ ನಿರ್ಮಾಣ ಕೌಶಲಕ್ಕೆ ಕನ್ನಡಿ ಹಿಡಿದಿದೆ. ‘ಬೆಳಗಾವಿ ನಗರದಲ್ಲಿರುವ ಕೋಟೆ ರಕ್ಷಣೆಗಾಗಿ ಈ ಕೋಟೆಯನ್ನು ನಿರ್ಮಿಸಲಾಗಿತ್ತು. ಶತ್ರುಗಳ ಚಲನ–ವಲನದ ಮೇಲೆ ಇಲ್ಲಿಂದ ನಿಗಾ ಇಡಲಾಗುತ್ತಿತ್ತು’ ಎನ್ನುತ್ತದೆ ಇತಿಹಾಸ.

ಬೆಟ್ಟದ ತುದಿಯಲ್ಲಿರುವ ಈ ಕೋಟೆಯನ್ನು ವಿಶೇಷ ವಿನ್ಯಾಸದಲ್ಲಿ ಕಟ್ಟಲಾಗಿದೆ. ಬೇರೆ ಕೋಟೆಗಳಿಗಿಂತ ಭಿನ್ನ. ಕೋಟೆಯ ಆಕಾರ ಗೋವಿನ ಮುಖದಂತಿದೆ. ಮುಖ್ಯದ್ವಾರ ಎರಡು ಗುಮ್ಮಟಗಳ ನಡುವಿದೆ. ಇದು ಹೊರಗೆ ಕಾಣುವುದಿಲ್ಲ. ಶತ್ರುಗಳಿಗೆ ತಕ್ಷಣ ಕೋಟೆ ಕಾಣಬಾರದೆಂದೇ ಈ ರೀತಿ ನಿರ್ಮಿಸಲಾಗಿತ್ತು ಎನ್ನಲಾಗುತ್ತದೆ. ಅಲ್ಲದೆ, ಆನೆಗಳ ಸಹಾಯದಿಂದ ದ್ವಾರದ ಬಾಗಿಲನ್ನು ತೆಗೆಸುವುದಕ್ಕೆ ಆಗುವುದಿಲ್ಲ. ಕಾರಣ, ಪ್ರವೇಶದ್ವಾರದಲ್ಲಿ ಗುಮ್ಮಟಗಳ ಮಧ್ಯೆ ಆನೆ ನಿಲ್ಲುವಷ್ಟು ಸ್ಥಳಾವಕಾಶ ಇಲ್ಲ.

‘ಛತ್ರ‍ಪತಿ ಶಿವಾಜಿ ಮಹಾರಾಜರು ನಿರ್ಮಿಸಿದ ಪ್ರತಿ ಕೋಟೆಗಳಿಗೆ ಮುಖ್ಯದ್ವಾರ ಮಾತ್ರವಲ್ಲದೇ, 1ರಿಂದ 3 ರಹಸ್ಯ ಮಾರ್ಗಗಳಿರುತ್ತವೆ. ಇವು ಅಷ್ಟು ಸುಲಭವಾಗಿ ಕಾಣಿಸದಂತೆ ಮುಚ್ಚಿರುತ್ತಿದ್ದವಂತೆ. ಶತ್ರುಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲು, ದವಸ–ಧಾನ್ಯಗಳನ್ನು ತರಲು ಇವುಗಳನ್ನು ಉಪಯೋಗಿಸುತ್ತಿದ್ದರು’ ಎಂದು ಫಲಕ ಹಾಕಲಾಗಿದೆ. ಒಂದು ಬದಿಯ ರಹಸ್ಯ ದಾರಿ ಬೆಳಗಾವಿಯ ಕೋಟೆ ಆವರಣದಲ್ಲಿರುವ ದುರ್ಗಾದೇವಸ್ಥಾನ ಸಂಪರ್ಕಿಸುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ಆದರೆ, ಈಗ ಅದನ್ನು ಮುಚ್ಚಲಾಗಿದೆ.

ಈ ಮೊದಲು ಕೋಟೆಗೆ ಹೋಗಲು ಸರಿಯಾದ ರಸ್ತೆ ಇರಲಿಲ್ಲ. ಈಗ ಡಾಂಬರು ರಸ್ತೆಯಾಗಿದೆ. ಅಲ್ಲಿವರೆಗೂ ಬಸ್‌ ವ್ಯವಸ್ಥೆ ಇಲ್ಲ. ಸ್ವಂತ ವಾಹನದಲ್ಲಿ ಹೋಗುವುದು ಒಳ್ಳೆಯದು. 2017ರಲ್ಲಿ ಸಂಜಯ ಪಾಟೀಲ ಶಾಸಕರಾಗಿದ್ದಾಗ ಶಾಸಕರ ಅನುದಾನದಲ್ಲಿ ಕೋಟೆ ಆವರಣದಲ್ಲಿ ಸಿದ್ದೇಶ್ವರ ದೇವಸ್ಥಾನ ನಿರ್ಮಿಸಿ, ಧಾರ್ಮಿಕ ಸ್ಪರ್ಶ ನೀಡಲಾಗಿದೆ.

ಕೋಟೆಯೊಂದಿಗೆ ದೇವಸ್ಥಾನ ವೀಕ್ಷಣೆ ಬೋನಸ್. ಇಲ್ಲಿಗೆ ಬಂದರೆ ದೇವರ ಪೂಜೆ; ಸ್ವಕಾರ್ಯ ಎರಡೂ ಆಗುತ್ತದೆ.

‌ನಿತ್ಯ ಇಲ್ಲಿಗೆ ನೂರಾರು ಮಂದಿ ಬರುತ್ತಾರೆ. ವಿಶೇಷವಾಗಿ ಕಾಲೇಜು ಯುವಕ, ಯುವತಿಯರ, ಪ್ರೇಮಿಗಳ ಅಚ್ಚುಮೆಚ್ಚಿನ ತಾಣವಾಗಿದೆ. ಅವರು ಸೆಲ್ಫಿ ತೆಗೆದುಕೊಳ್ಳುತ್ತಾ, ಹರಟುತ್ತಾ ಕಾಲ ಕಳೆಯುತ್ತಾರೆ. ವಿಶೇಷವಾಗಿ ಛಾಯಾಗ್ರಾಹಕರಿಗೆ ಇದೊಂದು ರೀತಿ ಬಯಲು ಸ್ಟುಡಿಯೋ ಇದ್ದಂತೆ.

ಯುವಜನರಷ್ಟೇ ಅಲ್ಲ, ಕುಟುಂಬ ಸಮೇತ ಇಲ್ಲಿಗೆ ಬರುವವರೂ ಉಂಟು. ಬುತ್ತಿ ತಂದು ಅಲ್ಲಿಯೇ ಉಂಡು ಹೋಗುತ್ತಾರೆ. ಸುತ್ತಮುತ್ತಲಿನ ಕೆಲವರು ಅಲ್ಲಿಗೆ ಬೆಳಗಿನ ವಾಯುವಿಹಾರ (ಜಾಗಿಂಗ್‌) ಮಾಡಲು ಬರುತ್ತಾರೆ.

ಪ್ರತಿ ದಿನ 300 ರಿಂದ 400 ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು. ಸೋಮವಾರ ಬರುವವರು ಸಿದ್ದೇಶ್ವರ ದೇವಸ್ಥಾನದ ಭಕ್ತರು ಹೆಚ್ಚು.ಕರ್ನಾಟಕವಲ್ಲದೇ, ಮಹಾರಾಷ್ಟ್ರ, ಗೋವಾದಿಂದಲೂ ಪ್ರವಾಸಿಗರೂ ಇಲ್ಲಿಗೆ ಬರುತ್ತಾರೆ. ಕೋಟೆ ಏರಿ ಸಂಭ್ರಮಿಸುತ್ತಾರೆ.

ವಡಗಾವಿಯ ಛತ್ರಪತಿ ಸಂಭಾಜಿ ಮಹಾರಾಜ ಸೇವಾ ಸಂಘದದವರು ಅಗಾಗ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾರೆ. ನಿರ್ಲಕ್ಷಕ್ಕೆ ಒಳಗಾಗಿದ್ದ ಈ ಪಾರಂಪರಿಕ ತಾಣವನ್ನು ಇತ್ತೀಚೆಗೆ ಕೊಂಚ ಅಭಿವೃದ್ಧಿಪಡಿಸಲಾಗಿದೆ.‌ ಮತ್ತಷ್ಟು ಆಕರ್ಷಕಗೊಳಿಸುವುದಕ್ಕೂ ಅವಕಾಶವಿದೆ. ಪ್ರವಾಸೋದ್ಯಮ ಅಥವಾ ಪಾರಂಪರಿಕ ಇಲಾಖೆಯವರು ಇತ್ತ ಗಮನಹರಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಬಹಳಷ್ಟು ಅವಕಾಶವಿದೆ.
ಕೋಟೆಯನ್ನು ಯಾವಾಗ, ಯಾರು ನಿರ್ಮಿಸಿದರು ಎನ್ನುವ ನಿಖರ ಮಾಹಿತಿ ಇಲ್ಲ. ಆದರೆ, ಶಿವಾಜಿ ಮಹಾರಾಜರು ಆಗಾಗ ಕೋಟೆಗೆ ಬಂದು ರಹಸ್ಯ ಸಭೆ ನಡೆಸುತ್ತಿದ್ದರು ಎನ್ನುತ್ತಾರೆ ಹಿರಿಯರು.

ಹೋಗುವುದು ಹೇಗೆ?
ಬೆಳಗಾವಿ ನಗರದಿಂದ ಯಳ್ಳೂರು, ಸುಳಗಾ ಮಾರ್ಗವಾಗಿ ಸಾಗಿದರೆ ರಾಜಹಂಸಗಡ ಗ್ರಾಮ ಸಿಗುತ್ತದೆ. ಅಲ್ಲಿಂದ 2 ಕಿ.ಮೀ. ಮೇಲೆರಿದರೆ ಬೆಟ್ಟದ ತಪ್ಪಲಿನಲ್ಲಿ ಕೋಟೆ ಕಾಣುತ್ತದೆ. ಕೋಟೆಯ ಯಾವುದೇ ಭಾಗದಲ್ಲಿ ನಿಂತು ನೋಡಿದರೂ ಬೆಳಗಾವಿ ಸುತ್ತಮುತ್ತಲಿನ ಪರಿಸರವನ್ನು ಕಣ್ತುಂಬಿಕೊಳ್ಳಬಹುದು.

ಸಾರಿಗೆ ಸೌಲಭ್ಯ
ರಾಜ್ಯದ ಎಲ್ಲ ಕಡೆಗಳಿಂದ ರೈಲು, ಬಸ್‌ ವ್ಯವಸ್ಥೆ ಇದೆ. ಪ್ರಮುಖ ನಗರಗಳಿಂದ ವಿಮಾನದ ಸೌಲಭ್ಯವೂ ಇದೆ. ಬೆಳಗಾವಿಯಿಂದ ರಾಜಹಂಸಗಡಕ್ಕೆ ಬಸ್‌ ವ್ಯವಸ್ಥೆ ಇದೆ. ಸ್ವಂತ ವಾಹನಗಳಲ್ಲಿ ಹೋಗಲು ಉತ್ತಮ ರಸ್ತೆ ಇದೆ.

ಊಟ–ವಸತಿ
ಕೋಟೆಯ ಸಮೀಪದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ವ್ಯವಸ್ಥೆಯೂ ಇಲ್ಲ. ಪಿಕ್‌ನಿಕ್‌ಗೆ ಹೊಂದುವ ಜಾಗವಾದರೂ, ಪ್ರವಾಸಿಗರು, ಅಲ್ಲಿಗೆ ಹೋಗುವಾಗ ತಿಂಡಿ–ತಿನಿಸು, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡು ಹೋಗಬೇಕು.

ಸೂಕ್ತ ಸಮಯ
ಚಳಿಗಾಲದಲ್ಲಿ (ಅಕ್ಟೋಬರ್‌ನಿಂದ ಫೆಬ್ರುವರಿವರೆಗೆ) ಈ ಜಾಗ ನೋಡಲುಸೂಕ್ತ ಸಮಯ

- (ಚಿತ್ರಗಳು: ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT